“ಮಾತೇ ಮುತ್ತು, ಮಾತೇ ಮೃತ್ಯು” ಎಂಬ ನಾಣ್ಣುಡಿಯಲ್ಲಿಯೇ ಮಾತು ಮನುಷ್ಯನಿಗೆ ಎಷ್ಟು ಮುಖ್ಯವೆಂದು ಗೊತ್ತಾಗಿಬಿಡುತ್ತದೆ. ಈ ಪ್ರಪಂಚದಲ್ಲಿ ಸರಿಯಾದ ಮಾತುಗಳನ್ನಾಡುವವ ಗೆಲ್ಲುತ್ತಾನೆ, ಇಲ್ಲಾ ತನ್ನ ಅಸ್ತಿತ್ವಕ್ಕಾಗಿ ಪರಿತಪಿಸುತ್ತಾನೆ. ಆ ಮಟ್ಟಿಗೆ ಮಾತು ನಮ್ಮೆಲ್ಲರ ಜೀವನದಲ್ಲಿ ಪ್ರಾಮುಖ್ಯತೆ ಪಡೆದಿದೆ. ಅದಕ್ಕೆ ನಮ್ಮ ಹಿರಿಯರು “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ” ಎನ್ನುವುದು. ಯಾವ ಸಂದರ್ಭದಲ್ಲಿ ಎಷ್ಟು ಮಾತುಗಳನ್ನು ಆಡಬೇಕು, ಯಾವ ರೀತಿ ಆಡಬೇಕು, ಎಷ್ಟು ವೇಗದಲ್ಲಿ, ಎಷ್ಟು ಸ್ಪಷ್ಟತೆಯಿಂದ, ಮಾತನಾಡಬೇಕು ಎಂದು ಸರಿಯಾಗಿ ಅರಿತು ಮಾತನಾಡಿದರೆ, ಅಂತವನು ಉತ್ತಮ ವಾಗ್ಮಿ ಎನಿಸಿಕೊಳ್ಳುತ್ತಾನೆ!
ಸಂದರ್ಭಕ್ಕೆ ಅನುಚಿತವಾಗಿ, ಬೇಡದ, ಇಲ್ಲಸಲ್ಲದ ಮಾತುಗಳನ್ನು ಆಡುವುದು, ಅಶ್ಲೀಲ ಪದ ಪ್ರಯೋಗಿಸುವುದು, ತಲೆಗೆ ತೋಚಿದ್ದು, ಮನಸ್ಸಿಗೆ ಮೂಡಿದ್ದು, ಹೀಗೆ ಅನಿಸಿದೆಲ್ಲವನ್ನು ಮಾತನಾಡುತ್ತಾ ಹೋದರೆ, ಅಂತವನನ್ನು ಸಮಾಜ ದೂರವಿಡುತ್ತದೆ. ಮಾತು ಮಾತಿಗೂ ಜಗಳ ಕಾಯುವವನು ಎಂಬ ಹಣೆಯ ಪಟ್ಟಿ ಅಂಟಿಸುತ್ತದೆ. ಅದಕ್ಕೆ ಅಲ್ಲವೇ ಹೇಳುವುದು, “ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು” ಎಂದು!
ಚಿಕ್ಕ ಮಕ್ಕಳ ತೊದಲ ನುಡಿಗಳನ್ನು ಕೇಳುವುದೇ ಚೆಂದ. ಅವರದೇ ಭಾಷೆಯಲ್ಲಿ, ಅವರದೇ ವೈಖರಿಯಲ್ಲಿ, ಅವರದೇ ಲೋಕದಲ್ಲಿ ಆಡುತ್ತಾ, ಮನಸ್ಸಿಗೆ ತೋಚಿದ್ದನ್ನು ಮಾತುಗಳಲ್ಲಿ ಅಭಿವ್ಯಕ್ತಪಡಿಸುತ್ತಾರೆ. ಎಷ್ಟೋ ಸಲ ತಾಯಿಯಾದವಳಿಗೂ ಅರ್ಥವಾಗುವುದು ಕಷ್ಟವಾಗುತ್ತದೆ. ಆ ರೀತಿ ತೊದಲ ಮಾತುಗಳನ್ನು ಆಡುತ್ತಾ, ತಮಗೆ ಬೇಕಾದದ್ದನ್ನು ಕೇಳುತ್ತಾರೆ. ಅವರು ಹೇಳಿದ ವಸ್ತು ಕೊಡದಿದ್ದರೆ ಅಥವಾ ಹೇಳುತ್ತಿರುವ ಮಾತುಗಳನ್ನು ಪೋಷಕರಾದ ನಾವು ಅರ್ಥೈಸಿಕೊಳ್ಳುವುದರಲ್ಲಿ ಸೋತರೆ, ಕೋಪ ಮಾಡಿಕೊಂಡು ಕಿರುಚಾಡುತ್ತಾರೆ. ಸಿಟ್ಟು ಜಾಸ್ತಿಯಾದರೆ ಒಂದೆರಡೇಟು ನಮಗೆ ಕೊಡುತ್ತಾರೆ! ಇಲ್ಲವೆಂದರೆ “ಇವರಿಗೆ ಹೇಗಪ್ಪಾ ಅರ್ಥ ಮಾಡಿಸುವುದೆಂದು?” ಸಿಕ್ಕಸಿಕ್ಕ ವಸ್ತುಗಳನ್ನು ಬಿಸಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾರೆ.
ಇಂತಹ ವರ್ತನೆ ಮೂರು ವರ್ಷದ ಒಳಗಿನ ಮಕ್ಕಳಲ್ಲಿ ಕಂಡುಬರುವುದು ಹೆಚ್ಚು. ಕ್ರಮೇಣ ಈ ಕಷ್ಟವನ್ನು ಪೋಷಕರು ಮತ್ತು ಮಕ್ಕಳು ಅನುಭವಿಸಬೇಕಾದ ಪ್ರಸಂಗ ಬರುವುದಿಲ್ಲ. ಏಕೆಂದರೆ ಅಷ್ಟು ಹೊತ್ತಿಗೆ ಮಕ್ಕಳ ತೊದಲ ನುಡಿಗಳು ಕಡಿಮೆಯಾಗಿ ಭಾಷೆಯಲ್ಲಿ ಸ್ಪಷ್ಟತೆ ಬಂದಿರುತ್ತದೆ. ಬುದ್ಧಿಯು ಬೆಳವಣಿಗೆಯಾಗಿ ಮಾತಲ್ಲದಿದ್ದರೂ ಸರಿಯಾಗಿ ಸಂಜ್ಞೆ ಮಾಡುವ ಮಟ್ಟಕ್ಕೆ ಮಕ್ಕಳು ಬೆಳೆದಿರುತ್ತಾರೆ. ಆದ್ದರಿಂದ ಮೂರು ವರ್ಷದ ನಂತರ ಮಕ್ಕಳ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಅಷ್ಟೇನೂ ಕಷ್ಟವಾಗುವುದಿಲ್ಲ ಎನ್ನಬಹುದು.
ಮಾತೇ ಬರದ ಮೂಕರನ್ನು ನೋಡಿದಾಗ ಅನುಕಂಪ ಹುಟ್ಟುವುದು ಸಹಜ. ಪೋಷಕರಾದ ನಾವುಗಳೇ ಚಿಕ್ಕ ಮಗುವಿನ ತೊದಲ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಕೆಲವೊಮ್ಮೆ ಸೋಲುವಾಗ, ಒಂದು ಮಾತನ್ನೂ ಆಡಲು ಕಷ್ಟ ಪಡುವ ಮೂಕರನ್ನು ನೋಡಿದಾಗ ನಿಜಕ್ಕೂ ಬೇಸರವೆನಿಸುತ್ತದೆ. ಅವರು ತಮ್ಮ ಅಭಿಪ್ರಾಯಗಳನ್ನು ಹೇಗೆ ಮಂಡಿಸುತ್ತಾರೆ ಎಂದು ಆಶ್ಚರ್ಯವೂ ಆಗುತ್ತದೆ. ಇಂತಹ ನ್ಯೂನ್ಯತೆಗಳಿದ್ದರೂ ಬಾಳಿ ಬದುಕಿ, ಗೆದ್ದ ಎಷ್ಟೋ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ. ಇವರು ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳೂ ಸಹ ಮೂಕರೇ. ಹಾಗಾಗಿಯೇ ಅವುಗಳನ್ನು ಸಾಕುವಾಗ ಅವುಗಳ ವರ್ತನೆಯಿಂದಷ್ಟೇ ಅವುಗಳಿಗೆ ಏನು ಬೇಕು, ಏನಾಯಿತು ಎಂದು ಅಂದಾಜಿಸಬೇಕು. ಅವುಗಳ ನೋವು, ನಲಿವು, ಕಷ್ಟ, ಸುಖ ಎಲ್ಲವೂ ಅವನ್ನು ಗಮನವಿಟ್ಟು ನೋಡಿಯೇ ತಿಳಿಯಬೇಕು.
ಮಾತನಾಡುವುದರಿಂದಲೇ ಭಾಷೆಯೊಂದು ಉಳಿಯುವುದು ಎಂದರೆ ತಪ್ಪಿಲ್ಲ. ಬರೀ ಬರವಣಿಗೆಯಲ್ಲಷ್ಟೇ ಭಾಷೆ ಉಳಿದರೆ, ಬರುಬರುತ್ತಾ ಅದರ ಅಸ್ತಿತ್ವವೇ ಕಳೆದು ಹೋಗಬಹುದು. ಭಾಷೆಯನ್ನು ಉಳಿಸಬೇಕೆಂದರೆ, ಅದನ್ನು ಉಪಯೋಗಿಸಬೇಕು. ಉಪಯೋಗಿಸುವುದು ಎಂದರೆ “ಮಾತನಾಡುವುದು”. ಮಾತನಾಡಿದರೆ ಮಾತ್ರ ಆ ಭಾಷೆ ಚಲಾವಣೆಯಲ್ಲಿ ಇರಲು ಸಾಧ್ಯ.
ಯಾವುದೇ ಹೊಸ ಭಾಷೆಯನ್ನು ಕಲಿಯಬೇಕು ಎಂದರೆ, ಬರೀ ಬರೆದು ಓದಿದರೆ ಸಾಲದು. ಆ ಭಾಷೆಯಲ್ಲಿ ಮಾತನಾಡಬೇಕು. ಮಾತನಾಡುವವರನ್ನು ನೋಡಿಯೂ ಕಲಿಯಬೇಕು. ಆಗ ಮಾತ್ರ ಆ ಭಾಷೆಯಲ್ಲಿ ಹಿಡಿತ ಸಾಧಿಸಲು ಸಾಧ್ಯ. ಅದಕ್ಕೆ ಅಲ್ಲವೇ, “ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ” ಎನ್ನುವುದು!
ಏನೇ ಒಂದು ಅಭ್ಯಾಸವಾಗಬೇಕು ಎಂದರೆ, ಮಾಡುವ ಕೆಲಸ ತಪ್ಪಿರಲಿ ಸರಿ ಇರಲಿ ಮತ್ತೆ ಮತ್ತೆ ಮಾಡುತ್ತಿರಬೇಕು. ಒಂದು ಭಾಷೆಯನ್ನು ಕಲಿಯಬೇಕು ಎಂದರೆ ಮಾತನಾಡುತ್ತಲೇ ಇರಬೇಕು. ಭಾಷೆ ಮತ್ತು ಮಾತು ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದರೆ ಉತ್ಪ್ರೇಕ್ಷೆಯ ಮಾತಲ್ಲ. ಒಬ್ಬೊಬ್ಬರ ಭಾಷೆಯು ಒಂದೊಂದು. ಮಾತನಾಡುವ ಶೈಲಿಯೂ ಒಂದೊಂದು ರೀತಿ. ಕೆಲವೊಮ್ಮೆ ಅವರಾಡುವ ಮಾತುಗಳು ಎದುರಿನವರಿಗೆ ಇರುಸು ಮುರುಸಾಗಬಹುದು, ಇಲ್ಲಾ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಬಹುದು! ಅಂತಹ ಶಕ್ತಿ ಮಾತಿಗಿದೆ.
ಮಾತನ್ನೇ ಬಂಡವಾಳವಾಗಿಸಿಕೊಂಡಿರುವ ರಾಜಕಾರಣಿಗಳು, ಮಕ್ಕಳ ಪ್ರಗತಿಗೆ ಕಾರಣಕರ್ತರಾಗುವ ಅಧ್ಯಾಪಕರು, ಮಾತಾಡುತ್ತಲೇ ಲಾಭಗಳಿಸುವ ವ್ಯಾಪಾರಸ್ಥರು, ಪ್ರೇಕ್ಷಕರನ್ನು ತಮ್ಮ ಮಾತುಗಳಿಂದ ಮಂತ್ರ ಮುಗ್ಧರನ್ನಾಗಿಸುವ ಭಾಷಣಕಾರರು, ಗಂಟೆಗಟ್ಟಲೆ ಮಾತಾಡುತ್ತಾ ಆಯಾಸಗೊಳ್ಳುವುದನ್ನು ನೋಡಿರಬಹುದು. ಆ ಮಟ್ಟಿಗಿನ ಶಕ್ತಿಯನ್ನು ಮಾತುಗಾರಿಕೆ ಬೇಡುತ್ತದೆ! ಹಾಗಾಗಿ ಎಷ್ಟೋ ಜನರು ಎಷ್ಟು ಬೇಕೋ ಅಷ್ಟು ಮಾತಾಡುತ್ತಾರೆ. ಕಾರಣವಿಲ್ಲದೇ ಏಕೆ ಸುಸ್ತು ಮಾಡಿಕೊಳ್ಳುವುದು ಎಂದು!
ಈಗಂತೂ ಪ್ರಾಯಕ್ಕೆ ಬಂದವರು ತಮಗನಿಸಿದ್ದನ್ನು ಮಾತನಾಡುತ್ತಾರೆ. ತಮ್ಮ ಸ್ನೇಹಿತರನ್ನು ಮಗ/ ಮಚ್ಚ/ ಮಚ್ಚಿ ಎನ್ನುತ್ತಾರೆ! ಅದು ಪ್ರೀತಿಗೆ ಕರೆಯುವ ರೀತಿ ಎಂದಾದರೂ, ಇದೇಕೆ ಈ ರೀತಿ ಗಂಡು- ಹೆಣ್ಣು ಎಂಬ ವ್ಯತ್ಯಾಸವೂ ಇಲ್ಲದೇ ಹೀಗೆ ಕರೆಯುತ್ತಾರೆ ಎಂದು ಆಶ್ಚರ್ಯವಾಗುತ್ತದೆ. ಜೊತೆಗೆ ಸಮಾನ ವಯಸ್ಕರಾದ ಗೆಳೆಯರು ಅದು ಹೇಗೆ ಮಗ -ಮಗಳು ಆಗುತ್ತಾರೆ ಎಂಬ ಸಂದೇಹವೂ ಮೂಡುತ್ತದೆ! ಅಪ್ಪ-ಅಮ್ಮ ಇಟ್ಟ ಚೆಂದನೆಯ ಹೆಸರನ್ನು ಬಿಟ್ಟು, ಮಾತು ಮಾತಿಗೂ ಈ ರೀತಿ ಮಚ್ಚ/ ಮಚ್ಚಿ ಎಂದು ಏಕೆ ಕೃತಕವಾಗಿ ಕರೆಯುತ್ತಾರೆ ಎಂಬುದೇ ಪ್ರಶ್ನೆಯಾಗಿ ಉಳಿಯುತ್ತದೆ. ಕೊನೆಗೆ “ಅವರವರ ಭಾವಕ್ಕೆ, ಅವರವರ ಭಕುತಿಗೆ” ಎಂದು ಸುಮ್ಮನಾಗಬೇಕಷ್ಟೇ!
ಕೆಲವರಂತೂ ಸತತವಾಗಿ ಗೊತ್ತು ಗುರಿಯಿಲ್ಲದೇ ಮಾತನಾಡುತ್ತಲೇ ಇರುತ್ತಾರೆ. ಅದಕ್ಕೆ ಅರ್ಥವೂ ಇರುವುದಿಲ್ಲ, ಅವರು ಹೇಳಿದ ಹಾಗೆ ಜೀವನದಲ್ಲಿ ಏನು ನಡೆಯುವುದೂ ಇಲ್ಲ. ಅಂತವರನ್ನು ಬಾಯಿಬಡುಕರು ಎಂದೂ, ಇವರೇಕೆ ಬಾಯಿಗೆ ಬೀಗ ಹಾಕುವುದಿಲ್ಲ ಎಂದು ಸುತ್ತಲಿನ ಜನರು ಅಂದುಕೊಳ್ಳುತ್ತಾರೆ. ಖಾಲಿ ಪಾತ್ರೆಯಂತೆ ತಲೆ ಇರುವುದರಿಂದಲೇ, ಜಾಸ್ತಿ ಶಬ್ಧ ಮಾಡುತ್ತಾರೆ (ಹೆಚ್ಚು ಮಾತನಾಡುವುದು) ಎಂದು ಅಂತವರನ್ನು ರೇಗಿಸುವುದೂ ಉಂಟು. ಉತ್ತಮ ವಾಗ್ಮಿಗಳು ಅರುಳು ಹುರಿದಂತೆ ಮಾತನಾಡುತ್ತಾರೆ ಎನ್ನುವುದು ಅಷ್ಟೇ ಸತ್ಯ. ಇವರೂ ಸಹ ಹೆಚ್ಚೆಚ್ಚು ಮಾತನಾಡಿದರೂ, ಆ ಮಾತಿಗೆ ಮೌಲ್ಯ, ಸತ್ವ ಮತ್ತು ಅರ್ಥವಿರುತ್ತದೆ.
ಮನಬಿಚ್ಚಿ ಮಾತನಾಡುವವರ ಮಧ್ಯೆ ಎಷ್ಟು ಬೇಕೋ ಅಷ್ಟು ಮಾತನಾಡುವ ಮಂದಿಯನ್ನು ಋಣಾತ್ಮಕವಾಗಿ ನೋಡುವುದೇ ಹೆಚ್ಚು. “ಅವನಿಗೆ ಅಹಂಕಾರ ಜಾಸ್ತಿ, ಹಾಗಾಗಿ ಮಾತು ಕಡಿಮೆ” ಎಂದುಕೊಳ್ಳುತ್ತಾರೆ. ಆದರೆ ಎಲ್ಲರೂ ಹಾಗೆ ಎಂದು ಹೇಳಲಾಗುವುದಿಲ್ಲ. “ಮಾತು ಬೆಳ್ಳಿ, ಮೌನ ಬಂಗಾರವೆಂಬಂತೆ” ಸ್ವಭಾವತಃ ಕಡಿಮೆ ಮಾತನಾಡುವವರೂ ಇರುತ್ತಾರೆ.
“ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು” ಎಂಬ ಗಾದೆ ಮಾತು ಬಲು ಅರ್ಥಪೂರ್ಣ. ಒಂದು ಸಲ ಆಡಿದ ಮಾತನ್ನು ಎಂದೆಂದಿಗೂ ವಾಪಸ್ಸು ಪಡೆಯಲು ಸಾಧ್ಯವಿಲ್ಲ. ಕಳೆದು ಹೋದ ಸಮಯದಂತೆ, ಬಿಟ್ಟ ಬಾಣದಂತೆ ನಾವಾಡುವ ಮಾತೂ ಸಹ ಎಂಬುದನ್ನು ಮರೆಯಬಾರದು. ಆಡಿದ ನಂತರ, ಎಷ್ಟೇ ಸಲ “ಕ್ಷಮಿಸಿ” ಎಂದರೂ ಅದು ವ್ಯರ್ಥವಷ್ಟೇ. ಆದ್ದರಿಂದಲೇ ಮಾತಾಡುವ ಮುನ್ನ ಅಳೆದು ತೂಗಿ, ಯೋಚಿಸಿ ಮಾತನಾಡುವುದು ಒಳಿತು.
ಎದುರಿನವರನ್ನು ಗೌರವಿಸಬೇಕೆಂದರೆ ಹಾಗೂ ಅವರು ನಮ್ಮ ಮಾತುಗಳನ್ನು ಕೇಳಬೇಕೆಂದರೆ, ಮೊದಲು ನಾವು ಉತ್ತಮ ಕೇಳುಗರಾಗಬೇಕು. ಆಗ ಮಾತ್ರ ಅವರೂ ಕೂಡ ನಮ್ಮ ಮಾತನ್ನು ಆಲಿಸಿ ಗೌರವಿಸುತ್ತಾರೆ. ಅದು ಬಿಟ್ಟು ಬರೀ “ನನ್ನ ಮಾತೇ ನಡೆಯಬೇಕು” ಎಂಬ ಸರ್ವಾಧಿಕಾರಿಯ ಧೋರಣೆ ಎಂದಿಗೂ ಸರಿಯಲ್ಲ. ಇಂತವರನ್ನು ಸಮಾಜದಲ್ಲಿ ಯಾರೂ ಗೌರವಿಸುವುದಿಲ್ಲ ಹಾಗೂ ಬೆಂಬಲಿಸುವುದಿಲ್ಲ.
ಎದುರಿನವರನ್ನು “ಮಾತಲ್ಲಿ ಗೆಲ್ಲುವುದಕ್ಕಿಂತ, ಕೆಲಸದಲ್ಲಿ ಗೆಲ್ಲಬೇಕು” ಎಂದು ಹಿರಿಯರು ಹೇಳುತ್ತಾರೆ. ಮಾತಲ್ಲೇ ಮಂಟಪ ಕಟ್ಟಿ, ನಂತರ ಆಶಾಗೋಪುರ ಕಳಚಿ ಬೀಳುವ ಬದಲು, ಮಾತಾಡದೇ ಕೆಲಸವನ್ನು ಪೂರ್ಣವಾಗಿ ನಿರ್ವಹಿಸಿ, ಬದುಕನ್ನು ಗೆಲ್ಲುತ್ತಾರೆ ಜಾಣರು. ಆ ಸಾಲಿನಲ್ಲಿ ನಾವುಗಳಿದ್ದರೆ ಬಹಳ ಒಳ್ಳೆಯದು!
ಮಾತು ನಮ್ಮ ಮಾತೆಯಂತೆಯೇ (mother) ಜೀವನದಲ್ಲಿ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ “ಮಾತೆಯಂತಹ ಮಾತನ್ನು ಪ್ರಯೋಗಿಸುವಾಗ ಸಂದರ್ಭಾನುಸಾರ, ಎಚ್ಚರಿಕೆಯಿಂದ, ಜಾಣ್ಮೆಯಿಂದ, ಸ್ಪಷ್ಟತೆಯಿಂದ ಪ್ರಯೋಗಿಸುವುದು ಸರಿ!”