ಶೇಖರಗೌಡ ವೀ ಸರನಾಡಗೌಡರ್ ಅವರು ಬರೆದ ಕತೆ ‘ಅವಿನಾಭಾವ’

“ಯುವ್ ಚೀಟ್! ಯುವ್ ಬ್ಲಡೀ ಸ್ಕೌಂಡ್ರೆಲ್! ಯುವ್ ಅನ್‌ಗ್ರೇಟ್‌ಫುಲ್ ಚಾಪ್! ಯುವ್ ಡರ್ಟಿ ಮ್ಯಾನ್! ಯುವ್ ಅನ್‌ಬಿಲಿವೇಬಲ್ ಮ್ಯಾನ್! ಯುವ್ ಸ್ಟುಪಿಡ್ ಫೆಲೋ! ಯುವ್ ರ‍್ಯಾಸ್ಕಲ್! ಯುವ್ ಆರ್ ಎ ಬೀಸ್ಟ್!”

“ವ್ಹಾಟ್…! ವ್ಹಾಟ್ ಹ್ಯಾಪನ್ಡ್ ಸೋಫಿಯಾ…? ಆರ್ ಯುವ್ ಓಕೇ…?”

“ಶಶಿ, ನಾನು ಚೆನ್ನಾಗೇ ಇದ್ದೇನೆ. ಚೆನ್ನಾಗಿ ಇಲ್ಲದವನು ನೀನು. ಯುವ್ ಆರ್ ಎ ಕನ್ನಿಂಗ್ ಫೆಲೋ. ನೀನೊಬ್ಬ ನಯವಂಚಕ…”

“ವ್ಹಾಟ್ ಆರ್ ಯುವ್ ಟೆಲ್ಲಿಂಗ್ ಸೋಫಿ…? ನಿನ್ನ ತಲೆ ನೆಟ್ಟಗಿಲ್ಲ ಅಂತ ಅನಿಸುತ್ತೆ. ಬಿಪಿ ಚೆಕ್ ಮಾಡಲೇ…?”

“ನನ್ನ ತಲೆ ಚೆನ್ನಾಗೇ ಇದೆ. ನನ್ನ ಬಿಪಿ ೮೦/೧೨೦ನೇ ಇದೆ. ಮನುಷ್ಯತ್ವ ಇಲ್ಲದ ಮಾನವ ನೀನು. ಸಂಸ್ಕಾರ ಇಲ್ಲದ ಪ್ರಾಣಿಗಳಿಗಿಂತ ಕಡೇ ನೀನು.”

“ಸೋಫಿಯಾ ನಿನಗೇನಾಗಿದೆ…? ಈ ರೀತಿ ಏಕೆ ಮಾತಾಡುತ್ತಿರುವಿ? ಡಾಕ್ಟರರ ಹತ್ತಿರ ಹೋಗೋಣವೇನು…?”

“ಅದೇನೂ ಬೇಡ. ಮೊದಲು ಈ ನಂಬರ್ ಯಾರದು ಅಂತ ಹೇಳು. ಸತ್ಯ ಹೇಳು” ಎಂದೆನ್ನುತ್ತಾ ಸೋಫಿಯಾ ಶಶಿಶೇಖರನ ಮೊಬೈಲಿನ ಡೈಲಿಂಗ್ ಲಿಸ್ಟಿನಲ್ಲಿದ್ದ ನಂಬರೊAದನ್ನು ತೋರಿಸಿದಳು.

“ಸೋಫಿ, ಇದು… ಇದು…”

“ಡೋಂಟ್ ಬೀಟ್ ಅರೌಂಡ್ ದಿ ಬುಶ್. ನೇರವಾಗಿ ಸತ್ಯ ಹೇಳು.”

ಶಶಿಶೇಖರ್ ಏನೂ ಹೇಳದೇ ಮುಖ ತಗ್ಗಿಸಿಕೊಂಡು ಸುಮ್ಮನೇ ನಿಂತ. `ನೆಲ ಈಗಿಂದೀಗಲೇ ಬಿರಿದು ನನ್ನ ನುಂಗಿಬಿಡಬಾರದೇ…?’ ಎಂದೆನ್ನುಕೊಳ್ಳತೊಡಗಿದ ಮನದಲ್ಲಿ.

“ವ್ಹಾಟ್ ಹ್ಯಾಪನ್ಡ್…? ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲವೇ? ಸತ್ಯ ಅಷ್ಟು ಕಟು ಎಂದು ಗೊತ್ತಿದ್ದರೂ ಇಲ್ಲಿಯವರೆಗೆ ಮುಚ್ಚಿಟ್ಟಿಕೊಂಡು ಕುಳಿತಿರುವಿಯಲ್ಲ, ನೀನೇನು ಮನುಷ್ಯನೋ, ಮನುಷ್ಯ ವೇಷದ ಮೃಗವೋ? ಯುವ್ ಡರ್ಟಿ ಇಂಡಿಯನ್! ಭಾರತೀಯರು ಸಂಸ್ಕಾರವAತರು, ನೀತಿವಂತರು ಎಂದು ನಿನ್ನ ಪ್ರೀತಿಸಿ ಮದುವೆಯಾದೆನಲ್ಲ, ನನ್ನನ್ನು ಮೆಟ್ಟು ತೊಗೊಂಡು ಹೊಡೆಯಬೇಕು ಅಷ್ಟೇ! ಥೂ, ನಾಚಿಕೆಗೆಟ್ಟವನೇ… ಸುಳ್ಳಿನ ಸಂಪಾದಕನೇ… ನಿನ್ನ ಹೆಸರು ಅದೆಷ್ಟು ಚೆಂದ! ನಿನ್ನ ಹೆಸರಿನಷ್ಟೇ ನೀನೂ ಚೆಂದ. `ಶಶಿಶೇಖರ್’ ಎ ನೇಮ್ ಆಫ್ ದಿ ಗ್ರೇಟ್ ಇಂಡಿಯನ್ ಗಾಡ್, `ಶಿವ!’. ರಿಯಲೀ ಎ ಸೂಪರ್ ಪಾವರ್ ನೇಮ್. ಶಿವ ಅಂದರೆ ಸತ್ಯ, ಸುಂದರ ಅಲ್ಲವೇ? ಸತ್ಯಂ, ಶಿವಂ, ಸುಂದರA. ಶಿವನಿಲ್ಲದೇ ಸೌಂದರ್ಯವೇ ಇಲ್ಲ, ಶಿವನಿಲ್ಲದ ಸೌಂದರ್ಯ ಶವಮುಖದ ಕಣ್ಣು ಎಂದು ನಿಮ್ಮ ರಾಷ್ಟçಕವಿ ಕುವೆಂಪು ಅವರು ಹೇಳಿರುವುದನ್ನು ಓದಿರುವ ನೆನಪು ನನಗೆ. ಆದರೆ ಇಂಥಹ ಚೆಂದದ ಹೆಸರನ್ನಿಟ್ಟುಕೊಂಡು ಮೋಸಮಾಡುತ್ತಿರುವಿಯಲ್ಲ…? ಥೂ! ನಿನ್ನ ಜನ್ಮಕ್ಕಿಷ್ಟು ಬೆಂಕಿಹಾಕ!”

“ಅದೇನಾಯಿತು ಅಂತಾದರೂ ಹೇಳು ಡಾರ್ಲಿಂಗ್…?”

“ನೀನು ಮೆಡಿಟೇಶನ್‌ಗೆ ಅಂತ ಕುಳಿತುಕೊಂಡಾಗ ಆ ನಂಬರಿAದ ನಿನ್ನ ಮೊಬೈಲಿಗೆ ಸುಮಾರು ಹತ್ತು ಮಿಸ್‌ಕಾಲ್‌ಗಳು ಬಂದವು. ಕುತೂಹಲ ತಡೆಯಲಾರದೇ ನಾನು ಆ ನಂಬರಿಗೆ ರಿಂಗ್ ಮಾಡಿದೆ. ಮುಂದೆ ಸುದೀರ್ಘವಾಗಿ ಮಾತುಗಳ ವಿನಿಮಯವಾಯಿತು. ಎಲ್ಲವನ್ನೂ ರೆಕಾರ್ಡ ಮಾಡಿರುವೆ. ಮನಕಲಕುವ ಮಾತುಗಳನ್ನು ನಿನ್ನ ಕಿವಿಯಾರೆ ನೀನೇ ಕೇಳಿಸಿಕೋ” ಎಂದೆನ್ನುತ್ತಾ ಸೋಫಿಯಾ ಮೊಬೈಲನ್ನು ಶಶಿಶೇಖರನ ಮುಂದೆ ಹಿಡಿದಳು. ಆಗಲೇ ಶಶಿಯ ಮುಖ ವಿವರ್ಣವಾಗಿತ್ತು.

****

“ಹಲೋ ಶಶೀನಾ…? ಅದೆಷ್ಟು ದಿನಗಳಾದವಪ್ಪ ನೀ ನಂಜೊತಿಗೆ ಮಾತಾಡದೇ…?” ಅಂತರರಾಷ್ಟಿçÃಯ ಕರೆಯನ್ನು ಸ್ವೀಕರಿಸುತ್ತಿದ್ದಂತೆ ಬಸವಣ್ಣೆಪ್ಪ ಮಾತಿಗೆ ಮುಂದಾಗಿದ್ದ.

“…”

“ಯಾಕೋ ಮಾತಾಡ್ತಿಲ್ಲ…? ಸುಮ್ನೇ ನಿಂತ್ಕಂಡ್ಬಿಟ್ಯಲ್ಲ…? ಮಾತಾಡು. ಯಾಕಪ್ಪಾ… ನನ್ ಧ್ವನಿ ಗೊತ್ತಾಗವಲ್ತೇನು…?”

“ಯಾರು ಬೇಕಿತ್ರೀ ನಿಮ್ಗೆ…?” ಹೆಣ್ಣಿನ ಧ್ವನಿಗೆ ಬಸವಣ್ಣೆಪ್ಪ ತುಸು ಅಧೀರನಾದ. ಅದೂ ಕನ್ನಡ ನಾಡಿನ ಹೆಣ್ಣಿನ ಧ್ವನಿ ಅಲ್ಲ ಅಂತ ಬಸವಣ್ಣೆಪ್ಪನಿಗೆ ಅರ್ಥವಾಯಿತು.

“ಯ… ಯ… ಯರ‍್ರೀ ನೀವು ಮಾತಾಡೋದು…? ಇದು ಶಶಿಶೇಖರನ ನಂಬರು ಅಲ್ಲೇನ್ರೀ…?”

“ನೀವು ಶಶಿಶೇಖರನಿಗೆ ಏನಾಗಬೇಕು…?”

“ನಾನು ಶಶಿಶೇಖರನ ಅಪ್ಪ ಬಸವಣ್ಣೆಪ್ಪರೀ… ನಮ್ಮೂರಿಂದ ಮಾತಾಡಕತ್ತೀನಿ. ಇ… ಇ… ಇದು ಅಮೇರಿಕಾ ಅಲ್ಲೇನ್ರೀ…?” ಒಂದಿಷ್ಟು ನಡುಕವಿತ್ತು ಬಸವಣ್ಣೆಪ್ಪನ ಮಾತಿನಲ್ಲಿ.

`ಶಶಿಶೇಖರನ ಅಪ್ಪ ಅಂದರೆ ಫಾದರ್! ನನಗೆ ಯಾರೂ ಇಲ್ಲ ಅಂತ ಹೇಳಿರುವನಲ್ಲ ಶಶಿ. ಮತ್ತೆ ಈ ಬಸವಣ್ಣೆಪ್ಪ ಯಾರು…? ಕನ್ಫೂಜ್ ಮಾಡಿಕೊಂಡಾನೇನೋ ಈ ಮುದುಕ…?’ ಮನಸಿನೊಳಗೇ ಅಂದುಕೊಂಡಳು ಸೋಫಿಯಾ ಮುಂದಿನ ಮಾತಿಗೆ ಮುಂದಾಗುವದಕ್ಕಿಂತ ಮುಂಚೆ.

“ನೀವು ರಿಯಲೀ ಶಶಿಶೇಖರನ ಅಪ್ಪಾನಾ…?”

“ಹೌದ್ರೀ ಅಮ್ಮಾರ! ನೀವು ಅಮೇರಿಕಾದವ್ರೇ ಏನ್ರೀ? ನಿಮಗೆ ಕನ್ನಡ ಮಾತಾಡಕ ಬರುತ್ತೇನ್ರೀ…?”

“ನಾನು ಅಮೇರಿಕಾದವಳೇ. ಕನ್ನಡ ಸ್ವಲ್ಪ… ಸ್ವಲ್ಪ ಬರುತ್ತೆ.”

“ಇಂಜಿನಿಯರಿಂಗ್   ಓದಾದು ಮುಗಿದ ಕೂಡಲೇ ಶಶಿಶೇಖರ ನೌಕ್ರಿ ಮ್ಯಾಲೆ ಅಮೇರಿಕಾಕ್ಕೆ ಹೋದನ್ರೀ. ಅಲ್ಲಿಗೆ ಹೋದಾಗ್ನಿಂದ ಅವ ನಂಜೊತಿಗೆ ಮಾತೇ ಆಡಿಲ್ರೀ. ಗಪ್ಪಾಗಿಬಿಟ್ಟಾನ್ರೀ. ಇದು ಅವನ ನಂಬರು ಅಲ್ಲೇನ್ರೀ…? ಶಶಿ ಮ್ಯಾಲೆ ನಾನು ಪ್ರಾಣಾನೇ ಇಟ್ಕೊಂಡೀನ್ರಿ. ಶಶಿ ಹದಿನೈದು ವರ್ಷದವನಿದ್ದಾಗ ಅವನ ತಾಯಿ ತರ‍್ಕೊಂಡುಬಿಟ್ಳು. ಆವಾಗ್ನಿಂದ ನಾನೇ ತಾಯಿ, ತಂದೆ ಆಗಿ ಕಣ್ಣಿಗೆ ಎಣ್ಣಿ ಬತ್ತಿ ಹಾಕ್ಕೊಂಡು ಅವನ್ನ ನೋಡ್ಕೊಂಡೀನ್ರಿ. ಅಂದAಗ ನಂಜೊತಿಗೆ ಚೊಲೋತ್ನಾಗಿ ಮಾತಾಡಕತ್ತೀರಲ್ಲ, ನಿಮಗೆ ನಮ್ ಶಶಿ ಗೊತ್ತೇನ್ರೀ…?”

“ಆ… ಹಾಂ! ಹೂನ್ರಿ, ನಿಮ್ ಶಶಿ ನನಗೆ ಗೊತ್ತು.”

“ಹೌದ್ರ್ಯ…? ಚೊಲೋ ಆತು ಬಿಡ್ರಿ. ನಮ್ ಶಶಿ ಅಲ್ಲಿದ್ರೆ ಒಂದೀಟು ಫೋನ್ ಕೊಡ್ರೆಲ್ಲ…?”

“ಅವ್ರು ಈಗ ಮೆಡಿಟೇಶನ್ ಮಾಡಾಕ ಕುಂತರ‍್ರೀ.”

“ಮೆಡಿಟೇಶನ್ ಅಂದ್ರೆ…?”

“ಹಾಂ! ಮೆಡಿಟೇಶನ್ ಅಂದ್ರೆ ಧ್ಯಾನ. ಧ್ಯಾನ ಮಾಡುತ್ತಿದ್ದಾರೆ.”

“ನಿಮ್ ಮನ್ಯಾಗ ಅದಾನೇನ್ರಿ ನಮ್ ಶಶಿ…?”

`ನಾನು ಏನಂತ ಹೇಳಲಿ ಇವರಿಗೆ…? ನಾನು ಶಶಿಯ ಹೆಂಡತಿ ಅಂತ ಹೇಳಿಬಿಡಲೇ? ಹೇಳುವುದೇ ಒಳ್ಳೆಯದಲ್ಲವೇ…? ಪಾಪ! ಮಗನ ಮೇಲೆ ಅದೆಷ್ಟು ಆಸೆ ಇಟ್ಕೊಂಡಾರೋ ಏನೋ…?’ ಹೀಗೆ ತನ್ನೊಳಗೇ ಯೋಚಿಸಿದಳು ಸೋಫಿಯಾ.

“ನಾನು ನಿಮಗೆ ಡಾಟರ್ ಇನ್ ಲಾ ಆಗಬೇಕು. ಅಯ್ಯೋ! ನಾನು ನಿಮ್ಮ ಸೊಸೆ. ಶಶಿ ನನ್ನ ಗಂಡ. ಶಶಿ ಇಲ್ಲಿಗೆ ಬಂದ ಮರುವರ್ಷವೇ ಇಬ್ಬರೂ ಮದುವೆಯಾಗೀವಿ.”

ತುಸು ಹೊತ್ತು ಮೌನ.

“ಹಾಂ! ಏನು ಹೇಳಾಕತ್ತೀರಿ ನೀವು…? ಒಂದೂ ಅರ್ಥ ಆಗವೊಲ್ತಲ್ಲ ನನಗೆ? ಶಶಿ ನನ್ಗೆ ಒಂದತಟಗೂ ಹೇಳಿಲ್ಲ…” ಮೌನ ಮುರಿದು ಮಾತಾಡಿದ ಬಸವಣ್ಣೆಪ್ಪ.

“ಹೌದ್ರಿ. ನಾನು ನಿಜವನ್ನೇ ಹೇಳೀನಿ. ನೀವು ಆರಾಮ ಅದೀರಿ ತಾನೇ…?”

“ನನ್ಗೆ ದಿಕ್ಕೇ ತೋರವಲ್ದಂಗ ಆಗೈತಿ ನೋಡ್ರಿ. ನಮ್ಮೂರಾಗ, `ಬಸವಣ್ಣೆಪ್ಪ, ನಿನ್ಮಗ ಅಲ್ಲೇ ಬಿಳಿ ಹುಡುಗೀನ ಮದುವಿ ಆಗರ‍್ತಾನ. ನನ್ನ ಮಗ ಬಾಳಾ ಶ್ಯಾಣ್ಯಾ, ಬಾಳ ಕಳ್ಳಿನಾವ. ಅಮೇರಿಕಾದೊಳ್ಗೆ ಬಾಳಷ್ಟು ದುಡ್ಡು ಮಾಡ್ಕೊಂಡು ರ‍್ತಾನಂತ ನೀನು ಇಲ್ಲೇ ಕತಿ ಹೇಳ್ಕೊಂತ ಕೂಡೋದಷ್ಟೇ ಖರೆ. ಸಾಲಕ್ಕೆ ನಿನ್ನ ಹೊಲ-ಮನಿ ಹೋಗ್ತಾವ’ ಅಂತ ಜನ ಮಾತಾಡಾಕತ್ಯಾರ. ಅವ್ರ ಮಾತು ನಿಜ ಅನಸಕತ್ತೈತಿ ನೋಡ್ರಿ. ನಮ್ ಶಶಿ ಇಂಜಿನಿಯರಿಂಗ್ ಓದೋವತ್ನಾö್ಯಗ ನಾ ಹೊಲದ ಮ್ಯಾಲೆ ನಾಕು ಲಕ್ಷ ಸಾಲ ಮಾಡಿದ್ದೆ. ನಾ ಹಂಗೂ-ಹಿAಗೂ ಮಾಡಿ ನಾಕು ಲಕ್ಷ ವಾಪಾಸು ಕೊಟ್ಟೀನ್ರಿ. ಆದ್ರೆ ಸಾಲ ಕೊಟ್ಟ ಸಾಹುಕಾರ ಸಿದ್ದಪ್ಪ ಬಡ್ಡಿ ಹತ್ತು ಲಕ್ಷ ಆಗ್ಯಾದ. ಹತ್ತು ಲಕ್ಷ ಕಟ್ಟಾಕಾಗದಿದ್ರೆ ನಿನ್ನ ಹೊಲಾನ ನನ್ ಹೆಸ್ರೀಲೇ ಮಾಡ್ಸಿಕೊಂತೀನಿ ಅಂತ ಜರ‍್ದಸ್ತ್ ಮಾಡ್ಲಿಕತ್ಯಾನ್ರೀ. ಅದ್ರಾಗ ಮೂರು ವರ್ಷ ಆತ್ರಿ, ಬರಗಾಲ ಬಿದ್ಕೈತಿ . ಮಳಿ ಇಲ್ಲ, ಬೆಳಿ ಇಲ್ಲ. ಹತ್ತು ಲಕ್ಷ ಅಂದ್ರೆ ದುಡ್ಡಲ್ಲ, ದುಗ್ಗಾಣಿ ಅಲ್ಲ. ಇಂಥಾ ವೇಳ್ಯಾದಾಗ ಹತ್ತು ಲಕ್ಷ ನಾ ಎಲ್ಲಿಂದ ರ‍್ಲಿ…? ಸಾಹುಕಾರ ಒಂದು ತಿಂಗ್ಳು ವೇಳ್ಯಾ ಕೊಟ್ಯಾನ್ರಿ. ಅಷ್ಟೊçಳಗ ಹತ್ತು ಲಕ್ಷ ಕೊಡದಿದ್ರೆ ಹೊಲ-ಮನಿ ಹೋಗ್ತವ. ಮರ್ಯಾದೆ ಹೋದ್ಮ್ಯಾಲೆ ನಾ ಯಾಕಾರ ಬದುಕರ‍್ಬೇಕು? ರ‍್ಲು ಹಾಕ್ಕೊಂಡು ಸತ್ತೋಗಿಬಿಡ್ಬೇಕು ಅಂತ ಮನಸು ಗಟ್ಟಿ ಮಾಡಿಕೊಂಡೀನ್ರೀ. ಶಶಿ ಏನಾದ್ರೂ ಬಂದು ಸಾಹುಕಾರರಿಗೆ ದುಡ್ಡು ಕೊಟ್ರೆ ನಾ ಉಳಿತೀನಿ ಇಲ್ಲಾಂದ್ರೆ ಶಿವನ ಪಾದ ಸರ‍್ಕೊಳ್ತೀನ್ರಿ. ನನಗೂ ಜನ್ಮ ಬ್ಯಾಸ್ರ ಆಗೇತ್ರಿ.” ಬಸವಣ್ಣೆಪ್ಪ ಗಟ್ಟಿಸಿ ಗಟ್ಟಿಸಿ ಅಳೋ ಶಬ್ದ ಕೇಳಿಸಿತು ಸೋಫಿಯಾಳಿಗೆ.

ಮತ್ತೆ ತುಸು ಹೊತ್ತಿನ ಮೌನ…

“ಮಾವನವರೇ, ನೀವು ಚಿಂತಿ ಮಾಡಬೇಡಿರಿ. ನಾನು ಶಶಿ ಕೂಡ ಮಾತಾಡಿ ನಿಮ್ಮ ಜೊತಿಗೆ ಆಮೇಲೆ ಮಾತಾಡ್ತೀನ್ರೀ. ನೀವು ಹಂಗೆಲ್ಲ ಪ್ರಾಣ ಕಳ್ಕೊಳ್ಳೋ ವಿಚಾರ ಮಾಡಬೇಡಿರಿ. ನಾವಿದ್ದೀವಿ. ಧೈರ್ಯ ತೊಗೊಳ್ರಿ. ನಾ ಶಶೀನ ನಿಮ್ಮೂರಿಗೆ ಕರಕೊಂಡು ರ‍್ತೀನ್ರಿ.” ಸೋಫಿಯಾ ಬಸವಣ್ಣೆಪ್ಪನನ್ನು ಸಮಾಧಾನ ಮಾಡಲು ಮುಂದಾದಳು.

“ಸರಿ ಅಮ್ಮ. ನಿಮ್ಗಾಗಿ ನಾ ಕಾಯ್ತೀನ್ರಿ. ಈ ಬಡವನ್ನ ಮರಿಬ್ಯಾಡ್ರಿ. ನನ್ನ ಕಷ್ಟಾನ ಹೊಟ್ಟೆಗೆ ಹಾಕ್ಕೊಳ್ರಿ. ನನ್ನ ಮಾನ, ಮರ್ಯಾದಿ, ಜೀವ ಉಳಸ್ರಿ” ಎಂದೆನ್ನುತ್ತಾ ಬಸವಣ್ಣೆಪ್ಪ ಕಾಲ್ ಕಟ್‌ಮಾಡಿದ.

“ಕೇಳಿಸಿಕೊಂಡೆಯೇನೋ ಚೀಟ್…? ಯುವ್ ಬ್ಲಡೀ ಫೂಲ್! ನಿನ್ನ ಹೆತ್ತಪ್ಪನ ಧ್ವನಿಯನ್ನಾದರೂ ಗುರುತಿಸಿದಿಯಾ? ಅವರು ನಿನ್ನಪ್ಪ ತಾನೇ…? ತಾಯಿ ಇಲ್ಲದ ತಬ್ಬಲಿ ಮಗುವನ್ನು ಸಾಕಿ ಸಲಹುಲು ಅವರೆಷ್ಟು ತ್ರಾಸು ತೆಗೆದುಕೊಂಡಿರಬೇಕು? ಪಾಲಿಸಿ, ಪೋಷಿಸಿ, ಓದಿಸಿ ನಿನ್ನ ಈ ಮಟ್ಟಕ್ಕೆ ಅದೂ ವಿದೇಶಕ್ಕೆ ಹೋಗಿ ನೌಕರಿ ಮಾಡುವಂಥಹ ವಿದ್ಯಾವಂತನನ್ನಾಗಿ ರೂಪಿಸಿದ್ದಕ್ಕೆ ಅವರಿಗೆ ನೀನು ಸಲ್ಲಿಸುತ್ತಿರುವ ಗೌರವ ಇದೇನಾ…? ಆ ನಂಬರಿನ ಕಾಲ್ ಹಿಸ್ಟರಿ ಚೆಕ್‌ಮಾಡಿದೆ ನಾನು. ಆ ನಂಬರನ್ನು ನೀನು ಮೊನ್ನೆಯವರೆಗೂ ಬ್ಲಾಕ್‌ಮಾಡಿದ್ದಿ. ಅಂದರೆ ಅವರು ನಿನ್ನ ಕಾಂಟ್ಯಾಕ್ಟ್ ಮಾಡಬಾರದು ಅಂತ ಅಲ್ಲವೇ…?” ಸೋಫಿಯಾ ಭದ್ರಕಾಳಿಯಂತಾಗಿದ್ದಳು. ಕಣ್ಣುಗಳು ಕೆಂಡದುಂಡೆಯಂತಾಗಿದ್ದವು.

“ಸಾರಿ ಸೋಫಿ…”

“ನಿನ್ನ ಈ ಭೂಮಿಗೆ ತಂದವರು ಅವರು ಕಣೋ. ದೈವಸ್ವರೂಪಿಗಳು. ಕಣ್ಣಿಗೆ ಕಾಣದ ದೇವರುಗಳಿಗೆ ಕೈಮುಗಿಯುವ ನಾವು ಕಣ್ಣಿಗೆ ಕಾಣುವ ದೈವಸ್ವರೂಪಿ ದೇವರುಗಳಾದ ಮಾತಾ ಪಿತೃಗಳಿಗೆ ನಮಿಸುವುದಿಲ್ಲ. ಅವರಿಲ್ಲದಿದ್ದರೆ ನಾವಿರುತ್ತಿದ್ದೆವಾ? ನಮ್ಮ ಅಸ್ತಿತ್ವಕ್ಕೆ ನಮ್ಮ ಹೆತ್ತವರೇ ಕಾರಣರು ಅಲ್ಲವೇ? ಹೆತ್ತವರ ಋಣ ಏಳೇಳು ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲವೆಂದು ದಾರ್ಶನಿಕರು ಹೇಳುವುದು ನಿನಗೂ ಗೊತ್ತಿರಬೇಕು. ನಿನ್ನ ಈ ರೀತಿಯ ಬಿಹೇವಿಯರ್ ನನ್ನಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಥೂ! ನಾಚಿಕೆಗೆಟ್ಟವನೇ! ಪಶುಗಳಿಗಿಂತ ಕೀಳು ನಿನ್ನ ನಡೆ.”

“ಸೋಫಿ, ನಾನು ಇಲ್ಲಿಗೆ ಬಂದ ಮೊದಮೊದಲು ಅಪ್ಪಾಜಿ ಜೊತೆಗೆ ಆಗಾಗ ಮಾತಾಡುತ್ತಿದ್ದೆ. ನಿನ್ನ ಪರಿಚಯವಾದ ಮೇಲೆ, ಅದೂ ನಮ್ಮಿಬ್ಬರ ಪ್ರೀತಿ ಗಟ್ಟಿಯಾಗಲು ಶುರುವಾದಂದಿನಿಂದ, `ನನ್ನ ಅಪ್ಪಾಜಿ ಮೊದಲೇ ನಿರಕ್ಷರಕುಕ್ಷಿ, ಹಳ್ಳಿ ಗಮಾರ. ಅಂಥಹವರ ಮಗನೆಂದು ಇವಳು ನನ್ನ ಒಪ್ಪಿಕೊಳ್ಳದಿರಬಹುದು. ಒಂಥರ ಕೀಳರಿಮೆ ನನ್ನ ಕಾಡತೊಡಗಿತು. ನನ್ನ ಹೆತ್ತವರ ಬಗ್ಗೆ ಹೇಳದಿರುವುದೇ ಉತ್ತಮ’ ಎಂದಂದುಕೊಂಡು ನಾನು ಹೆತ್ತವರನ್ನು ಕಳೆದುಕೊಂಡ ತಬ್ಬಲಿ ಎಂದು ನಿನಗೆ ಸುಳ್ಳು ಹೇಳಿದೆ. ನನ್ನ ಜೀವನದಲ್ಲಿ ಹೇಳಿರುವ ಸುಳ್ಳು ಅದೊಂದೇ. ಅಂದು ಆ ಸುಳ್ಳು ಹೇಳಿರುವೆನಾದರೂ ಈಗಲೂ ನಾನು ಸುಳ್ಳಿನ ಬೇಗೆಯಲ್ಲಿ ಬೇಯುತ್ತಿದ್ದೇನೆ. ಪಶ್ಚಾತ್ತಾಪದ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿದ್ದೇನೆ. ಪಾಪಪ್ರಜ್ಞೆಯಲ್ಲಿ ಕತಕತನೇ ಕುದಿಯುತ್ತಿದ್ದೇನೆ. ಆ ಸುಳ್ಳಿನ ಬೇಗೆಯ ಒತ್ತಡವನ್ನು ನಿಭಾಯಿಸಲು ನಾನು ಲಾಸ್ಟ್ ಮಂಥ್ ಮೆಡಿಟೇಶನ್ ಕ್ಲಾಸಿಗೆ ಸೇರಿಕೊಂಡು ಮೆಡಿಟೇಶನ್ ಮಾಡುತ್ತಿರುವುದು. ಆ ಸುಳ್ಳಿನ ಸುಳಿಯಲ್ಲಿ ಸಿಲುಕಿರುವ ನಾನು ಮೆಡಿಟೇಶನ್ ಮಾಡುವಾಗಲೂ ವಿಲವಿಲ ಅಂತ ಒದ್ದಾಡುತ್ತಿದ್ದೇನೆ. ಇರುವ ಸತ್ಯವನ್ನು ಬಯಲಿಗಿಟ್ಟರಾಯಿತು ಎಂದಂದುಕೊಂಡು ಮೊನ್ನೆಯಷ್ಟೇ ಅಪ್ಪನ ನಂಬರಿನ ಬ್ಲಾಕ್ ತೆಗೆದೆ. ಈಗ ಅವರ ಜೊತೆಗೆ ಮೊದಲು ಮಾತಾಡಿದ್ದು ನೀನೇ. ಖರೇ ಹೇಳಬೇಕಂದರೆ ಮೆಡಿಟೇಶನ್ ಮುಗಿದ ನಂತರ ನಾನೇ ಅಪ್ಪಾಜಿಯ ಜೊತೆಗೆ ಮಾತಾಡಬೇಕೆಂದಿದ್ದೆ. ಅಷ್ಟರಲ್ಲಿ ನಿನ್ನಿಂದ ಇಷ್ಟೆಲ್ಲಾ ಮಂಗಳಾರತಿಯಾಯಿತು. ಆದದ್ದೆಲ್ಲಾ ಒಳ್ಳೆಯದಕ್ಕೇ ಎಂದು ಭಾವಿಸುವೆ. ನನ್ನಂಥಹ ಕೆಟ್ಟ ಮಗ ಯಾವ ಹೆತ್ತವರಿಗೂ ಇರಬಾರದು ಎಂದು ದಿನಾಲೂ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದೇನೆ. ನಾನೀಗ ಯಾವ ಶಿಕ್ಷೆಗೂ ರೆಡಿ. ನನ್ನ ಮೇಲೆ ಮುನಿಸಿಕೊಳ್ಳಬೇಡ. ನನ್ನ ತಪ್ಪನ್ನು ಕ್ಷಮಿಸಿಬಿಡು.” ದೈನ್ಯತೆ ಇತ್ತು ಶಶಿಶೇಖರನ ಮಾತಿನಲ್ಲಿ.

“ಯುವ್ ಹ್ಯಾವ್ ಡನ್ ಎ ಬ್ಲಂಡರ್ ಮಿಸ್ಟೇಕ್. ಅಕ್ಷಮ್ಯ ಅಪರಾಧ ನಿನ್ನದು!” ಗಂಭೀರವದನೆಯಾಗಿಬಿಟ್ಟಳು ಸೋಫಿಯಾ.

“ಮಾಯ್ ಲವ್, ನನ್ನದು ತಪ್ಪಾಗಿದೆ ಎಂದು ಒಪ್ಪಿಕೊಂಡಿರುವೆನಲ್ಲ, ಇನ್ನೂ ಏಕೆ ಈ ಮುನಿಸು? ತಪ್ಪಿತಸ್ಥರು ಕನ್‌ಫೆಸ್ಸೆನ್ ಮಾಡಿಕೊಳ್ಳುವುದಿಲ್ಲವೇ? ಈ ಥರಹದ ಮುನಿಸು ತರವಲ್ಲ ಮುಗುದೆ. ಕ್ಷಮಿಸಿ ಹಿತವಾಗಿ ನಕ್ಕುಬಿಡೇ…?” ಶಶಿಶೇಖರ್ ಅಂಗಲಾಚಿದ.

“ನೀನು ನನ್ನನ್ನು, ನಾನು ನಿನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವುದರಿಂದ ನಿನ್ನ ತಪ್ಪನ್ನು ಕ್ಷಮಿಸಿದ್ದೇನೆ. ಆದರೆ ತಕ್ಷಣ ನಾವಿಬ್ಬರೂ ನಿನ್ನೂರಿಗೆ ಹೋಗಿ ನನಗೆ ಈ ಪ್ರೀತಿಯ ಹುಡುಗನನ್ನು ಕೊಟ್ಟಿರುವ ಮಾವನವರನ್ನು ಭೆಟ್ಟಿಯಾಗಿ ಅವರ ಸಮಸ್ಯೆಗಳನ್ನು ಪರಿಹರಿಸಿ ಆಶೀರ್ವಾದ ಪಡೆದುಕೊಂಡು ಬರೋಣ. ಓಕೇನಾ…?”

“ಸರಿ ಸೋಫಿ…” ಎಂದು ಶಶಿ ಹೇಳುವಷ್ಟರಲ್ಲಿ ಸೋಫಿಯಾ ಅವನನ್ನು ಮೇಲೆತ್ತಿಕೊಂಡು ಗಿರಗಿಟ್ಲೆಮಾಡಿ ಕೆಳಗಿಳಿಸಿ ಮನಸಾರೆ ಚುಂಬಿಸಿ ಸಂಭ್ರಮಿಸಿದಳು.

****

ಆ ರಾತ್ರಿ ಶಶಿ ಬೇಗನೇ ಸುಷುಪ್ತಿಗೆ ಜಾರಲಿಲ್ಲ. ಒಂದಿಷ್ಟು ನೆನಪುಗಳು ಅವನ ಮನವನ್ನು ಕಾಡಿದವು. ಬಿಇ ಮುಗಿಯುತ್ತಿದ್ದಂತೆ ಶಶಿಶೇಖರನಿಗೆ ಬೆಂಗಳೂರಿನ ಹೆಸರಾಂತ, `ಬ್ರೈಟ್ ಕಂಪ್ಯೂಟರ್ಸ್’ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಒಳ್ಳೆಯ ಪ್ಯಾಕೇಜೇ ಸಿಕ್ಕಿತ್ತು. ಶಶಿಗೆ ತನ್ನವರೆನ್ನುವವರು ಇರುವುದು ತಂದೆ ಬಸವಣ್ಣೆಪ್ಪ ಒಬ್ಬನೇ. ಶಶಿ ಹದಿನೈದು ವರ್ಷದವನಿದ್ದಾಗಲೇ ತಾಯಿ ಚಂದ್ರಮ್ಮ ಕೈಲಾಸವಾಸಿಯಾಗಿದ್ದಳು. ತಾಯಿ ಇಲ್ಲದ ತಬ್ಬಲಿ ಎಂದು ಬಸವಣ್ಣೆಪ್ಪನೇ ಶಶಿಗೆ ತಂದೆಯಾಗಿ, ತಾಯಿಯಾಗಿ ಬೆಳೆಸಿದ್ದ ಪ್ರೇಮದಿಂದ. ಬಸವಣ್ಣೆಪ್ಪನಿಗಿದ್ದುದೇ ಆರೆಕೆರೆ ಒಣ ಬೇಸಾಯದ ಜಮೀನು. ಅದರ ಆದಾಯದಲ್ಲೇ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದ. ಜೊತೆಗೆ ಒಂದಿಷ್ಟು ಕೂಲಿ-ನಾಲೀನೂ ಮಾಡುತ್ತಿದ್ದ. ಓದಿನಲ್ಲಿ ಶಶಿ ಅಪ್ರತಿಮ ಪ್ರತಿಭಾವಂತ. ಮೊದಲನೇ ತರಗತಿಯಿಂದ ಶಶಿ ಯಾವಾಗಲೂ ಮುಂದೇ. ಮಗನಿಗೆ ಓದಿನಲ್ಲಿದ್ದ ಆಸಕ್ತಿಯನ್ನು ಗುರುತಿಸಿದ ಬಸವಣ್ಣೆಪ್ಪ ಹೊಟ್ಟೆ-ಬಟ್ಟೆ ಕಟ್ಟಿ ಓದಿಸಿದ್ದ. ತಂದೆಯ ಪರಿಶ್ರಮಕ್ಕೆ ಶಶಿ ತನ್ನ ಓದಿನ ರೂಪದಲ್ಲಿ ಕಾಣಿಕೆ ಸಲ್ಲಿಸುತ್ತಿದ್ದ. ಪರಿಶ್ರಮದ ಜೀವಿ ಬಸವಣ್ಣೆಪ್ಪನಿಗೆ ಮಗನ ಪ್ರಗತಿ ಕಂಡು ಖುಷಿಯೋ ಖುಷಿ. ಊರಿನ ಜನರ ಬಾಯಲ್ಲಿ ಶಶಿಶೇಖರನದೇ ಮಾತು.

ಮಗ ಒಳ್ಳೆಯ ಕೆಲಸ ಹಿಡಿಯುತ್ತಲೇ ಅತ್ತ ಬಸವಣ್ಣೆಪ್ಪನ ಸಂಬಂಧಿಕರು ನಾಮುಂದು, ತಾಮುಂದು ಎಂದು ಹೆಣ್ಣು ಕೊಡಲು ಪ್ರಸ್ತಾಪಿಸತೊಡಗಿದರು. ಬಸವಣ್ಣೆಪ್ಪ ಶಶಿಯ ಜೊತೆಗೆ ಪ್ರಸ್ತಾಪಿಸಿದಾಗ, `ಸದ್ಯ ಮದುವೆಗೆ ಏನವಸರ? ಬೇಡ. ಇನ್ನೊಂದೆರಡು ವರ್ಷ ಹೋಗಲಿ. ಅಷ್ಟರಲ್ಲಿ ಸಾಲ-ಸೋಲ ಮುಗಿಯುತ್ತವೆ’ ಎಂದು ತಂದೆಗೆ ಹೇಳಿದ್ದ. `ನೋಡಪ್ಪ, ನಿನ್ನಮ್ಮ ಇದ್ದಿದ್ದರೆ ಅವಳು ಒಂದೇ ಸಮನೇ ಗಂಟುಬಿದ್ದು ಇಷ್ಟೊತ್ತಿಗೆ ನಿನ್ನ ಮದುವೆಮಾಡಿ ಮುಗಿಸುತ್ತಿದ್ದಳೇನೋ? ತಾಯಿ ಕರುಳೇ ಬೇರೆ ಅಲ್ಲವೇನೋ? ತಾಯಿ ಸ್ಥಾನ ಯಾರಿಗೂ ತುಂಬಲು ಆಗುವುದಿಲ್ಲ ಅಂತಾರೆ. ನೀನು ಓದಿದವ. ನೀನೇ ವಿಚಾರಮಾಡು. ಎಷ್ಟಾದರೂ ಈಗಿನ ಕಾಲದ ಹುಡುಗ ನೀನು. ಏನೋ ನನ್ನ ಮೊಮ್ಮಕ್ಕಳನ್ನು ಎತ್ತಿ ಆಡಿಸಬೇಕೆಂಬ ಆಸೆ ನನಗೂ ಎಲ್ಲಾ ತಂದೆ-ತಾಯಿಗಳಂತೆ. ಆದಷ್ಟು ಬೇಗ ನನ್ನಾಸೆ ಈಡೇರಿಸಿದರೆ ಸಾಕು.’

`ಅಪ್ಪಾ, ಅಮ್ಮ ತೀರಿ ಹೋದನಂತರ ನೀನೇ ನನಗೆ ತಾಯಿಯಾಗಿ, ತಂದೆಯಾಗಿ ಸಾಕಿ ಸಲಹಿರುವಿ. ನಿನ್ನ ಕಳ್ಳು, ಕಕ್ಕುಲಾತಿ ತಾಯಿಗಿಂತ ಕಡಿಮೆ ಏನಿಲ್ಲ. ನೀನೇನು ಚಿಂತೆ ಮಾಡಬೇಡ. ನಿನ್ನಿಚ್ಛೆಯಂತೆ ನಾನು ಆದಷ್ಟು ಬೇಗ ಮದುವೆಯಾಗುವೆ’ ಎಂದು ಶಶಿ ತಂದೆಯನ್ನು ಸಮಾಧಾನಿಸಿದ್ದ.

ಶಶಿಶೇಖರ್ ಬೆಂಗಳೂರಿನಲ್ಲಿ ಮೂರು ವರ್ಷ ಕೆಲಸ ಮಾಡಿದ್ದನೇನೋ? ಕಂಪನಿಯ ವತಿಯಿಂದ ಅವನಿಗೆ ಎರಡು ವರ್ಷಗಳವರೆಗೆ ಯುಎಸ್‌ಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಬಸವಣ್ಣೆಪ್ಪನಿಗೆ ಮಗ ಪರದೇಶಕ್ಕೆ ಹೋಗುವ ಮನಸ್ಸಿರಲಿಲ್ಲ. `ನಿನ್ನ ಮಗ ದೊಡ್ಡ ಇಂಜಿನಿಯರ್ ಆಗಬೇಕೆಂಬ ಆಸೆ ನಿನಗೆ ಇಲ್ಲವೇನು? ಅದೇನು ಬರೀ ಎರಡು ವರ್ಷ ಅಷ್ಟೇ. ಕಣ್ಣುಮುಚ್ಚಿ ಕಣ್ಣು ತೆರೆಯುವುದರಲ್ಲಿ ಕಳೆದು ಹೋಗುತ್ತೆ. ಈಗ ಬಹಳಷ್ಟು ಜನ ನಮ್ಮ ದೇಶದ ಇಂಜಿನಿಯರುಗಳು ಪರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೂ ಪರದೇಶಕ್ಕೆ ಹೋಗಬೇಕೆಂಬ ಆಸೆ ಇತ್ತು. ಏನೋ ಅವಕಾಶ ಒದಗಿ ಬಂದಿದೆ. ಆರಾಮಾಗಿ ಹೋಗಿ ಬಾ ಎಂದು ಆಶೀರ್ವಾದ ಮಾಡಪ್ಪ’ ಎಂದು ಬೇಡಿಕೊಂಡಾಗ ಬಸವಣ್ಣೆಪ್ಪನಿಗೆ ಬೇರೆ ಕಾಣಲಿಲ್ಲ. ತುಂಬು ಹೃದಯದಿಂದ ಹರಸಿ, ಆಶೀರ್ವದಿಸಿ ಮಗನನ್ನು ಕಳುಹಿಸಿ ಕೊಟ್ಟಿದ್ದ. ಶಶಿ ವಿದೇಶಕ್ಕೆ ಹಾರಿದ.

ಯುಎಸ್‌ನಲ್ಲಿನ ಶ್ರೀಮಂತಿಕೆ ಕಂಡು ಶಶಿ ಹೌಹಾರಿದ. ಒಂಥರ ಕೀಳರಿಮೆ ಅವನ ಮನಸ್ಸನ್ನು ಮುತ್ತಿಕೊಂಡಿತ್ತು. ಮಿತಭಾಷಿಯಾಗಿದ್ದವ ಒಂಥರ ಮೌನಿಯಾದ. ಆಗ ಅವನನ್ನು ಸುತ್ತಿಕೊಂಡಿದ್ದು ಸಹೋದ್ಯೋಗಿ ಸೋಫಿಯಾಳ ಪ್ರೀತಿ. ಅಂಜಂಜುತ್ತಲೇ ಅವಳ ಗೆಳೆತನ ಒಪ್ಪಿಕೊಂಡಿದ್ದ. ಅವಳ ಆಪ್ತ ಮನೋಭಾವ, ಪ್ರೀತಿಯ ಎರಕದ ಮಾತುಗಳಿಗೆ ನಿಧಾನವಾಗಿ ಮಾರುಹೋದ. ತಂದೆಯನ್ನು ಮರೆತು ತಾನೊಬ್ಬ ಅನಾಥನೆಂದು ಅವಳ ಎದೆಯೊಳಗೆ ತೂರಿಕೊಂಡುಬಿಟ್ಟ. ಮಾನವೀಯ ಕಳಕಳಿಯ, ವಿನೀತ ಸ್ವಭಾವದ ಸೋಫಿಯಾ ಅವನ ಮನಸ್ಸನ್ನು ತುಂಬಿದಳು. ಬೆಣ್ಣೆಯಂಥಹ ಮನಸ್ಸಿನ, ಬೆಳದಿಂಗಳ ಮೈಯವಳು, ಬಟ್ಟಲುಗಣ್ಣಿನ ಕಾವ್ಯಕನ್ನಿಕೆ ಸೋಫಿಯಾ ಶಶಿಶೇಖರನ ತನುಮನ ಗೆದ್ದಳು. ಸೋಫಿಯಾಳ ಪ್ರೀತಿಸುವ ಹೃದಯವನ್ನು ಒಪ್ಪಿಕೊಂಡು ಇಬ್ಬರೂ ಗಂಡ-ಹೆಂಡಿರಾಗಿಬಿಟ್ಟರು. ಪ್ರೀತಿಯ ಹೊನಲಿನ ಅನ್ಯೋನ್ಯ ದಾಂಪತ್ಯದಲ್ಲಿ ಜಗವನ್ನೇ ಮರೆತರು. ಎರಡು ವರ್ಷಗಳಿಗೆಂದು ಹೋದವ ಅಲ್ಲೇ ಖಾಯಂ ಆಗಿ ನೆಲೆನಿಂತ.

“ಯಾಕೋ ಶಶಿ, ನಿದ್ದೆ ಬರುತ್ತಿಲ್ಲವಾ…?” ಎಂದು ಸೋಫಿಯಾ ಪಿಸುಗುಟ್ಟುತ್ತಾ ಶಶಿಯನ್ನು ಆವರಿಸಿದಾಗ, `ಏನೋ ಹಳೇ ನೆನಪುಗಳು’ ಎಂದೆನ್ನುತ್ತಾ ಶಶಿ ನೆನಪಿನ ಬುತ್ತಿ ಕಟ್ಟಿಟ್ಟು ಅವಳೆದೆಯೊಳಗೆ ಮುಖವಿಟ್ಟು ಸಂಭ್ರಮಿಸಿದ.

****

ಶಶಿ, ಸೋಫಿಯಾ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಾಗ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಸೋಫಿಯಾಳ ಕಜಿನ್ ಸಿಸ್ಟರ್ ಮತ್ತು ಮನೆಯವರಿಂದ ಅದ್ಧೂರಿಯ ಸ್ವಾಗತ ಸಿಕ್ಕಿತು. ರಾತ್ರಿ ಅವರ ಮನೆಯಲ್ಲೇ ಉಳಿದುಕೊಂಡು ಬೆಳಿಗ್ಗೆ ಅಂಬರದಾಗೆ ನೇಸರ ಕೆಂಪಿನೋಕುಳಿ ಚೆಲ್ಲುತ್ತಾ ಉದಯಿಸುವಾಗ ಅವರದೇ ಕಾರಿನಲ್ಲಿ ಶಶಿ ಮತ್ತು ಸೋಫಿಯಾರ ಪ್ರಯಾಣ ಶುರುವಾಯಿತು. ಶಶಿಯೇ ಸಾರಥಿಯಾದ.

ಶಶಿಶೇಖರ್ ಸೋಫಿಯಾಳ ಜೊತೆಗೆ ತನ್ನೂರಿಗೆ ಬಂದಾಗ ಬೆಳಗಿನ ಹನ್ನೊಂದುವರೆಯಾಗಿತ್ತು. ಕಾರು ಮನೆಯ ಮುಂದೆ ನಿಂತಾಗ ಮನೆಯ ಬಾಗಿಲಿಗೆ ಬೀಗ ಬಡಿದಿದ್ದು ಕಂಡುಬಂದಿತು. ಶಶಿಶೇಖರನ ಎದೆ ಧಸಕ್ಕೆಂದಿತು. ಕಾರನ್ನು ಕಂಡು ಆಗಲೇ ಓಣಿಯಲ್ಲಿ ಒಂದಿಷ್ಟು ಜನ ಜಮಾಯಿಸಿದ್ದರು. ಜನರೆಲ್ಲರಿಗೂ ಸೋಫಿಯಾ ಕುತೂಹಲ ಮೂಡಿಸಿದ್ದಳು. ಬಸವಣ್ಣೆಪ್ಪ ಹಳ್ಳದ ಹೊಲಕ್ಕೆ ಹೋಗಿರುವ ಮಾಹಿತಿ ಸಿಕ್ಕಿತು. ಶಶಿಶೇಖರ್ ಕಾರನ್ನು ಹಳ್ಳದ ಹೊಲದ ಕಡೆಗೆ ತಿರುಗಿಸಿದ. ಕಾರೊಂದು ತನ್ನ ಹೊಲದ ಕಡೆಗೇ ಬರುತ್ತಿರುವುದನ್ನು ದೂರದಿಂದಲೇ ಕಂಡ ಬಸವಣ್ಣೆಪ್ಪನ ಮೈಯಲ್ಲಿ ನಡುಕ ಶುರುವಾಯಿತು. ಸಾಲದ ಗುಂಗಿಹುಳ ತಲೆಯನ್ನು ಕೊರೆಯತೊಡಗಿತು. ಕಾರು ಸೀದಾ ಹೊಲದ ಬದುವಿನಲ್ಲೇ ನಿಂತುಕೊAಡಿತು. ಮೊದಲು ಕೆಳಗಿಳಿದಿದ್ದು ಸೋಫಿಯಾ. ನಂತರ ಶಶಿ. ಹೊಲದಲ್ಲಿ ತೊಗರಿ ಬೆಳೆ ನಳನಳಿಸುತ್ತಿತ್ತು.

`ಇದೇ ಅಪ್ಪನ ಹೊಲ’ ಎಂದು ಶಶಿ ಸೋಫಿಯಾಳಿಗೆ ಹೇಳಿದಾಗ ಅವಳು ಭೂತಾಯಿಗೆ ಹಣೆಹಚ್ಚಿ ನಮಸ್ಕರಿಸಿದಳು. ಇಬ್ಬರೂ ಬಸವಣ್ಣೆಪ್ಪನ ಕಡೆಗೆ ದೌಡಾಯಿಸಿದರು. ಬಸವಣ್ಣೆಪ್ಪನಿಗೆ ಶಶಿಶೇಖರನ ಗುರುತು ಸಿಕ್ಕಾಗ ಮನದಲ್ಲಿದ್ದ ದುಗುಡ ದೂರಾಗಿ ಸಂತಸದ ಅಲೆಗಳ ಸಂಭ್ರಮ ಶುರುವಾಗಿತ್ತು.

“ಅಪ್ಪಾ, ನನ್ನನ್ನು ಕ್ಷಮಿಸಿಬಿಡಪ್ಪಾ…” ಎಂದೆನ್ನುತ್ತಾ ಓಡೋಡಿ ಹೋಗಿ ಶಶಿ ಬಸವಣ್ಣೆಪ್ಪನ ಪದತಲದಲ್ಲಿ ಕುಸಿದಿದ್ದ. ತಂದೆಯ ಪಾದಪದ್ಮಗಳಿಗೆ ಕಣ್ಣೀರ ಅಭಿಷೇಕ ಮಾಡಿದ. ಬಸವಣ್ಣೆಪ್ಪ ಮಗನನ್ನು ಮೇಲೆತ್ತಿ ತೆಕ್ಕೆಗೆ ಹಾಕಿಕೊಂಡ. ಸೋಫಿಯಾ ಭಾವುಕಳಾಗಿ ತಂದೆ-ಮಗನ ಮಿಲನದ ಸಂಭ್ರಮವನ್ನು ಕಣ್ಮನಗಳಲ್ಲಿ ತುಂಬಿಕೊಂಡು ಸಂಭ್ರಮಿಸತೊಡಗಿದಳು.

“ಅಪ್ಪಾ, ಇವಳೇ ನಿಮ್ಮ ಸೊಸೆ ಸೋಫಿಯಾ. ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿರುವ ಮಹಾಸಾಧ್ವಿ. ನನ್ನ ಮನದ ಕೀಳರಿಮೆಯ ಭಾವನೆಗಳನ್ನು ಹೋಗಲಾಡಿಸಿದವಳು. ಕ್ಷಮಯಾ ಧರಿತ್ರಿಯಂತೆ ನನ್ನ ಅಕ್ಷಮ್ಯ ಅಪರಾಧವನ್ನು ಕ್ಷಮಿಸಿದವಳು” ಎಂದು ಶಶಿ ಹೇಳುವಷ್ಟರಲ್ಲಿ, ಸೋಫಿಯಾ ಬಸವಣ್ಣೆಪ್ಪನ ಪಾದಗಳಿಗೆ ಹಣೆಹಚ್ಚಿ ನಮಸ್ಕರಿಸಿದಳು.

“ಹುಡುಗಿ ಪರದೇಶದವಳಾಗಿದ್ದರೂ ಮಾನವಂತ ಹುಡುಗಿಯನ್ನೇ ಮದುವಿಯಾಗಿರುವಿ ಮಗನೇ. ಮೊದಮೊದಲು ಮನಸ್ಸಿಗೆ ಒಂದಿಷ್ಟು ಬೇಸರವೆನಿಸಿದರೂ ಆಳವಾಗಿ ಯೋಚಿಸಿ ಸೊಸೆಯ ಸದ್ಗುಣಗಳನ್ನು ಮೆಲುಕು ಹಾಕಿದಾಗ ಮನಸ್ಸು ನಿರಾಳವಾಯಿತು. ಮಗಳೇ, ತುಂಬು ಹೃದಯದಿಂದ ನಿನ್ನನ್ನು ನನ್ನ ಸೊಸೆಯೆಂದು ಒಪ್ಪಿಕೊಂಡಿದ್ದೇನೆ. ಮಾನವ ಜಾತಿ ಒಂದೇ ಎಂಬ ಅಭಿಮತದವನು ನಾನು. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂಬAತೆ ನೀವಿಬ್ಬರೂ ಬಾಳಿ ಬೆಳಕಾಗಿರಿ.” ಬಸವಣ್ಣೆಪ್ಪ ಸಂತಸದ ಪರಾಕಾಷ್ಠೆಯಲ್ಲಿದ್ದ.

ಶಶಿ, ಸೋಫಿಯಾ ಜೊತೆಗೂಡಿ ಬಸವಣ್ಣೆಪ್ಪನ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಶಶಿ ತಾಯಿಯನ್ನು ನೆನೆಸಿಕೊಂಡು ಒಂದಿಷ್ಟು ಭಾವುಕನಾದ. ಬಸವಣ್ಣೆಪ್ಪ, ಸೋಫಿಯಾ ಸಮಾಧಾನ ಮಾಡಿದರು.

ದಾರಿಯಲ್ಲಿ ಕಟ್ಟಿಸಿಕೊಂಡು ಬಂದಿದ್ದ ಊಟವನ್ನು ಹೊಲದ ಹುಣಸೇ ಮರದ ನೆರಳಲ್ಲಿ ಕುಳಿತು ಉಂಡಾಗ ವನಭೋಜನವಾಯಿತು. ಊಟದ ನಂತರ ಶಶಿಯ ಕಾರು ಸಾಹುಕಾರ ಸಿದ್ದಪ್ಪನ ಮನೆಯ ಕಡೆಗೆ ತಿರುಗಿತು. ಸಾಹುಕಾರರು ಒಂದಿಷ್ಟು ಗಲಿಬಿಲಿಗೊಂಡಿದ್ದು ನಿಜ. ಶಶಿ ನೇರವಾಗಿ ಸಾಲದ ಬಗ್ಗೆಯೇ ಪ್ರಸ್ತಾಪಿಸಿದ.

“ಶಶಿ, ನಿನ್ನ ಅಪ್ಪ ಆಗಲೇ ಅಸಲು ಕೊಟ್ಟುಬಿಟ್ಟಾನ. ಬಡ್ಡಿ ಇಷ್ಟೇ ಕೊಡು ಅಂತ ನಾನೇನು ತಕರಾರು ಮಾಡಿಲ್ಲ. ಊರಿನ ಜನರು ಸುಳ್ಳ-ಪಳ್ಳ ಸುದ್ದಿ ಹಬ್ಬಿಸ್ಯಾರ. ನನ್ನ ಹಣದ ಸಹಾಯದಿಂದ ನೀನು ಓದಿ ಶಾಣ್ಯಾನಾಗಿ ವಿದೇಶಕ್ಕೆ ಹೋಗಿರುವುದು ನನಗೆ ಹೆಮ್ಮೆಯ ವಿಷಯ. ತಿಳಿದಷ್ಟು ಕೊಡು. ಇಲ್ಲಾ ಅಂದರೆ ಅದುನೂ ಬ್ಯಾಡ.” ಸಿದ್ದಪ್ಪ ವಿನೀತನಾಗೇ ಹೇಳಿದಾಗ ಬಸವಣ್ಣೆಪ್ಪ, ಸೋಫಿಯಾ ಅಚ್ಚರಿಗೊಂಡರು.

“ಸಾಹುಕರ‍್ರೇ, ಇಷ್ಟು ಕೊಡು ಅಂತ ನೀವೇ ಹೇಳಿಬಿಡ್ರಿ, ನನ್ಗೆ ಗೊತ್ತಾಗಂಗಿಲ್ಲ. ನಿಮ್ಮ ಸಹಾಯವನ್ನು ನಾನು ಯಾವತ್ತೂ ಮರೆಯುವುದಿಲ್ಲ.” ಶಶಿಯೂ ಅಷ್ಟೇ ವಿನಮ್ರನಾಗಿ ಹೇಳಿದ.

“ಎರಡು ಲಕ್ಷ ಕೊಟ್ಟುಬಿಡು ಸಾಕು” ಎಂದರು ಸಿದ್ದಪ್ಪ. ಶಶಿ ಮಾತಿಲ್ಲದೇ ಎರಡು ಲಕ್ಷ ಹಣವನ್ನು ಸಾಹುಕಾರರ ಕೈಗಿಟ್ಟ. ಸಾಹುಕಾರರು ಸಂತಸದಿಂದ ಸಂಭ್ರಮಿಸಿದರು. ಎರಡು ಲಕ್ಷಕ್ಕೇ ಸಾಲ ಚುಕ್ತಾ ಆಗಿದ್ದಕ್ಕೆ ಅತೀವ ಸಂತಸಗೊಂಡಿದ್ದು ಬಸವಣ್ಣೆಪ್ಪ. ಬಸವಣ್ಣೆಪ್ಪನ ಬ್ಯಾಂಕ್ ಖಾತೆಗೂ ಶಶಿ ಸಾಕಷ್ಟು ಹಣವನ್ನು ಜಮಾ ಮಾಡಿದ.

ಬಸವಣ್ಣೆಪ್ಪನ ಕಡ್ಡಿಪೆಟ್ಟಿಗೆಯಂಥಹ ಚಿಕ್ಕ ಮನೆಯನ್ನು ನೋಡಿದ ಸೋಫಿಯಾಳಿಗೆ ಅಚ್ಚರಿ. `ಒಂದೆರಡು ದಿನ ಅಪ್ಪನ ಜೊತೆಗಿದ್ದು ಹೋಗೋಣವೇ…?’ ಎಂಬ ಶಶಿಯ ಮಾತಿಗೆ ಸೋಫಿಯಾ, `ಓಕೆ’ ಎಂದಾಗ ಬಸವಣ್ಣೆಪ್ಪನ ಹೃದಯ ತುಂಬಿಬAದಿತು. ಅಷ್ಟರಲ್ಲಿ ಶಶಿಯ ಚೆಡ್ಡಿ ದೋಸ್ತಗಳು ವಕ್ರಿಸಿಕೊಂಡರು. `ನಿಮ್ಮ ಮಾತುಕತೆಗಳೆಲ್ಲವೂ ಇಲ್ಲೇ ಸಾಗಲಿ. ಊಟ, ವಸತಿ ನಮ್ಮ ಮನೆಯಲ್ಲಿ ಇರಲಿ’ ಎಂದು ದುಂಬಾಲು ಬಿದ್ದಾಗ ಅತಿಥಿಗಳು ಇಲ್ಲವೆನ್ನಲು ಸಾಧ್ಯವಾಗಲಿಲ್ಲ. ಅನುಕೂಲಸ್ಥ ರಾಜೂನ ಮನೆಯಲ್ಲಿ ಊಟ, ವಸತಿಯ ವ್ಯವಸ್ಥೆಯಾಯಿತು. ಶಶಿ, ಸೋಫಿಯಾ ಜನರ ಮನಸ್ಸುಗಳನ್ನು ಗೆದ್ದು ಹೊರಟಾಗ ಎಲ್ಲರ ಕಣ್ಣುಗಳು ತೇವಗೊಂಡವು.

 

 

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
ಮ.ಮೋ.ರಾವ್ ರಾಯಚೂರು
18 August 2023 16:47

ಕಥೆ ಅವಿನಾಭಾವ ತುಂಬ ಮನ ಮುಟ್ಟುತ್ತದೆ. ಕೊನೆಯಮಾತು ಹೇಳಿದ ಬಸವಣ್ಣೆಪ್ಪನಿಗೆ ಸೊಸೆ ಜೀವನದ ಭರವಸೆ ನೀಡಿದ್ದು ಶ್ಲ್ಯಾಘನೀಯ. ತಂದೆ ಮಗನ ಸೊಸೆಯ ಸಮಾಗಮ ಸಾಹುಕಾರ ಸಿದ್ದಪ್ಪನ ಸಾಮಾಧಾನ, ಮಿತ್ರರ ಮಿಲನ ಹೇಗೆ ಎಲ್ಲವೂ ಮೇಳೈಸಿ ಕಥೆಗೆ ಮೆರಗು ನೀಡಿವೆ. ಕಥೆ ಓದುತ್ತಾ ಓದುತ್ತಾ ಮನಸ್ದು ದ್ರವೀಣಗೊಳ್ಳುತ್ತದೆ. ಶ್ರೀ. ಶಂಕರ್ ಜಿಕೆ ಅವರ ಪ್ರತಿಕ್ರಿಯೆ ಓದಿದಮೇಲೆ ಪರಿಪೂರ್ಣವಾಯಿತೆನಿಸುತ್ತದೆ. ಅಭಿನಂದನೆಗಳು.

ಶಂಕರ್ ಜಿಕೆ
26 July 2023 13:06

ಪರಿಪಕ್ವವಾದ ಸಾಹಿತ್ಯದ ವಾಸವ ನೈಜ ಬರಹದಲ್ಲಿ ಹಿಂದಿನ ವಿಷಯ ವಸ್ತುವನ್ನು ವಾಸ್ತವದಲ್ಲಿ ತೌಲನಿಕ ಬರಹದ ಮೂಲಕ ಇಂದಿನ ಯುವಜನತೆಗೆ ಸಾಹಿತ್ಯದ ಮೂಲಕ ಎಚ್ಚರಿಸುವಂತಹ ಬಹುದೊಡ್ಡ ಜವಾಬ್ದಾರಿಯನ್ನ ಶ್ರೀ ಶೇಖರ ಗೌಡ ಸರನಾಡಗೌಡ ಹಿರಿಯ ಲೇಖಕ, ಕವಿಗಳು, ಆಂಗ್ಲ ಮತ್ತು ಕನ್ನಡ ಸಾಹಿತ್ಯದ ಮೇಲೆ ಅದ್ಭುತ ಹಿಡಿತವನ್ನು ಇಟ್ಟುಕೊಂಡು ಇಂದು ನಾನು ಓದಿದ “”ಅವಿನಾಭಾವ” ಕಥೆ ತುಂಬಾ ಅದ್ಭುತವಾಗಿ
ವಾಸ್ತವ ಬದುಕಿನ ಆಧುನಿಕ ಪ್ರತಿಭಾವಂತ ಉದ್ಯೋಗ ಹರಿಸಿ ವಿದೇಶಕ್ಕೆ ಹೋದ ಪ್ರತಿಭೆಗಳ ಮನಸ್ಸಿನ ಗೊಂದಲ, ತುಡಿತವನ್ನು , ಸಹಾಯಕತೆಯನ್ನು ಮನಕುಲುಕುವಂತೆ ಬರೆದಿದ್ದಾರೆ, ಅಷ್ಟೇ ಅಲ್ಲದೆ ನಮ್ಮ ಭಾರತದ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸ್ಥಿತಿಗತಿಗಳ ವಾಸ್ತವ ನೈಜ ಚಿತ್ರಣವನ್ನು ಓದುಗಸ ಹೃದಯವನ್ನು ಮನಮುಟ್ಟುವಂತೆ ಕಥೆ ಮನೋಜ್ಞವಾಗಿ ಮೂಡಿಬಂದಿದೆ. ಈ ಕಥೆಯಲ್ಲಿ ಸೋಫಿಯಾ ಓದುಗನಿಗೆ ಗೊತ್ತಿಲ್ಲದಂತೆ ಎಲ್ಲರ ಮನವನ್ನು ಆವರಿಸಿಕೊಂಡು ಬಿಡುತ್ತಾಳೆ. ವೈಯಕ್ತಿಕ ನನಗಂತೂ ತುಂಬಾ ಇಷ್ಟ ಆಯ್ತು.

0
    0
    Your Cart
    Your cart is emptyReturn to Shop