ಡಾ. ಸದಾಶಿವ ದೊಡಮನಿ ಅವರು ಬರೆದ ಕವಿತೆ ‘ಅಪ್ಪ’

ಅಪ್ಪನ ಕೈಯ ಮ್ಯಾಲೆ
ಎಷ್ಟೊಂದು ಬಾವಿ-ಕೆರೆ, ಒಡ್ಡು-ಬಾಂದಾರ್-
ಗಳು ತಲೆ ಎತ್ತಿದವು!

ಅಪ್ಪ ತೋಡಿದ ಬಾವಿ-ಕೆರೆ ಎಂದೂ ಬತ್ತಲಿಲ್ಲ
ಹಾಕಿದ ಒಡ್ಡು-ಬಾಂದಾರ ಎಂದೂ ಒಡೆಯಲಿಲ್ಲ
ಇಡೀ ಊರಿಗೇ ಊರೇ
ಅಪ್ಪ ತೋಡಿದ ಬಾವಿ-ಕೆರೆ ನೀರು ಕುಡಿಯುತ್ತಾರೆ
ಅಪ್ಪ ಮಾತ್ರ ಬಾವಿ-ಕೆರೆ ಮುಟ್ಟಂಗಿಲ್ಲ,
ಮುಟ್ಟಿ ನೀರು ಕುಡಿಯಾಂಗಿಲ್ಲ

ಅಪ್ಪ ಬಿತ್ತಿದ ಬೀಜ ಎಂದೂ ಹುಸಿ ಹೋಗಲಿಲ್ಲ
ಒಂದು ಎರಡಾಗಿ, ಎರಡು ಮೂರು, ನಾಲ್ಕಾಗಿ
ನೆಲ ತುಂಬ ಹಸಿರು ಮೂಡಿ ದವಸ,
ಧಾನ್ಯ ಹುಲುಸಾಗಿ ಬೆಳೆದರೂ
ಅಪ್ಪನಿಗೆ ಕಡಗಣದ ಮಣ್ಕಾಳೆ ಕೊಡುಗೆ

ಅಪ್ಪ ಕಟ್ಟಿದ ಮನೆ-ಮಹಲು, ಗುಡಿ-ಗುಂಡಾರ
ಅಪ್ಪನ ಬೆವರ ಹನಿಯ ಫಲ
ಒಂದೂ ಕಲ್ಲು, ಹಿಡಿ ಮಣ್ಣು ಉದಿರಿಲ್ಲ
ಇಂದಿಗೂ ಗಟ್ಟಿಮುಟ್ಟಾಗಿ ನಿಂತಿವೆ
ಉಳ್ಳವರಿಗೆ ನೆಲೆಯಾಗಿವೆ
ಅಪ್ಪನ ಶ್ರಮಕ್ಕೆ ಭಾಷ್ಯ ಬರೆಯುತ್ತಿವೆ
ಅಪ್ಪ ಮಾತ್ರ ಇಂದಿಗೂ
ಅದೇ ಮುರುಕು ಗುಡಿಸಲಲ್ಲಿ
ಸೂರ್ಯ, ಚಂದ್ರರ ಜೊತೆಯಲ್ಲಿ
ದವಂತಿ ಕಥೆ ಹೇಳುತ್ತಲೇ ಇದ್ದಾನೆ
ತೊಡೆಯ ಮೇಲಿನ ಮೊಮ್ಮಗಳು ಹುಂಗುತ್ತಲೇ ಇದ್ದಾಳೆ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
0
Your Cart
Your cart is emptyReturn to Shop