ಸುಗುಣ ಬಡಹುಡುಗಿ ಹೈಸ್ಕೂಲ್ ಅಲ್ಲಿ ಓದುತ್ತಿದ್ದಳು, ತುಂಬಾ ಬುದ್ದಿವಂತೆ ಅಲ್ಲದಿದ್ದರೂ ದಡ್ಡಿಯಂತೂ ಆಗಿರಲಿಲ್ಲ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳುತ್ತಿದ್ದಳು,ಅವಳ ತಂದೆತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು, ಸುಗುಣ ಮೈನೆರೆದು ಒಂದು ವರ್ಷ ಕಳೆದಿತ್ತು. ಅವಳ ತಂದೆತಾಯಿಗೆ ಆಗಲೇ ಮದುವೆ ಯೋಚನೆ ಶುರುವಾಗಿತ್ತು.
ಸುಗುಣ ಹದಿಹರೆಯದ ವಯಸ್ಸಿನಲ್ಲಿ ಇರುವ ಹುಡುಗಿ, ಮದುವೆ ಎನ್ನುವುದರ ಕಲ್ಪನೆ ಇಲ್ಲದೆ ಆಟ ಆಡುತ್ತಾ ಶಾಲೆಗೆ ಹೋಗುತ್ತ ಇದ್ದಳು,ಅವಳ ಮದುವೆಯ ವಿಷಯ ಭಯದ ಜೊತೆ ಖುಷಿಯನ್ನು ತಂದಿತ್ತು, ಮದುವೆ ಎಂದರೆ ಏನು ಅನ್ನುವುದನ್ನೇ ಅರಿಯದೇ ಮದುವೆಗೆ ಸಿದ್ಧವಾಗಿದ್ದಳು ಅದು ಅವಳಿಗೆ ಅನಿವಾರ್ಯ ಸಹ ಆಗಿತ್ತು ಏಕೆಂದರೆ ಅವಳ ಒಪ್ಪಿಗೆ ಇದ್ದರೂ ಇಲ್ಲದಿದ್ದರೂ ಮದುವೆ ಆಗುವುದು ನಿಶ್ಚಿತ ಎಂದು ಅವಳಿಗೆ ತಿಳಿದಿತ್ತು.ಹತ್ತನೇ ತರಗತಿಯ ಪರೀಕ್ಷೆಗೆ ತಯಾರಾಗುತ್ತಿದ್ದ ಹುಡುಗಿಗೆ ಅವಳಿಗಿಂತ 10 ವರ್ಷ ದೊಡ್ಡವನಾದ ಪಕ್ಕದ ಹಳ್ಳಿಯ ಹುಡುಗ ಸುನೀಲ್ ನೊಂದಿಗೆ ಮದುವೆ ಮಾಡಿ ಮುಗಿಸಿದರು ಸುಗುಣಳ ತಂದೆ ತಾಯಿ.
ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿ ನಡೆಯುತಿತ್ತು, ಗಂಡ ತಂದುಕೊಡುವ ಪಾನಿಪುರಿ,ಗೋಬಿ ಇವುಗಳನ್ನು ನೋಡಿ ಬಹಳವೇ ಖುಷಿ ಪಡುತ್ತಿದ್ದಳು ಸುಗುಣ. ಮುತ್ತಿನ ಮಳೆಗೆರೆವ ಗಂಡನೆಂದರೆ ಪ್ರಾಣ ಅವಳಿಗೆ ಆದರೆ ಅವಳ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಮದುವೆ ಆದ ಮೂರು ತಿಂಗಳಿಗೆ ಗರ್ಭಿಣಿ ಆಗಿದ್ದಳು ಅವಳು,ಇನ್ನು ಚಿಕ್ಕವಯಸ್ಸು ಆದ್ದರಿಂದ ಈಗಲೇ ಗರ್ಭಿಣಿ ಆಗುವುದು ಒಳ್ಳೆಯದಲ್ಲ ಎಂದರು ಸುನೀಲ್ ಕೇಳದೆ ಮಗುವನ್ನು ತೆಗೆಸಲು ಒಪ್ಪಲಿಲ್ಲ, ಚಿಕ್ಕಹುಡುಗಿ ಆಗಿದ್ದರಿಂದ ಕೆಲವೊಂದು ಸೂಕ್ಷ್ಮಗಳು ತಿಳಿಯದೇ ಎರಡೇ ತಿಂಗಳಲ್ಲಿ ಗರ್ಭಪಾತವಾಗಿತ್ತು ಸುಗುಣಾಳಿಗೆ.
ಸುಗುಣಗೆ ಗರ್ಭಪಾತವಾದ ನಂತರ ಸುನಿಲ್ ಕುಡಿಯಲು ಶುರು ಮಾಡಿದ್ದ ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ ಇದು ಸುಗುಣಾಳಿಗೆ ತಲೆನೋವು ತಂದಿತ್ತು, ಇದೆಲ್ಲ ನಡೆಯುತ್ತಿರುವಾಗಲೇ ಮತ್ತೊಮ್ಮೆ ಸುಗುಣಾಗೆ ಗರ್ಭಪಾತವಾಗಿತ್ತು ಮತ್ತೊಂದು ಗರ್ಭಪಾತವಾದ ಮೇಲಂತೂ ಸುನೀಲ್ ರಾಕ್ಷಸನಾಗಿದ್ದ ಕುಡಿದು ಮನೆಗೆ ಬಂದು ಅವಳಿಗೆ ಹೊಡೆಯಲು ಶುರು ಮಾಡಿದ್ದ.ತಂದೆ ತಾಯಿಯ ಬೆಂಬಲ ಸಹ ಇಲ್ಲದೇ ಅನಾಥಳಾಗಿ ಹೇಗೋ ಗಂಡನೇ ಎಲ್ಲಾ ಅಂದುಕೊಂಡು ಜೀವನ ಸಾಗಿಸುತ್ತಿದ್ದಳು, ಆದರೆ ಕುಡಿತ ಮತ್ತು ಹೆಣ್ಣಿನ ಚಟಕ್ಕೆ ಬಿದ್ದ ಸುನೀಲ್ ಹಾಸಿಗೆ ಹಿಡಿದ ಅವನ ಚಿಕಿತ್ಸೆಗೆ ಇದ್ದ ಒಂದು ಮನೆಯನ್ನು ಮಾರಿದಳು ಆದರೆ ಗಂಡನನ್ನು ಉಳಿಸಿಕೊಳ್ಳುವಲ್ಲಿ ಸೋತಳು,ಗಂಡನನ್ನು ಕಳೆದುಕೊಂಡ ಮೇಲೆ ಜೀವನವೇ ಬೇಡವಾಗಿತ್ತು ಆದರೆ ಸಾಯುವ ಧೈರ್ಯ ಸಹ ಇರಲಿಲ್ಲ ಅವಳಲ್ಲಿ, ಹದಿನೆಂಟು ವರ್ಷಕ್ಕೆ ಮಗುವನ್ನು ಕಳೆದುಕೊಂಡು ಗಂಡನನ್ನು ಕಳೆದುಕೊಂಡು ವಿಧವೆಯಾಗಿ ನಿಂತಿದ್ದಳು.ಹೇಗೋ ಅವರಿವರ ಕಾಲು ಹಿಡಿದು ಒಂದು ಕೆಲಸ ಗಿಟ್ಟಿಸಿಕೊಂಡು ಜೀವನ ಸಾಗಿಸುತ್ತಿದ್ದಳು.
ಸಾಧಾರಣವಾಗಿ ಸಾಗುತ್ತಿದ್ದ ಸುಗುಣಳ ಜೀವನಕ್ಕೆ ಮತ್ತೊಂದು ಅಲೆ ಅಪ್ಪಳಿಸುವುದರಲ್ಲಿತ್ತು, ಅವಳು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಸುಧೀರ್, ಅವಳ ಒಂಟಿತನ ಅವರಿಬ್ಬರೂ ಬೇಗ ಹತ್ತಿರವಾಗುವಂತೆ ಮಾಡಿತ್ತು,ಕೆಲವೇ ದಿನಗಳಲ್ಲಿ ಇಬ್ಬರೂ ಒಳ್ಳೆಯ ಸ್ನೇಹಿತರಾದರು, ಸ್ನೇಹ ಪ್ರೀತಿಯಾಯಿತು, ಹಿಂದು ಮುಂದು ಯೋಚಿಸದೆ ಕಣ್ಣುಮುಚ್ಚಿ ಅವನನ್ನು ನಂಬಿದಳು ಸುಗುಣ.
ಇಬ್ಬರು ಪ್ರೀತಿಯ ಅಲೆಯಲ್ಲಿ ತೇಲುತ್ತಿರುವಾಗಲೇ, ಸುಗುಣ ಗರ್ಭಿಣಿ ಆಗಿದ್ದಳು ಈ ಮಗುವನ್ನಾದರು ಉಳಿಸಿಕೊಳ್ಳಲೇಬೇಕು ಎಂದು ಸುಗುಣ ಹಠ ಹಿಡಿದು ಸುಧೀರನಿಗೆ ಮದುವೆಯಾಗುವಂತೆ ಒತ್ತಾಯಿಸಿದಳು, ಸುಧೀರ್ ಈ ಊರಿನಲ್ಲಿ ಇದ್ದರೆ ನಾವು ಖುಷಿ ಆಗಿ ಇರೋಕೆ ಆಗಲ್ಲ ಜನದ ಬಾಯಿಗೆ ಬೀಳ್ತೀವಿ ಬೇರೆ ಊರಿಗೆ ಹೋಗಿ ಮದುವೆ ಆಗೋಣ ಎಂದು ಅವಳನ್ನು ಪುಸಲಾಯಿಸಿ ಮುಂಬೈಗೆ ಕರೆದೊಯ್ದ, ಅಲ್ಲಿ ಹೋಟೆಲ್ ರೂಮ್ ಒಂದರಲ್ಲಿ ಉಳಿದುಕೊಂಡು ನಾನು ಕೆಲಸ ಹುಡುಕಿಕೊಂಡು ಬರ್ತೀನಿ ನೀನು ಮಲಗಿರು ಎಂದು ಸುಗುಣಾಳಿಗೆ ಜ್ಯುಸ್ ಕೊಟ್ಟು ಹೊರನಡೆದ,ಆ ಜ್ಯುಸ್ ಅಲ್ಲಿದ್ದ ಮಾತ್ರೆಯ ಪ್ರಭಾವದಿಂದ ಸುಗುಣಾಳಿಗೆ ಮತ್ತೊಮ್ಮೆ ಗರ್ಭಪಾತವಾಯಿತು.
ರೂಮಿಗೆ ಬಂದ ಸುಧೀರನಿಗೆ ವಿಷಯ ತಿಳಿದು ಖುಷಿ ಆಯಿತು,ಆದರೆ ಅದು ನಾನು ಕೊಟ್ಟ ಮಾತ್ರೆ ಇಂದ ಆಗಿದೆ ಎನ್ನುವುದು ಸುಗುಣಾಳಿಗೆ ಗೊತ್ತಾಗಿಲ್ಲ ಎನ್ನುವ ನೆಮ್ಮದಿ ಸಹ ಇತ್ತು, ಸುಗುಣಾಳಿಗೆ ಒಂದೆರೆಡು ದಿನ ಇಲ್ಲೇ ರೆಸ್ಟ್ ಮಾಡು ನಿನಗೂ ಒಂದು ಮನೆಯಲ್ಲಿ ಕೆಲಸ ಹುಡುಕಿದಿನಿ ನೀನು ಕೆಲಸಕ್ಕೆ ಹೋಗುವಂತೆ ಆಗ ಇಬ್ಬರೂ ನೆಮ್ಮದಿಯಿಂದ ಇರಬಹುದು ಆಮೇಲೆ ಇಬ್ಬರು ಮದುವೆ ಆಗೋಣ ಎಂದು ಪುಸಲಾಯಿಸಿ ಒಪ್ಪಿಸಿದ, ಕಣ್ಣುಮುಚ್ಚಿ ಅವನನ್ನು ನಂಬಿದ್ದ ಸುಗುಣ ಪ್ರತಿರೋಧ ತೋರಿಸದೆ ಒಪ್ಪಿದಳು.
ಮೂರು ದಿನ ಕಳೆಯುತ್ತಿದ್ದಂತೆ ಒಂದು ದೊಡ್ಡ ಬಂಗಲೆಗೆ ಸುಗುಣಳನ್ನು ಕರೆತಂದು ಇಲ್ಲೇ ನಿನ್ನ ಕೆಲಸ ಇರೋದು ಇಲ್ಲಿ ಕೆಲಸ ಮಾಡಿಕೊಂಡು ಇರು ಸಂಜೆ ಬಂದು ಕರೆದುಕೊಂಡು ಹೋಗ್ತೀನಿ ಎಂದು ಹೇಳಿ ಮನೆಯ ಮಾಲೀಕರಿಗೆ ಅವಳನ್ನು ಪರಿಚಯಿಸಿ ಅಲ್ಲಿಂದ ಹೊರಟ,ಸಂಜೆ ಕೆಲಸ ಮುಗಿಸಿ ಸುಗುಣ ಸುಧೀರ್ ನ ದಾರಿ ಕಾಯತೊಡಗಿದಳು ಸುಮಾರು ಹತ್ತು ಗಂಟೆಯಾದರೂ ಅವನ ಸುಳಿವೇ ಇರಲಿಲ್ಲ ಅಷ್ಟರಲ್ಲಿ ಆ ಮನೆಯ ವಾತಾವರಣ ಸಹ ಬದಲಾಗುತ್ತಾ ಬಂದಿತ್ತು ಆ ಬದಲಾವಣೆ ಅವಳಿಗೆ ಭಯ ಹುಟ್ಟಿಸಿ ಹೋಟೆಲಿಗೆ ಹೋಗುವುದಕ್ಕೆ ಓನರ್ ನ ಸಹಾಯ ಕೇಳಲು ಬಂದಳು ಆಗಲೇ ಅವಳಿಗೆ ಅರಿವಾಗಿದ್ದು ನಾನು ವೇಶ್ಯಾವಾಟಿಕೆ ಜಾಲಕ್ಕೆ ಸಿಕ್ಕಿಬಿದ್ದಿದ್ದೇನೆ ಎಂದು ಅವಳು ಎಷ್ಟು ಪ್ರಯತ್ನಪಟ್ಟರು ಅಲ್ಲಿಂದ ತಪ್ಪಿಸಿಕೊಳ್ಳಲು ಆಗಲೇ ಇಲ್ಲ ಅದೇ ವೃತ್ತಿ ಅವಳು ಮಾಡಲೇಬೇಕಾಯಿತು ಈಗಲೂ ಮಾಡುತ್ತಿದ್ದಾಳೆ ಆದರೆ ಅವಳದೇ ಆದ ಹೊಸ ಮನೆಯಲ್ಲಿ ಇದೇ ವೃತ್ತಿಯಲ್ಲಿ ಬೆಳೆದು ಹೆಸರು ಹಣ ಎಲ್ಲವನ್ನು ಸಂಪಾದಿಸಿದ್ದಾಳೆ ಆದರೂ ಅವಳಿಗೆ ನೆಮ್ಮದಿಯಿಲ್ಲ.
ಕತೆಯನ್ನು ಹೇಳಿ ಮುಗಿಸಿದಳು ಸುಗುಣ. ಒಂದು ನಿಟ್ಟುಸಿರು ಬಿಟ್ಟು ನನ್ನ ತಂದೆ ತಾಯಿ ಯೋಚನೆ ಮಾಡದೆ ಮಾಡಿದ ಬಾಲ್ಯವಿವಾಹ ನಾನು ಈ ವೃತ್ತಿಯಲ್ಲಿ ಬೀಳುವಂತೆ ಮಾಡಿತು, ತಪ್ಪು ನನ್ನದು ಇದೆ ಆದರೆ ಆ ವಯಸ್ಸಿಗೆ ಗಂಡಸಿನ ಆಸರೆ ಬೇಕೇ ಬೇಕು ಅದಕ್ಕೆ ಸುಧೀರ್ ಸ್ನೇಹ ಮಾಡಿದೆ ನಾನು ಓದಿ ಒಳ್ಳೆ ಹುದ್ದೆಯಲ್ಲಿ ಇದ್ದಿದ್ದರೆ ಹೀಗೆಲ್ಲ ಆಗುತ್ತಿರಲ್ಲಿ ಆದರೆ ಅದು ಆಗಲಿಲ್ಲ ಈಗ ನೀವು ಯೋಚನೆ ಮಾಡಿ ನಿಮ್ಮ ಮಗಳನ್ನು ಓದೋಕೆ ಕಳುಹಿಸುತ್ತೀರಾ ಅಥವಾ ಮದುವೆ ಮನೆಗಾ?ನಿರ್ಧಾರ ನಿಮ್ಮದು ಅವಳನ್ನು ಓದೋಕೆ ಕಳುಹಿಸುತ್ತೀರಾ ಅಂದಾದರೆ ಅವಳ ಖರ್ಚು ವೆಚ್ಚ ಎಲ್ಲ ನನ್ನದೇ ಎಂದು ಹೇಳಿ ಎದ್ದು ನಿಂತಳು. ಕ್ಷಮಿಸಿ ನಾವು ಅವಳಿಗೆ ಬಾಲ್ಯವಿವಾಹ ಮಾಡಲ್ಲ ನಾವೇ ಓದೋಕೆ ಕಳಿಸ್ತೀವಿ ಧನ್ಯವಾದಗಳು ನಿಮಗೆ ಎಂದು ಕೈ ಮುಗಿದರು ತಾರಳ ತಂದೆ ತಾಯಿ, ತಾರಾ ಸುಗುಣಳನ್ನು ತಬ್ಬಿ ಥ್ಯಾಂಕ್ಸ್ ಅಕ್ಕ ನೀವಿಲ್ಲ ಅಂದಿದ್ರೆ ನನ್ನ ಜೀವನ ನರಕವಾಗಿಬಿಡುತಿತ್ತು ಎಂದಳು ಅವಳಿಗೆ ಆಶೀರ್ವಾದ ಮಾಡಿ ಸಂತೋಷದಿಂದ ಹೊರಬಂದಳು ಸುಗುಣ. ಇದು ಅವಳು ನಿಲ್ಲಿಸಿದ 50ನೇ ಬಾಲ್ಯವಿವಾಹವಾಗಿತ್ತು.