ಸುಮಾವೀಣಾ ಅವರು ಬರೆದ ಪ್ರಬಂಧ ‘ಶೀತದ ಸಮರ ಸಿಂಬಳನಾದ’

ಶೀತಲ ಸಮರ ಪದ ಎಲ್ಲರಿಗೂ ಪರಿಚಿತವೆ ಹಾಗಂತ ಇದು ಇತಿಹಾಸದ ಶೀತಲ ಸಮರವಲ್ಲ ಅದೇ….. ಮಳೆಗಾಲದಲ್ಲಿ ಹವಾಮಾನ ವೈಪರೀತ್ಯವಾದಾಗ ನಾವು ಕಷಾಯ, ಸ್ಟೀಮ್,ಔಷಧಿ ತೆಗೆದುಕೊಂಡು ಮಾಡುವ ಹೋರಾಟ ಅದು ಹೋಗುವವರೆಗು ಕಾರಣ ಗೊತ್ತಿದ್ದೂ ಗೊತ್ತಿಲ್ಲದೆ ಹೋರಾಟ ಮಾಡಬೇಕಾಗುತ್ತದೆ. ಕೋಲ್ಡ್ ವಾರ್ ಮಾಡುತ್ತಿರುವ ಬಗ್ಗೆ ಪಕ್ಕದವರಿಗೆ ಗೊತ್ತಾಗುವುದಾದರೂ ಈ ನಾದ ಅದೇ ಸಿಂಬಳನಾದದ ಮೂಲಕವೇ ಅಲ್ವೆ!

ಮಳೆ ಬಿಟ್ಟೂ ಬಿಡದೆ ಬಂದು ಶೀತವಾದರೆ ಆಯಿತು ಒಂದೊಂದು ರೀತಿಯ ಸಿಂಬಳನಾದದ ಕರ್ಕಶತೆ ಮತ್ತೆ ಮತ್ತೆ ಕೇಳಿಬರುತ್ತಿರುತ್ತದೆ. ಈ ಸಿಂಬಳನಾದ ಎಂಥವರ ಮೈಯನ್ನೂ ಒಮ್ಮೆ ಕುಲುಕಿಸದೆ ಇರಲಾರದು . ಔಷಧಿ ತೆಗೆದುಕೊಂಡರೂ ವಾರ ಇಲ್ಲದಿದ್ದರೂ ಒಂದು ವಾರ ಇರುತ್ತದೆ. ‘ಗೊಣ್ಣೆ ಸುರಕ’ , ‘ಇಲ್ಲವೆ ಗೊಣ್ಣೆ ಸುರು’ಕಿ ಎನ್ನುವ ಅಡ್ಡ ಹೆಸರು ಬಹುಬೇಗ ಬಂದುಬಿಡುತ್ತದೆ.

ಮೂಗು ಇರೋವರಗೂ ನೆಗಡಿ ತಲೆ ಇರೋವರೆಗೂ ತಲೆ ನೋವು ಅನ್ನುವ ಹಾಗೆ ಸೊರ ಸೊರ ಬುಸು ಬುಸು ಎನ್ನುವ ಸಿಂಬಳನಾದ ಕೇಳಲಾಗದು . ಅಯ್ಯೋ ಏನಾದರೂ ಸಹಿಸಬಹುದು ಈ ಶೀತ ಯಾವಾಗ ಕಡಿಮೆಯಾಗುತ್ತೆ ಅನ್ನುವ ಚಿಂತೆ. ಈ ಶೀತಕ್ಕೆ ನೂರ ಹನ್ನೆರಡು ಕಾರಣಗಳು. ಈ ಶೀತ ಏನಕ್ಕೆ ಆಗುತ್ತದೆ ಅಲರ್ಜಿಗೊ, ನೀರಿನ ವ್ಯತ್ಯಾಸಕ್ಕೋ, ಮಳೆಯಲ್ಲಿ ಚಂಡಿ ಆಗೋದಕ್ಕೋ ಅನ್ನುತ್ತಲೇ ಇರಬೇಕಾಗುತ್ತದೆ. ಈ ಶೀತ ಬಂದರೆ ಸೀತಮ್ಮ ಮಾಯಮ್ಮ…. ಅನ್ನುವ ಕೀರ್ತನೆ ನೆನಪಾಗಿ\ ಶೀತಮ್ಮ ಮಾಯಮ್ಮ ಯಾವಾಗ ಮಾಯ ಆಗುತ್ತೆ ಶೀತ ? ಅನ್ನುವ ಪ್ರಶ್ನೆಯೇ ಮತ್ತೆ ಮತ್ತೆ ಬಂದು ಉತ್ತರವಿಲ್ಲದೆ ಹಿಂತಿರುಗುತ್ತದೆ..

ಶೀತ ಏನಕ್ಕೆ ಆಗುತ್ತದೆ ಅನ್ನುವ ಕುರಿತು ಸಂಶೋಧನೆ ಮಾಡುವ ಸಂಸ್ಥೆಯೊಂದು ಕಾರಣ ಹುಡುಕಲಾರದೆ ಸಂಶೋಧನೆಗೆ ಇತಿಶ್ರೀ ಹಾಡಿದೆ. ಈ ಶೀತ ಬಂದರೆ ಆ ತಲೆ ಭಾರಕ್ಕೆ ಓದಬೇಕೋ ಓಡಬೇಕೋ ತಿಳಿಯಲ್ಲ . ಮಕ್ಕಳು ಅತೀ ಶೀತ ಆದಾಗ ಬೇಕಂತಲೆ ಹತ್ತಿರ ಬಂದು ಕುಳಿತು ಸಿಂಬಳ ನಾದ ಮಾಡಿದರೆ ಏನಾಗಬಹುದು?. ಆ ರಿದಮಿಕ್ ಆಗಿ ಉಸಿರಾಡುವ ಪರಿಯನ್ನು ಕೇಳುವುದು ಸಾಧ್ಯವೇ? ಸಾಧ್ಯವಿಲ್ಲ ! ಹಾಗಂತ ಗದರಿಸುವುದೂ ಅಲ್ಲ ಸಂಯಮದಿಂದ ರೋಗ ಹರಡುವ ಕುರಿತು ತಿಳಿವಳಿಕೆ ನೀಡಬೇಕಾಗುತ್ತದೆ.

ವಿದ್ಯುಚ್ಛೋರನೆಂಬ ರಿಸಿಯ ಕತೆಯಲ್ಲಿ ಸಿಂಬಳ ಸುರಿಸುವ ಭಿಕ್ಷುಕ ವೇಷಧಾರಿ ರಾಜನ ಸನ್ನಿವೇಶ ಬರುತ್ತದೆ. ಬೆಳಗ್ಗೆಯೆಲ್ಲ ತೊನ್ನು ರೋಗಿಯಾಗಿ, ಹೆಳವನಾಗಿ, ತಿನೆಪೇಸಿದನಾಗಿ ( ಸಿಂಬಳ ಸುರಿಸುವವನಾಗಿ) ಕಂಡು ಬರುವ ವಿದ್ಯುಚ್ಚೋರ ರಾತ್ರಿಯಲ್ಲಿ ಪರಿಮಳ ಭರಿತ ತಾಂಬೂಲ ಮೆಲ್ಲುತ್ತಿದ್ದ ಹಾಗೆ ಕಳ್ಳತನ ಮಾಡುತ್ತಿದ್ದ . ಇಲ್ಲಿ ಸಿಂಬಳ ರೋಗಿಷ್ಟತೆಯನ್ನು ಸೂಚಿಸಿದರೆ ಪರಿಮಳ ಭರಿತ ತಾಂಬೂಲ ಜೀವನ ರಸಿಕತೆಯನ್ನು ಸಂಕೇತಿಸುತ್ತದೆ.

ಹೂಂಕರಿಸಿ ಸಿಂಬಳವನ್ನೊಮ್ಮೆ ತೆಗೆದು ಒಮ್ಮೆ ಎಸೆದರೆ ಯಾವ ಮೌಖಿಕ ಆದೇಶವಿಲ್ಲದೆ ಎದುರಿದ್ದವರು ದೂರ ಸರಿದಂತೆ. “ಸೂಜಿಯಲ್ಲಿ ಹೊಲಿಯುವವರ ಬಲ ಇರಬಾರದು ಸಿಂಬಳ ತೆಗೆಯುವ ಎಡ ಇರಬಾರದು ಅನ್ನೋ ಮಾತೆ ಇದೆಯಲ್ಲ.ಇಷ್ಟವಿಲ್ಲದವರನ್ನು ದೂರ ಸರಿಸಲು ಇದೂ ಒಂದು ಟ್ರಿಕ್ ಎನ್ನಬಹುದೇ? ಇದ್ದರೂ ಇರಬಹುದು!”. ಒಬ್ಬೊಬ್ಬರು ಒಂದೋದು ರೀತಿ ಸಿಂಬಳ ತೆಗೆಯುವರು ಸಿಂಬಳ ಬಂದರೆ ಹ್ಯಾಂಕಿಯಲ್ಲಿ ತೆಗೆದು ಹಾಗೆ ಇಡುವುದು ಬೇರೆ. ದಾರಿಯಲ್ಲಿ ಹೋಗುವಾಗ ಅಲ್ಲಲ್ಲಿ ತೆಗೆದು ಒಗೆಯುವುದು ಬೇರೆ.

ಇದೂ ಕೂಡ ಪರಪೀಡನೆಯೇ ಅಲ್ವೆ! ಸಿಂಬಳ,ಸೀನು,ಕೆಮ್ಮು ಇವೆಲ್ಲಾ ಮನುಷ್ಯನ ದೈಹಿಕ ಕಷ್ಮಲಗಳನ್ನು ಸಹಜವಾಗಿ ಹೊರ ಹಾಕುವವು ಇದರಲ್ಲಿ ಅಂಜಿಕೆ, ಅಳುಕು ಬೇಡ ಆದರೆ ಅದನ್ನು ನಿಭಾಯಿಸಬೇಕು! ಇಂಥ ತುರ್ತುಗಳನ್ನು ನಿಭಾಯಿಸುವುದೂ ಒಂದು ಸಂಸ್ಕಾರವೆ… ನಮಗೇನಾಗಬೇಕು ಎಂದು ಅಲ್ಲಲ್ಲಿ ಒಗೆದು ಹೋಗುವ ಹುಂಬತನವಿರಬಾರದು . ಸಾರ್ವಜನಿಕ ಸ್ಥಳಶುದ್ಧಿಯಾಗಿರಿಸಿಕೊಳ್ಳಬೇಕು ಅನ್ನುವ ಎಚ್ಚರ ಎಲ್ಲರಲ್ಲಿಯೂ ಇರಬೇಕು.

ಶೀತದ ಪ್ರಾರಂಭಕ್ಕೆ ಈ ಸಿಂಬಳನಾದ ಸಿಂಬಳದಂತೆ ತೆಳುವಾಗಿಯೇ ಇರುತ್ತದೆ ಶೀತ ಬಲಿತು ವಾಸಿಯಾಗುವ ಹೊತ್ತಿಗೆ ಇದರ ನಾದ ಜೋರೇ ಜೋರೇ ಕೆಲವರು ಮೂಗನ್ನು ಮೇಲಕ್ಕೆ ಎಳೆದುಕೊಂಡರೆ ಇನ್ನು ಕೆಲವರು ಮೂಗನ್ನು ಆಚೆ ಈಚೆ ತಿರುಗಿಸಿ ತೆಗೆಯುವರು.

ಸಾಂಕ್ರಾಮಿಕ ರೋಗಕ್ಕೆ ಸಿಂಬಳವೂ ಒಂದು ಮಾರ್ಗಿ. ಕೊರೊನಾ ಕಾಲ ಘಟ್ಟದಲ್ಲಿ ಈ ಮಾತನ್ನು ಕೇಳಿದ್ದೇವೆ. ಕಫದಲ್ಲಿ ವೈರಾಣು ಶೇಖರಣೆ ಆಗಿರುತ್ತದೆ ಅಲ್ಲಿ ಜೀವಿಸುವುದಕ್ಕೆ ಅದರಲ್ಲಿರುವ ಪ್ರೋಟಿನ್ ಕಾರಣ ಅನ್ನುವ ಮಾತಿದೆ ಕಫಕ್ಕೂ ಸಿಂಬಳಕ್ಕೂ ಅಷ್ಟೇನು ವ್ಯತ್ಯಾಸವಿಲ್ಲ ಕಂಟೆಂಟ್ ಒಂದೇ ಅನ್ನಿಸುತ್ತದೆ.

ಸಿಂಬಳ ಹೆಚ್ಚಾದರೆ ಉಸಿರಾಡಲು ಕಷ್ಟ ಹಾಗಾಗಿ ಸೊರ ಸೊರ ಬುಸು ಬುಸು ಸದ್ದು ಇರುತ್ತದೆ. ಯಾಕ್ಲೆ ಹನುಮಂತಣ್ಣಾ ಗುರುಗುಟ್ತ್ಯಾ ಅನ್ನುವ ಬದಲು ಯಾಕ್ಲೆ ಬುಸುಗುಡ್ತ್ಯಾ ಎನ್ನಬೇಕು. ಸಿಂಬಳ ನಾದ ಅಂದರೆ ಸೌಖ್ಯವಲ್ಲದ ನಾದ ಅಂದರೆ ಸೌಖ್ಯವಿಲ್ಲ ಹತ್ತಿರ ನಿಲ್ಲಬೇಡಿ ಎನ್ನುವುದರ ಸಿಂಬಲ್ ಅಷ್ಟೆ? ಇಂಗ್ಲಿಷಿನಲ್ಲಿ ಇದಕ್ಕೆ snivel ಎಂಬ ಪದವಿದೆ ಮೂಗಿನಿಂದ ಹೊರ ಬರುವ ಶ್ಲೇಷ್ಮ ಎಂದರ್ಥ. ಕನ್ನಡದಲ್ಲಿ ಸಿಂಬಳ ಎನ್ನುತ್ತೇವೆ. ಇಲ್ಲಿ ಕನ್ನಡ ಹಾಗು ಇಂಗ್ಲಿಷಿನ ಪದ ಸಾಮ್ಯವನ್ನು ಕಾಣಬಹುದು.

ಸಿಂಬಳದ ನೊಣ ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ
ನಂಬಿಯುಂ ನಂಬದಿರುವಿಬ್ಬಂದಿ ನೀನು
ಕಂಬದಿನೋ ಬಿಂಬದಿನೋ ಮೋಕ್ಷವವರರಿಂಗಾಯ್ತು
ಸಿಂಬಳದಿ ನೊಣ ನೀನು ಮಂಕುತಿಮ್ಮ, ಡಿವಿಜಿಯವರ ಕಗ್ಗದಲ್ಲಿ ಬರುತ್ತದೆ.

ಅಲ್ಲಿರಲಾರೆ ಅಲ್ಲಿ ಹೋಗಲಾರೆ ಅನ್ನುವ ಮನಸ್ಥಿತಿಯನ್ನು ಭಕ್ತ ಗಣ ಹಾಗು ಭಕ್ತರ ಗುಣವನ್ನು.ಸಿಂಬಳದಿ ನೊಣ ಎನ್ನುವ ಮಾತಿನೊಂದಿಗೆ ವಿವರಿಸಿದ್ದಾರೆ. ಸಿಂಬಳದ ನೊಣ ಒಂದು ನುಡಿಗಟ್ಟು ವಾಚ್ಯಾರ್ಥದಲ್ಲಿ ಸಿಂಬಳದಲ್ಲಿ ಸಿಲುಕಿ ಆಚೆ ಹೊರಬರಲಾರದ ನೊಣವನ್ನು ಸಂಕೇತಿಸಿದರೆ ಲಕ್ಷ್ಯಾರ್ಥದಲ್ಲಿ ಸಮಸ್ಯೆಯಲ್ಲಿ ಸಿಲುಕಿ ಹೊರಬರಲಾರದೆ ಚಡಪಡಿಸುವ ವ್ಯಕ್ತಿಗಳನ್ನು ಅರ್ಥಾತ್ ತಾವೇ ಸಮಸ್ಯೆಯಲ್ಲಿ ಸಿಕ್ಕು ಹೊರಬರಲಾರದವರನ್ನು ಸಂಕೇತಿಸುತ್ತದೆ.

ಸಿಂಬಳ ಎಂದರೆ ಬರೆ ಮೂಗೊರಸುವುದು ಎಂದು ಮೂಗು ಮುರಿಯಬೇಕಿಲ್ಲ. ಶೀತವನ್ನು ಹೊರತು ಪಡಿಸಿ ಸಿಂಬಳ ತೀವ್ರ ಅನಾರೋಗ್ಯ ಸೂಚಕವೂ ಹೌದು. ಸಿಂಬಳದಲ್ಲೂ ತಿಳಿ ಗಾಢ ಬಣ್ಣಗಳಿರುತ್ತವೆ. ಆದರೆ ಹಳದಿ ಬಣ್ಣದ್ದಾಗಿದ್ದರೆ ತೀವ್ರ ಆರೋಗ್ಯ ಸಮಸ್ಯೆ ಇದೆ ಎಂದೇ ತಿಳಿಯಬೇಕಾಗುತ್ತದೆ. ಪಾರದರ್ಶಕ ಸಿಂಬಳ ಆರೋಗ್ಯದ ಲಕ್ಷಣ ವೈರಲ್ ಸೋಂಕು ಮತ್ತು ಅಲರ್ಜಿಯಿಂದಾಗುತ್ತದೆ. ಬಿಳಿಯ ಸಿಂಬಳ ವೈರಲ್ ಸೋಂಕಿನ ಸೂಚಕ ಶ್ವಾಸಕೋಶಧ ಸಮಸ್ಯೆಯ ಸಮಕೇತ ಸೋಂಕು ಹೆಚ್ಚಾದರೆ ಕಫದ ಬಣ್ಣ ಹಸಿರು ಹಳದಿಯಿಂದ ಕೂಡಿರುತ್ತದೆ. ವರ್ಷಕ್ಕೊಮ್ಮೆ ಶೀತ ಬರಬೇಕು ದೇಹಕ್ಕಂಟಿದ ಧೂಳನ್ನು ಹೊರಹಾಕಲು . ಶೀತದ ಸಮರ ನಮ್ಮ ನಿಮ್ಮ ಸಮರವೆ ಹೊರತು ಇತರರಿಗಿಲ್ಲ. ಶೀತ, ಸಿಂಬಳ ಗೌಪ್ಯವಲ್ಲ ಅದನ್ನು ನಿಭಾಯಿಸಬೇಕು ಅಷ್ಟೇ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop