ಸುಟ್ಟ ಬೂದಿಯಲ್ಲಿ ಹುಟ್ಟಿದ ಕವಿತೆಗಳು
ತೊಟ್ಟು ಕಳಚಿ ತೊಟ್ಟು ಬಣ್ಣಬಣ್ಣದ ರೆಕ್ಕೆ
ನಿರ್ದಿಗಂತ ಏರುತಿಹವು
ಮೃಷ್ಟಾನ್ನ ಮುಷ್ಟಿಯಲ್ಲಿ ಮೊಗ್ಗಾದ ಕವಿತೆಗಳು
ರತ್ನಗಂಬಳಿಹೊದ್ದು ತೂಕಡಿಸುತಿಹವು
ಮೊಗಸಾಲೆಯಲ್ಲೇ ಬೊಜ್ಜುಬಂದು
ಜನರ ನಡುವಿನಿಂದ ಕುಡಿಯೊಡೆದ ವಚನಗಳು
ಕಾಲಾತೀತ ಮಿಂಚಿನ ಗೊಂಚಲು
ಉಪ್ಪುರಿಗೆಯೊಳಗೆ ಹೆಪ್ಪಾದ ಕಾವ್ಯಗಳು
ಛಂದಸ್ಸಿನ ಕರು ಕುಡಿದ ಕೆಚ್ಚಲು
ನನಗೆ ಯಾವಾಗಲೂ
ಸುಗ್ಗಿಹಾಡುಗಳಿಗಿಂತ
ಬರಗಾಲದ ಬೆಂದ ಪದಗಳು
ಬಹುಕಾಲ ಕಾಡುವವು
ಒಕ್ಕಲಿಗನ ಹಣೆಯ ನೆರಿಗೆಗಳಲ್ಲಿ
ಬಿರುನೆಲದ ನೇಗಿಲ ಸಾಲುಗಳಲ್ಲಿ
‘ಹುಯ್ಯೊ ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ’ವೆಂದು
ಕಾಡಿ ಬೇಡುವ ಕೊರಳುಗಳಲ್ಲಿ ..
ಬಂಡೆ ಸೀಳಿ ಬೇರುಬಿಟ್ಟ ಆಲ
ನೆರಳು ಚೆಲ್ಲಿದೆ ಬಾನಗಲ
ಭುವಿತುಂಬ ಬಿಳಲು
ನೆಲದಾಳಕೆ ಕರುಳು
ಹೂದೋರದೆ ಹಣ್ಣಾಗಿ
ಬಯಲಿಗೆ ಬೀಜವ ತೂರಿ
ಬಿದ್ದಲ್ಲೇ ಬೇರಿಳಿಸುವ ಹಠಯೋಗಿ
ನೋವುಂಡ ಪದಗಳು
ಚೆ’ಗುವಾರನ ಜಾಡು ಹಿಡಿದು
ಬುದ್ಧ ಬಸವ ಭೀಮ ಎಂಬ
ತಿಳಿನೀರ ಕೊಳಗಳಲ್ಲಿ ಮಿಂದು
ಸುಡು ಸುಡುವ ಸೂರ್ಯನ
ಹಣೆಗಣ್ಣಾಗಿ ಮುಡಿದು
ಬರಿಗಾಲಿನ ಉರಿ ದಾರಿಯುದ್ದಕ್ಕೂ
ಬೇಹುಗಾರಿಕೆಯ ಬೇವು ಮೆಂದು
ಕ್ರಾಂತಿ ಕಹಳೆಗೆ ಸಿಡಿದ
ಕಾವುಂಡ ನುಡಿನುಡಿಗಳಲ್ಲೂ
ಚೋಮನ ದುಡಿ
ಯುಗಯುಗದ ಜಗದೆದೆಯ
ಮಾರ್ದನಿಸುತಿಹುದು…