ಕೆ. ಪಿ. ಮಹಾದೇವಿ ಅರಸೀಕೆರೆ ಅವರು ಬರೆದ ಕವಿತೆ ‘ಮುಂಗಾರ ಕನಸು’

ಮಿಕ್ಕಿದ್ದನ್ನೆಲ್ಲಾ ಮೃಗಶಿರಕ್ಕೆ ಬಿತ್ತಿ,
ಹಸನಾದ ಮೇಲೆ ಭರಣಿ ತುಂಬದ
ಮುಂಗಾರ ಕನಸುಗಳು…

ಆರ್ಭಟಿಸುವ ಆರಿದ್ರಕ್ಕೆ
ಕಂಪಿಸುತ್ತಾ, ಹಿಂಗಾರ ಕನಸುಗಳ
ಮೂಟೆಯನು ಬಿತ್ತನೆಗೆ ಬಿಚ್ಚುವಾಗ,
ಎದೆನೆಲವೆಂಬುದು ಹದಗೊಂಡ ಹರೆಯ.
ಧರೆಯ ತುಂಬಾ ಗಟ್ಟಿಗೊಂಡ
ಹಸಿರು. ಅಲ್ಲಲ್ಲಿ ತುಂಬಿಕೊಂಡ
ನಿರೀಕ್ಷೆಯ ಹೊಂಡಗಳು

ಎದೆಯ ಕಸುವನ್ನೆಲ್ಲಾ
ನೆಲದ ನಂಬಿಕೆಯ ಮೇಲೆ
ಕುಸುರಿ ಕೂರಿಗೆಯ ಕಣ್ಣೊಳಗೆ
ಸಾಲುಸಾಲಾಗಿ ಉರುಳಿಸಿ,
ಹುಬ್ಬೆಗೆ ಉಬ್ಬಿ ಚಿಪ್ಪೊಡೆದು,
ನಗ್ನಸತ್ಯಕೆ ಎದೆ ಸೆಟೆದು
ಉತ್ತರೆಯ ಅಕ್ಕರೆಯ ಆಸರೆಗೆ
ಜೀವಕಳೆ ಮೈದುಂಬಿ,
ಟೊಂಕಕಟ್ಟಿದ ಶ್ರಮಕ್ಕೆ ಕಣ್ತುಂಬಿ,
ಭೋರಿಡುವ ಅತ್ತಚಿತ್ತರಿಗೆ
ತತ್ತರಿಸಿದ ತುಂಬು ತೆನೆಗಳು
ನೆಲಕಚ್ಚದೆ ನಿಲದಲ್ಲೇ ನಿಲ್ಲುವುದು
ಕಾಂಡಕ್ಕೇರಿದ ನೆಲದ ನಿಜ ಸಾರಕ್ಕೆ ಬಿಟ್ಟದ್ದು.

ಕಾಲದಾಟದ ಒಳಗೆ,ಸಾರವೋ
ನಿಸ್ಸಾರವೋ ಪಾಲಿಗೆ
ಬಂದ ಭಾಗ್ಯವನು ಒಪ್ಪಗೊಳಿಸಲು
ಕಂತೆ ಕಟ್ಟಲೇಬೇಕು, ಸುಗ್ಗಿ ಆಸೆಗೆ
ಕಣದೊಳಗೆ ಅರೆದು ನುರಿದು
ಜೊಳ್ಳು ಗಟ್ಟಿಗಳ ತೂರಿಕೊಳ್ಳಲು
ಅದೃಷ್ಟದ ಗಾಳಿಗೆ ಒಡ್ಡಲೇಬೇಕು

ಜಗದ ಸಂತೆಯಲಿ ಸುಗ್ಗಿ ಸರಕದು ಸಸ್ತ.
ಲೋಕತಕ್ಕಡಿಯ ಹಿಡಿದವನ ಮುಂದೆ
ಇಟ್ಟು ಮಾರುವ ಚತುರಕಲೆಯೂ ವ್ಯರ್ಥ.
ಲಾಭನಷ್ಟದ ಲೆಕ್ಕ ಕೇರಿತೂರುವುದರೊಳಗೆ
ಬದುಕು ಬೇಸಿಗೆಯ ಬಟಾಬಯಲ ಆಗಸ

ಕಾಲಚಕ್ರದ ಗಾಲಿಗೆ ಸಿಕ್ಕ ಮನ ಅರಸುತಿದೆ
ಬಿಸಿಗಾಳಿ ತಂಗಾಳಿ ಕೂಡಿದ ಸುಂಟರಗಾಳಿ
ಹೊತ್ತು ತರುವುದೆ ಎಲ್ಲಾದರೊಂದು ಮೋಡ
ಉಬ್ಬುಬ್ಬಿ ಉಬ್ಬಸಗೊಂಡ ಸೆಖೆ ರಾತ್ರಿಯಲಿ
ಕಂಡೀತೆ ಈಶಾನ್ಯ ದಿಕ್ಕಿನಲೊಂದು ಮಿಂಚು.
ನನಸಾಗುವುದೆ ಮತ್ತೆ ಹೊನ್ನಾರು ಕಟ್ಟುವ ಕನಸು.

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಭಾಗ್ಯ
5 June 2023 19:52

ಕವಿತೆ ಸೊಗಸಾಗಿದೆ

0
    0
    Your Cart
    Your cart is emptyReturn to Shop