ಸುಕ್ರಜ್ಜಿಯೊಂದಿಗೆ ಮಾತುಕತೆಯಲ್ಲಿ ವಿದ್ಯಾರ್ಥಿಗಳು..
ಕಲಿಕೆಯ ಹಂತದಲ್ಲಿ ಸಮಾಜವನ್ನು ಅರ್ಥ ಮಾಡಿಕೊಳ್ಳುವ ಭಾಗವಾಗಿ ನಾವು ಉತ್ತರ ಕನ್ನಡ ಜಿಲ್ಲೆಯ ತಾಲೂಕುಗಳಿಗೆ ಭೇಟಿಕೊಟ್ಟಿದ್ದೆವು. ಅಲ್ಲಿ ವಾಸಿಸುತ್ತಿರುವ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಮೂಲಭೂತ ಸೌಕರ್ಯದ ಸೌಲಭ್ಯಗಳಿಂದ ಹಿಂದುಳಿದ ಜನರ ಜೀವನ ಸಂಸ್ಕೃತಿ, ಸಂಪ್ರದಾಯ, ಉಡುಗೆ, ತೋಡುಗೆ ಕಣ್ಣಾರೆ ಕಂಡು,ನೋಡಿ ಮಾತನಾಡಿಸಿ ಅರಿಯುವುದು ನಮ್ಮ ಪ್ರವಾಸದ ಮುಖ್ಯ ಉದ್ದೇಶವಾಗಿತ್ತು
ಅಂಕೋಲಾ ತಾಲೂಕಿನ ಬಡಗೇರಾ ಗ್ರಾಮಕ್ಕೆ ಸುಕ್ರಜ್ಜಿಯ ಅರಸುತ್ತಾ ಹೊರಟವರಿಗೆ, ಮಾಹಿತಿಯ ಕೊರತೆಯಿಂದಾಗಿ ಬಡಗೇರಾ ತಲುಪುವುದು ಸ್ವಲ್ಪ ತಡವಾಯಿತು. ಬಡಗೇರಾ ತಲುಪುತಿದ್ದಂತೆ ಐದತ್ತು ನಿಮಿಷದ ನಡಿಗೆಯ ದಾರಿ ಸವಿಸಿ ಸಾಗಿದರೆ ಸುಕ್ರಜ್ಜಿಯ ಮನೆ. ಮನೆಯ ಎದುರಿಗೆ ಕಟ್ಟಿಗೆ ಕಡಿಯುತ್ತಿದ್ದ ಅಜ್ಜಿಯ ಸೊಸೆಗೆ, ಹಿಂಗೆ ಸುಕ್ರಿ ಬೊಮ್ಮನಗೌಡ ಅವರನ್ನ ನೋಡಬೇಕು ಮಾತಾಡಬೇಕು ಮನೆ ಎಲ್ಲಿ ಎಂದು ಕೇಳಿದಾಗ, ಬರ್ರಿ ನಾನು ಅವರ ಸೊಸೆ ಎಂದು ಮನೆಯೊಳಕ್ಕೆ ಕರೆದುಕೊಂಡು ಹೋಗುತ್ತಿದ್ದಂತೆ ಮನೆಯ ಗೋಡೆಯ ಮೇಲೆಲ್ಲಾ ಸುಕ್ರಜ್ಜಿಯು ಪಡೆದ ಪ್ರಶಸ್ತಿಗಳು ಮತ್ತು ಪತ್ರಿಕೆಗಳ ಪ್ರಕಟಣೆಯ ಸುದ್ದಿ. ಅವರು ಮಾಡಿದ ಹೋರಾಟದ ಹಾದಿಯ ಕುರಿತಾದ ಪತ್ರಿಕೆಗಳ ಸುದ್ದಿಗಳನ್ನು ಗೋಡೆಗೆ ಆನಿಸಿ ಇಟ್ಟಿದ್ದು ನೋಡಿದ ನಮಗೆ ವಿಸ್ಮಯ ಅನಿಸಿದ್ದು ನಿಜ.
ಸ್ವಲ್ಪ ಹೊತ್ತಿಗಿ ಮನೆಯವರು ಅಜ್ಜಿ ಮಲಗಿದ್ದಾರೆ ಅಂತಾ ಹೇಳಿದಾಗ, ಇಲ್ಲಿಯವರೆಗೆ ಬಂದಿದ್ದೀವಿ ಇವರು ಸಿಗಲಿಕ್ಕಿಲ್ಲ, ನಾವು ಬಂದ ದಾರಿಗಿ ಸುಂಕವಿಲ್ಲ ಎಂದು ಹೋಗಬೇಕಾಗಬಹುದು ಅಂತಾ ಮುಖ ಸಪ್ಪಗಾಯಿತು. ಅಷ್ಟರಲ್ಲಿ ಅಜ್ಜಿ ಹೊರಗೆ ಬಂದವರೇ ನಮಗೆಲ್ಲ ಎಲ್ಲಿಂದ ಬಂದಿದಿರಿ ಅಂತಾ ಮಾತನಾಡಿಸಿದಾಗ ಸಪ್ಪಗಾದ ಮುಖ ಮತ್ತೆ ಗೆಲುವಾಯಿತು. ಬಂದು ಕುಳಿತವರೇ ಹೇಗೆ ಬಂದ್ರಿ, ಊಟ ಮಾಡಿದ್ರಾ, ನೀರು ಕುಡೀರಿ ಅಂತಾ ವಿಚಾರಿಸಿಕೊಳ್ಳುತ್ತಿರುವಾಗ ನಮ್ಮೂರಿನ ನಮ್ಮ ಪರಿಚಯಸ್ತರ ಮನೆಗೆ ಹೋದಷ್ಟೇ ಅನುಭವ ಸಿಕ್ಕು ಖುಷಿಯಾಯಿತು.
ನಾವು ಬೆಂಗಳೂರಿನ ಮೀಡಿಯಾ ವಿದ್ಯಾರ್ಥಿಗಳು, ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಬಂದಿದೀವಿ ಅಂತಾ ಪರಿಚಯ ಮಾಡಿಕೊಂಡಾಗ, ಹೌದಾ ತುಂಬಾ ಖುಷಿಯಾಯ್ತು, ನೀವು ಬಂದಿದ್ದು ಎಂದರು. ಅವರ ಜಾನಪದ ಹಾಡಿನ ಪಯಣದ ಕುರಿತಾಗಿ ಕೇಳಿದಾಗ ನಾನು ಹನ್ನೆರಡು ವರ್ಷದವಳಿದ್ದಾಗ ಅವ್ವ, ಅಕ್ಕ ಹಾಡುವುದನ್ನ ಕೇಳಿ ಕೇಳಿ ಹಾಡೋದು ಕಲಿತೆ ಎಂದು ಹೇಳಿದರು. ಮತ್ತು ಹಾಡಿನ ಮೂಲಕ ನಾನು ಹಾಲಕ್ಕಿ ಸಮುದಾಯದ ಪ್ರತಿನಿಧಿಯಾಗಿದ್ದು, ಎಲ್ಲಿಗೆ ಹೋದರು ಜನ ಗುರುತಿಸುತ್ತಾರಲ್ಲ ಅದು ದೊಡ್ಡ ವಿಷಯ ಎಂದರು. ಸುಕ್ರಜ್ಜಿಯು ಜಾನಪದ ಹಾಡುಗಳ ಕಲೆಯ ಆಗರವಾಗಿರುವ ಕಾರಣ, ೨೦೧೭ರಲ್ಲಿ ಕೇಂದ್ರ ಸರಕಾರವು ಗುರುತಿಸಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ.
ಎಂಬತ್ತಾರರ ಆಸು ಪಾಸಿನ ವಯಸ್ಸಿನಲ್ಲಿರುವ ಸುಕ್ರಜ್ಜಿಯ ಮಾತು ಕೇಳಲು ಅಸ್ಪಷ್ಟ ಅನಿಸಿದರೂ ಸಹ, ಅವರು ಹೇಳಿದ ಮಾತುಗಳು ಮಾತ್ರ ಅಚ್ಚ ಅಳಿಯದೆ ಉಳಿಯುವಂತೆ ಮಾಡಿದವು. ಅವರನ್ನು ಮಾತಿಗೆಳೆದಾಗ ‘ಜಾತಿ ಅನ್ನೋದ ಇರೋದೇ ಎರಡು ಅದು ಒಂದು ಹೆಣ್ಣು, ಇನ್ನೊಂದು ಗಂಡು. ಯಾರ್ ಸಹಾಯನು ಬೇಕಿಲ್ಲ ನಮಗೆ, ನಮ್ಮ ಬದುಕು ನಮ್ಮ ಪಾಲಿನದು’ ಎಂದರು.
ಕೊನೆಯಲ್ಲಿ ಯುವಜನತೆಗೆ ನಿಮ್ಮ ಕಿವಿ ಮಾತು ತಿಳಿಸಿ ಎಂದಾಗ, ‘ಜಾತಿ, ಧರ್ಮ, ಲಿಂಗ ಬೇಧ ಎಲ್ಲವನ್ನು ಬಿಟ್ಟು ನಾವೆಲ್ಲರೂ ಒಂದೇ ಎಂದು ಒಟ್ಟುಗೂಡಿ ಬದಕಬೇಕು’ ಎಂದು ನಗುತ್ತಾ ತಿಳಿಸಿ, ನಿಮಗೂ ಒಳ್ಳೆಯದಾಗಲಿ ಎಂದು ಹಾರೈಸಿದರು. ಅವರ ಭೇಟಿಯಾದ ಖುಷಿಗೆ, ಅವರ ಹಾರೈಕೆಯೊಂದಿಗೆ ಆಯಾಸವನ್ನೆಲ್ಲ ಮರೆತು ಉಲ್ಲಾಸಿತರಾಗಿ ನಾವುಗಳು ನಮ್ಮ ಮುಂದಿನ ಪಯಣಕ್ಕೆ ಮುಂದಾದೆವು.