ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ ರೂಪ)

ಶ್ರೀಮತಿ ಭಾಗ್ಯ ಗೌರೀಶ್‌ ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸುವ ತಮ್ಮ ವೃತ್ತಿಯೊಂದಿಗೇ, ತಾವು ಬದುಕಿನ ಹಾದಿಯಲ್ಲಿ ಕಲಿತ ಅಥವ ಕಲಿಯಬೇಕೆಂದೆನಿಸುವ, ಜೀವನ ಸಾರ್ಥಕತೆಯ ಹಲವು ಸೂಕ್ಷ್ಮ ಸಂಗತಿಗಳಿಗೆ ಒಂದು ಸಂಕ್ಷಿಪ್ತ ಅಕ್ಷರ ನೀಡುವ ಮೂಲಕ, ಕಾವ್ಯಾತ್ಮಕ ಸ್ಪರ್ಶದೊಂದಿಗೆ ತಮ್ಮ ಪ್ರಥಮ ಕವನ ಸಂಕಲನ ʼ ಹೊನಲು ʼ ಹೊರತರುತ್ತಿರುವುದು ಹೆಮ್ಮೆಯ ವಿಚಾರ. ಕಾವ್ಯ ಎನ್ನುವುದು ಒಂದು ಅನುಭಾವಕ ಸ್ಥಿತಿಯ ಅಕ್ಷರಾಭಿವ್ಯಕ್ತಿ. ಆದರೆ ಕವಿಮನಸ್ಸಿನಲ್ಲಿ ಬೀಜಾಕ್ಷರಗಳು ಹುಟ್ಟಿಕೊಳ್ಳುವುದು ಅನುಭವದ ನೆಲೆಯಲ್ಲಿ. ಬದುಕಿನ ಪ್ರತಿಯೊಂದು ಕ್ಷಣವನ್ನೂ, ಕಷ್ಟ ಸುಖಗಳ ಚೌಕಟ್ಟಿನೊಳಗೇ, ಸಹನೆಯಿಂದ ಅಥವಾ ಅನಿವಾರ್ಯತೆಯ ಕಾರಣ, ಅನುಭವಿಸುವ ವ್ಯಕ್ತಿಯ ಮನದಾಳದಲ್ಲಿ ಸಹಜವಾಗಿಯೇ ಕೆಲವು ಅಭಿವ್ಯಕ್ತಿಗಳು ಹುಟ್ಟಿಕೊಳ್ಳುತ್ತಾ ಹೋಗುತ್ತವೆ. ಈ ಸಹಜ ಬಿತ್ತನೆಯನ್ನು ಮತ್ತಷ್ಟು ಪೋಷಿಸಿ ಬೆಳೆಸಲು ಯೋಚಿಸಿದಾಗ, ಸಾಮಾನ್ಯ ಮನಸ್ಸು ದಿನಚರಿ ಬರೆದರೆ, ಸೂಕ್ಷ್ಮ ಮನಸ್ಸು ಆ ಆಲೋಚನೆಯ ಬೀಜಗಳನ್ನು ಸಸಿಯಾಗಿ ಬೆಳೆಸುವ ಯೋಚನೆ ಮಾಡುತ್ತದೆ. ಬೌದ್ಧಿಕವಾಗಿ ಸಾಹಿತ್ಯಾಧ್ಯನ ಮಾಡುತ್ತಾ, ಕನ್ನಡದ ಸಮೃದ್ಧ ಸಾಹಿತ್ಯವನ್ನು ಓದುತ್ತಾ ಸಾಗುವ ಮನಸ್ಸಿನಲ್ಲಿ ಒಂದು ಸೃಜನಶೀಲ ತುಡಿತ ತಂತಾನೇ ಮೂಡುತ್ತದೆ.

ಇಲ್ಲಿ, ವ್ಯಕ್ತಿಗತ ನೆಲೆಯಲ್ಲಿ ಮೊಳೆಯುವ ಅಕ್ಷರ ಬೀಜಗಳು, ಮೊಳಕೆಯೊಡೆದಾಗ ಅದು ಸಾಹಿತ್ಯಕ ಸ್ವರೂಪ ಪಡೆದುಕೊಳ್ಳುತ್ತದೆ. ಬರೆವುದೆಲ್ಲವೂ ಸಾಹಿತ್ಯ ಆಗುವುದಿಲ್ಲ ಎಂದು ಹೇಳುತ್ತಿದ್ದ ಕಾಲವೊಂದಿತ್ತು. ಕನ್ನಡದ ಅನೇಕ ಹಿರಿಯ ಕವಿಗಳು ವಿಮರ್ಶಾತ್ಮಕ ನೋಟದಿಂದ ಬರಹಗಳನ್ನು ಪರಾಮರ್ಶಿಸುವಾಗ, ಅದನ್ನು ಸಾಹಿತ್ಯದ ಚೌಕಟ್ಟಿನೊಳಗೇ ವಿಂಗಡಿಸಿರುವುದನ್ನೂ ಕನ್ನಡ ಚರಿತ್ರೆಯಲ್ಲಿ ಕಾಣಬಹುದು. ಕತೆ, ಕಾದಂಬರಿ, ಪತ್ತೆದಾರಿ, ಪ್ರಬಂಭ, ಲಲಿತ ಪ್ರಬಂಧ, ಲೇಖನ ಮತ್ತು ಕಾವ್ಯ ಅಥವಾ ಕವಿತೆ. ಈ ಪ್ರಕಾರಗಳಲ್ಲಿ ಆಳವಾದ ಒಳಗಣ್ಣಿನಿಂದ ನೋಡಲಾಗುವ ಒಂಧು ಸಾಹಿತ್ಯ ಪ್ರಕಾರ ಎಂದರೆ ಕಾವ್ಯ. ಇದಮಿತ್ಥಂ ಎನ್ನುವಂತೆ ʼ ಹೀಗಿದ್ದರೆ ಮಾತ್ರವೇ ಕಾವ್ಯ ʼ ಆಗಲು ಸಾಧ್ಯ ಎಂಬ ಒಂದು ಅಭಿಪ್ರಾಯ ಇಂದಿಗೂ ಇದೆ, ಅಂದೂ ಇದೆ.ಆದರೆ ಕಾವ್ಯ ಅಥವಾ ಸಾಹಿತ್ಯಕ್ಕೆ ಬೇಲಿಗಳನ್ನು ಹಾಕಲಾಗುವುದಿಲ್ಲ. ಹೊಲಗದ್ದೆಗಳಲ್ಲಿ ದುಡಿಯುವ ಹೆಣ್ಣುಮಕ್ಕಳು ತಮ್ಮ ದಣಿವು ಮರೆಯಲು ಪದಗಳನ್ನು ಹಾಡುತ್ತಾ ಕೆಲಸ ಮಾಡುತ್ತಾರೆ. ಅದರ ಸಾಹಿತ್ಯಕ ಅರ್ಥವಾಗಲೀ ಅಥವಾ ಮೂಲವಾಗಲೀ ಅವರ ಅರಿವಿಗೆ ನಿಲುಕದೆ ಇರಬಹುದು. ಆದರೆ ಅಲ್ಲೊಂದು ಶ್ರಮಿಕರ ಸಾಹಿತ್ಯ ಉತ್ಪತ್ತಿಯಾಗುತ್ತಿರುತ್ತದೆ. ಇದನ್ನು ಹೇಗೆ ಶ್ರೇಣೀಕರಿಸಲು ಸಾಧ್ಯ. ಹಾಗಾಗಿ ಸಾಹಿತ್ಯ ಅಥವಾ ಕವಿತೆ ಎನ್ನುವ ಅಕ್ಷರಾಭಿವ್ಯಕ್ತಿಯನ್ನು ಸಮಾಜದ ಪ್ರಬಲ ವರ್ಗವೊಂದು ನಿರ್ವಚಿಸುವ ರೀತಿಯನ್ನು ಸಾರ್ವತ್ರೀಕರಿಸಲಾಗುವುದಿಲ್ಲ.

ಆದರೆ ಪ್ರಪಂಚದ ಇತಿಹಾಸ ಮತ್ತು ಮಾನವ ಸಮಾಜದ ಅಭ್ಯುದಯದ ಹಾದಿಯನ್ನು ಗಮನಿಸುತ್ತಾ ಹೋದಂತೆ, ಸಮಾಜ ಬದಲಾದಂತೆ ಸಾಮಾಜಿಕ ಆಲೋಚನಾ ವಿಧಾನಗಳೂ ಬದಲಾಗುತ್ತಲೇ ಬಂದಿರುವುದನ್ನು ನಾವು ಪ್ರತಿಯೊಂದು ಕಾಲಘಟ್ಟದಲ್ಲೂ ಗುರುತಿಸಬಹುದು. ಅಲ್ಲಿ ಮೂಡುವ ವಿಮರ್ಶಾತ್ಮಕ ಕಣ್ಣೋಟಗಳಿಗೆ ಒಂದು ಸ್ಪಷ್ಟ ಬೌದ್ಧಿಕ ಚೌಕಟ್ಟು ಮತ್ತು ಸಾಮಾಜಿಕ ಆಯಾಮಗಳಿರುವುದನ್ನೂ ಗುರುತಿಸಬಹುದು. ಹಾಗಾಗಿಯೇ ಪ್ರಾಚೀನವನ್ನು ನವೋದಯ, ನವೋದಯವನ್ನು ಪ್ರಗತಿಶೀಲ, ಇವೆರಡನ್ನೂ ನವ್ಯ, ನವ್ಯವನ್ನು ಬಂಡಾಯ, ಬಂಡಾಯವನ್ನು ದಲಿತ ಈ ವಿಮರ್ಶಾತ್ಮಕ ಕಣ್ಣುಗಳು ಪ್ರತ್ಯೇಕಿಸುತ್ತಾ ಬಂದಿವೆ. ಈ ಪ್ರಕಾರಗಳ ಹರಿಕಾರರಾಗಿ ಅಥವಾ ವಾರಸುದಾರರಾಗಿ ನಾವು ಗುರುತಿಸಬಹುದಾದ ಸಾಹಿತಿಗಳ ವೈಯುಕ್ತಿಕ ಅಭಿಪ್ರಾಯಗಳನ್ನು ಬದಿಗಿಟ್ಟು ನೋಡಿದಾಗಲೂ, ನಮಗೆ ಕಾಣುವುದು ಅಲ್ಲಿರಬಹುದಾದ ಅಕ್ಷರಾಭಿವ್ಯಕ್ತಿಯ ಸ್ವಯಂವಿಧಿತ ಚೌಕಟ್ಟುಗಳಷ್ಟೆ. ಹಾಗಾಗಿಯೇ ಈ ಎಲ್ಲ ಪ್ರಕಾರಗಳನ್ನೂ ಆರಂಭದಿಂದಲೂ ಭೇದಿಸುತ್ತಲೇ, ಛೇದಿಸುತ್ತಲೇ ಬರಲಾಗಿದೆ, ವಿಮರ್ಶಿಸುತ್ತಲೇ ಬರಲಾಗಿದೆ.

ಒಂದು ಕಾಲದಲ್ಲಿ ಒಬ್ಬ ಕವಿ ಮತ್ತೊಬ್ಬರ ರಚನೆಯನ್ನು ಒಪ್ಪುತ್ತಿರಲಿಲ್ಲ ಅಥವಾ ವಿಮರ್ಶಾತ್ಮಕ ನೋಟದಲ್ಲಿ ಅದನ್ನು ತಿರಸ್ಕರಿಸಿದ್ದುದೂ ಉಂಟು. ಖ್ಯಾತ ಉರ್ದು ಕವಿ, ಸಾಹಿರ್‌ ಲುಧಿಯಾನ್ವಿ ತಮ್ಮ ಸಮಕಾಲೀನ ಕವಿಗಳ ರಚನೆಗಳನ್ನು ಕಾವ್ಯ ಅಥವಾ Poetry ಎಂದು ಒಪ್ಪುತ್ತಲೇ ಇರಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಕೈಫಿ ಅಜ್ಮಿ ಅವರ ಬಗ್ಗೆಯೂ ಒಂದು ಕಾವ್ಯವಾಚನ ಗೋಷ್ಟಿಯಲ್ಲಿ ಬಹಿರಂಗವಾಗಿ, ಕೈಫಿ ಬರೆಯುವುದು ಕಾವ್ಯ ಅಲ್ಲ ಎಂದು ಹೇಳಿದ್ದರು. ಕೈಫಿ ಅದನ್ನು ಸೌಜನ್ಯದಿಂದ ಸ್ವೀಕರಿಸಿದ್ದರು. ಆದರೆ ತದನಂರದ ಅವರ ಕವಿತೆಗಳನ್ನು ಓದುತ್ತಾ ಹೋದರೆ, ಸಾಹಿರ್‌ ಅಭಿಪ್ರಾಯವನ್ನು ಒಪ್ಪಲಾಗುವುದಿಲ್ಲ. ಈ ಪರಸ್ಪರ ಭಿನ್ನಮತದ ನಡುವೆಯೇ ಕಾವ್ಯಲೋಕ ವಿಸ್ತರಿಸುತ್ತಾ ಬಂದಿದೆ.ಈಗಲೂ ಇದರ ಛಾಯೆ ದೂರವಾಗಿಲ್ಲ. ದಲಿತ-ಬಂಡಾಯ ಕಾವ್ಯದ ಬಗ್ಗೆ ಕನ್ನಡ ಸಾಹಿತ್ಯದ ಒಂದು ವಲಯ ಓರೆಗಣ್ಣಿನಿಂದ ನೋಡಿದ ದಿನಗಳನ್ನೂ ಕಂಡಿದ್ದೇವೆ. ಕವಿಗೆ ಸಮಾಜದ, ವ್ಯವಸ್ಥೆಯ, ಆಳ್ವಿಕೆಯ ಓರೆಕೋರೆಗಳನ್ನು ಧಿಕ್ಕರಿಸುವ ದಿಟ್ಟತನವೂ ಇರಬೇಕಾಗುತ್ತದೆ. ಇಲ್ಲಿ ಮತ್ತೊಮ್ಮೆ ಸಾಹಿರ್‌ ಲುಧಿಯಾನ್ವಿ ನೆನಪಾಗುತ್ತಾರೆ. 1969ರಲ್ಲಿ ಮಿರ್ಜಾಗಾಲಿಬ್‌ ಅವರ ಜನ್ಮಶತಮಾನೋತ್ಸವನ್ನು ಭಾರತ ಸರ್ಕಾರ ಆಚರಿಸಿದ್ದ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ಸಾಹಿರ್‌, ಭಾರತ ಒಬ್ಬ ಶ್ರೇಷ್ಠ ಉರ್ದು ಕವಿಯನ್ನು ಸ್ಮರಿಸುತ್ತಿದೆ ಆದರೆ ಉರ್ದು ಭಾಷೆಯನ್ನು ನಿರ್ಲಕ್ಷಿಸುತ್ತಿದೆ, ಇದು ಸರಿಯೇ ಎಂದು ಪ್ರಶ್ನಿಸಿದ್ದರು. ( ಸಾಹಿರ್‌ ಕುರಿತು ಉಲ್ಲೇಖಕ್ಕೆ ಆಧಾರ Sahir Ludhianvi –The Peopleʼs Poet – Akshay Manwani)

ಈಗ ನಾವು ಅವಸರದ ಪ್ರಪಂಚದಲ್ಲಿದ್ದೇವೆ. ಇದನ್ನು ಡಿಜಿಟಲ್‌ ತಂತ್ರಜ್ಞಾನದ ಯುಗ ಎಂದೂ ಕರೆಯುತ್ತೇವೆ. ಸಂವಹನ ಸಾಧನಗಳು ಅಪಾರವಾಗಿ ವಿಸ್ತರಿಸಿವೆ ಅಷ್ಟೇ ವೇಗೋತ್ಕರ್ಷವನ್ನೂ ಪಡೆದುಕೊಂಡಿವೆ. ಮೇಲೆ ಹೇಳಿದಂತಹ ಯಾವುದೇ ಸಾಹಿತ್ಯಾಭಿವ್ಯಕ್ತಿಯಾದರೂ, ಕ್ಷಣ ಮಾತ್ರದಲ್ಲಿ ವಿಶಾಲ ಸಮಾಜಕ್ಕೆ ತಲುಪಿಸಬಹುದಾದ ಒಂದು ಪರಿಸರದಲ್ಲಿ ನಾವಿದ್ದೇವೆ. ಇದಕ್ಕೆ ಪೂರಕವಾಗಿ ತಮ್ಮ ಅಂತರಂಗದ ಅಭಿವ್ಯಕ್ತಿಯನ್ನು ಬಾಹ್ಯ ಸಮಾಜಕ್ಕೆ ತಲುಪಿಸಬೇಕೆಂಬ ಹಂಬಲ ಮತ್ತು ಅಪೇಕ್ಷೆ ಎಲ್ಲ ಕಾಲದಲ್ಲಿದ್ದಂತೆಯೇ ಈಗಲೂ ಇದೆ. ಆದರೆ ಈಗ ಆದಷ್ಟು ಬೇಗನೆ ತಲುಪಿಸಬೇಕೆನ್ನುವ ಹಪಹಪಿ ನಮ್ಮ ನಡುವೆ ಇದೆ. ಸಾಮಾಜಿಕ ಮಾಧ್ಯಮಗಳು, ಸೋಷಿಯಲ್‌ ಮೀಡಿಯಾ ವೇದಿಕೆಗಳು, ಇದಕ್ಕೆ ಮುಕ್ತ ಅವಕಾಶವನ್ನೂ ಕಲ್ಪಿಸಿರುವುದು ವಾಸ್ತವ.

ಹೀಗೆ ನಮ್ಮ ಅಂತರಾಳದ ಅಭಿವ್ಯಕ್ತಿಯನ್ನು ಬಾಹ್ಯ ಸಮಾಜಕ್ಕೆ ಸುಲಭವಾಗಿ, ವೇಗವಾಗಿ ತಲುಪಿಸಬಹುದು ಎಂಬ ಭಾವನೆಯೇ ನಮ್ಮೊಳಗಿನ ಹೊಸ ಅಲೋಚನೆಗಳನ್ನು ಮೊನಚುಗೊಳಿಸುತ್ತದೆ. ಇಲ್ಲಿ ಹುಟ್ಟುವ ಅಕ್ಷರಾಭಿವ್ಯಕ್ತಿಯ ಒಂದು ರೂಪ ಎಂದರೆ ಕವಿತೆ ಅಥವಾ ವಿಶಾಲಾರ್ಥದಲ್ಲಿ ಕಾವ್ಯ. ಸಾಮಾನ್ಯವಾಗಿ ಸಾಹಿತ್ಯದಲ್ಲಿ ಕಾದಂಬರಿಯನ್ನು ಹರಿವು ಮತ್ತು ಓಘದ ನೆಲೆಯಲ್ಲಿ ನಿಷ್ಕರ್ಷೆ ಮಾಡುತ್ತೇವೆ, ಕಾವ್ಯವನ್ನು ವಾಚ್ಯಾರ್ಥ, ಗೂಡಾರ್ಥ, ರೂಪಕ, ಪ್ರತಿಮೆ, ಅಲಂಕಾರ ಮತ್ತಿತರ ಲಕ್ಷಣಗಳ ನಡುವೆ ಇಟ್ಟು ನೋಡುತ್ತೇವೆ. ಹಾಗಾಗಿಯೇ ಕಾವ್ಯ ಎಂದಾಕ್ಷಣ ʼ ಅರಳುವಿಕೆ ʼ ಎಂಬ ಗುಣವಿಶೇಷಣವನ್ನು ಬಳಸಲಾಗುತ್ತದೆ. ಕಾವ್ಯ ಅರಳುತ್ತದೆ, ಅರಳುತ್ತಲೇ ಹೋಗುತ್ತದೆ, ವಿಕಾಸದ ಹಾದಿಯಲ್ಲಿ ಹಲವು ಏಳುಬೀಳುಗಳನ್ನು ಸಹಿಸಿಕೊಳ್ಳುತ್ತಾ ಹೋದಾಗ, ನಾವು ಕವಿತೆ ಎಂದು ಭಾವಿಸುವ ನಮ್ಮ ಅಕ್ಷರಾಭಿವ್ಯಕ್ತಿಗಳು ಪರಿಪೂರ್ಣತೆಯ ಹಂತವನ್ನು ತಲುಪುತ್ತದೆ. ಇದು ಕಾವ್ಯಮೀಮಾಂಸೆಯ ಒಂದು ಮಹತ್ತರವಾದ ಅಂಶ.

ಹೀಗೆ ಕವಯಿತ್ರಿ ಭಾಗ್ಯ ಗೌರೀಶ್‌ ಅವರ ಅಂತರಂಗದ ಭಾವಗಳು, ಭಾವನಾತ್ಮಕ ನೆಲೆಯಲ್ಲಿ, ಜೀವನಾನುಭವದ ಚೌಕಟ್ಟಿನೊಳಗೆ, ಅಕ್ಷರ ರೂಪ ಪಡೆದಿದ್ದು ಅದು ʼ ಹೊನಲು ʼ ಎಂಬ ಶೀರ್ಷಿಕೆಯಡಿ ಹೊರಬಂದಿದೆ. ಕಾವ್ಯ ಎನ್ನುವುದು ಒಂದು ಬರಹಕ್ಕೆ ನಿಲುಕುವುದಲ್ಲ ಅಥವಾ ಒಂದು ಮರು ಓದಿಗೆ ಸಿಲುಕುವುದೂ ಅಲ್ಲ. ರೂಪಕ, ಪ್ರತಿಮೆಗಳ ಸಖ್ಯವಿಲ್ಲದೆ ಹೋದರೂ, ಕವಿತೆಯಲ್ಲಿ ವ್ಯಕ್ತವಾಗುವ ಪ್ರತಿಯೊಂದು ಸಾಲೂ, ಪ್ರತಿಯೊಂದು ಪದವೂ ತನ್ನ ಮೂಲಾರ್ಥದ ಸೀಮೆಯನ್ನು ದಾಟಿ, ಸಾರ್ವಕಾಲಿಕತೆಯನ್ನೂ, ಸಾರ್ವತ್ರಿಕತೆಯನ್ನೂ ಪಡೆದುಕೊಳ್ಳಬೇಕಾಗುತ್ತದೆ. ಈ ವಿಮರ್ಶಾತ್ಮಕ ಕಣ್ಣೋಟದಲ್ಲಿ ವರ್ತಮಾನದ ಕಾವ್ಯ ಕೃಷಿಯನ್ನು ನಾವು ನಿಷ್ಕರ್ಷೆ ಮಾಡಲಾಗುವುದಿಲ್ಲ. ಕಾರಣವೇನೆಂದರೆ, ಇಂದು ಕಾವ್ಯ ಎನ್ನುವುದು ತನ್ನ ಪಾರಂಪರಿಕ ಚೌಕಟ್ಟುಗಳನ್ನು ದಾಟಿ ಹೊರಬಂದಿದೆ. ಸಾಂದರ್ಭಿಕ ನೆಲೆಯಲ್ಲಿ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸಬೇಕಾದ ಮನೋತುಡಿತ ಅಂತರಂಗದಲ್ಲಿ ಸೃಜಿಸುವ ಅಭಿವ್ಯಕ್ತಿಗಳಿಗೆ ಅಕ್ಷರ ರೂಪ ಪಡೆಯುವಾಗ, ಈ ಸೀಮೋಲ್ಲಂಘನವೂ ಸಹಜವಾಗಿಬಿಡುತ್ತದೆ.

ಇಂದು ಸಾಹಿತ್ಯ ಎನ್ನುವುದೇ ಸೂಕ್ಷ್ಮ ಸ್ಪಂದನೆಯ ಅಕ್ಷರಾಭಿವ್ಯಕ್ತಿಯಾಗಿದೆ. ನಮ್ಮ ಸುತ್ತಲಿನ ವಾತಾವರಣದಲ್ಲಿ ನಿತ್ಯ ಸಂಭವಿಸುತ್ತಿರುವ ದೌರ್ಜನ್ಯಗಳು, ಅತ್ಯಾಚಾರಗಳು, ಜಾತಿ ತಾರತಮ್ಯಗಳು, ಅಸ್ಪೃಶ್ಯತೆ ಮತ್ತು ಢಾಳಾಗಿ ಕಾಣುವ ಅಸಮಾನತೆ- ಬಡತನ-ಹಸಿವೆ ಇವೆಲ್ಲವೂ ಯಾವುದೇ ಸೃಜನಶೀಲ ಮನಸ್ಸನ್ನೂ ಸುಮ್ಮನಿರಲು ಬಿಡುವುದಿಲ್ಲ. ಜೊತೆಗೆ ನೈತಿಕವಾಗಿ ಅವನತಿಯತ್ತ ಸಾಗುತ್ತಿರುವ ರಾಜಕಾರಣ. ಈ ಅಪಸವ್ಯಗಳ ಬಗ್ಗೆ ಕವಿಮನಸ್ಸಿನಲ್ಲಿ ಮೂಡುವ ಸಾತ್ವಿಕ ಸಿಟ್ಟು ಅಕ್ಷರ ರೂಪ ಪಡೆದಾಗ, ಅದು ತತ್‌ಕ್ಷಣದಲ್ಲಿ ನಾಲ್ಕೈದು ಸಾಲುಗಳ ಮೂಲಕ ಹರಿಯುವುದು ಸಹಜ. ಚುಟುಕಗಳು ಇಂತಹ ಒಂದು ಪ್ರಕಾರ. ಭಾಗ್ಯ ಗೌರೀಶ್‌ ತಮ್ಮ ಸಂಕಲನದಲ್ಲಿ ಈ ಸಾತ್ವಿಕ ಸಿಟ್ಟನ್ನು ಹೊರಗೆಡಹಿದ್ದಾರೆ. ʼ ಕಿಡಿ ʼ ʼ ಯಾಕೆ ಹೀಗೆ ʼ ʼಭರವಸೆಯ ಹಾದಿಯಲ್ಲಿʼ ʼ ಶಿಕ್ಷಣʼ ಈ ಕವಿತೆಗಳು ಇದನ್ನೇ ಧ್ವನಿಸುತ್ತವೆ.

ನಾನು ಮೊದಲೇ ಹೇಳಿದಂತೆ ಕಾವ್ಯದ ಬೀಜ ಅಕ್ಷರವಾಗಿ ಮೂಡುವುದು ಅಂತರಾಳದ ಅನುಭವಾತ್ಮಕ ಅಭಿವ್ಯಕ್ತಿಯಲ್ಲಿ. ಸಹಜವಾಗಿ ಹೆತ್ತ ತಾಯಿ, ತಂದೆ ಮತ್ತು ಅವರೊಡಗಿನ ಕರುಳ ಬಾಂಧವ್ಯಗಳು ಕವಿತೆಯಾಗಿ ಹೊರಹೊಮ್ಮುತ್ತದೆ. ʼ ಅಮ್ಮ ಎಂಬ ವಿಸ್ಮಯ ʼ ಕವಿತೆಯಲ್ಲಿ ಕವಿ ಹೇಳುವ “ ಆಗಸದಷ್ಟು ಹಂಬಲ ಭೂಮಿಯಷ್ಟು ಗಂಭೀರ,,,” ಎಂಬ ಸಾಲುಗಳು ಇದನ್ನು ಧ್ವನಿಸುತ್ತವೆ. ಹಾಗೆಯೆ ʼ ಅಪ್ಪನ ನೆನಪು ʼ ಕವಿತೆಯಲ್ಲಿ ಅಪ್ಪನನ್ನು ಬದುಕಿನ ರೂವಾರಿ, ಜೀವನದ ಛಾಯೆ ಎಂದು ಗುರುತಿಸುವ ಮೂಲಕ ಭಾಗ್ಯ ಗೌರೀಶ್‌ ಹೆತ್ತೊಡಲನ್ನು ಸ್ಮರಿಸುತ್ತಾರೆ. ತಮ್ಮ ʼ ಕೊನೆ ಯಾವುದೋ ʼ ಕವಿತೆಯಲ್ಲಿ ಕವಿ ಅಧ್ಯಾತ್ಮದ ಸ್ಪರ್ಶವನ್ನೂ ನೀಡುತ್ತಾರೆ. ಹೆಣ್ಣು ಮಗಳಾಗಿ ನಮ್ಮ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಎದುರಿಸಬೇಕಾದ ಸವಾಲುಗಳು ಇವರ ಕವಿತೆಗಳಲ್ಲಿ ಭಿನ್ನ ಭಾವಾರ್ಥಗಳಲ್ಲಿ ಧ್ವನಿಸುತ್ತವೆ.

ಕವಿ ಮದ್ದೂರು ದೊರೆಸ್ವಾಮಿ ಮುನ್ನುಡಿಯಲ್ಲಿ ಹೇಳಿರುವಂತೆ ಕಾವ್ಯವನ್ನು ಕಟ್ಟಲಾಗುವುದಿಲ್ಲ, ಅದು ಹರಡುವುದಿಲ್ಲ, ವಿಕಸಿಸುತ್ತದೆ, ಅರಳುತ್ತದೆ. ಈ ಅರಳುವಿಕೆಗೆ ಅಗತ್ಯವಾದ ಪರಿಸರವನ್ನು ಕವಿಯಾಗಲು ಬಯಸುವ ಯಾರೇ ಆದರೂ ಸೃಷ್ಟಿಸಿಕೊಳ್ಳಬೇಕಾದರೆ ಇರುವ ಒಂದೇ ಮಾರ್ಗ ಕಾವ್ಯದ ಓದು, ಮರು ಓದು ಮತ್ತು ಮನನ. ಬಗೆದಷ್ಟೂ ಆಳ ಎನ್ನುವಂತೆ ಕನ್ನಡ ಸಾಹಿತ್ಯ ಲೋಕ ಕಾವ್ಯದ ಫಸಲುಗಳಿಂದ ಸಮೃದ್ಧವಾಗಿದೆ. ಎಲ್ಲವನ್ನೂ ಓದುವುದು ಒಂದು ಜೀವಿತಾವಧಿಯಲ್ಲಿ ಸಾಧ್ಯವಾಗದಿರಬಹುದು. ಆದರೆ ಆದಷ್ಟೂ ಕಾವ್ಯಾಧ್ಯಯನ ಮಾಡಬೇಕು. ತೀ. ನಂ. ಶ್ರೀಕಂಠಯ್ಯ (ತೀನಂಶ್ರೀ)ಅವರ ಭಾರತೀಯ ಕಾವ್ಯ ಮೀಮಾಂಸೆಯನ್ನು ಪ್ರತಿಯೊಬ್ಬ ಸಾಹಿತ್ಯ ವಿದ್ಯಾರ್ಥಿಯೂ, ಸಾಹಿತ್ಯಾಭಿಲಾ಼ಷಿಯೂ ಓದಲೇಬೇಕು. ರಂ. ಶ್ರೀ. ಮುಗಳಿ ಅವರ ಕನ್ನಡ ಸಾಹಿತ್ಯ ಚರಿತ್ರೆ ಮತ್ತೊಂದು ಓದಲೇಬೇಕಾದ ಮಹಾನ್‌ ಕೃತಿ.

ಕವಿತೆ ಬರೆಯುವವರು ʼ ಕವಿ ಎನಿಸಿಕೊಳ್ಳುವ ʼ ಹಂಬಲದಿಂದ ಹೊರಗಿರುವುದು ಅತ್ಯವಶ್ಯ. ಏಕೆಂದರೆ ಹೊರ ಸಮಾಜ ನೋಡುವ ರೀತಿಯಲ್ಲೇ ನಮ್ಮ ಮನದಾಳದ ಅಭಿವ್ಯಕ್ತಿಯನ್ನು ಅಕ್ಷರ ರೂಪಕ್ಕಿಳಿಸಲು ಸಾಧ್ಯವಾಗುವುದಿಲ್ಲ. ಕಾವ್ಯ ಅಂತರಂಗದ ಧ್ವನಿಯಾಗಿ ಹೊರಹೊಮ್ಮಬೇಕು, ಕ್ರಮೇಣ ಸುತ್ತಲಿನ ಸಮಾಜವನ್ನು ಆಳವಾಗಿ ಅರಿಯುತ್ತಾ ಹೋದಂತೆ, ಈ ಧ್ವನಿ ಸಮಾಜದ ನಡುವೆ ನಿಂತಾಗ, ಅಲ್ಲಿ ಸಮಷ್ಟಿ ಪ್ರಜ್ಞೆ ಅವತರಿಸುತ್ತದೆ. ಆಗ ನಮ್ಮೊಳಗಿಂದ ಹೊರಡುವ ಕಾವ್ಯಾತ್ಮಕ ಅಭಿವ್ಯಕ್ತಿಗೆ ಸಾಮಾಜಿಕ-ಸಾಂಸ್ಕೃತಿಕ ಆಯಾಮ ದೊರೆಯುತ್ತದೆ. ಈ ವಿಕಸನದ ಹಾದಿಯಲ್ಲಿ ಆತ್ಯಂತಿಕ ಘಟ್ಟ ಎನ್ನುವುದಿಲ್ಲ. ಪರಿಪೂರ್ಣ ಕವಿ ಎಂಬ ಬಿರುದು ಯಾರಿಗೂ ಸಲ್ಲಲಾರದೇನೋ ? ಏಕೆಂದರೆ ಕುವೆಂಪು, ಬೇಂದ್ರೆ, ಅಡಿಗರಾದಿಯಾಗಿ ಕನ್ನಡ ಸಾರಸ್ವತ ಲೋಕದ ಕವಿದಿಗ್ಗಜರು ಸಹ ತಾವು ಬರೆಯವುದು ಇನ್ನೂ ಇತ್ತು ಎಂದೇ ಭಾವಿಸುತ್ತಾ, ತಮ್ಮ ಕಾವ್ಯಕೃಷಿಯನ್ನು ಪೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾಗ್ಯ ಗೌರೀಶ್‌ ಅವರ ಈ ಪ್ರಥಮ ಕವನ ಸಂಕಲನ ಒಂದು ಸಣ್ಣ ಅಕ್ಷರಾಭಿವ್ಯಕ್ತಿಯ ಸಣ್ಣ ಪ್ರಯತ್ನ ಎಂದೇ ನೋಡಬೇಕಿದೆ. ಆದರೆ ಭಾಗ್ಯ ಗೌರೀಶ್ ಅವರಲ್ಲಿ ಕವಿ ಮನಸ್ಸಿದೆ, ಅದಕ್ಕೆ ಬೇಕಾದ ಸಹೃದಯತೆ, ಕ್ಷಮತೆ‌, ತುಡಿತ ಇದೆ ಮತ್ತು ಸೃಜನಶೀಲ ಪರಿಕಲ್ಪನೆಗಳಿವೆ. ಇದು ಇನ್ನೂ ಬೆಳೆಯುತ್ತಾ ಹೋದಂತೆ ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಪ್ರೌಢ ಕವಿತೆಗಳು ಹೊರಹೊಮ್ಮುವ ಭರವಸೆಯನ್ನು ಕಾಣಬಹುದು. ಕವಯಿತ್ರಿ ಭಾಗ್ಯ ಗೌರೀಶ್‌ ತಮ್ಮ ಹೆಣ್ಣೊಳನೋಟದ ಮೂಲಕ ಇನ್ನೂ ಹೆಚ್ಚಿನ ಪ್ರೌಢಿಮೆಯ ಕವಿತೆಗಳನ್ನು ರಚಿಸಿ, ತಮ್ಮ ಕಾವ್ಯ ಕೃಷಿಯ ತೋಟದಲ್ಲಿ ಮತ್ತಷ್ಟು ಕಾವ್ಯ ಕುಸುಮಗಳನ್ನು ಅರಳುವಂತೆ ಮಾಡಲಿ ಎಂಬ ಅಶಯದೊಡನೆ ನನ್ನ ಮಾತುಗಳಿಗೆ ವಿರಾಮ ಹೇಳುತ್ತೇನೆ.

ಚಂದಾದಾರರಾಗಿ
ವಿಭಾಗ
3 ಪ್ರತಿಕ್ರಿಯೆಗಳು
Inline Feedbacks
View all comments
50betlogin
6 January 2026 04:09

Signed up for 50betlogin. The login process was straightforward, and the website is easy to navigate. Time to put my bets in. You should check them out here 50betlogin

188betlinkvao
31 December 2025 21:35

Need a quick 188Bet link? 188betlinkvao.net is pretty decent. Got in without any problems. If you need a fast lane, give it a go! 188betlinkvao!

ninecasinoapp
21 December 2025 05:08

NineCasinoApp, my new go-to! The interface is slick, and I’ve already had some decent luck. Definitely worth checking out if you’re looking for a fresh spot to play. Give ninecasinoapp a try!

0
    0
    Your Cart
    Your cart is emptyReturn to Shop