ಒಲವ ಬಳ್ಳಿಯು ನೀನು
ನಿಂತಮರವದು ನಾನು
ತಬ್ಬಿ ಹಬ್ಬುತಲಿ ನನ್ನ
ಬದುಕ ಪೂರ್ಣತೆ ಗೊಳಿಸು..
ಬಿಡಿಸಿ ಚಾಚಿಹೆ ನಾನು
ನನ್ನೆಲ್ಲ ತೋಳುಗಳ
ಅಲಂಗಿಸು ನನ್ನ
ಮಧುರ ಲತೆಯಲಿ ನಿನ್ನ..
ನೂರಾರು ತರುಲತೆಯು
ಹೂವರಳಿ ಬಾಗಿಹುದು
ಹೆಣೆ ಹೆಣೆದು ಜೋಡಿಸುತ
ಬಂದಿಯಾಗಿಸು ನನ್ನ..
ನಿಂತ ನಿಲುವಲ್ಲೇ ಇಹೆನು
ಕನಸು ಕಾಣುತ್ತಲಿರುವೆ
ಒಲವ ಸುರಿಸುತ ನೀನು
ಉಸಿರು ಗಟ್ಟಿಸು ಸುತ್ತಿ..
ಅಚೀಚೆ ಗಿಡ ಗಂಟಿಗಳು
ನೋಡಿ ಉರಿಯಲಿ ಒಳಗೆ
ಸುತ್ತುತಲೆ ನೀ ನನ್ನ
ಅತಿಕ್ರಮಿಸು ಬುಡ ತುದಿಗೆ..
ಬಂದು ಆಶ್ರಯ ಪಡೆದ
ಒಡನಾಡಿಗಳು ಬಹಳ
ಒಲವ ಸುಖ ಸಿಕ್ಕಿಹುದು
ನಿನ್ನ ಸ್ಪರ್ಶದ ಹಿತದಿ..
ಹಿತವಾಗಿ, ಮೃದುವಾಗಿ
ಹಬ್ಬುತಿರು ಕಣಕಣದಿ
ಒಲವಾಗಿ, ನವಿರಾಗಿ
ಸುಖವಾಗಿ ಬಾಂದಳದಿ..