ಸಣ್ಣಂದಿನಿಂದಲೂ ಹಳ್ಳಿ ಮನೆ ತೋಟ, ಗದ್ದೆ, ಮರಗಿಡಗಳು,ಪ್ರಾಣಿ-ಪಕ್ಷಿಗಳ ಮಧ್ಯೆ ಅವುಗಳನ್ನು ನೋಡುತ್ತಾ ಬೆಳೆದಿರುವ ನನಗೆ ಪರಿಸರ ಪ್ರೇಮ ತಾನಾಗಿ ಬಂದಿರುವ ಬಳುವಳಿ.ಅದನ್ನು ಪುಷ್ಟೀಕರಿಸಿದ್ದು ತಂದೆಯವರು ಎಂದರೆ ತಪ್ಪಾಗಲಾರದು. ತಂದೆಯ ಜೊತೆ ತೋಟಕ್ಕೆ ತೆಂಗಿನ ಗಿಡಗಳಿಗೆ ನೀರುಬಿಡಲು ಹೋಗುತ್ತಿದ್ದಾಗ ಪಕ್ಕದ ಬನದಲ್ಲಿರುವ ಅನೇಕ ರೀತಿಯ ಮರಗಿಡಗಳು,ಅದರಲ್ಲಿ ಬಿಡುವ ಹೂವು ಹಣ್ಣುಗಳು,ಅಲ್ಲಿರುವ ಪ್ರಾಣಿ-ಪಕ್ಷಿಗಳು ಮುಂತಾದವುಗಳನ್ನು ನೋಡುತ್ತಾ ಬೆಳೆದ ನಾನು ಈ ಭೂಮಿ ನಮಗೆ ಎಷ್ಟೊಂದು ಉಪಕಾರಿವಯಾಗಿದೆ ಜೀವನಕ್ಕೂ ಎಷ್ಟೊಂದು ಸಹಾಯ ಮಾಡುತ್ತದೆ ಎಂದು ಅನಿಸುತ್ತಿತ್ತು.ಆಗೆಲ್ಲ ನಾನು ಕೂಡ ಭೂಮಿಗೆ ಏನಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ಅನಿಸುತ್ತಿತ್ತು.
ಇಷ್ಟೆಲ್ಲಾ ಪೀಠಿಕೆ ಯಾಕಪ್ಪ ಎಂದರೆ ಆಗ ಗ್ಲೋಬಲ್ ವಾರ್ಮಿಂಗ್ ಎನ್ನುವ ವಿಷಯ ಚರ್ಚೆಯಲ್ಲಿದ್ದ ಸಮಯ.ಹಾಗಾಗಿ ನಾನು ಕೂಡ ಈ ಭೂಮಿಗೆ ಏನಾದರೂ ಒಳಿತು ಮಾಡಬೇಕು ಎಂದು
ಅನ್ನಿಸಿದಾಗೆಲ್ಲ ನನಗೆ ಮೂಡಿದ್ದು ಏನಾದರೂ ಆಗಲಿ ನಮ್ಮ ಮನೆಯಲ್ಲಿ ಫ್ರಿಡ್ಜ್ ಮತ್ತು ವಾಷಿಂಗ್ ಮಿಷನ್ ಬರಲೇ ಬಾರದು ಎಂದು. ಹೇಳಿಕೇಳಿ ನಮ್ಮದು ಹಳ್ಳಿ ಮನೆ. ಅಲ್ಲದೆ ಈಗಿನ ತರ ಹಳ್ಳಿಮನೆ ತಾರಸಿ ಮನೆ ಯಾಗಿರಲಿಲ್ಲ. ಮಣ್ಣಿನ ಗೋಡೆಯ ಹಂಚಿನ ಮನೆ,ಅಲ್ಲಲ್ಲಿ ಇಲಿ ಹೆಗ್ಗಣಗಳು ಕೊರೆದ ಬಿಲ ಅಲ್ಲದೆ ಮಳೆಗಾಲ ಆರಂಭದ ಸಮಯದಲ್ಲಿ ಇರುವೆಗಳು ತೋಡುವ ಮಣ್ಣು ಎಳೆದು ಹಾಕುವ ಮಣ್ಣು, ಮಳೆಗಾಲದಲ್ಲಿ ಅಲ್ಲಲ್ಲಿ ನೀರು ಸೋರುತ್ತಿರುವ ಮನೆ, ಅಂಗಳ ಈಗಿನ ತರ ಇಂಟರ್ಲಾಕ್ ಆಗಲಿ ಕಾಂಕ್ರೀಟ್ ಸಿಮೆಂಟ್ ಆಗಲಿ ಇರದೆ ದನದ ಸೆಗಣಿ ಸಾರಿಸಿಆರಿಸುತ್ತಿದ್ದ ಅಂಗಳ. ಮಳೆಗಾಲದಲ್ಲಿ ಅದು
ನೀರಿನಲ್ಲಿ ಕೊಚ್ಚಿ ಹೋಗಿ ಅಲ್ಲಲ್ಲಿ ಪಾಚಿ ಹಿಡಿದು ಜಾರುತ್ತಿತ್ತು.
ನಾನು ಮತ್ತು ತಮ್ಮ ಅದೆಷ್ಟು ಸಲ ಅಂಗಳದಲ್ಲಿ ಕಾಲುಜಾರಿ ಬಿದ್ದಿರುವೆವೋ ದೇವರೇ ಬಲ್ಲ. ಕೊನೆಗೊಮ್ಮೆ ನನ್ನ ತಾಯಿ ಮತ್ತು ಅಜ್ಜಿ ಜಾರಿಬಿದ್ದು ಸೊಂಟ ಉಳುಕಿಸಿಕೊಂಡಾಗ ನಮ್ಮ ಹಳ್ಳಿ ಮನೆ ಹಳ ಮುದುಕಿಗೆ ಹೊಸ ಸೀರೆ ಉಡಿಸಲು ಸಜ್ಜಾಯಿತು.
ಅಂತೂ ಆ ಬೇಸಿಗೆಯಲ್ಲಿ ಮನೆಯ ಅಂಗಳ ಕಾಂಕ್ರಿಟೀಕರಣ ಪಡೆಯಿತು.ಇನ್ನು ಮುಂದೆ ನಡೆದಿದ್ದೆಲ್ಲವೂ ನಮ್ಮ ಮನೆಯ ಸ್ಪ್ರೇಯರ್ ಪ್ರಕರಣಕ್ಕೆ ಸಂಬಂಧಪಟ್ಟ ವಿಷಯ. ಅದೇನೆಂದರೆ ಬರುವ ವರ್ಷ ಅಮ್ಮನ ಕ್ಯಾತೆ ಶುರು. ಏನೆಂದರೆ ನಮ್ಮ ಮನೆಗೂ ಒಂದು ಫ್ರಿಡ್ಜ್ ಮತ್ತು ವಾಷಿಂಗ್ ಮೆಷಿನ್ ಬೇಕೇಬೇಕು ಎಂದು.
ಗೃಹಿಣಿಯ ಕಷ್ಟವನ್ನು ಅರಿತು ತಂದೆ ನೋಡುವ ಎಂದರು. ಆದರೆ ಪಟ್ಟು ಹಿಡಿದು ಕೂತಿದ್ದು ನಾನು ಮತ್ತು ತಮ್ಮ. ಬೇಡ ನಮ್ಮ ಮನೆಗೆ ಅದು ಬೇಡವೇ ಬೇಡ ಯಾಕೆಂದರೆ ಓಜೋನ್ ಲೇಯರ್ ತೂತು ಬೀಳುತ್ತದೆ ಎಂಬುದೊಂದೇ ನನ್ನ ಹಠ.ಯಾರು ಏನು ಬೇಕಾದರೂ ಮಾಡಲಿ ನಾವು ನಮ್ಮ ಕೈಲಾದಷ್ಟು ಭೂಮಿಗೆ ಒಳಿತು ಮಾಡುವ ಎನ್ನುವ ಧ್ಯೇಯ.ಅದನ್ನು ತಿಳಿದ ನಮ್ಮ ತಂದೆಯವರು ಜೋರಾಗಿ ನಕ್ಕು ನಿಮ್ಮಂಥವರು ಪ್ರತಿ ಮನೆಯಲ್ಲಿ ಒಬ್ಬರಿದ್ದರೂ ನಮ್ಮ ದೇಶ ಉದ್ದಾರ ಆಗಬಹುದು ಎಂದು ಕಾಲೆಳೆಯುತ್ತಿದ್ದರು.
ಆದರೆ ಅಮ್ಮನ ಕೋಪತಾಪಗಳು ತಾರಕಕ್ಕೇರಿ ಇನ್ನು ಬಟ್ಟೆಗಳನ್ನು ನೀವೇ ತೊಳೆದುಕೊಳ್ಳಿ, ಹೊದಿಕೆ ಹಾಸಿಗೆಗಳನ್ನು ನೀವೇ ತೊಳೆದುಕೊಳ್ಳಿ ಎಂದು ನಮ್ಮ ಬುಡಕ್ಕೆ ಬಂದಾಗ ನಾನು ಮತ್ತು ತಮ್ಮ ಸುಮ್ಮನಿರ ಬೇಕಾಯಿತು. ಅಂತು ಇಂತು ನಮ್ಮ ಮನೆಗೊಂದು ಫ್ರಿಡ್ಜ್ ಬಂತು. ಇದೆಲ್ಲದಕ್ಕೂ ಎಂಬತ್ತರ ಹರೆಯದ ನನ್ನ ಅಜ್ಜಿಯವರು ಮೂಕಪ್ರೇಕ್ಷಕಿ ಮಾತ್ರ. ಫ್ರಿಡ್ಜ್ ಬಂದು ಅದೇನು ಒಂದು ತಿಂಗಳು ಆಗಿರಲಿಲ್ಲ ಅಷ್ಟರಲ್ಲಿ ನಡೆಯಿತು ಈ ಸ್ಪ್ರೇಯರ್ ಕಥೆ.ಸುಮಾರು ಹತ್ತು ವರ್ಷದ ಹಿಂದಿನ ಕಥೆ.
ನಮ್ಮ ಊರಿನಲ್ಲಿ ನಡೆದ ಕೃಷಿ ಸಮ್ಮೇಳನಕ್ಕೆ ನಾನು ಮತ್ತು ತಂದೆಯವರು ಹೋಗಿದ್ದೆವು. ಹೀಗೆ ಅಲ್ಲಿರುವ ವಸ್ತುಗಳ ಮಾರಾಟ ಮಳಿಗೆಗಳನ್ನು ನೋಡುತ್ತಾ ಏನಾದರೂ ಹೊಸತು ಇದೆಯೇ ಎಂದು ಒಂದೊಂದೇ ಅಂಗಡಿಗಳನ್ನು ದಾಟುತ್ತ ಸಾಗುವಾಗ ತಂದೆಯವರಿಗೆ ಕಂಡಿತ್ತು ಸ್ಪ್ರೇಯರ್.
ಹೂವಿನ ಗಿಡಕ್ಕೆ ಮದ್ದು ಬಿಡಲು ಉಪಯೋಗವಾಗುತ್ತದೆ ಎಂದು ತಂದೆಯವರು ಆ ಸ್ಪ್ರೇಯರ್ ನ ಮೇಲಿನ ಭಾಗವನ್ನು ತೆಗೆದುಕೊಂಡಿದ್ದರು.ಅದನ್ನು ಯಾವುದೇ ನೀರಿನ ಬಾಟಲ್ ಗಳಿಗೆ ಸಿಕ್ಕಿಸಿ ಸ್ಪ್ರೇ ಮಾಡಬಹುದಾಗಿತ್ತು. ಅಂತೂ ಕೃಷಿ ಸಮ್ಮೇಳನ ಮುಗಿಸಿ ಮನೆಗೆ ಬರುವಾಗ ನಮ್ಮೊಟ್ಟಿಗೆ ಸ್ಪ್ರೇಯರ್ ಜೊತೆಯಾಗಿತ್ತು. ನಾನದನ್ನು ತಂದು ಇನ್ನೇನು ಎರಡು ದಿನದಲ್ಲಿ ಉಪಯೋಗಿಸುತ್ತದಲ್ಲ ಎಂದು ಉದಾಸೀನತೆ ತೋರಿ ಫ್ರಿಡ್ಜ್ ಮೇಲೆ ಕುಳ್ಳಿರಿಸಿದೆ. ಅಷ್ಟೇ, ಎರಡು ದಿನದ ಬಳಿಕ ಅದರ ಬಗ್ಗೆ ಎಲ್ಲರಿಗೂ ಮರೆತಂತಾಗಿತ್ತು.ಯಾಕೋ ಒಮ್ಮೆ ಅಮ್ಮ ಹೂವಿನ ಗಿಡಕ್ಕೆ ಮದ್ದು ಸಿಂಪಡಿಸಲು ಮೊನ್ನೆ ತಂದೆ ಸ್ಪ್ರೇಯರ್ ಎಲ್ಲಿ? ಎಂದು ಕೇಳಿದಾಗಲೇ ನಮಗೆ ಅದರ ನೆನಪು. ಆಗಾಗಲೇ ಒಂದು ವಾರ ಕಳೆದಿರಬಹುದು. ಸ್ಪ್ರೇಯರ್ ಎಲ್ಲಿ?ಎಷ್ಟು ಹುಡುಕಿದರೂ ಸ್ಪ್ರೇಯರ್ ಕಾಣಲೇ ಇಲ್ಲ.ಇಡೀ ಮನೆ ಹುಡುಕಾಡಿದರು ಇಲ್ಲ. ಕೊನೆಗೆ ನನ್ನ ತುಂಟ ತಮ್ಮ ಏನಾದರೂ ಆಟವಾಡಲು ತೆಗೆದಿರಬಹುದು ಎಂದು ವಿಚಾರಿಸಿ ಎರಡು ಏಟು ಕೊಟ್ಟು ಗದರಿಸಿ ಕೇಳಿದರೂ ಸ್ಪ್ರೇಯರ್ ನ ಪತ್ತೆ ಇಲ್ಲ.
ಇನ್ನೆಲ್ಲಿ ಅಂತ ಹುಡುಕೋದು? “ಹೋಗ್ಲಿ ನಮ್ಮ ಮನೆಯಲ್ಲಿ ಎಲ್ಲವೂ ಇದ್ದು ಬೇಕಾದಾಗ ಒಂದು ವಸ್ತು ಕೂಡ ಸಿಗುವುದಿಲ್ಲ. “ಎಂಬ ಕಾಮನ್ ಡೈಲಾಗ್ ಕೂಡ ತಂದೆಯವರು ಹೇಳಿ ಆಯಿತು. ಇಷ್ಟೆಲ್ಲಾ ಆದರೂ ಒಂದು ವಾರದಿಂದ ಎಲ್ಲರೂ ತಂದಿಟ್ಟ ವಸ್ತು ಎಲ್ಲಿ ಹೋಯಿತು ಎಂದು ತಲೆ ಕೆರೆದುಕೊಂಡು ಹುಡುಕಾಡಿದರೂ ನನ್ನ ಅಜ್ಜಿ ಮಹಾಶಯರು ಕೇವಲ ಮೂಕಪ್ರೇಕ್ಷಕಿ.
ಕೊನೆಗೊಮ್ಮೆ ಯಾಕೋ ಸಂಶಯ ಬಂದು ನಾನು ಅಜ್ಜಿಯನ್ನು ಕೇಳಿದರೆ ಹೇಗೆ ಅವರಿಗೆ ಗೊತ್ತಿರಬಹುದೇನೋ ಎಂದು ಅನಿಸಿ ಹೇಗೂ ಫ್ರಿಡ್ಜ್ ಬಂದಾಗಿನಿಂದ ನನ್ನ ಅಜ್ಜಿಗೆ ಅದರ ಡೋರ್ ತೆಗೆಯುವುದು, ಹಾಕುವುದು ಒಂದು ವಿಶೇಷ ಸಂಗತಿ. ಕೆಲವೊಮ್ಮೆ ಅದರಲ್ಲಿರುವ ದೇವರ ಪ್ರಸಾದ ಪಂಚಕಜ್ಜಾಯ ಅಥವಾ ಬೇರೆ ಏನೋ ತಿನಿಸುಗಳನ್ನು ತೆಗೆದು ತಿನ್ನುವುದು ಕೂಡ ಮಾಡುತ್ತಿದ್ದರು. ಅಲ್ಲದೆ ಏನಾದರೂ ಪಾತ್ರೆ-ಪಗಡೆಗಳನ್ನು ಇಡುತ್ತಿದ್ದರು. ಹಾಗಾಗಿ ಕೊನೆಯ ಪ್ರಯತ್ನವೆಂಬಂತೆ ಅವರ ಬಳಿ ಕೇಳಿಯೂ ಬಿಟ್ಟೆ.
ದೊಡ್ಡ………..(ನಾವು ಅಜ್ಜಿಯನ್ನು ದೊಡ್ಡ ಎಂದು ಕರೆಯುತ್ತೇವೆ.)
“ನಿಂಕುಳು ಒಂಜಿ ಈತ್ ಮಲ್ಲೊ ಉದ್ದದೊ ಸಪೂರದೊ ಪೈಪ್ ಲಕ್ಕ ಇತ್ನೋ ಮಂಡೆದೋ ಸೂತರ?ಒಂಜಿ ಕುಟ್ಟಿ ಒತ್ತರೆ ಇತ್ನೋ”. (ನೀವು ಒಂದು ಉದ್ದ ಸಪೂರದ ಪೈಪ್ ತರ ಇರುವ ತಲೆ ಭಾಗದಲ್ಲಿ ಒತ್ತಲು ಇರುವಂತಹದು ನೋಡಿದ್ದೀರಾ?) ಅಂತ ಕೇಳಿದಾಗ(ಸ್ಪ್ರೇಯರ್ ಎಂದರೆ ಅವರಿಗೆ ತಿಳಿಯದ ಕಾರಣ ಅದರ ರೂಪ ವಿವರಣೆಯನ್ನು ತಿಳಿಸಿದ್ದು.) ಅವರು “ಎವ್ವು?ಅವು ಮಂಜಳ್ ಮಂಡೆದೋನ?” (ಯಾವುದು ಅದು ಹಳದಿ ತಲೆಯದ್ದ?) ಅಂತ ಕೇಳಿದ್ರು. ನನಗೇಕೋ ಇನ್ನೂ ಸಂಶಯ ಅತಿಯಾಗಿ “ಹಾ ಅಂದ್ ಅವೇ. ಓಂಡ್ ಅವು?” (ಹಾ ಅದೇ ಎಲ್ಲಿದೆ ಅದು) ಎಂದಾಗ ಅವರು “ಅವು ಮೊಳಾನಿ ಏನ್ ಫ್ರಿಡ್ಜ್ ಗೆಪ್ಪುನಗ ಜಾದೋನಾ ಸಿತ್ ಬೂಳ್ನಲಕ ಆನ್.ಐಕ್ ಏನ್ ಫ್ರಿಡ್ಜ್ ದೋ ಜಾದನೋ ತುಂಡಾತ್ ಸಿತ್ಬೂಳ್ನ ಅಂತ್ ಒಳೆಯಿ ಇಜಿತೆ.” (ಅದು ಮೊನ್ನೆ ನಾನು ಫ್ರಿಡ್ಜ್ ತೆಗೆದಾಗ ಏನೋ ಕೆಳಗೆ ಬಿದ್ದಾಗೆ ಆಯಿತು. ಅದು ಫ್ರಿಡ್ಜ್ ತುಂಡಾಗಿ ಬಿತ್ತು ಅಂತ ನಾನು ಅದನ್ನು ತೆಗೆದು ಒಳಗಿಟ್ಟೆ.”) ಅಂದಾಗ ನನಗೆ ತಲೆಸುತ್ತು ಬಂದು ಬೀಳುವುದೊಂದು ಬಾಕಿ. ಫ್ರಿಡ್ಜ್ ಓಪನ್ ಮಾಡಿ ನೋಡಿದ್ರೆ ಮೇಲಿನ ಪದರದಲ್ಲಿ ನಿಂಬೆ ಹಣ್ಣಿನ ಜೊತೆಗೆ ನಮ್ಮ ಸ್ಪ್ರೇಯರ್ ಕೂಲ್ ಆಗಿ ಕೂತಿತ್ತು.
ಆದರೆ ವಾರಗಳ ಕಾಲ ಹುಡುಕಿದ ತಂದೆಯವರ ತಲೆಯಂತೂ ಬಿಸಿ ಹೆಂಚಿನ ಹಾಗೆ ಕಾದಿತ್ತು. ನಾವು ಒಂದು ವಾರದಿಂದ ಇಷ್ಟೆಲ್ಲಾ ಮನೆ ಬಿಚ್ಚಿ ಹುಡುಕುತ್ತಿದ್ದರೂ ಎದುರಿಗೇ ಕೂತಿದ್ದರೂ ಸಹ
ಚಕಾರವೆತ್ತದ ಅಜ್ಜಿಯ ಕಂಡು ಎಲ್ಲರಿಗೂ ಹುಸಿಕೋಪ ಬಂದದ್ದಂತೂ ಸುಳ್ಳಲ್ಲ. ಕೇಳಿದಾಗ ನನಗೇನು ಗೊತ್ತಿತ್ತು ಅದು ಪ್ರೇಯರ್ ಎಂದು? ಅಂತ ಸ್ಪ್ರೇಯರ್ ಅಜ್ಜಿಯ ಬಾಯಲ್ಲಿ ಪ್ರೇಯರ್ ಆಗಿತ್ತು.
ವಿಷಯಕ್ಕಿಂತ ಪೀಠಿಕೆ ಜಾಸ್ತಿ ಎಂದು ಅನಿಸಬಹುದು.ಆದರೆ ಹಿಂದಿನ. ನೆನಪುಗಳನ್ನೆಲ್ಲ ಮೆಲುಕು ಹಾಕುತ್ತಿರುವಾಗ ನೆನಪಾದ ಘಟನೆಯಿದು. ಹಾಗೆಯೇ ನಾನು ಹುಟ್ಟಿ ಬೆಳೆದ ಹಳ್ಳಿಮನೆಯ ಪರಿಸರಗಳು ನೆನಪಾದವು. ಹಾಗಾಗಿ ಅದನ್ನು ಕೂಡ ಸೇರಿಸಿದ್ದು. ದೀರ್ಘವಾದ ವಿರಾಮದ ಬಳಿಕ ಇನ್ನೊಂದು ಬರಹದ ಪ್ರಯತ್ನ.ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ. ಬದಲಾವಣೆಗಳು ಅವಶ್ಯಕ ಎಂದು ಎನಿಸಿದರೆ ಖಂಡಿತವಾಗಿಯೂ ಅನಿಸಿಕೆಗಳನ್ನು ತಿಳಿಸಿ. ಮುಂದಿನ ಬರವಣಿಗೆಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನಿಮ್ಮೆಲ್ಲರ ಪ್ರೋತ್ಸಾಹ ಬಯಸುತ್ತಾ ಏನೋ ಬರೆಯುವ ಹಂಬಲದಿಂದ ಶುರುವಿಟ್ಟುಕೊಂಡಿದ್ದೇನೆ.