ಮೊದಲ ಪಯಣದ, ಮೊದಲ ಅನುಭವ
ಕೊಡಗಿನ ಹುಡುಗಿಯಾದ ನಾನು, ನನ್ನ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯತ್ತ ಪಯಣ ಬೆಳೆಸಿರುವೆ. ಅಷ್ಟು ದೂರದ ಪಯಣ ನನಗೆ ಮೊದಲ ಅನುಭವ. ಮುಂಜಾನೆಯ ಮುಸುಮುಸು ಹನಿ ಬೀಳುವ ವೇಳೆ ನಾ ಸ್ವಲ್ಪ ಬೇಗನೆ ಹೊರಟಿದ್ದೆ. ಕೆ ಎಸ್ ಆರ್ ಟಿ ಸಿ ಬಸ್ಸಿನ ಬರುವಿಕೆಗೆ ಕಾಯುತ್ತಾ ನಿಂತಿದ್ದೆ. ಅಪ್ಪ ಅಮ್ಮನನ್ನು ಬಿಟ್ಟು ಒಂದು ದಿನವೂ ಇರದ ನನಗೆ ಕಣ್ಣಂಚಿನ ಕಂಬನಿಯು ಆಗ್ಗಾಗ ದುಃಖಿಸುತ್ತಿತ್ತು.
ಬಸ್ಸಿನಲ್ಲಿ ಕಿಟಕಿಯ ಹತ್ತಿರ ಕುಳಿತ ನನಗೆ ಕಿಟಕಿಯಿಂದ ತಣ್ಣನೆಯ ಗಾಳಿ ಮೈ ಸೋಕಿಸುತಿತ್ತು. ಮಲೆನಾಡಿನ ಚಳಿ ಅಂದರೆ ಎಲ್ಲರಿಗೂ ತಿಳಿದಿರುವುದೇ. ಅದರಲ್ಲೂ ಕೊಡಗಿನ ಚಳಿಯ ಬಗ್ಗೆ ಕೇಳಬೇಕೇ? ಮೈ ಜುಮ್ ಎನ್ನುವ ಚಳಿಗೆ ದೇಹ ಸೋತಿ ಪುನಃ ಎದುರಿಸುತ್ತಿತ್ತು. ನಾ ಮೊದಲ, ಚಳಿ ಮೊದಲ, ಎನ್ನುವ ಮಾತಿಗೆ ಚಳಿ ಎದುರು ಶಿರಭಾಗಿ ಸೋತಂತಿದೆ ನನ್ನ ಪರಿಸ್ಥಿತಿ.
ರಕ್ತ ಹೆಪ್ಪುಗಟ್ಟುವಂತಹ ಚಳಿಗೆ ಸೋತಿ ಕಂಬಳಿಯ ಸ್ಪರ್ಶ ಬೆರೆತು ಮೆಲ್ಲನೆ ನಿದ್ರೆಗೆ ಜಾರಿದೆ. ಎಚ್ಚರಗೊಂಡು ಕಣ್ತೆರೆದಾಗ ಸುತ್ತಲೂ ಗಿಡ ಮರಗಳೇ ಕೂಡಿದ್ದವು. ಆಗ ಅರಿವಾಯಿತು ನನ್ನ ಬಸ್ಸಿನ ಪಯಣವು ಶಿರಾಡಿ ಘಾಟಿನತ್ತ ಸಾಗಿದೆ ಎಂದು. ಎಚ್ಚರವಾಗಿ ಕಣ್ಣಿಗೆ ನೀರನ್ನು ಚುಮುಕಿಸಿ ಕುಳಿತುಕೊಂಡೆ. ಬಸ್ಸಿನ ಪಯಣವು ಸಾಗಿದಂತೆ, ಶಿರಾಡಿ ಘಾಟಿನ ಸೌಂದರ್ಯವು ತೆರೆಯುತ್ತಿತ್ತು. ಬೆಟ್ಟಗುಡ್ಡಗಳ ನೆತ್ತಿಯಿಂದ ಕವಿದ ಹನಿಯು ಮಂಜಾಗಿ ಬೀಳುತ್ತಿತ್ತು.
ದಟ್ಟವಾದ ಅರಣ್ಯಗಳ ನಡುವಲ್ಲಿ ಹಕ್ಕಿಗಳ ಕಲರವವು ಬಸ್ಸಿನ ಶಬ್ದ ಮೀರಿ ಕೇಳುತ್ತಿತ್ತು. ಹಾಗೆಯೇ ಸಾಗುತ್ತಾ ಬಂಡೆಗಳ ಮೇಲಿಂದ ಝರಿಯು ಸುರಿಯುತ್ತಿದ್ದಂತೆ, ನನ್ನ ಫೋನಿನಲ್ಲಿ ಆ ದೃಶ್ಯವನ್ನು ಸೆರೆಹಿಡಿಯಲೆಂದು ಮೆಲ್ಲನೆ ಬ್ಯಾಗಿಂದ ಫೋನ್ ತೆಗೆದು ನೋಡಿದರೆ,ನೆಟ್ವರ್ಕ್ ಇಲ್ಲದೆ ಫೋನ್ ಸ್ಥಬ್ಧಗೊಂಡಿತ್ತು. ಆದರೂ ಕ್ಯಾಮೆರಾದಲ್ಲಿ ನಾನು ಆ ದೃಶ್ಯವನ್ನು ಸೆರೆಹಿಡಿದೆ.
ಮುಂಜಾನೆಯ ಇಬ್ಬನಿ ಹಸಿರೊಡೆದ ಎಲೆಗಳ ಮೇಲೆ ಮುತ್ತಿಟ್ಟಂತೆ ಗೋಚರಿಸುತ್ತಿತ್ತು. ಬೆಟ್ಟ ಗುಡ್ಡಗಳೊಂದಿಗೆ ಗಿಡಮರಗಳು ಬಿಗಿದಪ್ಪಿದಂತಿದೆ. ಕಡಲ ಝರಿಯ ಭೋರ್ಗರಿತವು ಕಿವಿ ಕಣ್ಣನ್ನು ತಂಪಾಗಿಸುತ್ತಿತ್ತು. ಪ್ರಕೃತಿ ಸೌಂದರ್ಯದ ಸೆಳೆತವು ನನ್ನ ಕಣ್ಣುಗಳಲ್ಲಿ ರಮಣೀಯವಾದ ಭಾವನೆ ಉಂಟು ಮಾಡುತ್ತಿದ್ದವು. ರಸ್ತೆಯ ಏರಿಳಿತಗಳ ನಡುವೆ ಪ್ರಕೃತಿ ಸೌಂದರ್ಯ ರೋಮಾಂಚನಗೊಳಿಸುತಿತ್ತು. ಮಂಜು ಕವಿದ ಮಲೆಗಳನ್ನು ನೋಡಲು ಮನ ಬಯಸಿ ಕಿಟಕಿಯ ಕಿಂಡಿಯಿಂದ ಇಣುಕುತ್ತಿದ್ದೆ.
ಪ್ರಕೃತಿ ಮಾತೆಯ ನೋಡಿ ಮನದಲ್ಲಿ ಮೂಡಿದ ಪದವೊಂದೇ ” ಓ ಪ್ರಕೃತಿಯೇ ಏನಿದು ನಿನ್ನ ಮಾಯೇ! ಸೆಳೆಯುತ್ತಿರುವೆ ನೀ ನನ್ನ ನಿನ್ನ ಮಡಿಲ ಆಸರೆಗೆ “.
ಇದನ್ನು ನೋಡಿದ ನನ್ನ ನಯನಗಳು ಹೇಳುತ್ತಿದ್ದವು “ಪ್ರಕೃತಿಯೇ ಸ್ವರ್ಗ… ಸ್ವರ್ಗವೇ ಪ್ರಕೃತಿ…”. ಇಂದಿನ ಜನರು ಕಾಣದ ಸ್ವರ್ಗ ಹುಡುಕುತ್ತಾ ತಮ್ಮ ಜೀವನವನ್ನು ಕಳೆಯುವರು. ಆದರೆ ಅವರು ಮರೆತಿರುವರು ಪ್ರಕೃತಿ ಮಾತೆಯಂತಹ ಸ್ವರ್ಗಕ್ಕಿಂತ ಮಿಗಿಲಾದದ್ದು ಬೇರೊಂದುಂಟೇ! ಎಂದು.
ಮಗುವಾಗುತ್ತಿದೆ ಮನವು ಪ್ರಕೃತಿಯ ಎದುರು, ನಾ ನಿನ್ನ ಮಡಿಲಲ್ಲಿ ಬಂಧಿಯಾಗಬುದೇ ಎಂದು. ಪ್ರಕೃತಿಯ ಸೌಂದರ್ಯದಲ್ಲಿ ಮುಳುಗಿದ ನನಗೆ ಶಿರಾಡಿ ಘಾಟ್ ಸೆಕ್ಷನ್ ಮುಗಿದದ್ದು ಬೇಸರವಾಯಿತು. ತಕ್ಷಣವೇ ಚಳಿಯಲ್ಲಿದ್ದ ನನ್ನ ದೇಹ ಶಾಖವಾಗತೊಡಗಿತು. ಏನೋ ಬಿಸಿಯಾದ ಸೆಖೆಗೆ ಬೆವರಲು ಶುರುವಾಯಿತು. ಆಗ ಅರಿವಾಯಿತು ದಕ್ಷಿಣ ಕನ್ನಡ ಜಿಲ್ಲೆಯನ್ನು ತಲುಪಿದೆ ಎಂದು. ಎಂಥಹ ಅಚ್ಚರಿಯಲ್ಲವೇ! ಶಿರಾಡಿಘಾಟಿನ ಒಂದು ಕಡೆ ಚಳಿಯ ವಾತಾವರಣವಾದರೆ, ಇನ್ನೊಂದೆಡೆ ಶಾಕದ ವಾತಾವರಣ. ದೇವರ ಸೃಷ್ಟಿಯೇ ಅಚ್ಚರಿಪಡಿಸಬಲ್ಲದು.
“ಓ ದೇವನೇ ನಿನ್ನೀ ಕಲ್ಪನಾಲೋಕದ ಸೃಷ್ಟಿಗೆ ನನ್ನದೊಂದು ಸಲಾಂ “. ಹೀಗೆ ನಾನು ಬಸ್ಸಿನ ಪಯಣದೊಂದಿಗೆ ಪುತ್ತೂರನ್ನು ತಲುಪಿದೆ. ಇಂದು ಕೂಡ ನೆನೆಯುವ ಸ್ಥಳವೆಂದರೆ ಅದು ಶಿರಾಡಿ ಘಾಟಿನ ಅನುಭವ.