ಮಂಜುಳಾ ಪ್ರಸಾದ್ ಅವರು ಬರೆದ ಲೇಖನ ‘ಸ್ತ್ರೀ ಮತ್ತು ನಾಲ್ಕು ಹಂತಗಳ ಬದುಕು!’

ಲೇಖಕಿ ಮಂಜುಳಾ ಪ್ರಸಾದ್

ಸ್ತ್ರೀ ಎಂದರೆ ಸಮಾಜದ ಕಣ್ಣು. ಆಕೆ ಮಮತಾಮಯಿ, ತ್ಯಾಗಮಯಿ, ಸಹನಾಮೂರ್ತಿ, ದಯಾಮಯಿ ಎಲ್ಲವೂ ಹೌದು. ಅವಳು ಎಲ್ಲರನ್ನೂ ಪ್ರೀತಿಯಿಂದ ಪೊರೆಯುತ್ತಾಳೆ. ತನಗೇ ಎಲ್ಲಾ ಬೇಕೆಂಬ ಸ್ವಾರ್ಥವಿಲ್ಲದೆ ಎಲ್ಲವನ್ನೂ ಮತ್ತೊಬ್ಬರಿಗಾಗಿ ಆಕೆಯು ನೀಡಬಲ್ಲಳು.ಸ್ತ್ರೀ ಕನಸೂ ಹೌದು, ವಾಸ್ತವವೂ ಹೌದು. ಪ್ರಕೃತಿಗೂ ಸ್ತ್ರೀ ಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮುಗಿಲಾಗಿ, ಮೇರುಪರ್ವತವಾಗಿ ಸೃಷ್ಟಿಯ ಕಾಲದಿಂದಲೂ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ದಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಇಡಿ ವಿಶ್ವವೇ ಆರೋಗ್ಯಕರ ಮನೋಭಾವ ಹೊಂದಲು ಸಹಕಾರ ಶಕ್ತಿ ಸ್ತ್ರೀಯಾಗಿದ್ದಾಳೆ. ನಿಸರ್ಗದಲ್ಲಿ ಹಲವು ಬಗೆಯ ವೈವಿಧ್ಯತೆಗಳಿರುವಂತೆ ಸ್ತ್ರೀಯರಲ್ಲೂ ಹಲವು ವಿಧದ ಮಹಿಳೆಯರನ್ನು ಕಾಣಬಹುದು. ಇಂತಹ ಎಲ್ಲ ಮಹಿಳೆಯರ ಸಾಮಾನ್ಯ ಬದುಕು ಪ್ರಮುಖ ನಾಲ್ಕು ಹಂತಗಳಲ್ಲಿ ಗೋಚರಿಸುತ್ತದೆ. ಅವುಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ……

ಸ್ತ್ರೀ- ಕೌಟುಂಬಿಕ ಬದುಕು

ಮನೆಯೇ ಮೊದಲ ಪಾಠಶಾಲೆ ಜನನಿಯೇ ಮೊದಲ ಗುರುವು ಎಂಬ ಉಕ್ತಿಯಂತೆ ಎಲ್ಲರ ಬದುಕು ಪ್ರಾರಂಭವಾಗುವುದು ಕುಟುಂಬದಲ್ಲಿ! ಅದು ತಾಯಿ ಎಂಬ ಗುರುವಿನ ಮೂಲಕ. ಹಾಗಾಗಿ ಎಲ್ಲರ ಮೊದಲ ಗುರು ಸ್ತ್ರೀ ಆದಾಗ ಆಕೆಗೆ ಕೌಟುಂಬಿಕ ಬದುಕಿನಲ್ಲಿ ಗೌರವಯುತ ಸ್ಥಾನ ಮೀಸಲಲ್ಲವೇ? ಇದು ಅನಾದಿಕಾಲದ ಸ್ತ್ರೀ ಪ್ರಧಾನ ಕುಟುಂಬಗಳಲ್ಲಿಯೂ ಕಾಣಬಹುದಾಗಿತ್ತು. ಆದರೆ ಕಾಲ ಕಳೆದಂತೆ ಕೌಟುಂಬಿಕ ವ್ಯವಸ್ಥೆಯ ಚಿತ್ರಣಗಳು ಬದಲಾದರೂ ಸ್ತ್ರೀಯ  ಸ್ಥಾನಮಾನ ಬದಲಾದರೂ ಪಾತ್ರ ಮತ್ತು ಜವಾಬ್ದಾರಿಗಳು ಮಾತ್ರ ಬದಲಾಗಿಲ್ಲ.

ಕೌಟುಂಬಿಕ ವಲಯದಲ್ಲಿರುವ ವ್ಯಕ್ತಿಗಳಿಗೆ ಹೆಣ್ಣು ಆಸಕ್ತಿಯ, ಆತ್ಮ ಸಂಗಾತದ ವಿಷಯ. ತಾಯಿಯಾಗಿ, ಅಜ್ಜಿಯಾಗಿ ತಂಗಿಯಾಗಿ, ಅಕ್ಕನಾಗಿ, ಹೆಂಡತಿಯಾಗಿ, ನಾದಿನಿಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ, ಮಗಳಾಗಿ, ಗೆಳತಿಯಾಗಿ, ಪ್ರೇಮಿಯಾಗಿ ಆಕೆ ನಿರ್ವಹಿಸುವ ಪಾತ್ರಗಳು ಅದ್ಬುತ, ವರ್ಣನಾತೀತ. ಏಕೆಂದರೆ ಸ್ತ್ರೀ ಒಂದು ಸಮುದಾಯವನ್ನು ಸಮರ್ಥವಾಗಿ ಪ್ರತಿನಿಧಿಸುವ ಸಾಮರ್ಥ್ಯ ಹೊಂದಿರುವಂತಹವಳು. ಕೌಟುಂಬಿಕ ವಲಯದ ಸ್ತ್ರೀ ಕುಟುಂಬದ ಕಟ್ಟುಪಾಡುಗಳಿಗೆ ಒಳಗಾಗಿ ಜೀವನ ನಡೆಸುತ್ತಿದ್ದಾಳೆ. ಭಾರತೀಯ ಸಂಸ್ಕೃತಿಯ ರಾಯಭಾರಿಯಂತಿರುವ ಆಕೆ ತನ್ನ ಕುಟುಂಕ್ಕಾಗಿ ಸರ್ವವನ್ನೂ ತ್ಯಾಗ ಮಾಡಲು ಸಿದ್ದಳಾಗಿರುತ್ತಾಳೆ.

ಹೇಗೆಂದರೆ ಸ್ತ್ರೀ ಮಗಳಾಗಿ ತಂಗಿಯಾಗಿ, ಮಡದಿಯಾಗಿ,ತಾಯಿಯಾಗಿ ತನ್ನ ಜೀವನದುದ್ದಕ್ಕೂ ಪರರಿಗಾಗಿ ಮಿಡಿಯುವ ಪ್ರೀತಿಯ ಕಣ್ಣಾಗಿ ಬದುಕುವ ತ್ಯಾಗಮಯಿ ಪಾತ್ರ. ಆಕೆ ಮಗಳಾಗಿ ಬೆಳೆಯುವಾಗ ಅಪ್ಪನೇ ಸರ್ವಸ್ವ. ಹೆತ್ತವರಿಗಾಗಿ ಮಿಡಿಯುವ ಆಕೆ ಉತ್ತಮ ಮಗಳಾಗಿ ಶಾಲೆಯಲ್ಲಿ ಶ್ರೇಷ್ಠ ವಿದ್ಯಾರ್ಥಿನಿಯಾಗಿ, ತನ್ನ ಅಳತೆ ಮೀರಿ ಶ್ರಮಿಸಿ ತಂದೆ-ತಾಯಿಗೆ ಕೀರ್ತಿ ತರುವ ಭಾವ ಹೊತ್ತಿರುತ್ತಾಳೆ.
ಹಿರಿಯರು ಮದುವೆ ಮಾಡಿಕೊಟ್ಟಾಗ ಹುಟ್ಟಿ ಬೆಳೆದ ಮನೆ ತಂದೆ-ತಾಯಿ ಅಣ್ಣ-ತಂಗಿ ಸಂಬಂಧಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಕನಸೆಂಬಂತೆ ದೂರ ಮಾಡಿ ಗಂಡನ ಮನೆ ಸೇರುವ ಆಕೆ ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ಎಂದರೆ ತಪ್ಪಾಗಲಾರದು. ನಂತರ ಗಂಡ ಮಕ್ಕಳು ಅವರೇ ಸರ್ವಸ್ವ. ಅವರ ಜೀವನದ ಏಳಿಗೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಮಗ್ನಳಾಗಿ ಮುಂದಿನ ಪೀಳಿಗೆಯ ಸರ್ವತೋಮುಖ ವಿಕಾಸಕ್ಕಾಗಿ ಶ್ರಮಿಸುತ್ತಾ ತನ್ನನ್ನೇ ತಾನು ಮರೆಯುವ ಉದಾತ್ತೆ ಈಕೆ. ಇದು ಸ್ತ್ರೀ ಮತ್ತು ಕುಟುಂಬದ ಅನುಬಂಧ.

ಸ್ತ್ರೀ- ವೃತ್ತಿ ಬದುಕು

ಸ್ತ್ರೀ ಜಾಣ್ಮೆಗೆ, ಕುಶಲತೆಗೆ, ಸಾಮರ್ಥ್ಯಕ್ಕೆ, ತಾಳ್ಮೆಗೆ, ಕ್ರಿಯಾಶೀಲ ಚಿಂತನೆಗೆ ಹೆಸರುವಾಸಿಯಾದವಳು. ಮನೆಯ ಒಳಗಿನ ಎಲ್ಲಾ ಕೆಲಸಗಳನ್ನು ಚಾಚೂ ತಪ್ಪದಂತೆ ಹೇಗೆ ನಿಭಾಯಿಸಬಲ್ಲಳೋ, ಅದೇ ರೀತಿ ಮನೆಯ ಹೊರಗೂ ವೃತ್ತಿ ಬದುಕನ್ನು ಆರಿಸಿಕೊಂಡು ಅದರಲ್ಲಿ ಮೇಲುಗೈ ಸಾಧಿಸುವಲ್ಲಿ ಆಕೆಯದು ಎತ್ತಿದ ಕೈ. ಕುಟುಂಬ ಪೋಷಣೆಯಲ್ಲಿ ಆರ್ಥಿಕವಾಗಿಯೂ ತನ್ನ ಸಹಭಾಗಿತ್ವ ನಿರೂಪಿಸುತ್ತಾ, ಮಕ್ಕಳ ಭವಿಷ್ಯ ಉತ್ತಮವಾಗಿಸುವಲ್ಲಿ ತನ್ನ ಪಾತ್ರ ನಿಭಾಯಿಸುತ್ತಿದ್ದಾಳೆ. ಏಕೆಂದರೆ ಇಂದು ಹೆಣ್ಣು ಅಬಲೆಯಲ್ಲ ಸಬಲೆ.‌ ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೆಣ್ಣುಮಕ್ಕಳು ತಮ್ಮ ಛಾಪು ಮೂಡಿಸುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಯಾರಿಗೂ ಎಟಕಲಾಗದ ಸ್ಥಿತಿ ತಲುಪಿದ್ದಾರೆ. ಆಕೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಹಲವಾರು ಸಾಕ್ಷಿಗಳಿವೆ. ಸ್ತ್ರೀ ನಾಲ್ಕು ಗೋಡೆಗಳ ನಡುವೆ ಕಾಲಕಳೆಯುವ ಕಾಲವೀಗ ಕಣ್ಮರೆಯಾಗಿ, ಪುರುಷಪ್ರಧಾನ ಸಮಾಜದಲ್ಲಿ ಪುರುಷರಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆಯೆಂದು ಹಲವಾರು ರೀತಿಯ ಸಾಧನೆಗಳನ್ನು ಮಾಡುವುದರ ಮೂಲಕ ತೋರಿಸಿ ಕೊಟ್ಟಿದ್ದಾಳೆ. ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯುತ್ತಾ ಜಗತ್ತಿನ ದೃಷ್ಟಿಯನ್ನು ತನ್ನೆಡೆ ಸೆಳೆದಿದ್ದಾಳೆ. ಪ್ರತಿಭೆ, ಕಲೆ, ಸಾಹಿತ್ಯ, ಸಾಹಸ ಪ್ರವೃತ್ತಿಯಂತಹ ಸಾಧನೆಯಲ್ಲಿ ತೊಡಗಿ ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ.

ಸ್ತ್ರೀ- ಸಾಮಾಜಿಕ ಬದುಕು

ಕಾಲದಿಂದ ಕಾಲಕ್ಕೆ ಸಮಾಜ ಬದಲಾವಣೆ ಹೊಂದುತ್ತಿದ್ದರೂ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹೆಣ್ಣಿನ ಸಾಮಾಜಿಕ ಬದುಕು ಪರಿವರ್ತನೆ ಹೊಂದುತ್ತಿದೆ. ಹೇಗಂದರೆ ಸಮಾಜದ ದೃಷ್ಟಿಕೋನ ಬದಲಾದಂತೆ ಹೆಣ್ಣನ್ನು ನೋಡುವ ಮನಸ್ಥಿತಿಯೂ ಬದಲಾಗುತ್ತಾ ಹೋಗುತ್ತದೆ. ಮುಂದುವರೆದು ಅದೇ ನಿಟ್ಟಿನಲ್ಲಿ ಹೆಣ್ಣಿಗೆ ಮಾತ್ರ ನೀತಿ ನೇಮಗಳನ್ನು ರೂಪಿಸಿ ಬಿಡುತ್ತದೆ ಈ ಸಮಾಜ. ಪಾಶ್ಚಾತ್ಯ ಸಮಾಜಗಳು ಎಷ್ಟೇ ಮುಂದುವರೆದಿದ್ದರೂ ಭಾರತೀಯ ಸಮಾಜದಲ್ಲಿ ಮಾತ್ರ ಈಗಲೂ ಹೆಣ್ಣಿನ ಬಗ್ಗೆ ಕೆಟ್ಟದಾಗಿ‌ ಮಾತನಾಡುವು ಸಾಮಾನ್ಯವಾಗಿ ಬಿಟ್ಟಿದೆ. ತನ್ನ ಮನೆಯ ಹೆಣ್ಣನ್ನೇ ಅಶ್ಲೀಲವಾಗಿ ಕಾಣುವ ವರ್ಗವೂ ಇದೆ. ಇನ್ನೊಂದೆಡೆ ಗಂಡು ಮಕ್ಕಳು‌ ತಪ್ಪು ಮಾಡಿದರೆ, ಸಮಾಜ ಯಾವಾಗಲೂ ಹೆಣ್ಣನ್ನು ದೂಷಿಸುತ್ತದೆ. ಆಕೆಯ ಕಡೆಗೆ ಕೈ ತೋರಿಸಿ ಹೆಣ್ಣಿನ ಸ್ಥಾನಮಾನಕ್ಕೆ ಕುತ್ತು ತರುವವರು ಹೆಚ್ಚಾಗಿದ್ದಾರೆ. ಆದರೂ ಇದೇ ಸಾಮಾಜಿಕ ವ್ಯವಸ್ಥೆಯಲ್ಲಿ ತನ್ನನ್ನು ಒಪ್ಪಿಕೊಂಡು ಗೌರವಿಸುವವರು ಇರುವಷ್ಟು ಕಾಲ ಪ್ರತಿಯೊಬ್ಬ ಹೆಣ್ಣು ತನಗಾಗುವ ನೋವನ್ನು ನುಂಗಿ ಜೀವನ ನಡೆಸುತ್ತಾಳೆ.

ಒಂದು ಕಾಲದಲ್ಲಿ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ! ಎಂದ ಸಮಾಜವೇ ಇಂದು ಹೆಣ್ಣೊಂದು ಕಲಿತರೆ ಶಾಲೆ ಎಂದು ತೆರೆದಂತೆ ಎಂದು ಒಪ್ಪಿಕೊಂಡಿದೆ ಎಂದ ಮೇಲೆ ಸ್ತ್ರೀ ಸಮಾಜಕ್ಕೆ ಎಷ್ಟು ಮುಖ್ಯ ಎಂಬುದು ಅರ್ಥವಾಗುತ್ತದೆ.

ಸ್ತ್ರೀ- ವಯಕ್ತಿಕ ಬದುಕು

ಕುಟುಂಬ ಸಮಾಜ ವೃತ್ತಿ ಹೀಗೆ ಎಷ್ಟೇ ಆಯಾಮಗಳಲ್ಲಿ ಹೆಣ್ಣನ್ನು ನೋಡಿದರೂ, ಹೆಣ್ಣಿಗೆ ತನ್ನದೇ ಆದಂತಹ ಒಂದು ವೈಯಕ್ತಿಕ ಬದುಕು ಇದೆ ಎಂಬುದನ್ನು ಯಾರು ಮರೆಯಬಾರದು. ಅಲ್ಲಿ ಆಸೆ-ಆಕಾಂಕ್ಷೆ, ಕನಸು-ಕಲ್ಪನೆ, ಭಾವನೆ-ಆಲೋಚನೆಗಳ ಮಹಾಪೂರವೇ ತುಂಬಿರುತ್ತದೆ. ನದಿ ಮೂಲ, ಋಷಿ ಮೂಲ,ಹೆಣ್ಣಿನ ಅಂತರಾಳದ ಮೂಲವನ್ನು ತಿಳಿಯಲು ಹೋಗಬಾರದು ಎಂಬ ಮಾತಿದೆ! ಏಕೆಂದರೆ ಅದು ಪ್ರಾಯಾಸದಾಯಕ. ಅದರಲ್ಲೂ ಹೆಣ್ಣಿನ ಆಲೋಚನೆ ಮತ್ತು ವರ್ತನೆ ಕೆಲವೊಮ್ಮೆ ಸ್ವತಃ ಆಕೆಗೂ ತಿಳಿಯುವುದಿಲ್ಲ! ಗಂಡಸಿಗೆ ಹೊಲಿಸಿದಾಗ ಹೆಣ್ಣಿನ ದೇಹವನ್ನು ನ್ಯೂನತೆಯ ಗೂಡನ್ನಾಗಿ ಕಲ್ಪಿಸಲಾಗುತ್ತದೆ. ಭೌತಿಕ ವಸ್ತುಗಳನ್ನು ಬಳಸಿ ತಮ್ಮ ದೇಹವನ್ನು ಕೆಲಸಕಾರ್ಯಗಳಲ್ಲಿ ತೊಡಗಿಸುವಾಗ ಹುಡುಗಿಯರಲ್ಲಿ ಅಳುಕು ಮನೋಭಾವ, ಹಿಂಜರಿಯುವಿಕೆ ಹಾಗೂ ಹಿಂದು ಮುಂದು ನೋಡುವ ಡೋಲಾಯಮಾನ ಸ್ಥಿತಿ ಕಾಣಿಸಿಕೊಂಡು, ಸಂಕಲ್ಪ ಶಕ್ತಿ ಕಡಿಮೆಯಿದೆ ಎಂದು ಭಾವಿಸುತ್ತಾರೆ. ಮಾಡಬೇಕಾದ ಕೆಲಸವನ್ನು ಮಾಡಿ ಪೂರೈಸುವ ಸಾಧನವೆಂದು ದೇಹವನ್ನು ಕಲ್ಪಿಸುವ ಬದಲಾಗಿ, ಹೆಣ್ಣುಗಳು ತಮ್ಮ ಶರೀರವನ್ನು ಒಂದು ತೊಡರು, ಕೋಟಲೆ ಎಂದು ಕಲ್ಪಿಸುವುದುಂಟು. ಮಾದರಿ ಹೆಣ್ಣನ್ನು ಉಪಭೋಗಿ ನೆಲೆಯಲ್ಲಿ ಗ್ರಹಿಸುವುದು. ಅವಳ ದೇಹ, ಆ ದೇಹದ ಸೌಂದರ್ಯ, ಅದರ ಧಾರಣ ಶಕ್ತಿ, ಅದರ ಪ್ರಾಯೋಗಿಕ ಉಪಯುಕ್ತತೆ ಈ ಎಲ್ಲವನ್ನೂ ಪಿತೃಪ್ರಧಾನ ವ್ಯವಸ್ಥೆ, ತನ್ನ ಅಪೇಕ್ಷೆ ಮತ್ತು ಅನುಕೂಲಕ್ಕೆ ತಕ್ಕಂತೆ ನಿರ್ವಚನಗಳನ್ನು ಕಟ್ಟಿಕೊಂಡಿದೆ. ಮೇಲ್ನೋಟಕ್ಕೆ ಶಾಂತ ಸಾಗರದಂತೆ ಸ್ತ್ರೀ ಕಂಡರೂ ಮಹಾ ಅಗ್ನಿ ಪರ್ವತ ಅವಳ ಚಿತ್ತದೊಳಗಿರುತ್ತದೆ. ನಗು ಅಳುಗಳ ಭಾವಗಳು ಎಲ್ಲವನ್ನು ಸರಿದೂಗಿಸುತ್ತಾ ಸಾಗಲು ಪ್ರಯತ್ನಿಸುತ್ತಿರುತ್ತದೆ.

ಒಟ್ಟಾರೆ ಪ್ರತಿ ಸ್ತ್ರೀಯ ಬದುಕು ಈ ನಾಲ್ಕು ಆಯಾಮಗಳಲ್ಲಿ ಸಾಗುತ್ತಾ, ಅರ್ಥ ಮಾಡಿಕೊಂಡವರಿಗಷ್ಟೇ ಅರ್ಥವಾಗುತ್ತಾ, ನಿತ್ಯ ವಿನೂತನವಾಗಿರುತ್ತದೆ.

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ದೇವಿಂದ್ರಪ್ಪ
9 July 2023 12:10

ಓದಿದೆ…. ಮೇಡಂ…!! ನಿಜವಾಗಿಯೂ ಸ್ತ್ರೀಯರ ವಾಸ್ತವ ಬದುಕಿನ ನಾಲ್ಕು ಹಂತಗಳ ಚಿತ್ರಣವನ್ನು
ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ….ನಿಮಗೆ ನನ್ನ ಗೌರವ ಪೂರ್ವಕವಾದ ನಮಸ್ಕಾರ…. ಅಭಿನಂದನೆಗಳು….👌👌👏🙏🙏🙏

0
    0
    Your Cart
    Your cart is emptyReturn to Shop