ಅಂಚೆ ನಡೆದು ಬಂದ ದಾರಿ; ಒಂದು ನೆನಪು – ಉದಂತ ಶಿವಕುಮಾರ್

 

“ಪೋಸ್ಟ್!”
ಎಂಥ ಮಾಂತ್ರಿಕ ಶಕ್ತಿ ಇದೆ ಆ ಕೂಗಿನಲ್ಲಿ! ದೊಡ್ಡವರು, ಚಿಕ್ಕವರು, ಕಾತರದಿಂದ ಕಾಯುತ್ತಿದ್ದರು ಅಂಚೆಯವನು ತರುವ ಕಾಗದಕ್ಕಾಗಿ.
ಅಂಚೆ, ಹಂಸ ಎಂಬುದರ ತದ್ಭವ. ಹಂಸವನ್ನು ಸಂದೇಶ ಒಯ್ಯುವ ಪಕ್ಷಿಯೆಂದು ನಮ್ಮ ಪುರಾಣ ಕಥೆಗಳಲ್ಲಿ ವರ್ಣಿಸಲಾಗಿದೆ. ಹಂಸ ಪಕ್ಷಿ ಪ್ರೇಮ ಸಂದೇಶಗಳನ್ನು ಕೊಂಡೊಯ್ಯುವ ಸನ್ನಿವೇಶ ನಳ ದಮಯಂತಿ ಕಥೆಯಲ್ಲಿದೆ.

ಪ್ರಪಂಚದ ಮೊದಲ ಓಲೆಕಾರರು ಬ್ಯಾಬಿಲೋನಿಯ ಸಾಮ್ರಾಜ್ಯದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆ ಮಣ್ಣಿನ ಫಲಕಗಳನ್ನು ಕೊಂಡೊಯ್ಯುತ್ತಿದ್ದರು. ಸುಮಾರು ಇದೇ ಕಾಲದಲ್ಲಿ ಈಜಿಪ್ಟಿನಲ್ಲಿಯೂ ದೂತರ ಮೂಲಕ ಓಲೆಗಳನ್ನು ಕಳುಹಿಸುವ ವ್ಯವಸ್ಥೆ ಇದ್ದಿತು. ಕ್ಷಿಪ್ರಗಾಮಿಗಳು, ಧೈರ್ಯಶಾಲಿಗಳು ಆದ ಈ ಓಲೇಕಾರರ ಹೋರೆಯ ತೂಕ ಹೆಚ್ಚು. ಮುಂದೆ ಕಂಚಿನ ಫಲಕಗಳನ್ನು ಕೊಂಡೊಯ್ಯಬೇಕಾಯಿತು. ಕುದುರೆಯ ಮೇಲೆ ಒಯ್ಯುವ ಅಂಚೆಯ ಇತಿಹಾಸ ದೀರ್ಘವಾದದ್ದು. ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಪರ್ಷಿಯಾದ ಸೈರಸ್ ದೊರೆ ಕುದುರೆಗಳ ಮೇಲೆ ಸಂಚರಿಸುವ ಓಲೆಕಾರರನ್ನು ನೇಮಿಸಿದ. ನೂರಾರು ಹರದಾರಿ, ಕಾಡು, ಮೇಡು, ಚಳಿಗಾಳಿ ಎನ್ನದೆ ಪ್ರಾಣ ಪಣವೊಡ್ಡಿ ಈ ಹರಿಕಾರರು ತಮ್ಮ ಕರ್ತವ್ಯ ಪಾಲಿಸುತ್ತಿದ್ದ ನಿದರ್ಶನಗಳಿವೆ. ಮೊದಲಿಗೆ ಇವರು ರಾಜ ಸಂದೇಶಗಳಿಗೆ ಮಾತ್ರ ದೂತರಾಗಿದ್ದರು.

ಕೊಲಂಬಸ್ ಅಮೆರಿಕವನ್ನು ಮುಟ್ಟುವ ಮೊದಲೇ ಅಂದರೆ 15ನೇ ಶತಮಾನಕ್ಕೆ ಮುಂಚೆ, ಅಲ್ಲಿನ ನಿವಾಸಿಗಳು ಒಂದು ರೀತಿಯ ಅಂಚೆ ವ್ಯವಸ್ಥೆಯನ್ನು ಏರ್ಪಡಿಸಿಕೊಂಡಿದ್ದರು. ಒಂದು ಬಗೆಯ ಬೀಜದ ಮೇಲೆ ಗುರುತುಗಳನ್ನು ಮಾಡಿ ಸಂದೇಶಗಳನ್ನು ದೂತರ ಚೀಲಗಳಲ್ಲಿ ಕಳುಹಿಸುತ್ತಿದ್ದರು. ಹಿಂದಿನಿಂದಲೂ ಬಳಕೆಯಲ್ಲಿರುವ ಇನ್ನೊಂದು ವ್ಯವಸ್ಥೆ ತರಬೇತುಗೊಳಿಸಿದ ಪಾರಿವಾಳದ ಕೊರಳಿಗೆ ಸಂದೇಶ ಬರೆದ ಚೀಟಿಯನ್ನು ಕಟ್ಟಿ ಪರಿಚಿತವಾದ ನಿರ್ದಿಷ್ಟ ಸ್ಥಳಕ್ಕೆ ಕಳುಹಿಸುವುದು. ನಿಗದಿಯಾದ ದಿನಗಳಲ್ಲಿ ಅಂಚೆಯ ವಾಹಕರನ್ನು ಕಳುಹಿಸುವ ಏರ್ಪಾಡು ಮೊಟ್ಟ ಮೊದಲನೆಯ ಬಾರಿಗೆ ಆದದ್ದು ಫ್ರಾನ್ಸಿನಲ್ಲಿ. 11ನೆಯ ಲೂಯಿ ಸಾವಿರದ 1464 ರಲ್ಲಿ ಈ ವ್ಯವಸ್ಥೆಯನ್ನು ಏರ್ಪಡಿಸಿದನೆಂದು ತಿಳಿದು ಬಂದಿದೆ.

ಇಂಗ್ಲೆಂಡ್ ಫ್ರಾನ್ಸ್ ಗಳಲ್ಲಿ ಸಾರ್ವಜನಿಕರ ಕಾಗದಗಳನ್ನು ಒಯ್ಯುವ ಪದ್ಧತಿ ಜಾರಿಗೆ ಬಂದ ನಂತರ ಬಹು ವರ್ಷಗಳ ಕಾಲ, ಅಧಿಕಾರಿಗಳು ಎಲ್ಲಾ ಪತ್ರಗಳನ್ನು ಓದಿ ಕಳುಹಿಸುತ್ತಿದ್ದರು. 1830 ರಲ್ಲಿ ಅಂಚೆ ಸಾಗಿಸುವ ಕೆಲಸ ರೈಲು ಖಾತೆಗೆ ಬಂದಿತು. ಆ ವರ್ಷ ಇಂಗ್ಲೆಂಡಿನಲ್ಲಿ ಮ್ಯಾಂಚೆಸ್ಟರ್ ಲಿವರ್ ಪೂಲ್ ಗಳ ನಡುವೆ ಈ ವ್ಯವಸ್ಥೆ ಆಯಿತು. ಹೀಗೆ ಅಂಚೆಯ ಸಾಗಾಣಿಕೆ ಸ್ವಲ್ಪಮಟ್ಟಿಗೆ ಉತ್ತಮಗೊಂಡಿತು.

1837 ರಲ್ಲಿ ಇಂಗ್ಲೆಂಡಿನ ರೋಲೆಂಡ್ ಹೀಲ್ ಎಂಬುವನು ಅಂಚೆಯ ಸೌಕರ್ಯಕ್ಕೆ ಒಂದೇ ಸಮನಾದ ಶುಲ್ಕ ವಿಧಿಸುವ ಯೋಜನೆ ಮುಂದಿಟ್ಟಾಗ ಸಾರ್ವಜನಿಕರು ಅದಕ್ಕೆ ಬೆಂಬಲ ಕೊಟ್ಟರು. ಅದೇ ಇಂದಿನ ಅಂಚೆ ವ್ಯವಸ್ಥೆಗಳಿಗೆಲ್ಲ ಮೂಲವಾಗಿದೆ. ಇದರ ಒಂದು ಮುಖ್ಯ ಸುಧಾರಣೆ ಎಂದರೆ ಕಾಗದಗಳನ್ನು ಕಳುಹಿಸುವ ಮೊದಲೇ ಅವುಗಳಿಗೆ ತೆರಬೇಕಾದ ಶುಲ್ಕವನ್ನು ಕೊಡುವುದು; ಮತ್ತು ಅದಕ್ಕೆ ತಕ್ಕ ಇಂದಿನ ಅಂಚೆ ಚೀಟಿಗಳಂಥ ಕಾಗದದ ಚೀಟಿಗಳನ್ನೂ ವಿಶೇಷ ರೀತಿಯ ಲಕೋಟೆಗಳನ್ನು ಪಡೆದು, ಕಾಗದವನಿಟ್ಟು ಕಳಿಸುವುದು. 1840 ಮೇ 6 ರಂದು ಗ್ರೇಟ್ ಬ್ರಿಟನ್ನಿನಲ್ಲಿ ಈ ವಿಧಾನ ಆರಂಭವಾಯಿತು.

ಭಾರತದಲ್ಲಿ 1766 ರಲ್ಲಿ ಅಂಚೆ ಸೌಲಭ್ಯ ಮೊದಲಾಯಿತಾದರೂ, ಶ್ರೀಸಾಮಾನ್ಯನಿಗೆ ಈ ಅನುಕೂಲ ಒದಗಿದ್ದು 1837ರ ಅನಂತರವೇ. ಭಾರತದಲ್ಲಿ ಅಂಚೆ ಚೀಟಿಗಳ ವಿತರಣೆ 1825 ರಲ್ಲಿ ಕರಾಚಿಯಲ್ಲಿ ಪ್ರಪ್ರಥಮವಾಗಿ ಆಯಿತು. 1830 ರಲ್ಲಿ ಇಂಗ್ಲೆಂಡಿಗೂ ಭಾರತಕ್ಕೂ ನಡುವೆ ಅಂಚೆಯ ಸಾಗಾಟ ಆರಂಭವಾಯಿತು. 1869 ಅಕ್ಟೋಬರ್ 1ರಂದು ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಆಸ್ಟ್ರೀಯ ದೇಶದಲ್ಲಿ ಪೋಸ್ಟ್ ಕಾರ್ಡನ್ನು ಬಳಕೆಗೆ ತರಲಾಯಿತು.

ಚಿಕ್ಕದೇವರಾಜ ಒಡೆಯರು ಮೈಸೂರು ರಾಜ್ಯದ ಆಡಳಿತ ಕ್ರಮವನ್ನು ರೂಪಿಸಿ 18 ವಿಭಾಗಗಳನ್ನಾಗಿ ವಿಂಗಡಿಸಿದ್ದರು. 1701 ರಲ್ಲಿ ಜಾರಿಗೆ ಬಂದ ಈ ವ್ಯವಸ್ಥೆಯಲ್ಲಿ “ಬೇಹಿನ ಚಾವಡಿ” ಎಂಬುದು ಒಂದು. ಈ ಇಲಾಖೆಯ ಮೇಲಾಧಿಕಾರಿ “ಅಂಚೆಬಕ್ಷಿ” ಈ ಪದ್ದತಿ ರಾಜ್ಯದ ಆಡಳಿತಕ್ಕೆ ಸಂಬಂಧಪಟ್ಟ ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿತ್ತು. ಈ ಅನುಕೂಲ ಸಾಮಾನ್ಯ ಜನರಿಗೆ ಲಭ್ಯವಾದದ್ದು ಕಮೀಷನರುಗಳ ಆಡಳಿತದಲ್ಲಿ. 1879ರಲ್ಲಿ ಈ ವ್ಯವಸ್ಥೆಯ ಪ್ರಯೋಜನಗಳು ಹಳ್ಳಿ ಹಳ್ಳಿಗೂ ಮುಟ್ಟಲೆಂದು ಹೋಬಳಿ ಕೇಂದ್ರಗಳಲ್ಲಿ ಒಬ್ಬ ಉಪಾಧ್ಯಾಯ ಅಂಚೆಯ ಕೆಲಸವನ್ನು ವಹಿಸುವ ಕ್ರಮ ಆಚರಣೆಗೆ ಬಂದಿತು. ಮೈಸೂರಿನ ಅಂಚೆ ಪದ್ದತಿ 1889 ರಲ್ಲಿ, ಭಾರತ ಸರ್ಕಾರದ ಆಗಿನ ಇಂಪೀರಿಯಲ್ ಪೋಸ್ಟಲ್ ವ್ಯವಸ್ಥೆಯಲ್ಲಿ ವಿಲೀನಗೊಂಡಿತು. ಆಗಿನಿಂದ ಹಿಂದಿನ ಮೈಸೂರಿನ ರಾಜ್ಯದ ಅಂಚೆ ವ್ಯವಸ್ಥೆ ಮದರಾಸು ಪ್ರಾಂತದ ಅಂಚೆ-ತಂತಿ ವಿಭಾಗದ ವ್ಯಾಪ್ತಿಗೆ ಒಳಪಟ್ಟಿತು. ನವಮೈಸೂರಿನ ರಚನೆಯಾಗಿ ನಾಲ್ಕು ವರ್ಷಗಳಾದ ಬಳಿಕ,1960 ಅಕ್ಟೋಬರ್ 1ರಂದು ಮೈಸೂರು ರಾಜ್ಯದ ಅಂಚೆ-ತಂತಿ ವ್ಯವಸ್ಥೆಯ ಪ್ರತ್ಯೇಕ ವಲಯ ರೂಪಿತವಾಯಿತು.

ಇಂದಿನ ಜಗತ್ತಿನಲ್ಲಿ ಅಂಚೆಯು ರೈಲುಗಾಡಿ, ಬಸ್ಸು, ಕಾರು, ವಿಮಾನ, ಹಡಗು ಕಡೆಗೆ ಓಲೆಕಾರರ ಮೂಲಕವೂ ಸಾಗುತ್ತದೆ. ರೈಲು ಗಾಡಿಯಲ್ಲಿ ಅಂಚೆ ಒಯ್ಯುವ ಪ್ರತ್ಯೇಕ ಡಬ್ಬಿಯಿದೆ. ಮರಳುಗಾಡಿನಲ್ಲಿ ಅಂಚೆಯನ್ನು ಒಂಟೆ ಮೇಲೆ ಹೊರಿಸಿ ಕಳುಹಿಸುತ್ತಾರೆ. ಭಾರತದಲ್ಲಿ 1851 ಅಕ್ಟೋಬರ್ ನಲ್ಲಿ ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ ನಡುವೆ ಮೊದಲನೆಯ ಅಂಚೆ- ತಂತಿ ಸುದ್ದಿ ಕಳುಹಿಸುವ ಏರ್ಪಾಟಾಯಿತು.

1911 ಫೆಬ್ರವರಿ 18ರಂದು ವಿಮಾನ ಮೂಲಕ ಅಂಚೆಯನ್ನು ಉತ್ತರ ಭಾರತದಲ್ಲಿ ಸಾಗಿಸಲಾಯಿತು. ಸುಮಾರು 10 ಕಿಲೋಗ್ರಾಂಗಳಷ್ಟು ಭಾರವನ್ನು ನೈನಿಯಿಂದ ಅಲಹಾಬಾದಿಗೆ, 32 ಕಿಲೋಮೀಟರ್ ದೂರ, ವಿಮಾನದಲ್ಲಿ ಒಯ್ಯಲಾಯಿತು. ಪ್ರಾಯಶಃ ವಿಮಾನ ಮೂಲಕ ಅಂಚೆ ಸಾಗಿಸಿದ್ದು ಪ್ರಪಂಚದಲ್ಲಿ ಇದೇ ಪ್ರಥಮ ಸಲ. ಇಂಗ್ಲೆಂಡ್ ಅಮೆರಿಕಗಳಲ್ಲಿ ಅಂಚೆಸಾಗಿಸಲು 1918ರಲ್ಲಿ ವಿಮಾನಗಳನ್ನು ಬಳಸಿದರು. ವಿದೇಶಗಳಿಗೆ ಅತಿ ತೂಕದ ಸಾಮಾನುಗಳನ್ನು ರವಾನಿಸಬೇಕಾದರೆ ಹಡಗಿನಲ್ಲಿ ಕಳುಹಿಸಬೇಕು. ವಿಮಾನ ಸಾಗಾಣಿಕೆಯಲ್ಲಿ ಮೊದಲಿಗೆ ಹೊರದೇಶಗಳಿಗೆ ಮಾತ್ರ ಅಂಚೆ ಸಾಗುತ್ತಿದ್ದಿತ್ತು. ಈಗ ಒಳನಾಡಿನಲ್ಲೂ ವಿಮಾನ ಅಂಚೆ ರೂಢಿಯಲ್ಲಿದೆ.

ಅಂತರಾಷ್ಟ್ರೀಯ ಅಂಚೆ ವ್ಯವಸ್ಥೆಯಲ್ಲಿ ಹಡಗು, ರೈಲು, ವಿಮಾನ ಅಂಚೆಗಳಿಗೆ ಧಾರಣೆ ಬೇರೆ ಬೇರೆ. ವಿಮಾನದ ಮೂಲಕ ನಮ್ಮಿಂದ ಅತ್ಯಂತ ದೂರವಿರುವ ಸಂಯುಕ್ತ ಸಂಸ್ಥಾನಕ್ಕೆ ಕೂಡ ಕೇವಲ ಐದು ದಿನಗಳಲ್ಲಿ ಅಂಚೆ ಕಳುಹಿಸುವ ಏರ್ಪಾಟಿದೆ. ಪ್ರಮುಖ ಪಟ್ಟಣಗಳಲ್ಲಿ ಸಂಚಾರಿ ಅಂಚೆ ಕಚೇರಿಗಳು ಕೆಲಸ ಮಾಡುತ್ತವೆ. ಇವು ನಗರದ ಮುಖ್ಯಸ್ಥಳಗಳಲ್ಲಿ ನಿಂತು ಅಂಚೆ ಸೌಲಭ್ಯ ಒದಗಿಸುತ್ತವೆ. ಇದಲ್ಲದೆ ರಾತ್ರಿ ಅಂಚೆ ಕಚೇರಿಗಳೂ ಇರುತ್ತವೆ.

ಕಾಗದಗಳನ್ನು ಒಟ್ಟುಗೂಡಿಸಲು ಊರಿನ ಮುಖ್ಯಸ್ಥಳಗಳಲ್ಲಿ ಕೆಂಪು ಡಬ್ಬಿಗಳನ್ನಿಟ್ಟಿರುತ್ತಾರೆ. ಇದರಲ್ಲಿ ಕಾಗದಗಳನ್ನು ಮಾತ್ರ ಹಾಕಬಹುದು. ಇವನ್ನು ಡಬ್ಬಿಗಳಿಂದ ನಿಯಮಿತ ವೇಳೆಗಳಲ್ಲಿ ಇಲಾಖೆಯವರು ತೆಗೆದುಕೊಂಡು ಹೋಗುತ್ತಾರೆ. ಪಾರ್ಸೆಲ್ ಅಥವಾ ಭಾಂಗಿಗಳನ್ನು ಅಂಚೆ ಕಚೇರಿಯಲ್ಲಿ ತೂಗಿಸಿ ಅವುಗಳ ತೂಕದ ಮೇಲೆ ಅಂಚೆ ಚೀಟಿ ಅಂಟಿಸಿ ಕೊಡಬೇಕು. ಈ ಪಾರ್ಸೆಲುಗಳಲ್ಲಿ ಎರಡು ವಿಧ: ಕಳುಹಿಸುವಾಗಲೇ ಶುಲ್ಕವನ್ನು ಪೂರ್ಣವಾಗಿ ಪಾವತಿ ಮಾಡುವುದು; ಅಂಚೆಯಲ್ಲಿ ಮಾಲು ಕಳುಹಿಸಿ ವಿಳಾಸದಾರರಿಂದ ಅದರ ಪೂರ್ಣ ಹಣ (ಅಂಚೆ ಹಾಗೂ ಸಾಮಾನಿನ ಬೆಲೆ) ಪಡೆಯುವುದು. (ವಿ.ಪಿ.ಪಿ.). ಎರಡನೆಯದು ಮುಖ್ಯವಾಗಿ ವ್ಯಾಪಾರಸ್ಥರ ವ್ಯವಸ್ಥೆ. ಅಂಚೆ ಇಲಾಖೆಯ ಒಂದು ಸೌಲಭ್ಯ ಮನಿಯಾರ್ಡರ್. ಇದರ ಮೂಲಕ ಊರಿಂದೂರಿಗೆ ಹಣ ರವಾನಿಸಬಹುದು.

ಭಾರತದಲ್ಲಿ ಅಂಚೆ ಇಲಾಖೆಯ ಇನ್ನಿತರ ಸೌಕರ್ಯಗಳು ಸೇವಿಂಗ್ಸ್ ಬ್ಯಾಂಕು, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟು, ಸೈನಿಕ ನಿವೃತ್ತಿ ವೇತನ ಇತ್ಯಾದಿ. ಜೀವವಿಮೆ ಈ ಇಲಾಖೆಯಿಂದಲೇ ಆರಂಭವಾಯಿತು ಎಂದರೆ ಸೋಜಿಗವೆನಿಸಬಹುದು. 1884 ಫೆಬ್ರವರಿಯಲ್ಲಿ ಅಂಚೆ ಇಲಾಖೆಯ ನೌಕರರಿಗೆಂದು ಮಾತ್ರ ಭಾರತದಲ್ಲಿ ಜೀವವಿಮೆ ಆರಂಭವಾಯಿತು. ಇಂದು ಅದು ಪ್ರತ್ಯೇಕ ಸಂಸ್ಥೆಯಾಗಿದೆ. ಇವಲ್ಲದೆ ರೇಡಿಯೋ ಲೈಸೆನ್ಸ್ ಮತ್ತು ಕ್ಷಯ ರೋಗ ನಿವಾರಣೆ ಸಹಾಯಾರ್ಥ ಮುದ್ರೆಯ ಚೀಟಿಗಳನ್ನು ಕೂಡ ಅಂಚೆ ಖಾತೆ ಕೊಡುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಬಂದೂಕು, ಮೋಟಾರ್ ವಾಹನ, ನಾಯಿ ಇವುಗಳ ಲೈಸೆನ್ಸ್ ಕೊಡುವುದು ಅಂಚೆ ಇಲಾಖೆಯೇ. ಅಂಚೆ ಚೀಟಿ ಹವ್ಯಾಸಿಗಳಿಗೆ ಜಗತ್ತಿನ ಎಲ್ಲಾ ವಿಧದ ಚೀಟಿಗಳನ್ನು ಇಲಾಖೆ ಒದಗಿಸುತ್ತದೆ.

ಒಂದು ದೇಶದ ವೈಶಿಷ್ಟ್ಯ ಇಲ್ಲವೇ ದೇಶದ ಚಾರಿತ್ರಿಕ ಘಟನೆಗಳು. ಧಾರ್ಮಿಕ ಹಾಗೂ ಐತಿಹಾಸಿಕ ಮಹಾಪುರುಷರು. ಪ್ರಾಚೀನ ಸಾಧನೆಗಳ ಪ್ರತೀಕಗಳು. ಯಾಂತ್ರಿಕ ಕೌಶಲ, ಇಲ್ಲವೇ ಜಾಗತಿಕವಾಗಿ ಮುಖ್ಯವಾದ ಘಟನೆಗಳು. (ಉದಾಹರಣೆಗೆ ಚಂದ್ರಯಾನ, ಚಂದ್ರನಲ್ಲಿ ಮಾನವನ ಪಾದಾರ್ಪಣೆ) ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ರೀತಿಯ ಅಂಚೆ ಚೀಟಿಗಳನ್ನು ಮುದ್ರಿಸುತ್ತಾರೆ. 1969 ಗಾಂಧಿ ಶತಾಬ್ದಿಯ ವರ್ಷವೆಂದು ಮಹಾತ್ಮರ ಚಿತ್ರವನ್ನು ಅಂಚೆ ಚೀಟಿ ಹಾಗೂ ಲಕೋಟೆ ಮೇಲೆ ಮುದ್ರಿಸಲಾಯಿತು.

ದೂರದ ಸ್ಥಳಕ್ಕೆ ತಂತಿ ಸಮಾಚಾರ ಕಳುಹಿಸಬಹುದು. ಮೊದಲು ಎತ್ತರದ ಗೋಪುರಗಳಿಂದ ತಂತಿ ಸಮಾಚಾರ ಸಂಜ್ಞೆಗಳ ಮೂಲಕ ಸಾಗುತ್ತಿದ್ದಿತ್ತು. 1905ರಲ್ಲಿ ತಂತಿಯಿಲ್ಲದೆ ಸಮಾಚಾರ ಸಾಗುವ ಏರ್ಪಾಟು ಪ್ರಾರಂಭವಾಯಿತು. 1908ರಲ್ಲಿ ಸಂಕೇತಗಳ ಭಾಷೆ ಬಳಸುವ ಮಾರ್ಸ್ ಟೆಲಿಗ್ರಾಫ್ ವ್ಯವಸ್ಥೆ ಜಾರಿಗೆ ಬಂದಿತು. ಈಚಿನ ಟೆಲಿಪ್ರಿಂಟರಿನಂಥ ನವೀನ ಯಂತ್ರಗಳ ಉಪಯೋಗದಿಂದ ಸಂದೇಶ ತಲುಪಿದ ಕಡೆಯಲ್ಲಿ ಅದು ತಾನಾಗಿಯೇ ಟೈಪ್ ಆಗುತ್ತದೆ. ವಿವಾಹ ಸಮಾರಂಭ, ಪರೀಕ್ಷೆಯಲ್ಲಿ ಜಯ, ಚುನಾವಣೆಯಲ್ಲಿ ಗೆಲುವು, ಇತ್ಯಾದಿ ಸಂದರ್ಭದಲ್ಲಿ ಶುಭಾಶಯ ಸಂದೇಶಗಳನ್ನು ಕಳುಹಿಸಬಹುದು.

ನಮ್ಮ ದೇಶಕ್ಕೂ ಇಂಗ್ಲೆಂಡಿಗೂ ಸಮುದ್ರದೊಳಗಿನಿಂದ ತಂತಿ ಸಂಬಂಧ ಏರ್ಪಟ್ಟು 1970ರ ಜೂನ್ ಗೆ ಒಂದು ಶತಮಾನವಾಯಿತು. ಇದರ ನಿರ್ವಹಣೆ ಕಷ್ಟದಾಯಕ ವಾದ್ದರಿಂದ ತಂತಿ ಸಹಾಯವಿಲ್ಲದೆ ಸಮಾಚಾರ ಕಳುಹಿಸುವ ಏರ್ಪಾಡು ಬಂದಿದೆ. ದೂರವಾಣಿ ಇಂದಿನ ಪ್ರಬಲ ಸಂಪರ್ಕ ವ್ಯವಸ್ಥೆ. ಇದೂ ಅಂಚೆ ಇಲಾಖೆಯ ಜವಾಬ್ದಾರಿಯೇ. 1968ರ ಅಂಕಿ ಸಂಖ್ಯೆಗಳ ಪ್ರಕಾರ ಭಾರತದಲ್ಲಿ ಒಟ್ಟು 1 ಲಕ್ಷ ಹಂಚಿಕೆ ಕಚೇರಿಗಳಿವೆ ಎಂದು ಎಂದು ತಿಳಿದು ಬಂದಿದೆ. ಇದಲ್ಲದೆ ಉಪಗ್ರಹ ಸಂಪರ್ಕದಲ್ಲಿಯೂ ಭಾರತ ಭಾಗವಹಿಸಿದೆ. ಗಗನದಲ್ಲಿ ಸುತ್ತುತ್ತಿರುವ ಈ ಕೃತಕ ಉಪಗ್ರಹಗಳು ಸಮಾಚಾರಗಳನ್ನು ಕಳಿಸುತ್ತವೆ. ಇಂಥ ಸಮಾಚಾರವನ್ನು ಸ್ವೀಕರಿಸುವ ನಿಲ್ದಾಣವನ್ನು ಪುಣೆಯಿಂದ 29 ಕಿಲೋಮೀಟರ್ ಗಳ ದೂರದಲ್ಲಿರುವ ಅರ್ವಿಯಲ್ಲಿ 6 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಟ್ಟಲಾಗಿದೆ.

1875 ರಲ್ಲಿ ಪ್ರಪಂಚದ ಅಂಚೆ ಒಕ್ಕೂಟ ರೂಪುಗೊಂಡಿತು. ಈ ಅಂತರಾಷ್ಟ್ರೀಯ ಒಡಂಬಡಿಕೆಯ ಮೇರೆಗೆ ಅಂಚೆ ದರ ಹಾಗೂ ತೂಕಗಳಲ್ಲಿ ಸಮಾನತೆ ಏರ್ಪಟ್ಟಿತು. ಪತ್ರ, ಅಂಚೆಯ ಕಾರ್ಡು ಮತ್ತು ಅಚ್ಚಾದ ಪತ್ರಿಕೆಗಳು ಎಂಬ ಮೂರು ವಿಭಾಗಗಳಾದವು. ಒಂದು ದೇಶದ ಹಡಗು ಹಾಗೂ ರೈಲುಗಳನ್ನು ಅಂಚೆ ಸಾಗಾಣಿಕೆಗೆ ಇನ್ನೊಂದು ದೇಶ ಉಪಯೋಗಿಸಿದಾಗ ಕೊಡಬೇಕಾದ ಹಣದ ನಿಗದಿಯಾಯಿತು. ಮುಂದೆ ಅಂತರಾಷ್ಟ್ರೀಯ ಮನಿಯಾರ್ಡರ್ ಹಾಗೂ ಭಾಂಗಿ ಅಂಚೆಗಳು ಒಡಂಬಡಿಕೆಗೆ ಸೇರಿಸಲ್ಪಟ್ಟವು. ಹೀಗೆ ಆಗಿಂದಾಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದಗಳು ಏರ್ಪಡುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಸುದ್ದಿಗಳನ್ನು ಕಳಿಸಲು ಹಣದ ವಹಿವಾಟುಗಳನ್ನು ನಿರ್ವಹಿಸಲು ಸೆಲ್ ಫೋನುಗಳು, ಮೊಬೈಲ್ ಗಳು ವಾಟ್ಸಾಪ್ ಮೂಲಕ ಕಳಿಸಲಾಗುತ್ತಿದೆ. ಹಣದ ವ್ಯವಹಾರವನ್ನು ಗೂಗಲ್ ಪೇ ಮತ್ತು ಫೋನ್ ಪೇಗಳ ಹಾಗೂ ಪೇಟಿಎಂ ಮುಖಾಂತರವೂ ಸಹ ವ್ಯವಹಾರಿಸಲಾಗುತ್ತಿದೆ. ಈಗ ಭಾರತದಲ್ಲಿ 1,55,000ಕ್ಕಿಂತಲೂ ಹೆಚ್ಚು ಅಂಚೆ ಕಛೇರಿಗಳಿವೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop