ಶಿಕ್ಷಣ ಮಾನವೀಯ ಮಾಲ್ಯಗಳನ್ನು ಬೆಳೆಸಲಿ – ಮೇಘ ರಾಮದಾಸ್ ಜಿ

ಶಿಕ್ಷಣ ನಮ್ಮಲ್ಲಿನ ಜ್ಞಾನವೇ ಹೊರತು ಹೊರಗಡೆಯಿಂದ ತುಂಬುವಂತಹ ವಸ್ತುವಲ್ಲ. ನಮ್ಮಲ್ಲಿನ ಜ್ಞಾನಕ್ಕೆ ಪುಷ್ಟಿ ತುಂಬುವ ಪ್ರಕ್ರಿಯೆಯೇ ಶಿಕ್ಷಣ. ಅಕ್ಷರಗಳನ್ನು ಕಲಿಸಿ, ಅವುಗಳನ್ನು ಪೋಣಿಸಿ, ಪದ ರಚಿಸಿ ನಂತರ ವಾಕ್ಯ ರಚನೆ ಮಾಡಿ ಕೊನೆಯಲ್ಲಿ ಒಂದು ಪರೀಕ್ಷೆ ಎದುರಿಸುವಂತೆ ಮಾಡಿದರೆ ಶಿಕ್ಷಣದ ಜವಾಬ್ದಾರಿ ಮುಗಿಯುವುದಿಲ್ಲ. ಬದಲಿಗೆ ಶಿಕ್ಷಣ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ಮೌಲ್ಯಗಳನ್ನು ನೀಡಬೇಕು. ಅದು ಮೂರು ಗಂಟೆಗಳ ತಾತ್ಕಾಲಿಕ ಪರೀಕ್ಷೆಯನ್ನು ಎದುರಿಸುವ ಧೈರ್ಯವನ್ನು ಅಷ್ಟೇ ಅಲ್ಲದೆ, ಜೀವನ ಎಂಬ ದೊಡ್ಡ ಸಾಗರವನ್ನು ಈಜುವ ಚಾಣಾಕ್ಷತೆ ಕಲಿಸಬೇಕು. ಬದುಕನ್ನು ಬಂದಂತೆ ಎದುರಿಸುವ ಗಟ್ಟಿತನ ಬೆಳೆಸಬೇಕು. ಜೀವಿಸಲು ಅಗತ್ಯವಾದ ನೈತಿಕ ಮೌಲ್ಯಗಳನ್ನು ತಿಳಿಸಬೇಕು. ಈ ಎಲ್ಲಾ ಕಾರ್ಯಗಳು ಶಿಕ್ಷಣದ ಮೂಲ ಅಡಿಪಾಯಗಳಾಗಬೇಕು.

ಆದರೆ ಇಂದಿನ ಶಿಕ್ಷಣ ಕೇವಲ ಪುಸ್ತಕದಲ್ಲಿನ ಅಕ್ಷರಗಳನ್ನು ಕಣ್ಣಿಂದ ಆರಂಭಿಸಿ ತಲೆಗೆ ತುಂಬುವ ಕೆಲಸ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಪಠ್ಯಕ್ರಮದ ಚೌಕಟ್ಟಿನಲ್ಲಿರುವಷ್ಟು ಮಾತ್ರ ಮಕ್ಕಳ ತಲೆಗೆ ತುರುಕುವ ಕೆಲಸ ಆಗುತ್ತಿದೆ ಹೊರತು, ಮಕ್ಕಳಲ್ಲಿನ ಜ್ಞಾನ, ಕಲೆ, ಆಸಕ್ತಿ, ಬುದ್ಧಿವಂತಿಕೆಯನ್ನು ಗುರುತಿಸುವ ಸಣ್ಣ ಪ್ರಯತ್ನವೂ ನಡೆಯುತ್ತಿಲ್ಲ. (ಇದು ಎಲ್ಲೆಡೆ ಇಲ್ಲ ಆದರೆ ಬಹುತೇಕ ಕಡೆ ಹೀಗೆಯೇ ಇದೆ. ಕೆಲವು ಕಡೆಗಳಲ್ಲಿ ಮಾತ್ರ ಪರ್ಯಾಯ ಶಿಕ್ಷಣಕ್ಕೆ ಮಹತ್ವ ಇದೆ). ಎಲ್ಲದಕ್ಕಿಂತ ಮುಖ್ಯವಾಗಿ ಮಕ್ಕಳ ಪ್ರಶ್ನಿಸುವ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ. ತರಗತಿಗೆ ಶಿಕ್ಷಕ ಅಥವಾ ಶಿಕ್ಷಕಿ ಬರುತ್ತಿದ್ದಂತೆ ‘ಮಕ್ಕಳೇ ಎಲ್ಲರೂ ಮೌನವಾಗಿರಿ, ಮಾತಾಡಬೇಡಿ’ ಎನ್ನುವ ವಾಕ್ಯ ತಡವಿಲ್ಲದೆ ಬರುತ್ತದೆ. ಇದು ಕೆಲವೊಮ್ಮೆ ಸರಿ ಅನಿಸಿದರೂ ಕೂಡ ಮಕ್ಕಳಲ್ಲಿ ಇರುವ ಅನುಮಾನಗಳನ್ನು ಬಗೆಹರಿಸಲು ಕೂಡ ಕೆಲವು ಶಿಕ್ಷಕರು ಹಿಂದೆ ಮುಂದೆ ನೋಡುತ್ತಾರೆ. ಹೀಗಿರುವಾಗ ಮಕ್ಕಳ ಕುತೂಹಲಕ್ಕೆ ಜಾಗವಿಲ್ಲಿದೆ. ಹೌದು ಸಾಮಾಜಿಕವಾಗಿ ಪದವಿ, ಸ್ನಾತಕ ಪದವಿ, ಡಾಕ್ಟರೇಟ್ ಪಡೆದು ಒಳ್ಳೆಯ ಸಂಬಳದ ಕೆಲಸ ಪಡೆಯಲು ಪುಸ್ತಕದ ಜ್ಞಾನ ಬೇಕೇ ಬೇಕು. ಆದರೆ ಡಬಲ್ ಡಿಗ್ರಿ, ಡಾಕ್ಟರೇಟ್, ಎಲ್ಲವನ್ನೂ ಮಾಡಿ ಒಳ್ಳೆಯ ಅಂಕ ತೆಗೆದು, ಕೆಲಸ ಸಿಗದಿದ್ದಾಗ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯುವ ಜನರಿಗೆ ಅದು ತಪ್ಪು ಎಂದು ಮನವರಿಕೆ ಮಾಡುವ ಶಿಕ್ಷಣದ ಅಗತ್ಯತೆಯೂ ಕೂಡ ಸದ್ಯದ ಪರಿಸ್ಥಿತಿಯಲ್ಲಿ ತುರ್ತಾಗಿ ಬೇಕಾಗಿದೆ. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಜೀವನದ ಅತಿ ದೊಡ್ಡ ಘಟ್ಟ, ಇದರಲ್ಲಿ ಉತ್ತೀರ್ಣರಾಗದಿದ್ದರೆ ಜೀವನವೇ ಮುಗಿಯಿತು ಎನ್ನುವ ರೀತಿ ಬಿಂಬಿಸಲಾಗುತ್ತದೆ. ಇದರ ಹೊರತಾಗಿಯೂ ಹಲವು ಅವಕಾಶಗಳು ಇವೆ ಎನ್ನುವ ಮಾಹಿತಿ ತಿಳಿಸುವ ಕರ್ತವ್ಯ ಶಿಕ್ಷಣದ್ದಾಗಿದೆ. ಮಕ್ಕಳಿಗೆ ಮಾತನಾಡುವ, ಪ್ರಶ್ನಿಸುವ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ, ತಳಮಳಗಳನ್ನು ವ್ಯಕ್ತಪಡಿಸುವ, ಅನುಮಾನಗಳನ್ನು ಬಗೆಹರಿಸಿಕೊಳ್ಳುವ, ಅವಕಾಶ ನೀಡಿದಾಗ ಮಾತ್ರ ಅವರ ಅಗತ್ಯತೆಗಳು ತಿಳಿಯುತ್ತವೆ ಹಾಗೂ ಆತ್ಮಹತ್ಯೆಗಳಂತ ದೊಡ್ಡ ತಪ್ಪುಗಳು ನಿಲ್ಲುತ್ತವೆ.

ಮೊದಲನೆಯದಾಗಿ ಈ ಎಲ್ಲಾ ಹಕ್ಕುಗಳನ್ನು ಮಕ್ಕಳಿಗೆ ಸಂವಿಧಾನ ಈಗಾಗಲೇ ನೀಡಿದೆ. ಆದರೆ ಮಕ್ಕಳು ಚಿಕ್ಕವರು, ಅವರಿಗೆ ಅರಿವಿಲ್ಲ, ಎನ್ನುವ ಸಣ್ಣ ಸಣ್ಣ ಅಭಿಪ್ರಾಯಗಳನ್ನು ನಾವೇ ಕೊಟ್ಟು ಅವರ ಹಕ್ಕುಗಳನ್ನು ಮರೆಮಾಚುತ್ತಿದ್ದೇವೆ. ಆದರೆ ನಾವು ಅವುಗಳ ಕುರಿತು ಮಾಹಿತಿ ನೀಡುವುದು ನಮ್ಮ ಕರ್ತವ್ಯವಾಗಿದೆ. ಪುಸ್ತಕದ ಅಕ್ಷರಗಳ ಜೊತೆ ಜೊತೆಗೆ ನೈತಿಕ ಮೌಲ್ಯಗಳೆಂಬ ಕಾಗುಣಿತ ಸೇರಿದರೆ ಬದುಕು ಉತ್ತಮ ವಾಕ್ಯವಾಗುತ್ತದೆ. ಆದ್ದರಿಂದ ಈಗಿನ ಶಿಕ್ಷಣದಲ್ಲಿ ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವುದು ಬಹಳ ಮುಖ್ಯವಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಎಲ್ಲಾ ದುರ್ಘಟನೆಗಳಿಗೂ ನಮ್ಮ ಶಿಕ್ಷಣದಲ್ಲಿನ ಲೋಪ ದೋಷಗಳು ಕೂಡ ಒಂದು ಮುಖ್ಯ ಕಾರಣವಾಗಿದೆ ಎಂದರೆ ನಮಗೆ ಆಶ್ಚರ್ಯವಾಗುತ್ತದೆ. ಆದರೆ ಇದು ಸತ್ಯ. ನಾವು ಕೇವಲ ಪುಸ್ತಕದಲ್ಲಿನ ಜ್ಞಾನಕ್ಕೆ ಮಾತ್ರ ಮಹತ್ವ ನೀಡಿದ್ದೇವೆ. ಆದರೆ ನಿಜ ಜೀವನಕ್ಕೆ ಸ್ತಂಭಗಳಾಗಿ ನಿಲ್ಲುವ ನೈತಿಕ ಮೌಲ್ಯಗಳನ್ನು ನಾವು ಮರೆತೆ ಬಿಟ್ಟಿದ್ದೇವೆ. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಲೈಂಗಿಕ ದೌರ್ಜನ್ಯ, ಧರ್ಮಗಳ ನಡುವಿನ ಸಂಘರ್ಷ, ಜಾತಿ ಕಲಹ, ಹತ್ಯೆಗಳು, ಶೋಷಣೆ, ದಬ್ಬಾಳಿಕೆ, ಬಾಲಾಪರಾಧಗಳಂತ  ಘಟನೆಗಳಿಗೆ ನಾವು ಗಮನಹರಿಸದೆ ಬಿಟ್ಟಿರುವ ಈ ನೈತಿಕ ಮೌಲ್ಯಗಳ ಕೊರತೆಯೂ ಸಹ ಕಾರಣವಾಗಿರಬಹುದಲ್ಲವೇ?

ಹಾಗಾಗಿಯೇ ನಿಜವಾಗಿಯೂ ಈ ಎಲ್ಲಾ ಕೆಡಕುಗಳನ್ನು ಮಣಿಸಬೇಕಾದರೆ ನಮ್ಮ ಔಪಚಾರಿಕ ಶಿಕ್ಷಣದ ಜೊತೆ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವ ಅನಿವಾರ್ಯತೆ ಉಂಟಾಗಿದೆ. ಇಂತಹ ನೈತಿಕ ಮೌಲ್ಯಗಳನ್ನು ಯಾವುದೋ ಒಂದು ಧರ್ಮದ ಪ್ರಕಾರವಾಗಿ ನೋಡಿ ಅಂತಹ ಮೌಲ್ಯಗಳು ಶ್ರೇಷ್ಠ ಎಂದು ವಾದಿಸಿದರೆ ಅದರಂತಹ ದುರಂತ ಮತ್ತೊಂದಿಲ್ಲವಾಗುತ್ತದೆ. ನಿಜವಾದ ನೈತಿಕ ಮೌಲ್ಯಗಳನ್ನು ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶ ಕೊಟ್ಟಿರುವ ನಮ್ಮ ಸಂವಿಧಾನದ ನೆಲೆಗಟ್ಟಿನಲ್ಲಿ ಮಕ್ಕಳಿಗೆ ತಿಳಿಸಿದಾಗ ಅವುಗಳ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚುತ್ತದೆ. ಇಂತಹ ಮೌಲ್ಯಗಳು ಎಲ್ಲಾ ಮನುಜರ ಜೀವನ ಕ್ರಮವಾದಾಗ ನಿಜವಾಗಿಯೂ ದೇಶ ಸುಸ್ಥಿರತೆಯತ್ತ ಸಾಗಬಹುದಾಗಿದೆ.

ನಾವು ಸಂವಿಧಾನದ ನೆಲೆಗಟ್ಟು ಎಂದಾಕ್ಷಣ ಮೊದಲು ಹಿಂಜರಿಯುತ್ತೇವೆ, ದೂರಸರಿಯುತ್ತೇವೆ. ಏಕೆಂದರೆ ಸಂವಿಧಾನ ಎನ್ನುವ ದೊಡ್ಡ ಗ್ರಂಥವನ್ನು ನಾವು ಬಹು ದೂರದಲ್ಲಿಟ್ಟು ನೋಡುತ್ತಿದ್ದೇವೆ. ಅದನ್ನು ಕೇವಲ ವಕೀಲರು, ರಾಜಕಾರಣಿಗಳು, ಆರಕ್ಷಕರು, ಸೈನಿಕರು ಹೀಗೆ ಯಾರೆಲ್ಲಾ ಕಾನೂನಾತ್ಮಕ ಕೆಲಸಗಳನ್ನು ಮಾಡುತ್ತಿದ್ದಾರೆಯೋ ಅಂಥವರು ಮಾತ್ರ ಓದಿ ಅರ್ಥೈಸಿಕೊಳ್ಳಬೇಕು ಎನ್ನುವ ಚೌಕಟ್ಟನ್ನು ನಮಗೆ ನಾವೇ ಹಾಕಿಕೊಂಡಿದ್ದೇವೆ. ನಿಜ ಸ್ವರೂಪದಲ್ಲಿ ನೋಡುವುದಾದರೆ ನಾವೆಲ್ಲರೂ ದಿನನಿತ್ಯ ನಮ್ಮ ಜೀವನದಲ್ಲಿ ಸಂವಿಧಾನವನ್ನು ಬಳಕೆ ಮಾಡುತ್ತಲೇ ಬಂದಿದ್ದೇವೆ. ನಮಗರಿವಿಲ್ಲದೆಯೇ ನಮ್ಮ ಜೀವನ ಕ್ರಮವಾಗಿಸಿಕೊಂಡಿದ್ದೇವೆ. ನಾವೆಲ್ಲರೂ ಹೊಂದಿರುವ ನೈತಿಕ ಮೌಲ್ಯಗಳು ಸಂವಿಧಾನದ ಭಾಗಗಳೇ ಆಗಿವೆ.

ಧೈರ್ಯ, ಪ್ರಶ್ನಿಸುವ ಮನೋಭಾವ, ನೇರ ನುಡಿ, ಸಹಾನುಭೂತಿ, ಸಹಕಾರ, ಸಹಬಾಳ್ವೆ, ಸಮಾನತೆ, ಸಮತೆ, ಬಂಧುತ್ವ, ತಾಳ್ಮೆ, ಪ್ರಶಂಸಿಸುವ ಮನೋಭಾವ, ಇತರರ ತಪ್ಪನ್ನು ಹೇಳುವ ಹಾಗೂ ನಮ್ಮ ತಪ್ಪನ್ನು ಒಪ್ಪಿಕೊಳ್ಳುವ ಮನಸ್ಸು, ಛಲ, ದೃಢ ನಿರ್ಧಾರ, ಕರುಣೆ, ಸವಾಲು ಕಷ್ಟ ತೊಂದರೆಗಳನ್ನು ಎದುರಿಸುವ ಸಾಮರ್ಥ್ಯ, ಮುನ್ನುಗುವ ಸ್ಥೈರ್ಯಗಳಂತಹ ಎಲ್ಲಾ ನೈತಿಕ ಮೌಲ್ಯಗಳು ನಮ್ಮ ಶಿಕ್ಷಣದ ಭಾಗವಾಗಬೇಕಿದೆ.  ಈ ಮೌಲ್ಯಗಳನ್ನು ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ತಿಳಿಸಿದಾಗ ಅವರು ಜವಾಬ್ದಾರಿ ತೆಗೆದುಕೊಳ್ಳುವ ಸ್ಥಾನಕ್ಕೆ ತಲುಪಿದಾಗ ಧೈರ್ಯವಾಗಿ ನಿರ್ಧಾರಗಳನ್ನು ಮಾಡುತ್ತಾರೆ. ಇನ್ನು ಈ ಮಾನವೀಯ ಮೌಲ್ಯಗಳ ಜೊತೆ ಜೊತೆಗೆ ಒಂದಷ್ಟು ಜವಾಬ್ದಾರಿಗಳನ್ನು ನಿಭಾಯಿಸಬಲ್ಲ ಮೌಲ್ಯಗಳನ್ನು ಸಹ ತಿಳಿಸುವ ಅಗತ್ಯವಿದೆ. ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಸರಿ ತಪ್ಪುಗಳನ್ನು ಅಳೆದು ತೂಗುವ ವಿವೇಚನೆ, ಕಷ್ಟದ ಪರಿಸ್ಥಿತಿಯಲ್ಲಿ ಎದೆಗುಂದದೆ ಮುನ್ನುಗುವ ಬಲ, ಹಿಡಿದ ಕೆಲಸವನ್ನು ಬಿಡದೆ ಸಾಧಿಸುವ ಛಲ, ಅಪಾಯದ ಸಮಯದಲ್ಲಿ ಧೃತಿಗೆಡದೆ ಉಪಾಯದಿಂದ ಎದುರಿಸುವ ಮನ ಸ್ಥೈರ್ಯ, ಭವಿಷ್ಯದ ಬಗ್ಗೆ ಆಯ್ಕೆ ಮಾಡುವ ವಿವೇಕ ಈ ಎಲ್ಲವನ್ನು ಕಲಿಸುವ ವ್ಯವಸ್ಥೆ ಆಗಬೇಕಿದೆ. ಈ ಜವಾಬ್ದಾರಿ ಶಿಕ್ಷಣ ಹಾಗೂ ಸಮಾಜ (ಅಂದರೆ ಪೋಷಕರು) ಇಬ್ಬರ ಮೇಲೆಯೂ ಇದೆ. ಏಕೆಂದರೆ ಶಾಲೆ ಹೊರತುಪಡಿಸಿದರೆ ಮಕ್ಕಳು ಹೆಚ್ಚು ಸಮಯ ಕಳೆಯುವುದು ಮನೆಗಳಲ್ಲಿ, ಹಾಗಾಗಿ ಮನೆಯೇ ಮೊದಲ ಪಾಠಶಾಲೆಯಾಗಿ, ಶಿಕ್ಷಣ ಅದಕ್ಕೆ ಸಾಥ್ ನೀಡಿದಾಗ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ.

ಹುಟ್ಟಿದ ಪ್ರತಿ ಮಗುವೂ ದೇಶದ ಪ್ರಜೆಯಗಿರುತ್ತದೆ. ಇಂದಿನ ಮಕ್ಕಳು ಇಂದಿನ ಪ್ರಜೆಗಳೇ ಹೊರತು ನಾಳಿನ ಪ್ರಜೆಗಳಲ್ಲ ಎಂದು ಅರಿತು ಚಿಕ್ಕದಿನಿಂದಲೇ ಅವರಿಗೆ ಸಂವಿಧಾನಿಕ ನೆಲೆಗಟ್ಟಿನ ನೈತಿಕ ಮೌಲ್ಯಗಳನ್ನು ತಿಳಿಸಿದರೆ, ಅವರು ಜವಾಬ್ದಾರಿಯುತ ದಕ್ಷ ನಾಗರೀಕರಾಗಿ ಬೆಳೆಯುತ್ತಾರೆ. ಇದರಿಂದ ಇಂದು ದೇಶದಲ್ಲಿ ಆಗುತ್ತಿರುವ ಹಲವು ರೀತಿಯ ಕೆಟ್ಟ ಕಾರ್ಯಗಳನ್ನು ಮುಂದೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬಹುದಾಗಿದೆ. ಮಕ್ಕಳ ಮಾನಸಿಕ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ತ್ಯವನ್ನೂ ಸಹ ಈ ನೈತಿಕ ಮೌಲ್ಯಗಳು ಕಾಪಾಡುತ್ತವೆ. ಹಾಗಾಗಿ ಇಂತಹ ಮೌಲ್ಯಗಳು ಮನೆಗಳಲ್ಲಿ ಮಾತ್ರವಲ್ಲದೆ ಶಿಕ್ಷಣದಲ್ಲಿಯೂ ಬೇರೂರಬೇಕಿದೆ.

ಚಂದಾದಾರರಾಗಿ
ವಿಭಾಗ
3 ಪ್ರತಿಕ್ರಿಯೆಗಳು
Inline Feedbacks
View all comments
wincasinoapp
6 January 2026 04:34

A Win Casino App? Sweet! A good casino app is essential if you want to play casino games anytime and anywhere. Here the casino game wincasinoapp.

jilliasia
31 December 2025 22:00

Jilliasia’s always a good time after a long day. Simple pleasures. Check it out right here: jilliasia.

golo789gamedownload
21 December 2025 05:33

golo789gamedownload, finally! Easy to download, and the game runs smooth. Recommend if you are into that game. Play it at golo789gamedownload.

0
    0
    Your Cart
    Your cart is emptyReturn to Shop