ಇನ್ನೇನು ಜೂನ್ ತಿಂಗಳು
ಬರುವ ಹೊತ್ತು,
ಕಾದು ಹಂಚಾದ ಭೂವಿಗೆ
ತಂಪೆರೆಯಲು,
ಇಳೆಗೆ ಹಸಿರ ಕಳೆ ಕಟ್ಟಲು
ಮಳೆ ಬರಬೇಕು.
ವಂಡರಲಾದಂತಹ ನಿಂತ ನೀರಲ್ಲೆ
ಬಿದ್ದು ಒದ್ದಾಡುವ
ಕೃತಕ ಮಳೆಯಲ್ಲಿ ಮಿಂದು
ಶೋಕಿಮಾಡುವವರಿಗೆ
ಪ್ರಕೃತಿಯಲ್ಲಿ ತೋಯ್ದು
ಮನಸ್ಸು ಹಗುರಾಗಲು
ಮಳೆ ಬರಬೇಕು.
ಮೊನ್ನೆ ಪರಿಸರ ದಿನ ನೆಟ್ಟ ಗಿಡಕ್ಕೆ
ನೀರು ಹಾಕದೆ ಒಣಗುತ್ತಿದೆ
ಅದಕ್ಕೆ ನೀರುಣಿಸಲು,
ಮನೆಯ ಮುಂದಿನ ಗಟಾರವು ಕಳೆತು
ನಾರುವ ವಾಸನೆ ಹೋಗಲು
ಮಳೆ ಬರಬೇಕು.
ಅತಿ ಜಾಣ ಮನುಜ ಅತಿಕ್ರಮಿಸಿದ
ಅರಣ್ಯಭೂಮಿಯಲ್ಲಿ ಫಸಲು
ಬೆಳೆಯಲು,
ಜಲಮೂಲಗಳ ಮರಳನ್ನು ಲೂಟಿ
ಮಾಡಿದ ಜನರಿಗೆ
ತನ್ನ ಜಾಗವನ್ನು ತೋರಿಸಲು,
ಪ್ರವಾಹವಾಗಿ ಉಕ್ಕಿ ಬರಲು
ಮಳೆ ಬರಬೇಕು.
ಮಳೆ ಬರಲೇಬೇಕು
ಮನುಕುಲಕ್ಕೆ ಪಾಠ ಕಲಿಸಲು,
ಕಾಡು ರಕ್ಷಿಸಲು,
ಜೀವಸಂಕುಲ ಉಳಿಯಲು,ಬದುಕಲು,
ಆಗಾಗ್ಗೆ
ಮಳೆ ಬರಬೇಕು.