ನೀರ ಮೇಲಿನ ಗುಳ್ಳೆಯಂತಿನ ಬದುಕಿನಲಿ
ನಿನ್ನ ಸ್ವಾರ್ಥಕ್ಕಾಗಿ ಕಾಡುಗಳ ನಾಶ ಮಾಡಿ
ದೊಡ್ಡ ದೊಡ್ಡ ಕಟ್ಟಡ, ಅಣೆಕಟ್ಟು, ಬಂಗಲೆಗಳಲಿ
ಸುಖವಾಗಿ ಜೀವಿಸಲು ಸಾಧ್ಯವೇ ಮನುಜ?!
ಕಾಡಿನಿಂದಲೇ ಉಸಿರು, ಕಾಡಿನಿಂದಲೇ ಹಸಿರು
ಸಸ್ಯ ಸಂಪತ್ತುಗಳ ನೆಟ್ಟು ಹಸಿರನ್ನು ಉಳಿಸಿ ಬೆಳೆಸು
ಕಾಡಿನಿಂದಲೇ ಸಕಲ ಜೀವಿಗಳ ಉಳಿವು
ನಿನಗಿಲ್ಲವೇ ಇದರ ಅರಿವು ಮನುಜ?!
ನಾಶವಾಗುತಿಹುದು ವನ್ಯ ಜೀವಿ ಸಂಕುಲಗಳು
ಶಿಥಿಲಗೊಳ್ಳುತಿಹುದು ಜೀವ ಜಲದ ಆಗರಗಳು
ಕಾಲಕ್ಕೆ ತಕ್ಕಂತೆ ಮಳೆ ಇಲ್ಲ ಬೆಳೆ ಇಲ್ಲ
ಈ ರೀತಿಯಾದರೆ ನಿನಗೆ ಉಳಿವಿದೆಯೇ ಮನುಜ?!
ನಿನ್ನ ಸ್ವಾರ್ಥ ಸಾಧನೆಗಾಗಿ ಪ್ರಕೃತಿಯೊಡಲ ಕೊಂದೆ
ಶುದ್ಧ ಗಾಳಿ, ನೀರು, ಪರಿಸರಕೆ ಸಂಚಕಾರ ತಂದೆ
ಬಿಸಿಲ ಬೇಗೆಗೆ ನಿತ್ಯವೂ ಪರಿತಪಿಸುತಿದೆ ಭೂಮಿ
ಕಾಡು ಮೃಗಗಳಿಗಿಂತಲೂ ನೀನು ಕ್ರೂರಿಯಾದೆಯಾ ಮನುಜ?!
ಹಸಿವಾದಾಗ ಮಾತ್ರ ಬೇಟೆಯಾಡುವವು ಮೃಗಗಳು
ನಿನ್ನ ಬೇಟೆಗೆ ತತ್ತರಿಸಿ ಹೋಗಿವೆ ಸಾಧು ಪ್ರಾಣಿಗಳು
ಆಹಾರ ಸರಪಳಿಗೆ ಹೀಗೆ ಸಂಚಕಾರ ತಂದೊಡ್ಡಿದರೆ
ನೀ ಮುಂದೆ ನೆಮ್ಮದಿಯಾಗಿ ಬಾಳಲು ಸಾಧ್ಯವೇ ಮನುಜ?!