ಎನ್ ಆರ್ ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಅವರು ಬರೆದ ಕವಿತೆ ‘ಸಂಕರ’

ಉರಿಗಟ್ಟದಿದು ಪ್ರೇಮ
ಉರಿಗೊಳಿಸುವ ತನಕ
ಬರೀ ಭ್ರಾಂತು, ನಿಸ್ತಂತು
ಅಗೋಚರವಿದು ಭಾವ ತಂತು
ಮನಃಪಟಲದಿ ಹಂಚಿ ಅರಡಿದುದು
ನೂರ್ಮಡಿಯಾಗುತ್ತಲೇ ಇದೆ ಬಂಧ.

ಉಸಿರಿಗುಸಿರು ತಾಗಿ ಸಲ್ಲಾಪದಾಟ
ಈ ವಿರಾಮದಲಿ ಗಂಧರ್ವರ ಬೀಡಿಗೆ
ಕ್ಷಣ ಕಳೆದು ಹೋಗಬೇಕಿದೆ
ವಿಳಾಸ ಪತ್ತೆ ಮಾಡುವುದಿದ್ದಲ್ಲಿ
ಮೂಡಣದಿ ರಂಗೇರುವಲ್ಲಿ ಕ್ಷಣ ಕಾಯಬೇಕಿದೆ.

ಮರಳ ದಂಡೆಯ ನುಣುಪಿನ ಮೇಲೆ
ನೆನಪುಗಳ ಸಾಲು ಸಾಲು
ಮೂಡಿದ ಹೆಜ್ಜೆಗಳ ರಂಗವಲ್ಲಿ
ಅಲೆಗಳ ಅಳಿಸುವಾಟದಲಿ
ತುಸು ಬಿಮ್ಮನೆ ಸವಿಸಬೇಕಿದೆ ದಂಡೆಯನು

ಕೊನೆಯ ತಾವನು ಬಯಸಿಯೇ ಬಂದುದು
ಸೇರಬೇಕಿದೆ ಈ ಸಾಗರದೊಡಲ
ವ್ಯಕ್ತ ರಂಗಿನ ಓಕಳಿಯಾಟ ನಿಲ್ಲಿಸಬೇಕಿತ್ತು
ಇನ್ನು ಉರಿಗೊಳಿಸುವ ತವಕ ಗಾಳಿಯಲ್ಲಿ ಸಡಿಲ ಸಡಿಲ
ಸೂತ್ರವಿರದೆ ಬಯಲಿಗೆ ಬಿಟ್ಟಂತೆ ಗಾಳಿಪಟ!

ಹಿಮ್ಮುಖ ದಾರಿಯಲಿ ಎಲ್ಲವೂ ಹೊಸ ಚಿತ್ರ!
ಮರಳ ಕನ್ನಡಿಯಲ್ಲಿ ನೆನಪುಗಳ ಪ್ರತಿಫಲನ?
ಗಾಳಿಪಟವ ಸೂತ್ರ ಹಿಡಿದಿತ್ತು.
ದಣಿವಾಗದ ಅಲೆಗಳ ತೆರೆ ತೆರೆಗಳಾಟ
ಬೆಸೆದ ಸಿಕ್ಕುಗಳು ಸಡಿಲ ಸಡಿಲ.

ಸಾಗರಕ್ಕೆ, ವಂದನೆ ಹೇಳುವುದಿದೆ
ಇನ್ನೂ ಸವೆಸಬೇಕಿರುವ ದಾರಿಯಲ್ಲಿ.
ದಿಗಂತದಂಚಿನಿಂದ ಬರುತ್ತಲಿದೆ
ಪ್ರೀತಿ ತುಂಬಿದ ತೆಪ್ಪ ತೇಲಿ ತೇಲಿ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop