ಒಲವೆಂದರೆ ಹಾಗೆ…
ಅರಳಿ ನಗುವ ಮೋಹಕ ಗುಲಾಬಿಯಂತೆ
ತನ್ನ ಬಣ್ಣ ಮೃದು ದಳಗಳಿಂದಲೇ ಚಿತ್ತವ ಸೆಳೆಯುವಂತೆ,
ಪ್ರೀತಿಯ ರಂಗು ಎಲ್ಲರ ಆಕರ್ಷಿಸುತ್ತದೆ.
ಒಮ್ಮೊಮ್ಮೆ ಮುಳ್ಳಿನಿಂದ ಚುಚ್ಚಿ ಸಹಿಸಲಾಗದ ವೇದನೆಯ ನೀಡುತ್ತದೆ.
ಒಲವೆಂದರೆ ಹಾಗೆ ಬೆಳದಿಂಗಳ ಕಾಂತಿಯಂತೆ
ತಣ್ಣನೆಯ ಮಧುರ ಸ್ಪರ್ಶದಿಂದ ಮನವ ಸೋಲಿಸುತ್ತದೆ
ಬೆರಗಾಗಿ ಅದರ ಬೆನ್ನತ್ತಿ ಬಿಡದೆ
ಹಿಂಬಾಲಿಸಿದರೆ ಕ್ಷಣದಲ್ಲಿ ಮಾಯವಾಗಿ
ಅಂಧಕಾರ ಆವರಿಸಿಬಿಡುತ್ತದೆ.
ಒಲವೆಂದರೆ ಹಾಗೆ ಹೇಳದೆ ಕೇಳದೆ ಬರುವ ವರ್ಷಧಾರೆಯಂತೆ
ಮೆಲ್ಲನೆ ಧರೆಯೆದೆಯೊಳಗಿಳಿದು ಪ್ರೀತಿಯ ಲತೆ ಚಿಗುರುವಂತೆ,
ಒಲವ ಸಿಂಚನಕೆ ಮನದಿ ಪ್ರೀತಿಯ ಚಿಗುರು ಹೆಮ್ಮರವಾಗಿ ಬಿಟ್ಟಿರುತ್ತದೆ.
ಒಮ್ಮೊಮ್ಮೆ ಗುಡುಗು ಸಿಡಿಲು ಮಿಂಚಿನ ಆರ್ಭಟಗಳ ಮಧ್ಯೆ
ಬಿರುಗಾಳಿ ಬೀಸಿ ಪ್ರವಾಹ ತಂದು ಎಲ್ಲವನ್ನು ಮುಳುಗಿಸಿ ಬಿಡುತ್ತದೆ.
ಒಲವೆಂದರೆ ಹಾಗೆ
ಆಸೆ ಕನಸುಗಳ ಗೋಪುರ ಮುಗಿಲೆತ್ತರ .
ನನಸಾದರೆ ಬಾಳು ಹೂವಿನ ಹಂದರ
ಅಪ್ಪಿತಪ್ಪಿ ಏನಾದರೂ ಕನಸು ಕುಸಿದರೆ ಬಾಳು ಶೋಕ ಸಾಗರ
ಒಲವೆಂದರೆ ಹಾಗೆ
ಕಡಲ ತೀರದ ಮುಂಜಾವು ಮುಸ್ಸಂಜೆಗೆ
ರವಿ ಬರೆಯುವ ಚಿತ್ತಾರದ ರಮ್ಯ ನೋಟಗಳ ವಿಸ್ಮಯಗಳ ಆಗರ
ಹಿಡಿತ ತಪ್ಪಿದರೆ ಉಕ್ಕೇರಿ
ಬಂದು ಭೋರ್ಗರೆದು ನಾಶಗೈವ ಸುನಾಮಿಯಷ್ಟೇ ಭೀಕರ
ಒಲವೆಂದರೆ ಹಾಗೆ ಗಗನದಿ ಹಾರುವ ಹಕ್ಕಿಯ ಮನದಂತೆ
ದಿಕ್ಕು ತಪ್ಪಿದರೆ ಮರಳಿ ಗೂಡು ಸಿಗದೆ
ಮೂಖ ವೇದನೆ ಮುಗಿಲ ಮುಟ್ಟುವುದು.
ಒಲವೆಂದರೆ ಹೀಗೆ
ನಿಲುಕದ ನಕ್ಷತ್ರ ಧರೆಗಿಳಿದು ಬಂದು ಕೈಯಲ್ಲಿ ಮಿನುಗಿದಂತೆ
ಸೂತಕದ ಶೋಕ ಸಾಗರದ ನಡುವೆ ಭರವಸೆಯ ಹಣತೆ ಬೆಳಗಿದಂತೆ
ಲೋಕದ ಜಂಜಾಟಗಳ ಮರೆಸುವ ಸುಮಧುರ ಸಂಗೀತದಂತೆ
ಹಸಿದಾಗ ತುಸು ಅನ್ನ ಸಿಕ್ಕಿದವರು ಸುರಿಸುವ ಆನಂದ ಭಾಷ್ಪದಂತೆ
ಅಗೋಚರ ಅನೂಹ್ಯ ಅಗಮ್ಯ ಅನಂತ ಈ ಒಲವು
ಪರಸ್ಪರ ಅರಿತು ಬೆರೆತ ಸುಮಧುರ ಬಂಧವದು
ಹೂವಿನೊಳಗಿನ ಗಂಧದಂತೆ ಹಣ್ಣಿನೊಳಗಿನ ಸವಿಯಂತೆ
ಕಾವ್ಯದೊಳಗಿನ ರಾಗದಂತೆ
ಬಿಡಿಸಲಾಗದ ನಂಟಾಗಬೇಕು
ಅರಿಯದಿರೆ ಬೆರೆಯದಿರೆ ಇದಕ್ಕಿಲ್ಲ ಯಾವ ಅರ್ಥವು.