ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ಅಪ್ಪ ಅಳುತ್ತಿದ್ದ!’

 

ಅವ್ವ ಯಾವಾಗಲೂ ಹೇಳುತ್ತಿದ್ದಳು :
“ನಿನ್ನಪ್ಪ ಸೊರಗಿದ್ದಾನೆ; ಕಾಡಬೇಡ ಮಗನೇ!”
ನನಗದು ಅರ್ಥವಾಗಲಿಲ್ಲ,
ಆತ ಬದುಕಿರುವವರೆಗೂ !

ಖರ್ಚಿಗೆ ಕಾಸು ಬೇಕಾದಾಗಲೆಲ್ಲಾ
ಆತನೆದೆರು ಗೋಳಿಡುತ್ತಿದ್ದೆ;
ಪರೀಕ್ಷೆ, ಫೀಸು, ನೆಪವೊಡ್ಡುತ್ತಿದ್ದೆ !
ಮುಗ್ಧ; ಇತ್ತ ಹೋಗಿ ಅತ್ತ ಬಂದು
ಹಣವ ಕಿಸಿಯೊಳಿಡುತ್ತಿದ್ದ !

ಹಣವೆಲ್ಲಿಂದ ಬಂತು ಅಪ್ಪನಿಗೆ ?
ಅದರ ಯೋಚನೆ ನನಗಿರಲಿಲ್ಲ;
ವೆಚ್ಚಕ್ಕೆ ಹಣ ಸಿಕ್ಕಿತಲ್ಲ ? ಖುಷಿ;
ದುಡ್ಡಿನ ಬೆಲೆ ತಿಳಿಯಲಿಲ್ಲ !

ಅಪ್ಪ ಅಳುತ್ತಿದ್ದ ಆಗಾಗ,
ಕಾರಣವೇನೋ ?
ತಿಳಿದುಕೊಳ್ಳುವ ಸಂಯಮ
ಆ ಕ್ಷಣ ನನಗಿರಲಿಲ್ಲ !

“ದುಡಿಯುತ್ತಾನೆ; ದಣಿಯುತ್ತಾನೆ
ಕೈಜೋಡಿಸು ಮಗನೇ” – ಅವ್ವ
ಎಷ್ಟು ಹೇಳಿದರೂ ಕೇಳಲಿಲ್ಲ.

ಇಂದು ಅಪ್ಪನ ಕೈ ಸೋತಿದೆ
ಹೊಣೆಗಾರಿಕೆ ನನ್ನ ಹೆಗಲೇರಿದೆ
ನಾನೀಗ ದುಡಿಯಲೇಬೇಕು;
ಅನಿವಾರ್ಯ !

ಹಿಂದೆ ಅವ್ವನ ಮಾತಿಗೆ ಕಿವಿಗೊಟ್ಟಿದ್ದರೆ,
ಇಂದು ಅಪ್ಪ ನನ್ನ ಜೊತೆಯಲ್ಲೇ
ಇರುತ್ತಿದ್ದನೇನೋ ? ಈಗಿಲ್ಲ !

ನನ್ನ ದುಡಿಯುವ ಕೈಗಳ ಕಂಡೊಡನೆ,
ಬಹುಶಃ ಆತನ ಸಡಗರಕ್ಕೆ, ಸಂಭ್ರಮಕೆ
ಕೊನೆಯೇ ಇರುತ್ತಿರಲಿಲ್ಲ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop