ಕೆ.ಮಹಾಲಿಂಗಯ್ಯ ಅವರು ಬರೆದ ಕವಿತೆ ‘ಮರೆಯೋಣ ಕೆಡುಕು’

ಕೊರಗುವುದು ಏಕೋ ಪ್ರೀತಿಯ ಗೆಳೆಯ
ಸಂಕಷ್ಟದಿಂದ ನೋಯುವುದು ಹೃದಯ!

ನಾವಂದು ಕೊಂಡಂತೆ ಆಗಿಲ್ಲ  ಎಂದು
ನರಳುವುದು ಏಕೆ ಅರಿಯೋ ಬಂಧು
ದೈವದ ನಿಯಮ ಮೀರಲಹುದೆ ನಾವು
ತಾಳ್ಮೆಯಿಂದೆಲ್ಲ ಮರಿಬೇಕು ನೋವು!

ಅಸಹನೆ ಸಿಟ್ಟು ಒಳಿತಲ್ಲ ನಮಗೆ
ಶಾಂತಿ ಸಹನೆ ಇರಬೇಕು ದೊರೆಗೆ
ಸಿಟ್ಟಿಗೆ ಒಳಗಾಗಿ ಮಾಡಿದರೆ ಜಂಭ
ಕುದಿವ ನೀರಲ್ಲಿ ಕಾಣಿಸದು ಬಿಂಬ!

ಕೋಪ ತಾಪ ತರವಲ್ಲ ಗೆಳೆಯ
ತಿಳಿದಿರು ಪಾಪ ಕೂಪದ ವಿಷಯ
ಸಿಟ್ಟು ಜ್ವಾಲೆ ದೂರವಿರು ಮೂಢ
ದುರುಳರ ಸ್ನೇಹ ಬೆಂಕಿಯ ಕೆಂಡ!

ಸಹನೆ ಸೌಹಾರ್ದ ಬದುಕಿಗೆ ಬೆಳಕು
ದುಷ್ಟರ ಸಹವಾಸ ಜೀವನ ಕೊಳಕು
ಸಜ್ಜನರ ಒಡನಾಟ ಸಂತೃಪ್ತಿ ಬದುಕು
ಆನಂದದಿಂದ ಮರೆಯೋಣ ಕೆಡುಕು!

-ಕೆ.ಮಹಾಲಿಂಗಯ್ಯ
ನಿವೃತ್ತ ಕನ್ನಡ ಅಧ್ಯಾಪಕ, ದೊಡ್ಡಬಳ್ಳಾಪುರ.

0
    0
    Your Cart
    Your cart is emptyReturn to Shop