ಕವಿತೆಯೆಂದರೆ;
ಮುಂಜಾನೆ ಕಿಟಕಿಯ ತೂರಿ,
ಗಲ್ಲಕ್ಕೆ ಮೆಲ್ಲನೆ ಮುತ್ತಿಡುವ
ಶರತ್ಕಾಲದ ಗಾಳಿ.
ಕವಿತೆಯೆಂದರೆ;
ಮುಗಿಲಾಳದ ಹನಿಸಿಡಿದು, ಹಠಾತ್ತನೆ
ಇಳೆಗೊಲಿದು, ಶುಭ್ರ ಮಜ್ಜನಗೈಯ್ಯುವ
ವಸಂತದ ಭೋರ್ಮಳೆ.
ಕವಿತೆಯೆಂದರೆ;
ಎಳೆ ಕಿರಣಗಳ ಹಿತವುಣಿಸಿ,
ನಡುಹಗಲಿನಲ್ಲೇ ನೆತ್ತಿ ಸುಡಲಿಡುವ
ಬೇಸಗೆಯ ಉರಿ
ಕವಿತೆಯೆಂದರೆ;
ಮುಗ್ಗರಿಸಿದ ಮುಗ್ಧ ಮನಸ್ಸಿಗೆ
ಸಾಂತ್ವನದ ಹೆಗಲಾಗಿ, ಬಳಿಸರಿಯುವ
ಕಡಲಿನ ಅಲೆ.
ಕವಿತೆಯೆಂದರೆ;
ನಿದ್ದೆಗೆಟ್ಟ ಕಂಗಳಿಗೆ
ಜೋ ಎನುತ, ಮಡಿಲಾಗುವ
ಹುಣ್ಣಿಮೆಯ ಶಶಿ.
ಕವಿತೆಯೆಂದರೆ;
ಕವಿಯೆದೆಯೊಳಗೆ, ಬೆತ್ತಲಾಗಿದ್ದ ಅಕ್ಷರಗಳು
ಹೊರಬಿದ್ದು, ತೊಟ್ಟುಕೊಂಡ ಬಗೆಬಗೆಯ
ಭಾವನೆಗಳ ಅಂಗಿ.
ಕವಿತೆಯೆಂದರೆ
ಅರ್ಥಗಳೊಳಗೆ ಅಡಗಿರುವ ಗೊಂದಲಗಳು!
ಗೊಂದಲಗಳೆಡೆಯಿಂದಲೇ ಪ್ರಜ್ವಲಿಸಿ, ಜಗದ
ಕಣ್ತೆರೆಸುವ ಜ್ಯೋತಿ.