ಪ್ರಭುತ್ವದ ಕಾಲದಲ್ಲಿತ್ತು ನನಗೆ ವೈಭವ
ಮಳೆ ಸುರಿದು ಉಕ್ಕುತ್ತಿತ್ತು ನನ್ನ ಒಡಲು
ಶುದ್ಧವಾಗಿ ನಾನು ಎಲ್ಲರ ಮನೇಸೇರುತ್ತಿದ್ದೆ
ಊರಿನ ಆರೋಗ್ಯದ ಮೂಲವಾಗಿದ್ದೆ.
ದೇವಳದ ಮುಂದೆ ನಾ ನಳನಳಿಸುತ್ತಿದ್ದೆ
ದಿನವೂ ಲಿಂಗಾಭಿಷೇಕ ನನ್ನೊಡಲ ಜಲದಿಂದ
ಮುಡಿಯಿಂದ ಅಡಿ ಸೇರಿ ಪಾವನವಾಗುತ್ತಿದ್ದೆ
ಮಂದಿರ, ಪ್ರಾಂಗಣ ಸುಚಿಗೊಳಿಸುತ್ತಿದ್ದೇ.
ನನ್ನಿಂದಲೇ ನಡೆಯುತ್ತಿತ್ತು ಊರ ಹಬ್ಬ
ಪೂಜೆ ಪಡೆಯುತ್ತಿದ್ದೆ ,ಹೂಮಳೆ ಹೊದಿಕೆಯಿಂದ
ರಾಜ- ಮಹಾರಾಜರು ನನ್ನಲ್ಲಿಳಿದು ಮಿಂದು
ತಲೆಗೊತ್ತಿಕೊಂಡು ಪಾವನವೆಂದು ಕರ ಜೋಡಿಸುತ್ತಿದ್ದರು!
ನನ್ನ ಬದುಕಾಯಿತಿಂದು ರೋಗಗ್ರಸ್ತ
ಪ್ರಜಾಪ್ರಭುತ್ವದಲ್ಲಿ ನಾ ಯಾರಿಗೂ ಮುಖ್ಯವಲ್ಲ
ನಾನಾಗಿದ್ದೇನೆ ಊರ ಕಲ್ಮಶಗಳ ತೊಟ್ಟಿ
ಮಡಿಯ ಗರತಿ ನಾ ಇಂದು ಬರಿ ಮೈಲಿಗೆ!
ನನ್ನತ್ತ ಸುಳಿಯರು ಯಾರು ಇಂದು
ಕ್ರಿಮಿಕೀಟ ,ವಿಷ ಜಂತುಗಳ ಒಡಲಿಗಿರಿಸಿದರು
ವೈಭವ ಮುರಿದು ,ನನ್ನ ವಿಧವೇ ಮಾಡಿದರು
ಆಧುನಿಕ ಮಾನವರು ,ನನ್ನಲ್ಲಿ ಕೊಳಚೆ ತುಂಬಿದರು
ಇಂದು ನಾನಾಗುತಿಯೆ ಊರ ರೋಗದ ಮೂಲ
ವಾಸನೆಯಿಂದ ಬಳಲುತ್ತಿಹೆ ಕೇಳಿರೆನ್ನ ನೋವಾ
ಈಜುವ ಮಕ್ಕಳ ಕಿತ್ತುಕೊಂಡಿರಿ ನೀವು
ನನ್ನ ವೈಭವವನ್ನು ಕಳಚಿದಿರಿ ನೀವು!
ಇಂದು ನನ್ನಿಂದ ಓಡುತ್ತಿರುವಿರಿ ದೂರ
ನೀವು ಮಾಡಿದ್ದೆ ಅಲ್ಲವೇ ಈ ಘನ -ಘೋರ
ನಿಮ್ಮ ಸಾಕಿದ ನನಗೆಕೆ ಈ ಶಿಕ್ಷೆ
ಓ ಮಾನವರೇ ನಾನಿಂದು ನಿಮಗೆ ಬೇಡವಾದೆನೆ.