ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕವಿತೆ ‘ಕಲ್ಲು ಹಾದಿ’

ಎಲ್ಲೋ ಒಂದು ಕಡೆ
ಗಟ್ಟಿಯಾಗಿ ನೆಲೆಯೂರಿದ್ದೆ
ಸಿಡಿಮದ್ದುಗಳ ಸಿಡಿಸಿ
ತುಂಡಾಗಿಸಿದರು

ಯಂತ್ರಗಳ ನಡುವೆ ಸಿಕ್ಕು
ಸಮತಟ್ಟಾದೆ
ನಾಜೂಕುತನದಿ ಮನೆ,
ಮಠ,ಮಸೀದಿಗಳ ನೆಲಹೊಕ್ಕಿದೆ

ಮತ್ತಷ್ಟು ತುಂಡುಗಳು
ಉಳಿಯ ಅಳತೆಯೊಳಗೆ
ಊಳಿಗಕೆ ಬಿದ್ದು
ಕಲಾಕೃತಿಗಳಾದವು

ಕಪ್ಪು,ಬಿಳಿ,ಕಂದು ಬಣ್ಣಗಳ
ಜಾಡಿನಲಿ ಶಿಲೆಯಾಗಿ
ಮೂರ್ತಿಯಾಗಿ
ಗುಡಿಗಳಲಿ ರಾರಾಜಿಸಿದೆ

ಜಾತಿ, ಧರ್ಮ,ಮತವೆಂದು
ಹಿಂದೆ ಸರಿಯದೆ
ಸದ್ದಿಲ್ಲದೆ ಸರ್ವಧರ್ಮಕೂ
ಸಲ್ಲಿದೆ

ಲಿಂಗಭೇದ ಎನಗಿತ್ತೇ…?
ಧರ್ಮದ ಆಸರೆ ಎನಗಿತ್ತೇ…?
ಗುಡಿಸೇರಿ ಮಡಿಯಾದೆ
ಮಂಟಪಕೆ ಆಸರೆಯಾದೆ

ನಿರ್ಜೀವದ ಪದರಕೆ
ಪೂಜೆ,ಗೌರವ ಪಡೆದೆ
ಲಿಂಗ, ವರ್ಣಗಳಲ್ಲಿ ಬೆರೆತು
ಸೆರೆಯಾದೆ

ಧರೆಯ ಗಟ್ಟಿಗೆ ನಾನೇ ಜಟ್ಟಿ
ಆದರೇಕೋ ಮಾತಿನೊಳಗೆ
ಎಲ್ಲಾ ಲೊಳಲೊಟ್ಟೆ
ಧರೆ ಜಾರಲಿದೆ ಮೆತ್ತಗೆ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop