ಎನ್ ನಂಜುಂಡಸ್ವಾಮಿ ಅವರು ಬರೆದ ಕವಿತೆ ‘ಹೀಗೊಂದು ಪಶ್ಚಾತಾಪ’

ಭ್ರಮಾಧೀನ ಕನಸುಗಳ ಬೆನ್ನೇರಿ
ಹೊರಟ ಆ ದಿನಗಳ ಸಂಭ್ರಮವೇನು?
ಜಗವನೆ ಜಯಿಸಬಲ್ಲೆನೆಂಬ ಕೆಟ್ಟ ಆತ್ಮವಿಶ್ವಾಸದಲಿ
ಹೊರಟು ಸಿಕ್ಕದಾರಿಯಲಿ ನೂಕಿ ತಳ್ಳಿದ
ಪುರಾತನ ಯುಗದ ಕಲ್ಲುಗಳೆಷ್ಟು?
ಕಲ್ಲೇಕೆ ಬೆಂಕಿಯನೂ ನುಂಗಿ ಕಲ್ಲನೂ ಅಗಿದು
ಓಡುವೆನೆಂಬ ಪ್ರಾಯದ ಅಮಲು ಕುದುರೆಯನು
ಚಾಟಿಯಿಂದ ಹೊಡೆದು ನಿಲ್ಲಿಸಲು ಪ್ರಯತ್ನಿಸಿದರೂ
ಸಿಗಲಿಲ್ಲ ಕಡಿವಾಣ.
ಹೇಳುತ್ತಿದ್ದೆ ಅಂದು ನಾ ಅಹಂ ಬ್ರಹ್ಮಾಸ್ಮಿ !

ಸಿಗದಿದ್ದಕ್ಕಲ್ಲವೆ ಹುಚ್ಚಾಗಿ ಓಡಿ ಒಂದೆಡೆ
ಜಾರಿ ಬಿದ್ದದ್ದು?
ಬಿದ್ದರೂ ಜಟ್ಟಿಯ ಗಾದೆಯಂತೆ
ಆತ್ಮವಿಶ್ವಾಸಕ್ಕೆ ಬಿತ್ತಲ್ಲ ಮರ್ಮಾಘಾತ !
ಅತಿ ವಿಶ್ವಾಸದ ಅಮಲಿನಲಿ
ಕಣ್ಣಿಗೇಕೆ ಕಾಣದಾಯ್ತು ಕಲ್ಲು ಮುಳ್ಳು ಒರಟು ನೆಲ?
ಕಟು ಕಹಿ ವಾಸ್ತವದ ಅರಿವಾದೊಡನೆ
ಅಹಂನ ತಳಪಾಯ ಕುಸಿಯಿತಲ್ಲ.

ಜ್ವಾಲಾಮುಖಿಯ ಬೆಟ್ಟವ ಹೊತ್ತೇ
ತೆವಳುತಿರುವೆ ಇನ್ನಾದರೂ ಸಿಡಿದು ಶಾಂತವಾಗಲೆಂದು.
ಸಿಡಿಯಲು ಆರೆ, ಹೊರಲು ಆರೆ
ಸಿಗಬಹುದೇ ನನಗೊಬ್ಬ ಗುರು ?
ಇಳಿಸಬಹುದೇ ನನ್ನ ತಲೆಯ ಭಾರ ?
ಕನಸುತ್ತಿರುವೆ ಬೀಳುವ ಒರಟು ನೆಲಕೆ ಮಳೆ !
ಬೀಳಬಹುದೇ ಮಂತ್ರಕೆ ಮಾವಿನ ಕಾಯಿ !

0
    0
    Your Cart
    Your cart is emptyReturn to Shop