ಮೀಟರ್ ತಿರುಗಿಸುತ್ತ
ಆಟೋದವನು ಕೇಳುತ್ತಾನೆ
ಯಾವ ಕಡೆಗೆ ಹೋಗಬೇಕು ಹೇಳಿ
ಸೈಡ್ ಮಿರರ್ ಸರಿಪಡಿಸಿಕೊಳ್ಳುತ್ತ
ಕಿಕ್ ಹೊಡೆದು ಓಡಿಸುತ್ತಾನೆ
ಗ್ರಾಹಕರನ್ನು ಗಮನಿಸುತ್ತ.
ಓಟಿಪಿ ಪಡೆದ
ವೋಲ್ವೊ ಆಟೋದವನು
ಹತ್ತಿ ಕೂತಿದ್ದೇ ತಡ
ಕಿಕ್ ಹೊಡೆದು ಚಾಲನೆ ಕೊಡುತ್ತಾನೆ
ಗೂಗಲ್ ಮ್ಯಾಪ್ ಹಾಕಿಕೊಂಡು
ಇಲ್ಲೂ ಕನ್ನಡಿಯಲ್ಲಿ
ಗ್ರಾಹಕರನ್ನು ಗಮನಿಸುತ್ತ.
ಕೂತವನ ಗಮನ ಪೂರಾ
ಮೊಬೈಲಿನಲ್ಲಿ
ಖಾತ್ರಿ ಪಡಿಸಿಕೊಂಡವನು
ಆನೆ ಸಾಗಿದ್ದೇ ದಾರಿ
ಬರ್ರನೆ ಓಡಿಸುತ್ತಾನೆ
ಮಾರ್ಗದ ದಿಕ್ಕು ಬದಲಿಸಿ.
ಗಮನಕ್ಕೆ ಬಂದು ಕೇಳಿದರೆ
ಇನ್ನೇನು ಇಲ್ಲೇ ಇಲ್ಲೇ
ಪಕ್ಕಕ್ಕೆ ತಿರುಗಿದರೆ
ಪಾಯಿಂಟ್ ಬಂದೇ ಬಿಟ್ಟಿತು
ಹಾಗೆಯೇ ಹೇಳುತ್ತಾನೆ,
ಯಾಕೋ ಸಿಗ್ತಾ ಇಲ್ಲ ಗೂಗಲ್ ಪಾಯಿಂಟ್
ಬಿಟ್ಟಾ ನೋಡಿ ನಿಜವೆಂಬಂತೆ
ಹಸಿ ಹಸಿ ಸುಳ್ಳು.
ನಂಬಿದ ಗ್ರಾಹಕ
ಕುತ್ತಿಗೆ ಉದ್ದ ಮಾಡಿ ಮಾಡಿ
ಕೊನೆಗೆ ತಾನೂ
ಗೂಗಲ್ ಸರ್ಚಿನಲ್ಲಿ ತೊಡಗಿದರೆ
ಓರೆಗಣ್ಣಿನಿಂದ ಸೈಡ್ ಮಿರರ್
ನೋಡಿ ಅಂದ
ತಗಳಿ ಬಂದೇ ಬಿಟ್ಟಿತು
ನೀವು ಇಳಿಯುವ ತಾಣ
ನಾನು ಆಗಲೇ ಹೇಳಲಿಲ್ವಾ?
ಮಾತಿಗೆ ಆಸ್ಪದ ಕೊಡದ ಚತುರ
ಆಗೇ ಮೂಡ್ , ಪೀಚೇ ಮೂಡ್,
ಬಾಯೇ ಮೂಡ್, ದೈನೇ ಮೂಡ್
ಅಂತೂ ಸುತ್ತಾಕಿ ಸುತ್ತಾಕಿ
ಮೀಟರ್ ಓಡಿಸಿದ
ಸಮಾಧಾನ ಅವನಿಗೆ.
ಏನಾದರೂ ಆಗಲಿ
ಅರ್ಜೆಂಟ್ ಇರುವ ನಾವುಗಳು
ಸಧ್ಯ ಸ್ಥಳ ತಲುಪಿದ ಸಮಾಧಾನಕ್ಕೆ
ಕಮಕ್ ಕಿಮಕ್ ಎನ್ನದೆ
ಮೀಟರ್ ಬಾಬ್ತು ತೆತ್ತು
ಹಲ್ಕಿರಿಯುತ್ತ ಅವನಿಗೆ
ಥ್ಯಾಂಕ್ಯೂ ಹೇಳುತ್ತೇವೆ.
ಹಾಗೆ ಚಿಲ್ಲರೆ ಇಟ್ಕೊಪ್ಪಾ ಎಂದು
ಕೆಲವರು ಹೇಳುವಾಗ
ದೇಶಾವರಿ ನಗು ಬೀರುವ ಅವನಿಗೆ
ಒಳಗೊಳಗೇ ಖುಷಿ
ತಾನೇ ಬುದ್ಧಿವಂತನೆಂಬ ಹೆಮ್ಮೆ.
ನಿತ್ಯ ಜಂಜಾಟದ ಬದುಕಿಗೆ
ಮಣ ಭಾರ ಹೊತ್ತ ಮನಸ್ಸು
ಗೊತ್ತಾದ ವಿಷಯ
ಗೊತ್ತಿಲ್ಲದಂತೆ ಇದ್ದುಬಿಡುತ್ತದೆ
ಬದಲಾದ ಸಮಾಜಕ್ಕೆ
ಬದ್ಧತೆಯ ಕಟ್ಟುಪಾಡಿಗೆ ಬಲಿಯಾಗಿ.
ಒಂದಾ …
ಕಾದಾಡಬೇಕು
ಅವರ ಮಟ್ಟಕ್ಕೆ ಇಳಿದು
ನಡುಬೀದಿಯ ನಾರಾಯಣನಾಗಿ
ರಸ್ತೆ, ನೆರೆಕರೆಯವರ ಮರೆತು
ಇಲ್ಲಾ…
ಹೋದರೆ ಹೋಗಲೆಂದು
ಇದ್ದುಬಿಡಬೇಕು ನಮ್ಮ ಪಾಡಿಗೆ ನಾವು
ದೂಸರಾ ಮಾತನಾಡದೆ
ಏನೂ ಆಗೇ ಇಲ್ಲವೆಂಬಂತೆ.
ಆಯ್ಕೆ ನಮ್ಮದೇ
ಏನಂತೀರಾ?