ಗೆ;
ನೀನು ನಡೆಸಿಕೊಡಬಹುದಾದ ಒಂದು ಮಾತು
ನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ.
ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋ
ವಿಶ್ವಾಸವೋ ಅಥವ ಹೇಳಲಾಗದ ಪ್ರೀತಿಯೋ
ಆ ಉಳಿದು ಹೋದ ಮಾತನ್ನ ನೀನು
ಕಣ್ಣಲ್ಲಿ ಕಣ್ಣಿಟ್ಟು ಬೆರಳಿಗೆ ಬೆರಳ ಹೊಸೆದು
ಹಣೆಯ ಚುಂಬಿಸಿ ಹೇಳಿದ್ದೆ
ಎಂದರೆ ಇಲ್ಲ, ಋಜುವಾತಿಗೆ ಸಾಕ್ಷಿ.
ಆದರೆ
ಇದ್ದಕ್ಕಿದ್ದಂತೆ ಹೀಗೆ ನನ್ನೊಂದಿಗೆ ಮಾತು ನಿಲ್ಲಿಸಿ,
ಅವರಿವರ ಜೊತೆಗೆ ಮಾತಿನ ನಟನೆಯಾಡಿದರೆ
ಮತ್ಯಾರದೋ ಪಟಕ್ಕೆ ಚಂದ ಎಂದು ಲೈಕಿಸಿದರೆ
ನನ್ನ ಹೊಟ್ಟೆಯಲ್ಲೇನೂ ಕಿಚ್ಚು ಹೊತ್ತುವುದಿಲ್ಲ
ಬದಲಿಗೆ ನಿನ್ನ ಸಂಕಟವ ಅಳೆಯಬಲ್ಲೆ.
ಎಲ್ಲವನೂ ಮರೆತವರಂತೆ ಕೂಡಿದ್ದು, ಕಳೆದದ್ದು
ಕನಸ ಗುಣಿಸುತ್ತಲೇ ಕಡೆಗೆ ಬದುಕ ಭಾಗಿಸಿದ್ದು
ಭವದ ಸಂಬಂಧಗಳ ಬಿಡುಗಡೆಗೆ ಪ್ರಾರ್ಥಿಸಿದ್ದು.
ಈ ಸಂಜೆ, ಹೊರಗೆ ಮಳೆಯ ಸೂಚನೆ
ಒಳಗೆ ತಡೆಯಲಾರದಷ್ಟು ವಿಪರೀತ ಸೆಖೆ.
ಜೋರಾಗಿ ಬಾಗಿಲು ಬಡಿದ ಸದ್ದು.
ತೆರೆದರೆ ಹೊರಗೆ,
ಯಾರೂ ಗೊತ್ತಾಗದ ಗಾಳಿಯಲೆ ಚಿಲಕ ಅಲ್ಲಾಡುತ್ತಿದೆ,
ಮೆಟ್ಟಿಲಿಳಿದ ಅಸ್ಪಷ್ಟ ಸದ್ದು
ನೀನು ಈವರೆಗೂ ನಡೆಸಿ ಕೊಡದ ಮಾತೇ ಬಂದು
ಮತ್ತೆ ಬಂದ ದಾರಿಯಲೇ ಮರಳಿರಬೇಕು,
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತೆ.
ಈ ಸರಿ ರಾತ್ರಿಯಲ್ಲಿ ಶುಭ್ರ ಆಕಾಶ ನೋಡುತ್ತ
ತಾರಸಿಯಲ್ಲಿ ಅಂಗಾತ ಮಲಗಿ ನಕ್ಷತ್ರವೆಣಿಸುತ್ತ
ಜೊತೆಗೇ ನಿನ್ನಲ್ಲೇ ಉಳಿದ ಮಾತ ನೆನೆಯುತ್ತಾ
ಅವಕಾಶದಲ್ಲಿ ಎಷ್ಟೊಂದು ತಾರೆ ನೀಹಾರಿಕೆಗಳು
ಕ್ಷೀರ ಪಥದ ನಡುವೆ ಎಣಿಕೆಗೂ ಸಿಗದ ಲೋಕಗಳು
ಭ್ರಮೆ ವಿಭ್ರಮೆ ಸಂಕಟಗಳಿಗೆಲ್ಲ ಸಮಾಧಾನದ ಮಾತು
ಹೇಳುತ್ತಿವೆಯೇನೋ ಎಂಬಂತೆ ಸ್ಪೋಟಿಸುತ್ತಲೇ
ಒಂದರ ಹಿಂದೊಂದು ಉರಿಯುತ್ತ ಬೀಳುತ್ತಲಿಹವು.
ಈ ಎಲ್ಲ ಸಂಕೀರ್ಣ ಪ್ರತಿಮೆ ರೂಪಕಗಳ ನಡುವೆ
ಬಿಟ್ಟೂ ಬಿಡದೆ ಕಾಡುತ್ತಿದೆ ನಿನ್ನ ಮಾತಿನ ನೆನಪು
ಧೋ ಎಂದು ಸುರಿಯದಿದ್ದರೂ ಹಿತ ಹನಿಯ ಸೇಕ
ಒಡಲೊಳಗೇ ಉಳಿದು ಹೂತು ಹೋಗಬಾರದ ಮಾತು
ಮತ್ತೆ ಮತ್ತೆ ನಮ್ಮಿಬ್ಬರೊಳಗೇ ಗಿರಕಿ ಹೊಡೆಯುತ್ತಲೇ
ಕಾಡುತ್ತಿದೆ ಅನವರತ ಸಂಭ್ರಮವ ಎಳೆದು ತಂದು.
ಹೌದು, ಸಾವಿನ ನಂತರವಾದರೂ ಮತ್ತೆ ಕೂಡಬೇಕು!