ಚನ್ನಪ್ಪ ಅಂಗಡಿ ಅವರು ಬರೆದ ಕವಿತೆ ‘ಹಾದಿಗಂಜಿ’

ಇಡುವೆರಡು ಹೆಜ್ಜೆ ಬಗಲಲಗಲಿ ಹಾದಿಗೇಡಾಗುತಿದೆ ಬಾಳು ಹಾಡಹಗಲೆ
ಹಾದಿಕಾರನಿಗೆ ಬೀದಿಯಲಿ ಮೋಕ್ಷ ಕದಕಿಂಡಿಯಲಿ ತೂರುವುದು ರೂಕ್ಷ
ಹೆಜ್ಜೆಯೊಂದಿಗೆ ಹೆಜ್ಜೆ ಹಚ್ಚಿಕೊಂಡು ನಡೆಯುತ ಬರುತಿದೆ ಒಜ್ಜೆ ನಡಿಗೆ
ಎಡಹುವ ಕೆಡಹುವ ಅಡ್ಡಕಸಬಿ ಕೈಕಾಲುತಲೆಗಳ ಬಳುವಳಿ ಅಡಿಗಡಿಗೆ
ಕೊರೆದಿರಿಯುವ ಲೇಸರಿನ ಬಾಣ ಬಿರುಸುಗಳ ಆರುಪಾರು ಕರಾರು
ತರಲೆಗೊಂದು ಮಾತು ಹರಲೆಗೊಂದು ಕಥೆ ಸವರುನಾಲಿಗೆ ನಿಸೂರು
ಒಣಗುದುಟಿ ಪಿಟಿಪಿಟಿ, ಮುಳ್ಳು ನಾಲಿಗೆ ಹಲ್ಲುದಾಟಿ ಎದುರಿಗಿವಿ ಹಸಿಹಸಿ
ಚಪ್ಪರಿಸಿ ಕುಪ್ಪಳಿಸಿ ಕೆನೆದಾಡುತ ನೆಗೆದು ಗುಲ್ಲೆದ್ದ ಗುಮಾನಿಯ ಕಸಿವಿಸಿ
ಇಬ್ಬದಿಯಲಿ ಒತ್ತಿಕೊಂಡು ಬರುವ ಭಿತ್ತಿಗಳಿರುವಾಗ ಸಾಗುವ ಬಗೆ ಹೇಗೆ?
ಅನಾದಿಕಾಲದ ಬುನಾದಿಯಲಿ ಇಲಿ ಹೆಗ್ಗಣಗಳ ಕಳ್ಳಾಟಗಳು ಬಗೆಬಗೆ
ಅದರುವ ಮೆಟ್ಟಿಲುಗಳು ಗದರುವ ಕಟ್ಟೆಗಳು ರಚ್ಚೆ ಹಿಡಿದ ಗಟಾರುಗಳು
ಉಬ್ಬಸ ತಾಳದೆ ಎದ್ದು ಕೂರುವ ಮತ್ತೆ ಬಿದ್ದು ಗೂರುವ ಹಾಸುಗಲ್ಲು
ಸರಬರ ಸರಿದು ಜೋಡಣೆಯಾಗುವ ಸಜಾತಿ ಮಚ್ಚಿ ಮೆಟ್ಟು ಕೆರಗಳು
ಕೈಯನು ಹಿಡಿದು ಸುತ್ತಲು ಸುತ್ತಿ ಕುಣಿದು ಹೆಣೆದ ಸರಪಳಿಯ ಮಧ್ಯೆದಿ
ಹೊಕ್ಕು ಸಿಕ್ಕು ಹೊರಬರುವ ದಾರಿಗಾಣದೆ ನೆರೆಮನೆಯಾದ ಚಕ್ರವ್ಯೂಹ
ಕಣ್ಣುಮುಚ್ಚಿದ ಕಿಡಕಿ, ಮಣ್ಣೇರಿರುವ ಪಡಕು ಬಡಿದುಕೊಂಡ ಹೆಬ್ಬಾಗಿಲು
ಹಾರುಹೊಡೆದ ಹಿತ್ತಲಬಾಗಿಲು ಆಯಾರಾಂ ಗಯಾರಾಂ ಗುಪ್ತ ಬಾಗಿಲು
ಬೇಟೆ ನುಂಗಿ ಹೊಡಮರಳಿ ಬಿದ್ದ ಊರ ನಡುದಾರಿಯ ಬೆನ್ನಗುಂಟ
ಸುರಿದ ಕಳ್ಳಡಾಂಬರು ರಣಬಿಸಿಲಲಿ ಹೆಣ ಮಿಡಿದಂತೆ ಸುಡುಸುಡುತ
ಪುಟುಪುಟು ಗುಳ್ಳೆಯದ್ದು ಅದುರುವ ಅಂಗಾಲನು ಬಾಚಿ ತಬ್ಬಿಕೊಂಡು
ಮುಂದೊಂದಡಿ ಜರುಗಿದರೆ ಹಿಂದೆರಡಡಿ ಜಾರುವುದು ಈ ಪಯಣ
ತಥಾಕಥಿತ ಪಥಿಕನ ದಾರಿಸಾಗುವ ಪರಿಯೊಂದು ನಿಜರಾಮಾಯಣ
ಅಂಗಳದ ರಂಗೋಲಿ ಅಂಗೈಯಲಿ ಕುಸಿದು ಬೆವರಮಳೆಗೆ ತೊಯ್ದು
ಚದುರಿದ ಕಣಗಳು ಚರಂಡಿ ನೀರಿನೊಂದಿಗೆ ಸೇರು ಸವ್ವಾಸೇರು
ಹದ್ದು ಮೀರಿ ಸದ್ದು ಮಾಡಿ ಪುಟಿದೆದ್ದು ಮೇಲೆ ಬಂದಿದೆ ಕರಿನೀರು
ಕಿಡಿ ಹಾರಿ ಕತ್ತಿಕೊಂಡ ಬೆಂಕಿ ನಾಲಿಗೆ ಮೇಲೆ ಅರೆಬೆಂದ ಕಾಕುಳ್ಳು
ಉಂಡಿದ್ದು ಉಟ್ಟದ್ದು ಕಂಡಿದ್ದು ಕೊಟ್ಟದ್ದು ಬಾಯ್ಬಿಟ್ಟರೆ ಬರಿಮಳ್ಳು
ಹಿಡಿದ ಮಾತ್ರಕೆ ಅಸ್ತ್ರ ಆಡಿದ್ದೆಲ್ಲ ಆಗದು ಶಾಸ್ತ್ರ ವರ್ತಮಾನದ ಸತ್ಯ
ಸೂರ್ಯನ ಕಣ್ಸನ್ನೆಗೆ ಬೀದಿಗೆ ಬೀಳಬೇಕು ಮೈಕೈ ಕೊಡವಿ ನಿತ್ಯ

ನಿಬ್ಬರವಾಗುವ ಹೊಟ್ಟೆಯಲಿ ಹಸಿವು ಹರಿದಾಡಿ ನಿಬ್ಬೆರಗಾಗುವ ಕಸುವು
ಬಿರಿಯುತಿರುವ ಕರುಳಗೋಡೆ ಸಿಕ್ಕಿದ್ದೆಲ್ಲವ ನುಂಗಲು ಊಳಿಡುತಿದೆ
ಕತ್ತಲಕೋಣೆಯ ದೀಪ ಚಿಟಿಲ್ ಚಿಟಿಲ್ ಮಕ್ಕೆದ್ದು ಕೆಂಡವುಗುಳುತಿದೆ
ಕಮಟು ವಾಸನೆ ಜಿದ್ದಿಗೆ ಬಿದ್ದು ಹಗೆಹೊಗೆಯಾಗಿ ಪ್ರಾಣವಾಯು ಹನನ
ಶುರುವಿಟ್ಟುಕೊಂಡಿತು ಇನ್ನಿಲ್ಲದ ಗುಣಗಾನ ತಾಳ ತಪ್ಪಲೆ ಗುನುಗುನುಗಾನ
ಲಯದ ಬದ್ಧತೆಗೆ ದನಿಗೂಡಿ ಹಾಡಾಗಿ, ಗೂಡುಕಟ್ಟಿದ ಹಾಡಿನ ಪಾಡಾಗಿ
ಉಸಿರ ಕೊಸರಾಟದ ಸದ್ದು ಗೋಡೆಗೆ ಮಾರ್ದನಿಸಿ ಸುದ್ದಿ ಸರ‍್ಯಾಗಿ
ಹಚ್ಚಿಕೊಂಡವರು ಬಿಚ್ಚು ಮನದಲಿ ಧಾವಿಸಿ ರಕ್ತಕಂಟಿಕೊಂಡ ಹಿಂಡು
ಹೊರಹೋಗುವ, ಒಳಬರುವ ತಳ್ಳಾಟದಲಿ ಎಂಜಲಾಗುತ ನಂಜಾಗಲು
ಬಿಚ್ಚುಗತ್ತಿ ಹಿರಿದು ಕಟಬುತ್ತಿಯ ಧ್ವಂಸ ಮಾಡುತಲೆ ಸಂಜೆಯಾಗಲು
ಬುತರೊಟ್ಟಿ ಹೊತ್ತು ತಂದ ಹೆಗಲು ಭಾರ ಇಳಿಸುತಲೆ ನೆರೆದ ತಲೆ
ಕರಗುವ ರೊಟ್ಟಿಗಂಟಿನ ಹೊಟ್ಟೆ ಆಸೆ-ನಿರಾಸೆಯ ಲೊಳಲೊಟ್ಟೆ
ಬಯಕೆ ತೀರಿಸಲು ಕಡೆಯ ಮಿತಿ ತೋರಬೇಕು ಕಾಳಜಿ ಕಕ್ಕುಲಾತಿ
ಒಣಗುವ ರಕ್ತಮಾಂಸ ರಿಕ್ತವಾಗುತ ಮೊಲೆವಾಲ ಎಳೆಬಾಯಾಗಿ
ಸುಕ್ಕುಗಟ್ಟಿದ ತೊಗಲ ಮಡಿಕೆ ಸುಟ್ಟು ಕಪ್ಪಿಟ್ಟ ಬಣ್ಣ ಕಳೆಕಳೆಯಾಗಿ
ತೊಳೆದ ಹೊಳಪಲಿ ಕಣ್ಣೆಂಜಲು ಕಾಡಿಗೆ ಬಾಯಂಜಲು ತೀರ್ಥವಾಗಿ
ನೆನಪ ಬುತ್ತಿಯ ಕಟ್ಟಲು ಬಿಳಿಯರಿವೆ ಹಾಸಿ ಕೈಯಿ ಮೊದಲಾಗಿ
ತುತ್ತು ರೊಟ್ಟಿಯ ನಂಬಿ ಗಟ್ಟಿಗೊಳಿಸಿದ ರಟ್ಟೆ ಹೊತ್ತ ಹೆಣ ಲೆಕ್ಕ
ಮರೆದ ಚಲನೆಯ ಮೆಲುಕು ನೆರೆದಾಕೃತಿಗಳು ಕಲಕು-ಮಲಕು
ಅದರುವ ನೆದರನು ಕೆತ್ತಿ ಚೂಪು ಮಾಡುತಲೆ ಕದಲುವ ನೆಲ
ತಿರುಗುವ ಬುಗುರಿ ನಿಲುಗಡೆಗೆ ನೆಲವನು ಕೊರೆದು ಕುಸಿದು
ಮತ್ತೆಮತ್ತೆ ವಾಲುತ ಲಯ ತಪ್ಪಿ ಸೋತು ಸೊರಗಿ ನೆಲಕಟ್ಟಿ
ಗುಮ್ಮಸು ಹಿಡಿದ ಹಾಸಿಗೆಯಲಿ ಜೀವ ಉಣ್ಣುವ ಜಂತುಗಳು
ಮರಗಟ್ಟಿದ ನಾಲಿಗೆ ಬಿರಿವ ತುಟಿಗಳನು ಸವರಲು ಹವಣಿಸಿ
ಕಚ್ಚಿ ಹಿಡಿದೇನೆಂದರೆ ಹಲ್ಲಿಲ್ಲ, ಇನ್ನಿದ್ದು ಏಗುವ ರಿಣ ಇಲ್ಲಿಲ್ಲ
ಬರಹೋಗುವ ಬಗೆ ಹೀಗೆ ಬರಿಗೈ ಬರಿಮೈ ಸುಟ್ಟಸುಣ್ಣದ ಹರಳು ನೀರಿಗಂಜಿ
ಕೊಟ್ಟು ತೀರದ ಲೋಭ ಬಿಟ್ಟು ಹೋಗದ ಮೋಹ ಕಟಬಾಯಲಿ ಹಾದಿಗಂಜಿ

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಅನುಸೂಯ ಯತೀಶ್
23 July 2023 14:12

ತುಂಬಾ ಸೊಗಸಾದ ಕವಿತೆಗಳು

0
    0
    Your Cart
    Your cart is emptyReturn to Shop