ಭವ್ಯ ಟಿ.ಎಸ್. ಹೊಸನಗರ ಅವರು ಬರೆದ ಕವಿತೆ ‘ಆಗಸ ಮತ್ತು ಅವಳು’

ಆಗಸಕ್ಕೆ ಏಣಿ ಹಾಕಬೇಡ
ಆಗಾಗ ಕೇಳಿ ಬರುವ ಗೊಣಗಾಟ
ಕಿವಿಗೊಡುವವಳಲ್ಲ ಅವಳು
ಕನಸುಗಳಿಗೆಲ್ಲಿಯ ನಿರ್ಬಂಧ…!!
ತನ್ನದೇ ಭಾವಪ್ರಪಂಚದಲ್ಲಿ ತಾನೇ
ಸೃಷ್ಟಿಸಿದ ಸಾಮ್ರಾಜ್ಯದೊಡತಿಯಲ್ಲವೇ??
ಕತ್ತಲಿನ ಇತಿಹಾಸದ ಕರಾಳತೆಗೆ
ಕಂಗೆಡುವವಳಲ್ಲ ಅವಳು
ಮನದ ಆಗಸದ ತುಂಬಾ ಸದಾ
ಮಿನುಗುವವು ಆಕಾಂಕ್ಷೆಯ ನಕ್ಷತ್ರಗಳು
ಪ್ರತಿ ಉದಯಕ್ಕೊಂದು ಅರ್ಥವಿದೆ
ಅವಳಂತರಂಗದ ದನಿಯಲ್ಲಿ…
ದೂಷಿಸುವವರಿಗೆ ಮಣಿದು
ದಾಸಿಯಾಗುವವಳಲ್ಲ
ಹೊಗಳಿಕೆಗೆ ಹಿಗ್ಗಿ ಮೈಮರೆಯುವವಳಲ್ಲ
ವಾಸ್ತವದ ಒರೆಗಲ್ಲಿಗೆ ತನ್ನನ್ನು
ತಾನೇ ತೀಡಿ ಪ್ರಕಾಶಿಸುವವಳು
ನಿತ್ಯ ನೂತನ ನಿರಂತರ ವಾಹಿನಿಯಂತೆ
ಗುಪ್ತಗಾಮಿನಿಯ ಚೆಲುವ ಹೊತ್ತವಳು
ಅಂತ್ಯವಿಲ್ಲದ ಆಗಸವ ಬೊಗಸೆಯಲ್ಲಿ
ಬಯಸುವ ಭೂಮಿ ಇವಳು
ನಯನದಲ್ಲಿ ನಗುವಿನೊರತೆಯ
ಬತ್ತದಂತೆ ತುಳುಕಿಸುವವಳು
ಕಂಬನಿಯ ಎದೆಯೊಳಗೆ ಬಸಿದು
ಕನಸಿನ ನೆಲದಲ್ಲಿ ಹೂವಾಗಿ
ಘಮಘಮಿಸುವವಳು…!!

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
ಶಾಂತಮೂರ್ತಿ
9 November 2023 15:36

ಭವ್ಯಾಜೀ ,ತೂಕದ ಕವಿತೆ,ಕನ್ನಡಿಗರ ಭಾವಲೋಕ ಆವರಿಸುವ ಭರವಸೆ ಹೇಳುತಿದೆ

0
    0
    Your Cart
    Your cart is emptyReturn to Shop