ಲೋಕದ ದೃಷ್ಟಿಯಲಿ ನನ್ನ ಮನಸೊಂದು ವಿಶಾಲ ಸಾಗರ,
ಅದರ ಅಡಿಯ ಅಂತರಾಳದಿ ಸಹಸ್ರ ಭಾವನೆಗಳ ಸಂಚಾರ,
ಆದರೂ ಆ ಅಂತರಾಳದ ಬಗ್ಗೆ ನೀ ತಿಳಿದಿಲ್ಲವೆಲ್ಲ ವಿಚಾರ,
ಅದು ಪ್ಯಾಥೋಮೀಟರಿಗೂ ನಿಲುಕದ ವಿಸ್ಮಯಗಳ ಆಗರ!
ಮನದಾಳ ಹುಡುಕಲು ಸೋತ ನೀ ನನ್ನ ಭೂತಾಯಿಯಾಗಿಸಿದೆ,
ನನ್ನಿಂದ ಹೊಸ ಸೃಷ್ಟಿಯ ಮಾತೃತ್ವಕ್ಕೆ ನಾಂದಿಹಾಡಿಸಿದೆ,
ಆಗಲೂ ನನ್ನಂತರಾಳದ ಕೋಲಾಹಲ ತಿಳಿಯದೆ ಹೋದೆ,
ಮತ್ತೆ-ಮತ್ತೆ ಸೋಲುತಿರುವೆ ಅರಿಯಲು-ಅಳೆಯಲು ಸಾಧನವಿಲ್ಲದೆ!
ಕಡಲ ಅಂತರಾಳವಾದರೂ ನಿಲುಕಬಹುದೇನೋ ಶೋಧನೆಗೆ,
ಭುವಿಯ ಅಂತರಾಳವಾದರೂ ಗ್ರಹಿಸಬಹುದೇನೋ ಊಹೆಗೆ,
ಆದರೆ… ನಿಜದಿ ನಾ ಹೆಣ್ಣು!
ನನ್ನಂತರಾಳ ಎಟುಕಬಹುದೇ ನಿನ್ನ ಕಲ್ಪನೆಗೆ??
ಚಂಚಲದ ಅತಿರೇಕದ ಭಾವನೆಗಳ ಆಳ; ನನ್ನ ಅಂತರಾಳ..
ಹಿಡಿತಕ್ಕೆ ಸಿಗಬಹುದೇ ನಿನಗೆ??