ಜೀವಿಯ ಉಸಿರಿಗೆ ಹಸಿರನು ತುಂಬುವ
ಅಮೃತ ಸುಧೆಯೆ ಮಣ್ಣು!
ಪ್ರಕೃತಿ ಮಾತೆಯು ಲೋಕಕೆ ನೀಡಿದ
ಜಡಚೇತನಗಳ ಕಣ್ಣು!
ಅನಂತ ಗರ್ಭದ ಕಣಕಣದಲ್ಲು
ಅಡಗಿದೆ ಹೊಳಪಿನ ಹೊನ್ನು!
ಕೋಟಿ ವಿದ್ಯೆಗೆ ಮಿಗಿಲನು ನೀಡಿದೆ
ಮೇಟಿ ಕಾಯಕವನ್ನು !
ಮರುಳತನದಲಿ ತುಂಬುತಲಿರುವೆವು
ವಿಷದ ಗೊಬ್ಬರವನ್ನು!
ಮಕ್ಕಳ ತಪ್ಪನು ಸಹಿಸುತಲಿರುವಳು
ಸುರಿಸುತ ಕಣ್ಣೀರನ್ನು!
ಮೊಲೆಹಾಲೂಡುವ ತಾಯಿ ಎನ್ನದೆ
ಮುರಿದರೆ ಹೇಗೆ ಗೋಣು!
ಮಿತಿಯೇ ಇಲ್ಲದ ಆಸೆಯು ಏತಕೆ
ಹೊಟ್ಟೆ ಇರುವುದು ಗೇಣು!
ಸಂತಸದಿಂದಲಿ ಕೊಡಮಾಡುವಳು
ಸವೆಯದೆ ಇರುವ ಜೇನು!
ಉಳಿಸಿಬೆಳೆಸುವ ಚಿಂತನೆ ನಡೆಯಲಿ
ಪೊಡವಿಯ ಕಾಮಧೇನು!