ಅಪ್ಪನ ಹೆಗಲು ಜೊತೆಗಿರಲು
ಹಗಲು-ರಾತ್ರಿ ಮರುಕಳಿಸುತ್ತಿರಲು
ನಿನ್ನ ಅಕ್ಕರೆಯೊಂದೇ ಸಾಕಲ್ಲವೇ…
ಈ ಜಗವನ್ನು ಗೆಲ್ಲಲು..!
ದೂರದಿ ಕೆಂಡದಂತೆ
ಸುಡುವ ಸೂರ್ಯನಿರಲು,
ರಕ್ಕಸದಂತೆ ಅಲೆಗಳು
ನನ್ನ ಮೈಮನ ರಾಚಲು,
ನಿನ್ನ ಹೆಗಲೊಂದೇ ಸಾಕಲ್ಲವೇ…
ನನಗೆ ಧೈರ್ಯ ತುಂಬಲು..!
ಎಷ್ಟೇ ಕಷ್ಟ ಬಂದರೂ
ಮತ್ತೆ ಮತ್ತೆ ಕೆಳಗೆ ನಾ ಬಿದ್ದರೂ,
ನಿನ್ನ ಪ್ರೀತಿ ತುಂಬಿದ
ನೋಟವೊಂದೇ ಸಾಕಲ್ಲವೇ…
ನಾ ಮತ್ತೆ ಮೇಲೇಳಲು..!
ಜಗತ್ತು ನಿನ್ನೇನೇ ಅಂದರೂ,
ನಿನ್ನ ಕೋಪ ಮೂಗಿನ ಮೇಲಿದ್ದರೂ,
ನಮ್ಮಿಬ್ಬರ ನಡುವೆ ಆಗಾಗ
ಕದನಗಳು ಕಂಡುಬಂದರೂ,
ಗೊತ್ತಲ್ಲವೇ ನನಗೆ
ನನ್ನಪ್ಪ ಹೇಗೆಂದು..!