ಕಥೆಗಾರ ಜಿ. ಹರೀಶ್ ಬೇದ್ರೆ
ಸರ್ ನೀವು ಹೇಳೊ ದಿನಾಂಕ ಮತ್ತು ಸಮಯ ನೋಡಿದ್ರೆ, ನಿಮ್ಮ ತಾಯಿಯವರು ಹೋಗಿರುವುದು ಧನಿಷ್ಠ ಪಂಚಕ ನಕ್ಷತ್ರದಲ್ಲಿ. ಇದು ಅಷ್ಟು ಒಳ್ಳೆಯ ನಕ್ಷತ್ರವಲ್ಲ, ನೀವು ಐದು ತಿಂಗಳಾದರೂ ಅವರು ಹೋಗಿರುವ ಮನೆಯಲ್ಲಿ ಇರುವಂತಿಲ್ಲ. ಬೀಗ ಹಾಕಿ ಬೇರೆ ಕಡೆ ಹೋದರೆ ಒಳ್ಳೆಯದು. ಈ ಮಾತನ್ನು ಕೇಳಿದೊಡನೆ ಪ್ರಸಾದ್ ತಲೆ ಸುತ್ತಿದಂತಾಯಿತು. ಅವನೇ ಸುಧಾರಿಸಿಕೊಂಡು, ಇದಕ್ಕೆ ಪರಿಹಾರ ಇಲ್ಲವೇ ಎಂದ. ಅದಕ್ಕೆ ಪುರೋಹಿತರು, ಇದೆ ಆದರೆ ನೀವು ಬಾಬಣ್ಣನವರ ಕಡೆಯಿಂದ ಬಂದಿರುವುದರಿಂದ ಈಗಲೇ ಏನೂ ಹೇಳುವುದಿಲ್ಲ. ನೀವು ಅವರೊಂದಿಗೆ ಮಾತನಾಡಿಕೊಂಡು ಬನ್ನಿ ಎಂದರು. ರಾಘು ಮತ್ತೆ ಪರವಾಗಿಲ್ಲ ಹೇಳಿ ಎಂದು ಒತ್ತಾಯ ಮಾಡಿದಾಗ, ಮೃತ್ಯುಂಜಯ ಜಪ, ರುದ್ರಾಭಿಷೇಕ ಹಾಗೂ ಒಂದು ಶಾಂತಿ ಹೋಮವನ್ನು ಮನೆಯಲ್ಲಿ ಮಾಡಿಸಿದರೆ, ನೀವು ಅಲ್ಲೇ ಇರಬಹುದು. ಆದರೆ ನನಗೇ ಅಷ್ಟು ಸಮಾಧಾನ ಕೊಡುವುದಿಲ್ಲವಾದ್ದರಿಂದ ಹೇಳಲು ಇಷ್ಟಪಡಲಿಲ್ಲ ಎಂದರು. ಸಧ್ಯ ಒಂದು ಪರಿಹಾರ ಇದೆಯಲ್ಲ ಎಂಬ ಸಮಾಧಾನದಲ್ಲಿ ಪ್ರಸಾದ್ ಮನೆಗೆ ಬಂದ.
ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರಸಾದ್, ಬರುವ ಸಂಬಳದಲ್ಲಿ ಮನೆ ನಡೆಸಲು ಅಷ್ಟೇ ಸಾಕಾಗುತ್ತಿತ್ತು. ನಿಜ ಹೇಳಬೇಕೆಂದರೆ ತಿಂಗಳ ಕೊನೆಯಲ್ಲಿ ಕೆಲವೊಮ್ಮೆ ಅವರಿವರ ಬಳಿ ಕೈ ಚಾಚುವ ಪರಿಸ್ಥಿತಿ. ಪುಣ್ಯಕ್ಕೆ ಹೆಂಡತಿ ಮನೆಕಡೆಯಿಂದ ಅಪಾರ್ಟ್ಮೆಂಟಿನಲ್ಲಿ ಒಂದು ಮನೆ ಸಿಕ್ಕಿತ್ತು, ಬಾಡಿಗೆ ಕೊಡುವ ತಾಪತ್ರಯ ಇಲ್ಲ. ಅದು ಇದ್ದಿದ್ದರೆ ಇವನ ಪರಿಸ್ಥಿತಿ ದೇವರಿಗೇ ಪ್ರೀತಿಯಾಗಬೇಕಿತ್ತು. ನಿಜ ಸ್ಥಿತಿ ಹೀಗಿರುವಾಗ, ಇದ್ದ ಮನೆಗೆ ಬೀಗ ಹಾಕಿ ಬೇರೆ ಕಡೆ ಹೋಗುವುದು ಅಸಾಧ್ಯದ ಮಾತಾಗಿತ್ತು. ಆದರೂ, ಮೊದಲಿನಿಂದಲೂ ನಂಬಿ ನಡೆದುಕೊಂಡು ಬಂದಿದ್ದ ರೀತಿ ನೀತಿಗಳನ್ನು ಬಿಡಲೂ ಸಾಧ್ಯವಿರಲಿಲ್ಲ. ಹಾಗಾಗಿ ಪ್ರಸಾದ್ ಏನು ಮಾಡಬೇಕೆಂದು ತಿಳಿಯದೆ, ತಮ್ಮ ಕಡೆಯ ಹಿರಿಯರಾದ ಬಾಬಣ್ಣನವರಿಗೆ ಕೇಳಿ, ಅವರು ಹೇಳಿದಂತೆ ಮಾಡುವುದು ಎಂದು ನಿರ್ಧರಿಸಿದ.
ಮನೆಗೆ ಬಂದು ಎಲ್ಲವನ್ನೂ ಬಾಬಣ್ಣನವರ ಬಳಿ ಹೇಳಿದಾಗ ಅವರು, ನೋಡೋ ಮೀರಿ ನಿಮ್ಮ ತಾಯಿ ಇದ್ದಾಗ ಶಕ್ತಿ ಮೀರಿ ನೋಡಿಕೊಂಡಿದ್ದಿಯ. ಅವರು ಯಾವುದೇ ನಕ್ಷತ್ರದಲ್ಲಿ ಹೋಗಿದ್ದರೂ ನಿನಗೇನೂ ಆಗುವುದಿಲ್ಲ, ಇಲ್ಲೇ ಇರು ಎಂದರು. ಆದರೆ ಪ್ರಸಾದನಿಗೆ ಹೆಣ್ಣು ಕೊಟ್ಟ ಅತ್ತೆ, ಆತಂಕದಿಂದ ನಾಳೆ ಏನಿದ್ರೂ ಹೆಚ್ಚು ಕಮ್ಮಿಯಾದರೆ ಏನು ಮಾಡುವುದು ಎಂದಾಗ ಬಾಬಣ್ಣನವರೇ , ಎಲ್ಲರ ಸಮಾಧಾನಕ್ಕೆ ಪೂರೋಹಿತರು ಹೇಳಿದ ಪೂಜೆಗಳನ್ನು ಮಾಡಿಸಿದರೆ ಆಯಿತಲ್ಲವೇ ಎಂದಾಗ, ಪ್ರಸಾದನ ಹೆಂಡತಿ ಶುಭ, ಇಲ್ಲ ನಾವು ಅಮ್ಮನ ಮನೆಗೆ ಹೋಗಿ ಇರುತ್ತೇವೆ, ಅವರು ಕರೆದಿದ್ದಾರೆ ಎಂದಳು.
ಇದಕ್ಕೆ ಏನೂ ಉತ್ತರಿಸದೆ ಬಾಬಣ್ಣ ಪ್ರಸಾದ್ ಮುಖ ನೋಡಿದರು. ಆಗ ಅವನು ಎರಡೂ ನಿಮಿಷ ಯೋಚಿಸಿ, ಪೂಜೆ ಮಾಡಿಸಿ ತಾವು ಅದೇ ಮನೆಯಲ್ಲೇ ಇರುವುದಾಗಿ ಕಡ್ಡಿ ಮುರಿದಂತೆ ಹೇಳಿದ. ನಂತರ ಪುರೋಹಿತರು ಹೇಳಿದ ಎಲ್ಲಾ ಪೂಜೆಗಳನ್ನು ಮಾಡಿಸಿದ.
ಬಂದವರೆಲ್ಲಾ ತಮ್ಮ ತಮ್ಮ ಗೂಡಿಗೆ ಮರಳಿದ ಮೇಲೆ ಪ್ರಸಾದ್, ಅವನು ಹೆಂಡತಿ ಶುಭ ಹಾಗೂ ಅವರ ಮಗ ಮಾತ್ರ ಮನೆಯಲ್ಲಿ ಉಳಿದರು. ಇವನು ತನ್ನ ಕೆಲಸಕ್ಕೆ ಹೋಗಿ ಬರತೊಡಗಿದ. ಆಗಾಗ ತಾಯಿಯ ನೆನಪು ಬರುತ್ತಿತ್ತಾದರೂ, ಎಲ್ಲವೂ ಮಾಮೂಲಿನಂತೆ ನಡೆಯತೊಡಗಿತು.
ಅಂದು ಮುಂಜಾನೆಯೇ ಬಾಬಣ್ಣ ಕರೆ ಮಾಡಿ, ಪ್ರಸಾದ್ ನಾಳೆ ನಿಮ್ಮ ತಾಯಿಯ ಮಾಸಿಕ. ಬೇಕಿದ್ದರೆ ನೀನು ಇಂದು ರಾತ್ರಿಯಿಂದಲೆ ಅವರು ಹೋದ ರೂಮಿನ ಬಾಗಿಲು ಹಾಕಿಬಿಟ್ಟು ಆಚೆನಾಡಿದ್ದು ತೆಗೆಯಬಹುದು ಎಂದು ಉಳಿದ ಶಾಸ್ತ್ರಿಗಳ ಬಗ್ಗೆ ಹೇಳಿದರು. ಅವರು ಹೇಳಿದಂತೆಯೇ ಪ್ರಸಾದ್ ರಾತ್ರಿ ಊಟವಾದ ಮೇಲೆ ಆ ರೂಮಿನ ಬಾಗಿಲು ಹಾಕಿ ಮಲಗಿದ. ರಾತ್ರಿ ಅದೊಂದು ಹೊತ್ತಿನಲ್ಲಿ ಅದೇ ರೂಮಿನೊಳಗೆ ಯಾರೋ ಕಲ್ಲು ತೂರಿ, ಅದು ಗಾಜಿಗೆ ಬಡಿದು ಚೂರುಚೂರಾದ ಜೋರು ಶಬ್ದ ಬಂತು. ಆ ಸುದ್ದಿಗೆ ಶುಭ ಕಿಟಾರನೆ ಕಿರುಚಿ ಎದ್ದು ಕುಳಿತಳು. ಪ್ರಸಾದನೂ ಎದ್ದು, ಜೊತೆಗೆ ಮಗನು ಗಾಬರಿಯಿಂದ ಎದ್ದು ಕುಳಿತು ಪಿಳಿಪಿಳಿ ಕಣ್ಣು ಬಿಡತೊಡಗಿದ. ಪ್ರಸಾದ್ ಲೈಟ್ ಆನ್ ಮಾಡಿ, ಶುಭಳಿಗೆ ಧೈರ್ಯ ಹೇಳಲು ಬಂದರೆ ಅವಳು, ಸಿಟ್ಟು ಗಾಬರಿಯಿಂದ, ನಾನು ಬಡ್ಕೊಂಡೆ ಅಮ್ಮನ ಮನೆಗೆ ಹೋಗುವ ಅಂತ, ನೋಡಿ ಈಗ ಅವಾಂತರ ಎಂದಳು. ಅದಕ್ಕೆ ಪ್ರಸಾದ್ ಸಮಾಧಾನದಿಂದಲೇ, ನೀನು ಹೆದರಿ ಮಗನಿಗೂ ಹೆದರಿಸಬೇಡ. ಒಳಗೆ ಏನಾಗಿದೆ ನಾನು ನೋಡುವೆ ಎಂದು ರೂಮಿನ ಬಳಿ ಹೋಗಲು ಎದ್ದ. ಆದರೆ ಅದಕ್ಕೆ ಶುಭ, ನಮ್ಮ ಪ್ರಾಣ ತೆಗೆಯಲು ಬಾಗಿಲು ತೆಗಿತೀರ ಎಂದು ತಡೆದಳು. ಆ ರಾತ್ರಿ ಮೂವರೂ ನಿದ್ದೆ ಇಲ್ಲದೆ ಕಳೆದರು. ಮಾರನೇ ದಿನ ಪರಿಚಯದ ಬ್ರಾಹ್ಮಣರನ್ನು ಮನೆಗೆ ಕರೆದು ಸ್ವಯಂ ಪಾಕ ನೀಡಿ, ರಾತ್ರಿಯ ಘಟನೆ ಬಗ್ಗೆ ಹೇಳಿದರು. ಅವರು, ಮನೆಯಲ್ಲಿ ಶಾಂತಿ ಹೋಮ ಮಾಡಿಸಿದ ಮೇಲೆ ಹೆದರುವ ಅವಶ್ಯಕತೆ ಇಲ್ಲ ಎಂದರು. ಆದರೂ ಶುಭಳಿಗೆ ಸಮಾಧಾನ ಆಗಲೇ ಇಲ್ಲ. ಮತ್ತೆ ತಾಯಿಯ ಮನೆಗೆ ಹೋಗಿ ಇರುವ ಮಾತನಾಡತೊಡಗಿದಳು. ಆ ದಿನವೂ ರೂಮಿನ ಬಾಗಿಲು ತೆಗೆಯಲಿಲ್ಲ. ರಾತ್ರಿ ಮಲಗಿದಾಗಲೂ ಗಳಿಗೆಗೊಮ್ಮೆ ಎಚ್ಚರಗೊಂಡು ಏನೇನೋ ಬಡಬಡಿಸುತ್ತಿದ್ದಳು.
ಪ್ರಸಾದ್ ಬೆಳಗಾದೊಡನೆ ಎದ್ದು ತನ್ನ ಸ್ನಾನ ಪೂಜೆಗಳನ್ನು ಮುಗಿಸಿಕೊಂಡು, ಶುಭ ಸ್ನಾನಕ್ಕೆ ಹೋಗುವುದನ್ನೆ ಕಾಣತೊಡಗಿದ. ಅವಳು ನೋಡಿದರೆ ಆ ರೂಮಿನ ಬಾಗಿಲು ತೆರೆಯಲು ಬಿಡುವುದಿಲ್ಲ ಎಂಬ ಖಾತ್ರಿ ಅವನಿಗಿತ್ತು. ಹಾಗಾಗಿ ಆ ಸಮಯವನ್ನು ಕಾದು, ಬಾಗಿಲು ತೆರೆದ. ಅಲ್ಲಿ ಏನಾಗಿತ್ತು ಅಂದರೆ, ಆ ರೂಮಿನ ಬಾಗಿಲು ಹಾಕುವಾಗ, ಅದರ ಕಿಟಕಿಯ ಬಾಗಿಲನ್ನು ಹಾಕಿರಲಿಲ್ಲ. ಮತ್ತೆ ಅದಕ್ಕೆ ಅಡ್ಡವಾಗಿ ಹಾಕಿದ್ದ ತೆಳು ಪರದೆಯನ್ನು ಸರಿಯಾಗಿ ಎಳೆದಿರಲಿಲ್ಲ. ರಾತ್ರಿ ಒಂದು ಗಳಿಗೆಯಲ್ಲಿ ಜೋರಾಗಿ ಬೀಸಿದ ಗಾಳಿಗೆ, ಆ ತೆಳು ಪರದೆ ಹಾರಿದಾಗ, ಎದುರಿಗಿದ್ದ ಟೇಬಲ್ ಮೇಲಿನ ಖಾಲಿ ತಗಡಿನ ಡಬ್ಬಕ್ಕೆ ತಾಗಿದೆ. ಆ ಡಬ್ಬ ಷೋಕೆಸ್ ಗಾಜಿಗೆ ಬಡಿದು ಚೂರಾಗಿತ್ತು. ಅಲ್ಲಿ ಯಾವ ಅತೀಂದ್ರಿಯ ಶಕ್ತಿಯೂ ಬಂದಿರಲಿಲ್ಲ. ಇದು ಅರ್ಥವಾಗಿ ಪ್ರಸಾದ್ ಮಗನನ್ನು ಕರೆದು ಹೇಳಿದಾಗ ಅವನೂ ಒಪ್ಪಿಕೊಂಡ. ಆದರೆ ಶುಭ ಮಾತ್ರ ನಂಬಲೇ ಇಲ್ಲ. ಬಹುಶಃ ಅವಳಿಗೆ, ತಿಳಿದೋ ತಿಳಿಯದೆಯೋ ಅತ್ತೆಗೆ ತೊಂದರೆ ಕೊಟ್ಟಿದ್ದು ಕಾಡುತ್ತಿರಬೇಕು.