ಸೀತಮ್ಮ ಮಗನ ಮನೆಗೆ ಬಂದು ಎರಡು ದಿನವೂ ಕಳೆದಿರಲಿಲ್ಲ, ಮೂರನೇಯ ದಿನವೇ ತಮ್ಮ ಸಾಮಾನುಗಳನ್ನು ಪ್ಯಾಕ್ ಮಾಡಿಕೊಂಡು ವಾಪಸ್ ಊರಿಗೆ ಹೋಗುವ ತಯಾರಿಯಲ್ಲಿದ್ದರು. ಸೀತಮ್ಮನೇನು ಅಲ್ಲಿ ಸುಮ್ಮನೇ ಬಂದಿರಲಿಲ್ಲ. ಅದಕ್ಕೂ ಒಂದು ಕಾರಣ ಇತ್ತು.ಅವರ ಸೊಸೆ ಶಾಲಿನಿ ಎಂದರೆ ಅವರ ಮಗ ಸುಹಾಸ್ ನ ಪತ್ನಿ ಗೆ ಡೆಲಿವರಿ ಆಗಿತ್ತು, ಅವರಿಗೆ ಅಜ್ಜಿ ಯಾದ ಅವಕಾಶ ದೊರಕಿತ್ತು. ಈ ವಿಚಾರ ತಿಳಿದಾಗ ಸೀತಮ್ಮ ತಾವು ಕೆಲಸ ಮಾಡುತ್ತಿದ್ದ ಶಾಲೆಗೆ ರಜೆ ಹಾಕಿ ಮೊಮ್ಮೊಗಳ ಮುಖ ನೋಡಲು ಓಡೋಡಿ ಬಂದಿದ್ದರು.
ನಗರದ ಪ್ರತಿಷ್ಠಿತ ಹೈಸ್ಕೂಲ್ ಒಂದರಲ್ಲಿ ಹಿರಿಯ ಶಿಕ್ಷಕಿ ಯಾದ ಸೀತಮ್ಮ ಆಚಾರವಂತರಲ್ಲದೇ, ಮೂಢನಂಬಿಕೆ ನಂಬುವವರು ಆಗಿದ್ದರು. ಸೊಸೆ ಗರ್ಭಿಣಿ ಆಗಿದ್ದಾಗ ತಮಗೆ ಮೊಮ್ಮಗ ಜನಿಸುತ್ತಾನೆ ಎಂಬ ಕಲ್ಪನೆಯಲ್ಲಿ ಇದ್ದರು. ಯಾವಾಗ ಸೊಸೆ ತನಗೆ ಹೆಣ್ಣು ಮಗು ಜನಿಸಿದೆ ಎಂಬ ಸುದ್ದಿ ತಿಳಿಸಿದಳೋ ಆಗ ಅವರ ಆಸೆಗೆ ತಣ್ಣೀರು ಎರಚಿದಂತಾಗಿತ್ತು.ತಮ್ಮ ಮನಸ್ಸಿನಲ್ಲಿ ಆದ ಅಸಮಾಧಾನವನ್ನು ಬಾಯಿ ಬಿಟ್ಟು ಹೇಳಿಕೊಳ್ಳದಿದ್ದರೂ ವರ್ತನೆಯಲ್ಲಿ ವ್ಯಕ್ತಪಡಿಸುತ್ತಿದ್ದರು.
ತನ್ನ ಅಮ್ಮ, ಪುನಃ ವಾಪಸ್ ಹೋಗಲು ಮಾಡಿಕೊಳ್ಳುತ್ತಿದ್ದ ತಯಾರಿ ಕಂಡ ಅವರ ಮಗ ಸುಹಾಸ್ “ಇದೇನಮ್ಮಾ… ನೀ ಬಂದು ನೆಟ್ಟಗೆ ಎರಡು ದಿನ ಕೂಡಾ ಆಗಿಲ್ಲಾ ಆಗಲೇ ಹೊರಡುವ ತಯಾರಿ ಮಾಡ್ಕೋತಿದ್ದೀಯಾ?” ಎಂದಾಗ ಸೀತಮ್ಮ “ಅಲ್ವೋ.. ನಿನಗೆ ಗೊತ್ತೇ ಇದೆ ಅಲ್ವಾ, ಶಾಲೆ ಶುರು ಆಗಿದೆ, ಇನ್ನು ಹೆಚ್ಚು ದಿನ ರಜ ಸಿಗಲ್ಲ. ಹೀಗಾಗಿ ಹೋಗಲೇಬೇಕಲ್ವಾ?.. ನೀ ಏನೂ ಚಿಂತೆ ಮಾಡಬೇಡಾ ಇನ್ನು ಸ್ವಲ್ಪ ದಿನಾ ಕಳೀಲಿ ನಾನು ನಿನ್ನ ಅಪ್ಪ ಇಬ್ರೂ ಬಂದು ಇರ್ತೇವೆ” ಎಂದರು.
ಮರುದಿನ ಬೆಳಿಗ್ಗೆ ಸೀತಮ್ಮ ಸ್ನಾನಾದಿಗಳನ್ನು ಪೂರೈಸಿ, ಹೊರಡಲು ಸಿದ್ಧರಾಗಿ ನಿಂತಾಗ ಅವರ ಮಗ ಸುಹಾಸ್, ಅಡುಗೆಮನೆ ಯಿಂದ ಬಿಸಿ ಬಿಸಿ ಕಾಫೀ -ತಿಂಡಿ ಕೊಟ್ಟ. ಅದನ್ನು ಪಡೆದ ಅವರು ಸೊಸೆ ಮೊಮ್ಮಗಳ ಬಗ್ಗೆ ಕೇಳಿದಾಗ ಆತ “ಅವರಿಬ್ಬರೂ ಮಲಗಿದ್ದಾರೆ”ಎಂದ . ಮುಂದುವರಿದ ಸೀತಮ್ಮ”ತುಂಬಾ ಖುಷಿ ಆಯ್ತು.. ನಿನ್ನ ಮನೆಗೆ ಲಕ್ಷ್ಮೀ ಬಂದಿದ್ದು ನೋಡಿ, ಇನ್ನು ನಿನಗೊಂದು ಗಂಡು ಮಗು ಆಯ್ತೆಂದರೆ ಅಲ್ಲಿಗೆ ನಿನ್ನ ಫ್ಯಾಮಿಲಿ ಪೂರ್ಣವಾದಂತಾಗತ್ತೆ… ನನ್ನ ಮಾತುಗಳು ನಿನಗೆ ಹಳೇ ಕಾಲದ್ದು ಎನಿಸಿದರೂ ಕೊಂಚ ಪ್ರಾಕ್ಟಿಕಲ್ ಆಗಿ ಯೋಜನೆ ಮಾಡು” ಎಂದರು.ಸುಹಾಸ್ ನಿಗೆ ಅಮ್ಮ ಹೇಳುತ್ತಿದ್ದು ಏನು ಹೇಳ ಬಯಸಬೇಕೆಂಬುದು ಸ್ಪಷ್ಟವಾಗಿ ಗೊತ್ತಾಯಿತು.ಆಗ ಸುಹಾಸ್ ತನ್ನ ಜೇಬಿನಿಂದ ಮೊಬೈಲ್ ತೆಗೆದು, ಅದರಲ್ಲಿನ ಕೆಲವು ಮೆಸೇಜ್ ಗಳನ್ನು ತೋರಿಸುತ್ತ “ಇಲ್ನೋಡಮ್ಮಾ… ನೀ ಹೇಳಿದ ಮಾತುಗಳನ್ನು ಮೊದಲೇ ಸುಮಾರು ಒಂದು ಡಜನ್ ಜನ ನನಗೆ ಮೆಸೇಜ್ ಮಾಡಿ ಕಳುಹಿಸಿದ್ದಾರೆ.. ಎಲ್ಲರೂ ನನಗೆ ಗಂಡು ಮಗು ಆಗಿದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಕೆಲವರು ನೇರವಾಗಿ ಮತ್ತೆ ಕೆಲವರು ಪರೋಕ್ಷವಾಗಿ ಹೇಳಿದ್ದಾರೆ…. ಎಂದವ ಪುನಃ, ಅಮ್ಮಾ.. ನೀ ನನಗೆ ಎಷ್ಟೇ ತಿಳಿಹೇಳಲು ಪ್ರಯತ್ನ ಮಾಡಿದರೂ ನಾನು ನಿನಗೆ ಹೇಳುವುದೇನೆಂದರೆ ನೀನು ಹಾಗೂ ಅಪ್ಪ ಯಾವುದೊ ಹಳೇ ಕಾಲದ ವಿಚಾರ ಮನಸ್ಸಿನಲ್ಲಿ ಗಟ್ಟಿಯಾಗಿ ಹಿಡಿದಕೊಂಡು ಬಿಟ್ಟಿದ್ದೀರಿ.. ನಾನು ಯಾಕೆ ಹೀಗೆ ಹೇಳ್ತಾ ಇದ್ದೇನೆ ಅಂದ್ರೆ… ಒಂದು ಪಕ್ಷ ನಮಗೆ ಗಂಡು ಹುಟ್ಟಿದ್ದಿದ್ದರೆ ನೀನು ಯಾವುದೇ ನೆಪ ಹೇಳಿ ಇಷ್ಟು ಬೇಗ ಹೊರಡುವ ತಯಾರಿ ಮಾಡಿಕೊಳ್ಳದೇ ಸದಾ ಆ ಮಗುವಿನೊಂದಿಗೆ ಇರುತ್ತಿದ್ದಿ,ಅಲ್ವಾ..? ಅಮ್ಮಾ.. ನಾವು ಇಪ್ಪತ್ತೊಂದನೆಯ ಶತಮಾನ ಕ್ಕೆ ಕಾಲಿಟ್ಟಿದ್ದೇವೆ, ಇಷ್ಟಾದರೂ ನೀನು ಯಾವುದೋ ಹಳೇ ಕಾಲದ ವಿಚಾರ ಪ್ರತಿಪಾದಿಸುತ್ತಿ ಎಂದು ನನಗೆ ತಿಳಿದಿರಲಿಲ್ಲ.. ನೀನು ಶಾಲೆಯಲ್ಲಿ ಹಿರಿಯ ಶಿಕ್ಷಕಿ ಯಾಗಿ ಕೆಲಸ ಮಾಡುವವಳು, ಸಾವಿರಾರು ಮಕ್ಕಳಿಗೆ ಪಾಠ ಮಾಡುವಳು ಆದಾಗ್ಯೂ ಸ್ವಯಂ .. ಇಂಥಾ ವಿಚಾರಗಳಿಗೆ ಕಟ್ಟು ಬಿದ್ದಿರುವಿಯಲ್ಲಾ? .. ಅದಿರಲಿ ನೀನು ನಿನ್ನೆ ಹೇಳಿದಿ.. ಒಂದು ಕುಟುಂಬ ಪೂರ್ಣ ವಾಗಲು ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇರಲೇಬೇಕು ಎಂದು.. ಆದರೆ ಅಮ್ಮಾ.. ನಿನಗೆ ನನ್ನದೊಂದು ಪ್ರಶ್ನೆ.. ಏನೆಂದರೆ ನಿಮ್ಮ ಪರಿವಾದಲ್ಲಿ ನಾನೊಬ್ಬನೇ ಏಕೆ ಇದ್ದೇನೆ? ಹೇಳು “ಎಂದ.
ಸೀತಮ್ಮ ನ ಬಳಿ ಮಗ ಕೇಳಿದ ಪ್ರಶ್ನೆಗೆ ಉತ್ತರ ಇರಲಿಲ್ಲ.ಹೀಗಾಗಿ ಏನೊಂದೂ ಮಾತನಾಡದೆ ಕತ್ತು ಬಗ್ಗಿಸಿಕೊಂಡು ಅವರು ಊರಿಗೆ ಹೊರಟು ಹೋದರು .ವಾಸ್ತವದಲ್ಲಿ ಸುಹಾಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದ, ಅವರ ಮನ ನೋಯಿಸಲು ಸ್ವಲ್ಪವೂ ಇಷ್ಟ ಪಡುತ್ತಿರಲಿಲ್ಲ. . ಆದರೆ ತಪ್ಪು ವಿಚಾರಗಳನ್ನು ಸಮರ್ಥಿಸಿ ಕೊಂಡು ಮಾತನಾಡುವುದು ಆತನಿಗೆ ಆಗಿ ಬರುತ್ತಿರಲಿಲ್ಲ. ಅಮ್ಮ -ಮಗನ ನಡೆದ ಈ ಎಲ್ಲ ಸಂಭಾಷಣೆ ಗಳನ್ನು ಸುಹಾಸ್ ನ ಹೆಂಡತಿ ಒಳಗಿನಿಂದಲೇ ಕೇಳಿಸಿಕೊಂಡಿದ್ದಳು.ಅವಳ ಬಾಡಿ ಹೋದ ಮುಖ ಕಂಡ ಸುಹಾಸ್ ಅವಳ ಬಳಿ ಹೋಗಿ -“ನೋಡು ಶಾಲಿನಿ.. ನೀನು ಅಮ್ಮ ಆಡಿದ ಮಾತಿನ ಬಗ್ಗೆ ಆಗಲಿ ಅಥವಾ ಇನ್ನೊಬ್ಬರು ಈ ವಿಚಾರದ ಬಗ್ಗೆ ಮಾತನಾಡುವುದನ್ನಾಗಲಿಶಮನಸ್ಸಿಗೆ ತೆಗೆದು ಕೊಳ್ಳಬೇಡ..ನನಗೆ ಹೆಣ್ಣಾದರೂ ಒಂದೇ ಗಂಡಾದರೂ ಒಂದೇ ಯಾವ ವ್ಯತ್ಯಾಸವೂ ಕಾಣಲ್ಲ-” ಎಂದಾಗ, ಆಕೆ “ನೋಡಿ ನಾನು ಅಮ್ಮನ ಮಾತಿಗಾಗಲಿ ಮತ್ಯಾರ ಮಾತಿಗೆ ಮನಸ್ಸು ಕೆಡಿಸಿಕೊಳ್ಳುವವಳಲ್ಲ, ನಾನೋರ್ವ ಸಮಾಜ ಸೇವಕಿ ಆಗಿರುವೆ ದಿನ ನಿತ್ಯ ನೂರಾರು ಹೆಣ್ಣುಮಕ್ಕಳನ್ನು ಮಹಿಳೆಯರನ್ನು ಭೇಟಿ ಮಾಡುತ್ತಿದ್ದೇನೆ.
ವಿಚಿತ್ರ ಎಂದರೆ ಈ ತನಕ ಅವರೆಲ್ಲ, ತಾವು ಹೆಣ್ಣಾಗಿ ಹುಟ್ಟಿದ ಪ್ರಯುಕ್ತ ಅವರವರ ಮನೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಟ್ರೀಟ್ ಮಾಡುವುದನ್ನು ಸಹಿಸಿಕೊಂಡಿದ್ದರೆನೇ ನಾವು ನಮ್ಮ ಬದುಕಿನಲ್ಲಿ ಗುರಿ ಸಾಧಿಸಲು ಸಾಧ್ಯ.. ಎಂದು ಹೇಳುತ್ತಿರುವುದನ್ನು ಕೇಳುತ್ತಿದ್ದೇನೆ ಹಾಗೂ ಆದರ ಅನುಭವವನ್ನೂ ಪಡೆದಿದ್ದೇನೆ, ಇಷ್ಟೇ ಏಕೆ ನಮ್ಮ ಮನೆಯ ಕಡೆ ಯಾರಿಗಾದರೂ ಹೆಣ್ಣು ಮಗು ಜನಿಸಿದರೆ ಆಗ ಅದರ ತಂದೆ.. ಆ ಮಗುವಿನ ತಾಯಿಗೆ ಸಮಾಧಾನ ಮಾಡುತ್ತ..” ಕಲ್ಪನಾ ಚಾವ್ಲಾ, ರಾಣಿ ಲಕ್ಷ್ಮೀ ಬಾಯಿ, ಪ್ರತಿಭಾ ಪಾಟೀಲ್, ಮದರ್ ಥೆರೆಸಾ ಮುಂತಾದವರ ಹೆಸರು ಹೇಳಿ ಇವರೆಲ್ಲ ಹೆಣ್ಣಲ್ಲವೇ? ಕಷ್ಟ ಪಟ್ಟು, ನೊಂದು ಬೆಂದು ಸಾಧನೆ ಮಾಡಿ ತೋರಿಸಿಲ್ಲವೆ?.. ನಾವು ಮುನ್ನುಗ್ಗಿ ಅವರುಗಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಿ ಓದಿಸಿದರೆ ಅವರು ಖಂಡಿತ ಸಾಧನೆಯ ಪತಾಕೆ ಹಾರಿಸುವುದರ ಜೊತೆಗೆ ನಮ್ಮ ಹೆಸರನ್ನೂ ಸಾರ್ಥಕ ಪಡಿಸುತ್ತಾರೆ.. ಹೀಗಾಗಿ ಹೆಣ್ಣು ಎಂದು ಹೀಯಾಳಿಸುವುದರಲ್ಲಿ ಯಾವ ಅರ್ಥವೂ ಇಲ್ಲ “ಎಂದು ಈಗಲೂ ಹೇಳುತ್ತಿರುತ್ತಾರೆ ..” ಎಂದು ಹೇಳಿ ಮುಗಿಸಿದಾಗ, ಸುಹಾಸ್ ತನ್ನ ಮನದಲ್ಲಿ”ತನಗೆ ಇಂತಹ ಉದಾತ್ತ ವಿಚಾರ ಹೊಂದಿರುವ ಪತ್ನಿ ದೊರೆತದ್ದು ಸಾರ್ಥಕ ವಾಯಿತು ” ಎಂದು ಅಂದು ಕೊಳ್ಳುತ್ತಾನೆ.