ಬೆಳಕ ಶಾಲೆಯಲಿ ಕತ್ತಲೆಯ ಪಾಠಗಳ ಕಲಿಯಬೇಕಾಗಿದೆ
ಮುರುಕು ಮನೆಯಲಿ ಕಟ್ಟುವ ಆಟಗಳ ಆಡಬೇಕಾಗಿದೆ
ಕಟ್ಟಿಸಿದವರೆಲ್ಲ ಕೆತ್ತಿಸಿರುವರು ಕಲ್ಲಿನಲಿ ತಮ್ಮ ತಮ್ಮ ಹೆಸರು
ಮಳೆ ಗಾಳಿಯಿಂದಲ್ಲ ನೋಟ ಸ್ಥಾವರಗಳ ಸೀಳದಂತಿಡಬೇಕಾಗಿದೆ
ಸಪ್ಪೆಯಾಗುತ್ತಿವೆ ಉಪ್ಪಿನ ಕುರಿತಾದ ಕಥೆ ಕವನಗಳು
ರುಚಿಯ ಊರಿನಲಿ ಸಂಗೀತದ ಕಛೇರಿಗಳ ನಡೆಸಬೇಕಾಗಿದೆ
ಪುಗಸಟ್ಟೆ ಬಾಜಾರಲಿ ಮಾರಾಟಕ್ಕಿವೆ ಹಳಸಿದ ಪರಿಕರಗಳು
ಕೊಳ್ಳುಬಾಕರ ಮುಂದುಗಡೆ ಖಾಲಿ ಗಾಡಿಗಳ ಓಡಿಸಬೇಕಾಗಿದೆ
ಕೆಂಡವಿಲ್ಲದ ಒಲೆಯಲಿ ಅಡುಗೆ ಮಾಡಬೇಡ ‘ಕವಿ’
ಭ್ರಮೆಯ ತಾಟಿನಲಿ ಬಡಿಸಿದ ತುತ್ತುಗಳ ಉಣ್ಣಬೇಕಾಗಿದೆ.