‘ಕಾಡು-ಮೇಡು’ ಲೇಖನಗಳು
ಲೇಖಕರು: ಮಾಲತೇಶ ಅಂಗೂರ
ಪುಟ: ೧೩೫, ಬೆಲೆ: ೨೫೦/ ರೂ
ಪ್ರಕಾಶಕ: ಶ್ರಮಿಕ ಪ್ರಕಾಶನ ,
ಕೂಲಿಯವರ ಓಣಿ, ಹಾವೇರಿ.
ಮೊ: 9481749440
ಮಾಲತೇಶ ಅಂಗೂರರ “ಕಾಡು ಮೇಡು” ಕಾಡುಮೇಡಿನ ಜೀವ ಚರಿತೆ.
ನಮ್ಮ ಸುತ್ತ ಸಹಜೀವನ ನಡೆಸುವ ಜೀವ ಸಂಕುಲ ಒಂದಿದೆ. ಒಂದೇ ಮನೆಯಲ್ಲಿ ಅನೇಕ ಜನ ಇದ್ದರೂ, ಭಿನ್ನ ಮನಸ್ಸುಗಳಿವೆ. ಅಗೋಚರ ಮನೆಗಳೂ ಇವೆ. ಹಲ್ಲಿ, ಜೇಡ, ಜೊಂಡಿಗ, . . . ನಾಯಿ ಬೆಕ್ಕು ಕೋಳಿ ಹೀಗೆಲ್ಲ. ಇಂಥಹ ಜೀವ ಪ್ರಪಂಚವನ್ನು ನೋಡುವ ಕಣ್ಣುಗಳು ಬೇಕು. ಹೊಸ್ತಿಲು ಹೊರಗೆ ಬಂದರೆ, ಇನ್ನೂ ಒಂದು ಪ್ರಾಣಿಪಕ್ಷಿ ಗಳ ಲೋಕವಿದೆ. ಇಂಥಹ ಮಾತಗಳಿಗೆ ಪುಷ್ಠಿ ಕೊಡುವ ಕೃತಿ ‘ಕಾಡು ಮೇಡು’.
ಹಾವೇರಿಯ ಕೌರವ ದಿನಪತ್ರಿಕಯ ಸ್ಥಾನಿಕ ಸಂಪಾದಕ ಮಾಲತೇಶ ಅಂಗೂರರ ಕೃತಿ ಇದು. ಸದಾ ಚಡಪಡಿಕೆಯ ಅಂಗೂರ, ಜೀವಪರ ಜನಪರ ಕಾಳಜಿಗಳನ್ನಿಟ್ಟಿಕೊಂಡ ಲೇಖಕ.
ಅಂಗೂರ ಎಂದರೆ
ನೆಲ ಹೊಲ, ಪಿಸುಗುಡುವ ಕಾಲ
ಅಂಗೂರ ಎಂದರೆ
ಮುAಜಾನೆಯ ಕೊರಳಿಗೆ ನೇತು ಬಿದ್ದ
ಕರುಣೆಯ ಕೌತುಕದ ಕ್ಯಾಮೆರಾ ಕಣ್ಣು
ಇವು ಪ್ರತಿಭಾವಂತ ಕವಿ ಬಿ. ಶ್ರೀನಿವಾಸ ಬರೆದ ಒಳನುಡಿಯ ಕಾವ್ಯ ಸಾಲುಗಳು. ಇಷ್ಟು ಅಂಗೂರರ ಬಗ್ಗೆ ಸಾಂದ್ರವಾಗಿ ಹೇಳಿದರೆ ಸಾಕು ಅನ್ನಿಸುತ್ತೆ,
ಹಾವೇರಿ ಪರಿಸರದ ತಳಮಳವನ್ನೇ ಉಸಿರಾಗಿಸಿಕೊಂಡಿರುವ ಕಾಡು ಮೇಡುವಿನಲ್ಲಿ ೩೧ ಲೇಖನಗಳಿವೆ. ಮುಖ್ಯವಾಗಿ ನಮ್ಮ ಸುತ್ತಲಿನ ಸಾಮಾನ್ಯ ಅನ್ನಬಹುದಾದರೂ, ಕಣ್ಣಿಗೆ ಬೀಳದೆ ಹೋದ ಸಂಗತಿಗಳಿವೆ. ಮನುಷ್ಯ ಮತ್ತು ಪ್ರಾಣಿ ಪಕ್ಷಿ ಲೋಕ, ಸಾಮಾನ್ಯತೆಯಲ್ಲಿ ಅಸಮಾನ್ಯತೆ ಹುಡುಕುವ ಯತ್ನದವು. ವೃತ್ತಿಯೊಂದಿಗೆ ಜೀವ ಪ್ರೀತಿಯನ್ನು ಕಾಣುವ ತವಕ ಇವುಗಳದ್ದು. ಎಲ್ಲೋ ದೂರ ಹೋಗದೆ ತನ್ನ ಸುತ್ತ ಕಂಡ ಕೌತುಕದ ಕ್ಷಣಗಳ:ನ್ನು ಅಕ್ಷರಗಳಲ್ಲಿ ಹಿಡಿದಿಟ್ಟವು.
ನಮ್ಮ ಜೊತೆಗೆ ಬದುಕುತ್ತಿರುವ ಜೀವ ಲೋಕವನ್ನು ಪ್ರೀತಿಸುವ ಗುಣ ಹೊರ ಹೊಮ್ಮಿಸುವುದೇ ಇಡೀ ಕೃತಿಯ ಆಶಯ. ಸಾಮನ್ಯ ಜ್ಞಾನ ವಾಹಕದ ಮೂಲಕವೇ ಕಂಡುಕೊAಡ ಸತ್ಯಗಳು ಇಲ್ಲಿವೆ. ತನ್ನ ಲೋಕಾನುಭವವನ್ನು ನಮ್ಮದಾಗಿಸುವ ಕರುಳಿನ ಬರಹಗಳು.
ಪ್ರಾಣಿ ಪಕ್ಷಿಗಳಿಗೂ ಬಾಯಾರಿಕೆ ಉಂಟು – ಮೊದಲ ಲೇಖನದಲ್ಲಿ ನೀರಿಗಾಗಿ ಜಿಂಕೆ ಮರಿಗಳ ಪರದಾಟ, ಬೊಗಸೆ ನೀರಿಗಾಗಿ ನೀರಿನಲ್ಲಿ ಸಿಕ್ಕು ಪರದಾಡುವುದನ್ನು ದಾಖಲಿಸಿದ್ದಾರೆ. ಕೆರೆಕಟ್ಟೆಗಳಿಲ್ಲದೆ ಜಿಂಕೆಗಳು ಪರದಾಡುವ ಚಿತ್ರಣ ಮನಕಲಕುವಂತಹದು.
ಬಾಯಿ ಅಳತೆಗೂ ಮೀರಿದ ಮೀನನ್ನು ತಿನ್ನುವ ಕೆರೆ ಹಾವಿನ ಪ್ರಸಂಗ, ಗಾಯಗೊಂಡ ಕಾಗೆಯೊಂದು ಮನೆ ಹೊಕ್ಕು ಬಿದ್ದಾಗ, ಅಪಶಕುನ ಅನ್ನದೆ ಕಾಗೆಗೆ ಪಶು ವೈದ್ಯರ ಬಳಿ ಒಯ್ದು ಚಿಕಿತ್ಸೆ ಕೊಡಿಸುವ ಘಟನೆ, ಬಾಯಾರಿಕೆಗೆ ಕುಸಿದು ದಾರಿಯಲ್ಲಿ ಬಿದ್ದ ಜಿಂಕೆ ಮರಿಗೆ ಹಾದಿ ಹೋಕನೊಬ್ಬ ನೀರು ನೀಡುವ ಪ್ರಸಂಗ, ಸತ್ತ ತನ್ನ ಮರಿಯನ್ನು ಕಾಯುವ ತಾಯಿ ನಾಯಿಯ ಜೀವ ಮಿಡಿತ ಇಂತಹ ಸತ್ಯ ಪ್ರಸಂಗಗಳನ್ನು ಮಾಲತೇಶ ಕರುಳು ಚರ‍್ರೆನ್ನುವಂತೆ ಸಹಜವಾಗಿ ಕಟ್ಟಿಕೊಟ್ಟಿದ್ದಾರೆ.
ಮೇಲಿನವು ಪ್ರಾಸಂಗಿಕ ಘಟನಾವಳಿಗಳಾದರೆ, ಹಾರುವ ಓತಿ ಬೆನ್ನಟ್ಟಿದ ಕರ್ವಾಲೊ ರೀತಿಯ, ಕೆಂದಳಿಲು ಹಾರಿತು, ಏಡಿ ತಿನ್ನುವ ಬೂದು ಬಣ್ಣದ ಮುಂಗುಸಿ, ಗೀಜುಗನ ಗೂಡು ಹೊಕ್ಕ ಹಾವು, ಹರಣಿ ಹಾರಿತು ದೂರ ದೂರ, ಲಾಲಖಾನ ಅವರ ತೋಟದ ಐದು ಮುಶ್ಯಾಗಳ ಹತ್ಯೆ, ಮೀನಿನ ಆಸೆಗೆ ಬಲೆಯಲ್ಲಿ ಸಿಕ್ಕು ಒದ್ದಾಡಿದ ಬಂದಿಯಾದ ಗರುಡ – ಇಂತಹ ಅನೇಕ ಪ್ರಸಂಗಗಳು ಅಕ್ಷರಗಳಾಗಿವೆ.
ಇಲ್ಲಿ ಉಲ್ಲೇಖಿಸಬಹುದಾದ ಮತ್ತೊಂದು ಬಹುಮುಖ್ಯ ಲೇಖನ ಕೋಳಿ ವಿಷಾದ ಯೋಗ. ಹೊಲ ಬದುವಿನಲ್ಲಿ ಸಿಕ್ಕ ಎರಡು ನವಿಲಿನ ತತ್ತಿಗಳನ್ನು ತಂದು, ಕೋಳಿ ಕಾವಿಗೆ ಕೊಟ್ಟ ಪ್ರಸಂಗ. ತತ್ತಿ ಒಡೆದು ನವಿಲು ಮರಿಗಳು ಕೋಳಿ ಮರಿಗಳೊಂದಿಗೆ ಜೀವ ಸಾಗಿಸುವ ಕುತೂಹಲದ ಪ್ರಸಂಗವಿದು. ನವಿಲು ಮರಿಗಳು ಬೆಳೆದು ಬದಲಾದಾಗ ಅದು ಅನುಭವಿಸುವ ವಿಷಾದಯೋಗದ ಬಗ್ಗೆ ಹೃದ್ಯವಾಗಿ ಹೀಗೆ ಹೇಳುತ್ತಾರೆ :
‘ಈಗಲೆ ನವಿಲು ಮರಿಗಳ ಹಾವ ಭಾವದಲ್ಲಿ ಸಾಕಷ್ಟು ವ್ಯಾತ್ಯಾಸಗಳಾಗಿವೆ. ಇನ್ನೂ ವಾರ ಹದಿನೈದು ದಿನಗಳಲ್ಲಿ ನವಿಲಿನ ಮರಿಗಳು ತಕ್ಕ ಮಟ್ಟಿಗೆ ದೊಡ್ಡದವುಗಳಾಗಿ, ನವಿಲನ ನೈಜ ಬಣ್ಣಕ್ಕೆ ತಿರುಗಿದರೆ ಕೋಳಿ ಅನುಭವಿಸುವ ಯಾತನೆ ಎಂತಹದ್ದು ? ಕಾಗೆಗೆ ಕಾಡುವ ವಿಷಾದಯೋಗ ಕೋಳಿಗೂ ಕಾದಿದೆಯೇ ?’
ಕುತೂಹಲ ಮತ್ತು ಜೀವಪರ ಕಾಳಜಿ ಇರುವ ಬರವಣಿಗೆ ಸದಾ ನೀರಾಭರಣ ಸುಂದರಿ ಇದ್ದಂತೆ. ಕೇವಲ ಕುತೂಹಲ ಅಲ್ಲ, ಕಳಕಳಿ ಇರುವ ಇಂತಹ ಕಾಡುಮೇಡಿನ ಜೀವ ಚರಿತೆಯನು ಮಾಲತೇಶ ಅಂಗೂರು ಚಿತ್ರಿಸಿದ್ದಾರೆ. ಪುಸ್ತಕ ರಚನೆ ಸುಲಭದ ಕೆಲಸವಲ್ಲ. ಕೇವಲ ವಿದ್ವತ್ತ್ ಇದ್ದರೆ ಸಾಲದು ಲೋಕಜ್ಞಾನದ ಬೆಳಕಿನಲ್ಲಿ ಕಾಣುವ ಚಹರೆಗಳು ಇಲ್ಲಿವೆ.
ಮುಖಪುಟ ವಿನ್ಯಾಸದ ಅಮೃತ ಗುಂಜಾಳ, ಬೆನ್ನುಡಿ ಬರೆದ ಪ್ರವೀಣ ಪೂಜಾರರ ನುಡಿಗಳು ಹಾಗೂ ಅಲಲ್ಲಿ ಬಳಸಿಕೊಂಡ (ಸ್ವತಃ ಲೇಖಕರೆ ಪ್ರಸಂಗದ ಎಲ್ಲ ಛಾಯಾ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ) ಚಿತ್ರಗಳು ಸೆಳೆಯುತ್ತವೆ.
ಕೃತಿ ಪರಿಚಯ: ಸತೀಶ ಕುಲಕರ್ಣಿ,
ಸಾಹಿತಿಗಳು, ಹಾವೇರಿ.