ಮಂಜುಳಾ ಗೌಡ ಕಾರವಾರ ಅವರು ಬರೆದ ಗಜಲ್

ಬಾಳ ಪಯಣದಿ ಸಾಗುವ ಪಥದಿ ಎದುರಾಗುವ ನೂರಾರು ತಿರುವುಗಳಿಗೆಲ್ಲ ಏನೆಂದು ಹೆಸರಿಡಲಿ ಸಖಿ
ಪ್ರತಿ ತಿರುವಿನಲ್ಲಿ ಅರಿವಾಗುವ ಬಗೆ ಬಗೆ ಅನುಭವಗಳಿಗೆ ಏನೆಂದು ಹೆಸರಿಡಲಿ ಸಖಿ

ಹಾದಿಯ ಇಕ್ಕೆಲಗಳಲ್ಲಿ ಚಿಗುರುವ ಹಸಿರು ಲತೆ ಕಣ್ಮನ ತಣಿಸುವ ಬಗೆ ಬಗೆ ಜಾತಿಯ ಕುಸುಮಗಳು
ಮನವ ಸೆಳೆಯುವ ಸೃಷ್ಟಿಯ ಈ ಕೌತುಕಕ್ಕೆ ಏನೆಂದು ಹೆಸರಿಡಲಿ ಸಖಿ

ಒಮ್ಮೊಮ್ಮೆ ಧುತ್ತೆಂದು ಎದುರಾಗುವ ಬೆಟ್ಟ ಗುಡ್ಡಗಳ ಕಲ್ಲು ಮುಳ್ಳುಗಳು ನೀಡುವ ನೋವು
ದಿಕ್ಕು ಕಾಣದೆ ಕಂಗಾಲಾಗಿ ನಿಂತ ಗಳಿಗೆಯಲ್ಲಿ ದಾರಿ ತೋರುವ ಕಾಣದ ಕೈಗೆ ಏನೆಂದು ಹೆಸರಿಡಲಿ ಸಖಿ

ದಾರಿ ಸವೆಸುತ ಪಯಣ ಸಾಗಿರಲು ಅಲ್ಲಲ್ಲಿ ಆಕಸ್ಮಿಕವಾಗಿ ಗೋಚರಿಸುವ ಅಪೂರ್ವ ಸೊಬಗಿನ ರಮ್ಯ ತಾಣಗಳು
ಖುಷಿಯಲ್ಲಿ ಇಹವ ಮರೆತು ಅದರೊಳು ಬೆರೆತಿರಲು ಕ್ಷಣದಲ್ಲಿ ಮಿಂಚಿ ಮಾಯವಾಗುವ ಸವಿ ಬಂಧಕ್ಕೆ ಏನೆಂದು ಹೆಸರಿಡಲಿ ಸಖಿ

ಜೀವನ ಯಾನದಿ ಸಾಗುವ ದಾರಿಯಲ್ಲಿ ಅಚ್ಚಳಿಯದೆ ಉಳಿದಿವೆ ಹಲವು ನೆನಪಿನ ಹೆಜ್ಜೆಗಳ ಗುರುತು
ಉಸಿರಿರುವವರೆಗೂ ನಿಸರ್ಗ ನಿನಾದೆಯ ಹೃದಯವ ಬೆಸಿದುಕೊಂಡಿರುವ ಈ ಚಂದದ ಅನುಭವಗಳಿಗೆ ಏನೆಂದು ಹೆಸರಿಡಲಿ ಸಖಿ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop