ಮಂಜುಳಾ ಜಿ. ಎಸ್. ಪ್ರಸಾದ್ ಅವರು ಬರೆದ ಎರಡು ಕವಿತೆಗಳು

1) ನೆಪ..!

ನೆಪಗಳೇ ಹಾಗೆ..
ಹೊಳೆಯಲ್ಲಿ ಮುಳುಗುವವನಿಗೆ
ತೇಲುವ ದಿಮ್ಮಿ ಸಿಕ್ಕಂತೆ ಆಸರೆ ಕೈಗೆ!
ನೆಪಗಳೇ ಹಾಗೆ..
ಬರುವುದು ಭೀಕರ ಬರಗಾಲದಲ್ಲಿ
ಅಕಾಲಿಕ ಮಳೆಯಂತೆ ತಂಪು ಚೆಲ್ಲಿ!
ನೆಪಗಳೇ ಹಾಗೆ..
ಕುಂಟುತ್ತಿದ್ದರೂ ಮಾತು ಮಾತಿಗೆ
ಊರುಗೋಲಾದಂತೆ ನಡೆವವನಿಗೆ!
ನೆಪಗಳೇ ಹಾಗೆ..
ಕಂಡ ಪದ್ಮಪತ್ರದ ಜಲ ಬಿಂದು
ಅಂಟದಂತೆ ಸಂದರ್ಭದ ಬಂಧು!
ನೆಪಗಳೇ ಹಾಗೆ..
ತಕ್ಷಣ ಸಿಕ್ಕಿದ ಪರಿಹಾರ
ವಿರಾಮಕೆ ಇಳಿಸಿದ ಮನೋಭಾರ!
ನೆಪಗಳೇ ಹಾಗೆ..
ಸುಳ್ಳು ಸುಳ್ಳಿನ ಕಂತೆ
ಸತ್ಯದ ತಲೆಮೊಟುಕಿ ಚಿಗುರಿದಂತೆ!
ನೆಪಗಳೇ ಹಾಗೆ..
ದಾರಿಗಾಣದ ಕಗ್ಗತ್ತಲ ರಾತ್ರಿಗೆ
ಕಲ್ಪನೆ ಕನಸಿನಂತೆ ಹಿಡಿವ ಕೈದೀವಿಗೆ!

2) ಆ ಮುಖ….!

ಇರುವುದೊಂದೇ ಬಾಳ ಹಾದಿಯಲಿ,
ಸದಾ ನಗೆ ಹೂವು ಅರಳುತಿರಲಿ!
ಸೋಲು ಬಂದಾಗಲೂ ನಡುನಡುವಲಿ,
ಅದರ ಆ ಮುಖ ಕಣ್ಮುಂದೆ ಕಾಣದಿರಲಿ!

ನಿತ್ಯ ಕನಸುಗಳ ಜಾತ್ರೆಯಲಿ,
ಹಿರಿಮೆ ಗರಿಮೆಗಳ ತೇರಾಗಲಿ!
ಇಟ್ಟ ಗಮ್ಯಕ್ಕೆ ಅಡ್ಡಿ ಮಾಡುವವರಿರಲಿ,
ಅವರ ಆ ಮುಖ ಕಣ್ಮುಂದೆ ನಿಲ್ಲದಿರಲಿ!

ಬದುಕು ಭರವಸೆಯ ಜಾಡಿನಲಿ,
ಉಚ್ವಾಸ ನಿಶ್ವಾಸದಿ ಚೈತನ್ಯ ಬರಲಿ!
ಉಸಿರುಗಟ್ಟಿಸುವ ವಾತಾವರಣವೇ ಇರಲಿ,
ಆತಂಕದ ಆ ಮುಖ ಕಣ್ಮುಂದೆ ಸುಳಿಯದಿರಲಿ!

ಜೀವಮಾನದ ಒಟ್ಟು ಕಾಲಾವಧಿಯಲಿ,
ಆತ್ಮವಿಶ್ವಾಸವು ಎಂದೂ ತುಂಬಿ ತುಳುಕಿರಲಿ!
ಸಾವು ಬರುವುದಾದರೂ ಬೇಗ ಬಂದುಬಿಡಲಿ,
ನರಳಾಟದ ಆ ಮುಖ ಕಣ್ಮುಂದೆ ತೋರದಿರಲಿ!

ಮಂಜುಳಾ ಜಿ. ಎಸ್. ಪ್ರಸಾದ್
ಸಹ ಶಿಕ್ಷಕರು,
ಸ ಹಿ ಪ್ರಾ ಶಾಲೆ ಯಲುವಹಳ್ಳಿ
ಚಿಕ್ಕಬಳ್ಳಾಪುರ ಜಿಲ್ಲೆ.

0
    0
    Your Cart
    Your cart is emptyReturn to Shop