ಸಾಮಾಜಿಕ ಸಂಕಟಗಳ ನಿವಾರಣೆಗಾಗಿ ಬುದ್ಧ ಬೆಳಕಿನ ಮದ್ದು – ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ

“ಒಮ್ಮೆ ಆರಂಭಿಸಿದ ಯುದ್ಧ ನಿಲ್ಲದೆ ನಿರಂತರವಾಗಿಬಿಡುತ್ತೆ.  ಕೊಂದವನನ್ನು ಕೊಲ್ಲಲು ಮತ್ತೊಬ್ಬನು ಹುಟ್ಟುತ್ತಾನೆ.  ಯುದ್ಧವೆಂದರೆ ಕಿಡಿಗೆ ಕಾಯುತ್ತಿರುವ ಕೆಂಡ.  ಯುದ್ಧವೆಂಬುದು ಗೆದ್ದವನನ್ನೂ ಸೋಲಿಸುತ್ತದೆ”.  ಚಿಂತನಾರ್ಹ ಈ ಮಾತುಗಳು ಕೇಳಿ ಬಂದದ್ದು “ಬುದ್ಧನ ಬೆಳಕು” ನಾಟಕದಲ್ಲಿ.

ಸತೀಶ್ ಜಾರಕಿಹೊಳಿ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ಕರ್ನಾಟಕ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಹರಿಹರದ ಮೈತ್ರಿವನದಲ್ಲಿ ರಾಜ್ಯದ ಬೇರೆ ಬೇರೆ ಪ್ರದೇಶಗಳ ಕಲಾವಿದರನ್ನು ಕೂಡಿಸಿ `ರಂಗ ಕಲರವ’ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು.  ಇದರ ಅಂಗವಾಗಿ ದಾವಣಗೆರೆಯ ಎಸ್.ಎಸ್.ಎಂ. ಕಲಾಭವನದಲ್ಲಿ “ಬುದ್ಧನ ಬೆಳಕು” ನಾಟಕವನ್ನು ಪ್ರದರ್ಶಿಸಲಾಯಿತು.

ಕಳಿಂಗ ಯುದ್ಧದಲ್ಲಿ ಸಾಮ್ರಾಟ್ ಅಶೋಕ ಜಯಶಾಲಿಯಾಗಿದ್ದರೂ ಯುದ್ಧ ಪರಿಣಾಮದ ಭೀಕರ ಸಾವುನೋವುಗಳನ್ನು ಕಂಡುಂಡ ಅಶೋಕ ತೀವ್ರವಾಗಿ ಮನೋಕ್ಲೇಷೆಗೆ ಒಳಗಾಗಿ ಶಾಂತಿ ಮರುಸ್ಥಾಪನೆಗಾಗಿ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾನೆ.  ತನ್ನ ದೇಶದೆಲ್ಲೆಡೆ ಬೌದ್ಧ ಧರ್ಮವನ್ನು ಪ್ರಸರಣಗೊಳಿಸುತ್ತಾನೆ.  ಈ ಕಥಾ ಹಂದರವನ್ನು ಒಳಗೊಂಡ “ಬುದ್ಧನ ಬೆಳಕು” ನಾಟಕ ಸಿಂಹಾವಲೋಕನ ಕ್ರಮದಲ್ಲಿ ಸಿದ್ಧಾರ್ಥ ಬುದ್ಧನಾದ ಬಗೆ ಹಾಗೂ ಅವರ ತತ್ವ ಬೋಧನೆಗಳು ಮತ್ತು `ಬಿಕ್ಕು’ ಸ್ವೀಕಾರಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ.

ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ

ರೋಹಿಣಿ ನದಿ ನೀರು ಹಂಚಿಕೆ ಸಂಘರ್ಷ ಹಾಗೂ ಈ ಹಿನ್ನಲೆಯಲ್ಲಿ ಸಿದ್ದಾರ್ಥ ಅರಮನೆ ತೊರೆಯುವುದು, ಸತ್ಯಶೋಧನೆಯ ಹುಟುಕಾಟ, ನಂತರದಲ್ಲಿ ಕಂಡಂತಹ ಯಜ್ಞಯಾಗಾದಿಗಳು, ಅಸ್ಪೃಶ್ಯತೆ, ಅಸಮಾನತೆ, ಲಿಂಗತಾರತಮ್ಯ ಮುಂತಾದ ಪರಂಪರೆಯ ಸಾಮಾಜಿಕ ಮಹಾರೋಗಗಳಿಗೆ, ಸಂಕಟಗಳಿಗೆ, ಸಂಘರ್ಷಗಳಿಗೆ ತನ್ನರಿವಿನ ಬೆಳಕಿನ ಮದ್ದನ್ನು ಲೇಪಿಸುತ್ತಾ ಆ ಕಾರಣಕರ್ತರ ಮನಪರಿವರ್ತನೆ ಮಾಡುವ, ಬಿಕ್ಕುಗಳನ್ನಾಗಿಸುವ, ಹಲವು ಘಟನೆಗಳನ್ನು ಈ ನಾಟಕದಲ್ಲಿ ಸಂಯೋಜಿಸಲಾಗಿದೆ.  ಈ ಎಲ್ಲಾ ಘಟನೆಗಳ ದೃಶ್ಯಾವಳಿಗಳು ರಂಗದ ಮೇಲೆ ಹೆಚ್ಚು ಆಕರ್ಷಕವಾಗಿ  ಔಚಿತ್ಯ ಪೂರ್ಣವಾಗಿ ಬಿಂಬಿತವಾಗಿ ರಂಗಮಂದಿರದ ಇಕ್ಕೆಲಗಳಲ್ಲಿ ತುಂಬಿದ್ದ ರಂಗ ಪ್ರೇಮಿಗಳನ್ನು ಉಲ್ಲಸಿತಗೊಳಿಸಿದ್ದಲ್ಲದೆ ಗಂಭೀರ ಚಿಂತನೆಗೂ ಎಡೆಮಾಡಿಕೊಟ್ಟವು.

ಮುಟ್ಟಾದ ಕನ್ಯೆ ಪ್ರಕೃತಿ ಪ್ರಸಂಗ ವಿಶೇಷವಾಗಿ ಪ್ರೇಕ್ಷಕರ ಗಮನ ಸೆಳೆಯಿತು.  ಬಾಯಾರಿದ ಬಿಕ್ಕು ಆನಂದ ನೀರು ಹೊತ್ತು ತರುತ್ತಿದ್ದ ಪ್ರಕೃತಿ ಎದುರಾದಾಗ ಕುಡಿಯಲು ನೀರು ಕೇಳುತ್ತಾನೆ.  ಪ್ರಕೃತಿ ತಾನು ಮುಟ್ಟಾಗಿದ್ದೇನೆ ಎಂದು ಹೇಳುತ್ತಾ ನೀರು ಕೊಡಲು ಹಿಂಜರಿಯುತ್ತಾಳೆ.  ಆಗ ಆನಂದ ಕೇಳುವ ಪ್ರಶ್ನೆಗಳ ಝಲಕೊಂದು ಹೀಗಿದೆ.

“ನಿಮ್ಮ ಗ್ರಾಮದ ಮನೆಗಳಲ್ಲಿರುವ ಹಾಲುಣಿಸುವ ಆಕಳು, ಎಮ್ಮೆ, ಕುರಿ, ಮೇಕೆ, ಬೆಕ್ಕು, ನಾಯಿ ಇವುಗಳನ್ನು ತಿಂಗಳಿಗೆಷ್ಟು ರಾತ್ರಿ ಮನೆಯಿಂದ ಹಟ್ಟಿಯಿಂದ ಹೊರಗಟ್ಟುತ್ತಾರೆ ತಂಗಿ? ಪ್ರಾಣಿಗಳಲ್ಲಿಲ್ಲದ ಮುಟ್ಟಿನ ಮೈಲಿಗೆ ಮನುಷ್ಯರಿಗೇಕೆ ತಂಗಿ? ನಿಸರ್ಗದಲ್ಲಿ ಪ್ರತಿಯೊಂದು ಹೆಣ್ಣು ಜೀವಿಯೂ ಮುಟ್ಟಾಗುತ್ತದೆ.  ಹೆಣ್ಣು ಮುಟ್ಟಾಗದಿದ್ದರೆ ಮಾನವನ ಸಂತತಿ ಬೆಳೆಯುವುದೆಲ್ಲಿ? ಅವಳು ಮುಟ್ಟಾದಳೆಂದರೆ ಅಂದು ಹಬ್ಬವಾದಂತೆ”. – ಈ ಮಾತುಗಳು ಮುಟ್ಟು-ಹುಟ್ಟು ಸೂತಕವೆಂದು ಪರಿಭಾವಿಸಿ ಇಂದಿಗೂ ಹೆಣ್ಣನ್ನು ಹಟ್ಟಿಯಿಂದ ಹೊರಗೆ ಕಳ್ಳೆಸಾಲಿನಲ್ಲಿ, ಗುಬ್ಬ ಗುಡಿಸಿಲುಗಳಲ್ಲಿ ಇಡುವುದು, ಮನೆಯೊಳಗೆ ಕತ್ತಲೆ ಕೋಣೆಯೊಳಗೆ ಮೂಲೆಯೊಂದರಲ್ಲಿ ಕುಳ್ಳರಿಸುವುದು, ಮಂಗಳಕಾರ್ಯ, ಪೂಜಾಕೋಣೆಗಳಿಗೆ ಪ್ರವೇಶ ನಿಷೇಧಿಸುವುದು ಮುಂತಾದ ಪಾರಂಪರಿಕ ಮೌಢ್ಯಾಚಾರಣೆಗಳನ್ನು ನಿರಸನಗೊಳಿಸುವಲ್ಲಿ ಹೆಚ್ಚು ಸಹಕಾರಿಯಾಗಬಲ್ಲವು.

ನಾಟಕದ ಕೊನೆಯಲ್ಲಿ ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸುವುದು, ಕೆಳವರ್ಗ ಶ್ರಮಿಕ ಅಂಚಿನ ಸಮುದಾಯದ ಜಾಡಮಾಲಿಗೆ ಅಂಬೇಡ್ಕರ್ ಸಂವಿಧಾನ ಕೃತಿ ನೀಡಿ ಅಕ್ಷರದ ದಾರಿ ತೋರಿಸುವ ಸಾಂಕೇತಿಕ ದೃಶ್ಯ ನಾಟಕಕ್ಕೆ ಹೆಚ್ಚು ಮೆರಗು ತಂದಿತು.

ಸಾಣೆಹಳ್ಳಿ ಗುರುಪೀಠ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರು, ರಂಗತಜ್ಞರಾದ ಶ್ರೀನಿವಾಸ ಜಿ. ಕಪ್ಪಣ್ಣ, ಡಾ. ಎಂ.ಜಿ. ಈಶ್ವರಪ್ಪ, ಬಿ.ಎನ್. ಮಲ್ಲೇಶ್, ರವೀಂದ್ರ ನಾಯ್ಕರ್, ಇವರುಗಳು ವಿಶೇಷ ಅತಿಥಿಗಳಾಗಿ ಪಾಲ್ಗೊಂಡು ನಾಟಕದ ಔನ್ನತ್ಯವನ್ನು ಸಾಕ್ಷೀಕರಿಸಿದರು.

ಹಾಸನದ ಹರ್ಷಿತಾ ಬುದ್ಧನಾಗಿ, ರಾಯಚೂರಿನ ಮರಿಯಣ್ಣ ಬಿಕ್ಕು ಆನಂದನಾಗಿ, ಇದೇ ಜಿಲ್ಲೆಯ ಶರದ್‌ಬಂಡಾರಿ ಜಾಡಮಾಲಿಯಾಗಿ, ದುರುಗೇಶ್ ಸೇನಾಪತಿಯಾಗಿ, ಚಾಮರಾಜನಗರದ ಸಿದ್ಧರಾಜು ಭಾರದ್ವಾಜನಾಗಿ, ದಾವಣಗೆರೆ ಡಾ. ಏ.ಬಿ. ರಾಮಚಂದ್ರಪ್ಪ ಶುದ್ವೋಧನ ಮತ್ತು ಅಂಬೇಡ್ಕರ್, ಲೋಕಿಕೆರೆ ಅಂಜನಪ್ಪ ಸ್ಮಶಾನ ಕಾವಲುಗಾರ, ಜ್ಯೋತಿ ಪ್ರಕೃತಿ ಮತ್ತು ಸೂಲಗಿತ್ತಿ, ರಂಜಿತಾ ಸುಪ್ರಿಯಾ ಬಿಕ್ಕು, ಸೃಷ್ಠಿ ಸೋಪಕ ಬಿಕ್ಕು.  ಬೆಳಗಾವಿ ಜಿಲ್ಲೆಯ ಕೆಂಪಣ್ಣ ಸಾಮ್ರಾಟ್ ಅಶೋಕನಾಗಿ, ವಿನಾಯಕ ಬ್ರಾಹ್ಮಣನಾಗಿ, ಕೆಂಚಪ್ಪ ಬಿಕ್ಕುವಾಗಿ, ಬಳ್ಳಾರಿಯ ಆನಂದ ಬಿಕ್ಕುವಾಗಿ, ಬಿಜಾಪುರದ ರೂಪ ಬಾಣಂತಿಯಾಗಿ  ಹೀಗೆ ವಿವಿಧ ಭಾಗಗಳ ಕಲಾವಿದರು ಒಟ್ಟುಗೂಡಿ ಪ್ರತಿಯೊಬ್ಬರೂ ಆಯಾ ಪಾತ್ರಗಳಿಗೆ ಜೀವ ತುಂಬಿ ರಂಗದ ಮೇಲೆ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಿದರು.  ಬುದ್ಧ ಪಾತ್ರದ ಹರ್ಷಿತಾ,  ಅವರ ಭಾವ ಸಂವೇದನೆ ಮನೋಜ್ಞವಾಗಿತ್ತು.

ವಿಕಾಸ್ ಆರ್. ಮೌರ್ಯ ಅವರ ಅರ್ಥಪೂರ್ಣ ಚಿಂತನಾರ್ಹ ಸಶಕ್ತ ಸಂಭಾಷಣೆಯನ್ನು ಒಳಗೊಂಡ `ಬುದ್ಧನ ಬೆಳಕು’ ನಾಟಕವನ್ನು ನಿರ್ದೇಶಕ ಡಿಂಗ್ರಿ ಸುರೇಶ್ ಅವರು ಅಲ್ಪಾವಧಿಯಲ್ಲಿ ಕಗ್ಗಲ್ಲುಗಳಂತಿದ್ದ ಕಲಾವಿದರನ್ನು ಹದಗೊಳಿಸಿ, ಮುದಗೊಳಿಸಿ ರಂಗದ ಮೇಲೆ ಪರಿಣಾಮಕಾರಿಯಾಗಿ ಪ್ರದರ್ಶನಗೊಳ್ಳಲು ತುಂಬಾ ಪರಿಶ್ರಮ ಹಾಕಿರುವುದು ದೃಗೋಚರವಾಯಿತು.  ಮೈಸೂರಿಯ ಮಧುಸೂಧನ್ ಅವರ ಬೆಳಕು ಸಂಯೋಜನೆಯಲ್ಲಿ ಸ್ವಲ್ಪ ತೊಡಕುಗಳಿದ್ದರೂ ರಂಗವಿನ್ಯಾಸ ಉತ್ತಮವಾಗಿತ್ತು.  ಬಾಗಲಕೋಟೆಯ ಶ್ರೀಕಾಂತ ಬಡಿಗೇರ ಅವರ ವಸ್ತçವಿನ್ಯಾಸ ಹಾಗೂ ಉಡುಪಿಯ ಗುರುಕಿರಣ್ ಅವರ ಬಣ್ಣಗಾರಿಕೆ ಚಿತ್ತಾಕರ್ಷಕವಾಗಿತ್ತು.  ಯಶೋಧ ಅವರ ಸಂಗೀತ ಹಿತಕಾರಿಯಾಗಿ ಔಚಿತ್ಯಪೂರ್ಣವಾಗಿತ್ತು.

ವೈಚಾರಿಕ ಚಿಂತನೆಯ ಅಪರೂಪದ ರಾಜಕಾರಣಿ ಎಂದೇ ಪ್ರಸಿದ್ಧಿ ಪಡೆದಿರುವ ಸತೀಶ್ ಜಾರಕಿಹೊಳಿಯವರ ಜನಮುಖೀ ಕನಸುಗಳನ್ನು ಬಿತ್ತುವ ಮಾರ್ಗವಾಗಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ. ಏ.ಬಿ. ರಾಮಚಂದ್ರಪ್ಪ ಹಾಗೂ ಬಂದುತ್ವ ವಿದ್ಯಾರ್ಥಿ ವೇದಿಕೆಯ ರಾಜ್ಯ ಸಂಚಾಲಯಕ ರಾಘು ದೊಡ್ಮನಿ  ಈ ಜೋಡಿ ರಂಗ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡು `ಬುದ್ಧನ ಬೆಳಕು’ ನಾಟಕದ ಮೂಲಕ ಪ್ರಥಮ ಪ್ರಯೋಗದಲ್ಲೇ ಯಶಸ್ವಿ ಹೆಜ್ಜೆಗಳನ್ನಿಟ್ಟಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.  ಒಟ್ಟಾರೆ ಬುದ್ಧ ಬೆಳಕು, ಮರೆಯಲಾರದ ರಂಗೋತ್ಪನ್ನವಾಗಿದೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop