ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ ನಗರದಲ್ಲಿ ನಿಂತಿದ್ದ. ಚಲಿಸುತ್ತಿರುವ ಕಾಲುಗಳನ್ನು ನಿಲ್ಲಿಸುವಂತೆ ಇತ್ತು ಆ ನಗರ. ಕಾಲದ ಚಲನಶೀಲತೆಯನ್ನು ಸಾರಿಹೇಳುವಂತಿತ್ತು ಆ ನಗರ. ಯಾವ ದಿಕ್ಕಿಗೆ ಕಣ್ಣು ಹಾಯಿಸಿದರೂ ಹರಿಯುತ್ತಿರುವ ತೊರೆಗಳು ಕೆರೆಗಳು. ದಿಶೆದಿಶೆಯಿಂದ ಬಂದು ನಾಸಿಕವನ್ನು ಪ್ರವೇಶಿಸುವ ಕುಸುಮ ಸುವಾಸನೆ. ಕಿವಿಯನ್ನು ತಂಪುಗೊಳಿಸುವ ದುಂಬಿಗಳ ಝೇಂಕಾರ. ಅಲ್ಲಿಯ ನೆಲವೆಲ್ಲಾ ರತ್ನಮಯ. ಅಪೂರ್ವವಾದ ಮಣಿಗಳಿಂದಲೇ ನಿರ್ಮಿಸಲಾಗಿದೆ ಪರ್ವತಗಳನ್ನು. ಗೋವುಗಳು ಆನೆಗಳು ಗುಂಪುಗುಂಪಾಗಿ ಪಥಸಂಚಲನ ನಡೆಸುತ್ತಿರುವ ನೋಟವದು ನಯನಮನೋಹರ. ಕಸ್ತೂರಿ ಮೃಗವಿತ್ತು ಅಲ್ಲಿ. ಶಿಷ್ಟ ವಿಶಿಷ್ಟವಾದ ಪಕ್ಷಿಗಳು. ಎತ್ತರೆತ್ತೆರದ ಕಟ್ಟಡಗಳು. ತುಂಬು ಸಂತಸದಿಂದ ಸಂಚರಿಸುತ್ತಿರುವ ಜನರು.
ಹಂಸಗಳಿಲ್ಲದ ಕೊಳಗಳು ಅಲ್ಲಿರಲಿಲ್ಲ. ದುಂಬಿಗಳಿಲ್ಲದ ಉದ್ಯಾನಗಳಿರಲಿಲ್ಲ. ದುಂಬಿಗಳಿಗೆ ಮುದ ನೀಡದ ಕುಸುಮಗಳಿರಲಿಲ್ಲ. ಕುಸುಮಸಮೂಹಗಳನ್ನು ಹೊತ್ತುನಿಲ್ಲದ ಬಳ್ಳಿಗಳಿರಲಿಲ್ಲ. ಮಾವಿನ ಚಿಗುರುಗಳಿಲ್ಲದ ವನಗಳಿರಲಿಲ್ಲ. ಹೀಗಿತ್ತು ಭದ್ರಾವತಿ ನಗರ. ಬಂಜರು ಭೂಮಿಯನ್ನು, ಬಿಳಿಯ ತಾವರೆಗಳಿಲ್ಲದ ಕೊಳಗಳನ್ನು, ಸುಖವಿಲ್ಲದೆ ಸೊರಗಿದ ಜನರನ್ನು ಅಲ್ಲಿ ಕಾಣುವುದಕ್ಕೆ ಸಾಧ್ಯವೇ ಇರಲಿಲ್ಲ. ಸಮೃದ್ಧಿಯನ್ನೆಲ್ಲಾ ಹೊತ್ತು ನಿಂತಿತ್ತು ಆ ನಗರ.
ಪಯಣದ ಆಯಾಸವನ್ನು ಹೊತ್ತುಬಂದ ದಾರಿಹೋಕರ ಶ್ರಮವನ್ನು ತಣಿಸುವುದಕ್ಕೆಂದೇ ಅಲ್ಲಲ್ಲಿ ಧರ್ಮಶಾಲೆಗಳಿದ್ದವು. ಹಿಮಚ್ಛಾದಿತವಾದ ಇಂತಹ ಅರವಟ್ಟಿಗೆಗಳು ಪಯಣಿಗರ ಮನಸ್ಸಿಗೆ ತಂಪೆರೆಯುತ್ತಿದ್ದವು. ಅಲ್ಲಿದ್ದ ಲಲನೆಯರು ಬಂದವರ ಹಸಿವು- ಬಾಯಾರಿಕೆಗಳನ್ನು ಇಂಗಿಸುತ್ತಾ, ಹೊಸಬಗೆಯ ಉಲ್ಲಾಸವನ್ನು ಅವರಲ್ಲಿ ತುಂಬುತ್ತಿದ್ದರು. ಹೆಂಗಳೆಯರ ಕೈಯ್ಯ ಕಲಶದಿಂದ ಚಿಮ್ಮಿಬರುವ ನವರುಚಿಯ ತಂಪುತಂಪಾದ ಜಲವನ್ನು ಮನದಣಿಯುವಷ್ಟು ಕುಡಿದು ಹೆಂಗಳೆಯರ ಮೈಯ್ಯ ಲಲಿತ ಲಾವಣ್ಯಕ್ಕೆ ಮನಸೋಲುತ್ತಿದ್ದರು ದಾರಿಹೋಕರು.
ಹೀಗಿದ್ದ ಭದ್ರಾವತಿ ನಗರವನ್ನು ಕಾಣುತ್ತಾ ಕಾಣುತ್ತಾ ಮುಂದುವರಿದ ಪವನಸುತ ಕರ್ಣಸುತ ಘಟೋತ್ಕಚಸುತರ ಕಣ್ಣುಗಳು ಅರಳಿದ್ದು ಬಿಳಿಯ ಶಿಲೆಗಳಿಂದ ಕೂಡಿದ ಗಿರಿಯೊಂದನ್ನು ಕಂಡಾಗ. ಭದ್ರಾವತಿ ನಗರವಿದ್ದುದು ಈ ಗಿರಿಯ ಪೂರ್ವಭಾಗದಲ್ಲಿ. ಅಲ್ಲಿ ನಡೆಯುತ್ತಿದ್ದ ಹಲವು ಯಾಗಗಳಿಂದ ಎದ್ದ ಹೊಗೆ ಈ ಗಿರಿಯನ್ನು ತಲುಪಿ ಗಗನದೆಡೆಗೆ ಮುಖಮಾಡಿತ್ತು. ಆಕಾಶವನ್ನೂ ಭೂಮಿಯನ್ನೂ ಸಂಪರ್ಕಿಸುವ ಸೇತುವೆಯಂತೆ ಕಾಣುತ್ತಿತ್ತು ಈ ದೃಶ್ಯ. ಬೇರಾವುದೇ ನಗರದಲ್ಲಿ ಎಷ್ಟೇ ಜನರಿರಲಿ, ಬೇರೆಲ್ಲಾ ನಗರಗಳು ಎಷ್ಟು ಬೇಕಿದ್ದರೂ ಯಶಸ್ಸನ್ನು ಗಳಿಸಿರಲಿ ಅದು ತನ್ನ ಚೆಲುವಿಗೆ, ಶಕ್ತಿಗೆ ಸಮನಲ್ಲ ಎಂದು ಈ ಭದ್ರಾವತಿ ನಗರ ನಗುತ್ತಿರುವಂತೆ ಅಲ್ಲಿನ ಕಟ್ಟಡಗಳು ಕಾಂತಿಯುಕ್ತವಾಗಿದ್ದವು.
ಮುಗಿಲನ್ನು ಮುಟ್ಟುವ ಕೋಟೆಗಳಿದ್ದವು ಅಲ್ಲಿ. ಸೂರ್ಯನ ಕಿರಣಗಳಾಗಲಿ, ಚಂದ್ರಮನ ಬೆಳಕಾಗಲಿ ಒಳಬರಲು ಅವಕಾಶವಿರಲಿಲ್ಲ. ಎತ್ತರೆತ್ತರಕ್ಕೆ ಮುಗಿಲು ಮುಟ್ಟುವಂತೆ ನಿಂತಿದ್ದ ಸೌಧಗಳಲ್ಲಿ ವನಿತೆಯರು ನಿಂತಿದ್ದರು. ಅವರ ಮುಖದಲ್ಲಿ ಮೂಡುವ ಮುಗುಳ್ನಗೆಯ ಬೆಳದಿಂಗಳೇ ಇರುಳಿಗೆ ಬೆಳಕಿನ ಆಕರವಾಗಿತ್ತು. ಉತ್ತುಂಗವಾದ ದೇವಾಲಯದ ಗೋಪುರದಲ್ಲಿದ್ದ ಕಲಶವು ಮೂಡಿಸುತ್ತಿದ್ದ ಎಳತು ಬಿಸಿಲೇ ಹಗಲಿಗೆ ಬೆಳಕನ್ನು ಪೂರೈಸುತ್ತಿತ್ತು.
ಉಪವನಗಳಿದ್ದವು ಅಲ್ಲಿ. ತನ್ನ ಮಡಿಲಲ್ಲಿ ಕುಳಿತು ಮೆರೆಯುತ್ತಿರುವ ಜನರು ಯಾವತ್ತೂ ಸೊಗಸಿನಿಂದಿರುವುದನ್ನು ಕಂಡು ಆ ಭದ್ರಾವತಿ ನಗರವೇ ಹಸಿರು ಸೀರೆಯನ್ನುಟ್ಟು ಮೆರೆದಂತೆ. ಆ ಉಪವನದಲ್ಲಿ ಸುಳಿದಾಡುತ್ತಿದ್ದ ದುಂಬಿಗಳ ಸಮೂಹವದು ಗಗನಸದೃಶವಾಗಿತ್ತು. ಗಾಳಿಗೆ ಅಲ್ಲಾಡುತ್ತಿದ್ದ ಬಳ್ಳಿಗಳು ಮಿಂಚಿನಂತೆ ತೋರುತ್ತಿದ್ದವು. ಹೂವುಗಳಿಂದ ಹೊರಚೆಲ್ಲುತ್ತಿರುವ ಮಕರಂದದ ಹನಿಗಳೇ ಮಳೆಯ ಹನಿಗಳಾಗಿದ್ದವು.
ಇರುಳಾದ ತಕ್ಷಣವೇ ವಿರಹಕ್ಕೊಳಗಾಗುವ ಯೋಚನೆಗೆ ಸಿಲುಕಿದ ಆ ಉಪವನದಲ್ಲಿದ್ದ ಚಕ್ರವಾಕ ಪಕ್ಷಿಗಳು ಆತುರಾತುರವಾಗಿ ಸರಸ ಸಲ್ಲಾಪದಲ್ಲಿ ತೊಡಗಿದ್ದವು. ಹೂವುಗಳ ಪರಾಗಗಳು ನೆಲದ ಮೇಲೆ ಬಿದ್ದಿದ್ದವು. ಅವುಗಳ ಮೇಲೆ ಹೆಣ್ಣು ಹಂಸಗಳ ನಡಿಗೆ. ಅಲ್ಲಲ್ಲಿ ಮೂಡಿತ್ತು ಅವುಗಳ ಹೆಜ್ಜೆಗುರುತು. ವಿರಹಿಗಳು ಈ ವನವನ್ನು ಪ್ರವೇಶಿಸಬಾರದೆಂದು ಮನ್ಮಥ ಬರೆದಿರಿಸಿದ ಶಾಸನದಂತೆ ಆ ಹೆಜ್ಜೆಗುರುತುಗಳು ತೋರುತ್ತಿದ್ದವು. ವೀಳ್ಯದೆಲೆಯ ಬಳ್ಳಿಗಳು ಅಡಿಕೆಯ ಮರಗಳನ್ನು ತಬ್ಬಿನಿಂತಿದ್ದವು. ನಮ್ಮಂತೆಯೇ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳದವರನ್ನು ಮನ್ಮಥ ಈ ವನದಲ್ಲಿ ಉಳಿಸಿಕೊಳ್ಳಲಾರ ಎಂಬಂತೆ ಕಾಣಿಸುತ್ತಿತ್ತು ಅವುಗಳ ಅಪ್ಪುಗೆ.
ಗುದ್ದಲಿಯ ಘಾತವನ್ನು ಸಹಿಸಿಕೊಂಡು ತಮ್ಮನ್ನು ಪ್ರೀತಿಯಿಂದ ಬೆಳೆಸಿದ್ದಾಳೆ ಈ ಧರಣಿಮಾತೆ. ಅವಳಿಗೆ ಇದನ್ನು ಸಮರ್ಪಿಸುತ್ತೇವೆ ಎಂಬಂತೆ ತಮ್ಮೆದೆಗಳಿಂದ ಟಿಸಿಲೊಡೆದ ಬಾಳೆಹಣ್ಣುಗಳಿದ್ದ ಗೊನೆಯನ್ನು ಭೂರಮೆಯೆಡೆಗೆ ಚಾಚಿನಿಂತಿದ್ದವು ಬಾಳೆಯ ಗಿಡಗಳು.
ಇಂದ್ರನ ವಜ್ರಾಯುಧದ ಘಾತಕ್ಕೆ ತತ್ತರಿಸಿದ ಪರ್ವತಸಮೂಹ ಸಾಗರವನ್ನು ಸೇರಿದಂತೆ, ಕಾರ್ಮುಗಿಲುಗಳು ಗುಂಪುಗುಂಪಾಗಿ ಕಡಲನ್ನು ಸಂಧಿಸುವಂತೆ ತಿಳಿಯಾದ ಕೊಳದ ನೀರನ್ನು ಕುಡಿಯುವುದಕ್ಕೆ ಬಂದ ಗಜಸಮೂಹವನ್ನು ಕಂಡೊಡನೆಯೇ ಭೀಮಸೇನ ಭೀಮನೇತ್ರದವನಾದನು. ಮಳೆಗಾಲದ ಮೇಘಗಳು ಒತ್ತೊತ್ತಾಗಿ ನಿಬಿಡಾವಸ್ಥೆಯಲ್ಲಿ ಇರುವಂತೆ ಭದ್ರಾವತಿ ಪಟ್ಟಣದ ಹೆಬ್ಬಾಗಿಲಿನಿಂದ ಹೊರಬರುತ್ತಿರುವ ಕುದುರೆಗಳ ಸಮೂಹವನ್ನು ಕಂಡಾಗ ಮೇಘನಾದನ ಹೃದಯದಲ್ಲಿ ಮೇಘನಾದ. “ಸೂರ್ಯ ನಡುನೆತ್ತಿಯನ್ನು ತಲುಪುತ್ತಾ ಬಂದಿದ್ದರೂ ನಮ್ಮ ಯಾಗಕ್ಕೆ ತಕ್ಕುದಾದ ಅಶ್ವ ಈ ನಗರದಲ್ಲಿ ದೊರಕಿಲ್ಲ. ಅಂತಹ ಕುದುರೆಯೇ ಇಲ್ಲಿಲ್ಲವೋ! ಅಥವಾ ನಮ್ಮ ನಯನಗಳಿಗೆ ಅದು ಗೋಚರವಾಗುತ್ತಿಲ್ಲವೋ! ತಿಳಿಯದು” ಎಂಬ ಪವನಸುತನ ನುಡಿಗೆ ಕರ್ಣತನಯ ಕರ್ಣಗೊಟ್ಟನು.