ಅಡ್ಡಲಾಗಿ ಹಾಸಲಾದ ಎರಡು ಎಳೆ ದಾರದ ಮಧ್ಯೆ ಒಂದು ಪ್ರಣತೆ ಇಟ್ಟು ಅದನ್ನು ಬೆಳಗಿ ಎರಡು ಧೂಪದ ಕಡ್ಡಿಯನ್ನು ಹೊತ್ತಿಸಿ ಪ್ರಣತೆಗೆ ಬೆಳಗಿ ಬದಿಯಲ್ಲಿ ಸಿಕ್ಕಿಸಿ ಕರ ಮುಗಿದು ಎರಡೂ ಬದಿಯ ದಾರದ ತುದಿಯನ್ನು ಎರಡೂ ಕೈಗಳಿಂದ ಎತ್ತಿ ಹಿಡಿಯಲಾಗಿ ಜ್ಯೋತಿ ಮುಟ್ಟಿಸಿದ ಪ್ರಣತೆ ಹಿಂದೆ ಮುಂದೆ ತೂಗಲಾರಂಭಿಸುತ್ತಿದ್ದಂತೆ ನಮಗೆಲ್ಲ ಯಾವುದೋ ಮಾಂತ್ರಿಕ ಲೋಕದಳಗಿದ್ದಂತೆ ಅನುಭವ. ದೀಪ ಎತ್ತಿ ಹಿಡಿದ ಕೈ ನಿಶ್ಚಲ ಕಾಣುತಿತ್ತು ಆದರೆ ಪ್ರಣತೆ ಮಾತ್ರ ಜೋರು ಜೋರಾಗಿ ಜೀಕುತ್ತಿತ್ತು. ಅದು ತನ್ನ ಶಕ್ತಿಯಿಂದಲೋ, ಅಥವಾ ಇವಳ ಬೆರಳಿನ ಅವ್ಯಕ್ತ ಚಲನೆಯ ಪರಿಣಾಮವೋ ಇಂದಿಗೂ ನಮಗೆ ನಿಗುಢವೆ.
ತೂಗುದೀಪಕ್ಕೆ ಈಕೆ ಮಾತನಾಡಿಸುವಳು. ಊರ ಹನುಮ, ಮನೆದೇವರು, ಕಾಳಿ, ದುರ್ಗೆ,ಎಲ್ಲಮ್ಮ ,ಹಾದಿ ಬಸವಣ್ಣ, ಹೀಗೆ ದೇವರ ಹೆಸರು,ನಂತರ ಬೀದಿಗಳ ಹೆಸರು ಸ್ಮಶಾನ, ರುದ್ರ ಭೂಮಿ, ಭೂತ ಪ್ರೇತ ಪಿಶಾಚಿಯ ಹೆಸರು ಗುನುಗುಟ್ಟುವಳು,ಮತ್ತೆ ಅವುಗಳು ಬಯಸುವ ಆಹಾರದ ಹೆಸರೂ ಉಚ್ಚರಿಸುವಳು. ಹಾಗೇ ದೀಪ ಜೀಕುತ್ತ ಜೀಕುತ್ತ ಒಮ್ಮೆ ಓರೆಯಾಗಿ ಒಮ್ಮೆ ವೃತ್ತಾಕಾರದಲ್ಲಿ ಮತ್ತೆ ಒಮ್ಮೆ ನೇರವಾಗಿ ತೂಗುವುದು. ಗುನುಗುಡುವಾಗ ಅವಳ ಮುಖದ ಮೇಲೆ ಹಲವು ರೇಖೆಗಳು ಮೂಡುವವು, ಕಣ್ಣು ಒಮ್ಮೆ ವಿಶಾಲ ಒಮ್ಮೆ ಸಂಕುಚಿತವಾಗಿ ತೆರೆದು ಕೊಳ್ಳುವವು,ಮುಖ ಗಂಟಿಕ್ಕುವಳು ಒಮ್ಮೆ,ಮತ್ತೆ ಕೆಲವು ಬಾರಿ ನಂಗೆ ಬೀರುವಳು. ಸೂಕ್ಷ್ಮ ವಾಗಿ ಗಮನಿಸಿದರೆ ಅವಳ ಮುಖದ ಮೇಲೆ ವಿವಿಧ ಭಾವನೆಗಳ ಅಲೆಗಳು ತೇಲಿ ತೇಲಿ ಮಾಯವಾಗುತ್ತಿದ್ದವು. ನಮಗಂತು ಈಕೆ ಬೇರೊಂದು ಲೋಕದವಳೇ ಎನಿಸುತ್ತಿತ್ತು.
ಅವಳ ನಡಿಗೆಯೂ ಒಂದು ತರಹ, ಏಕೆಂದರೆ ಅವಳ ಪಾದಗಳು ವಕ್ರವಾಗಿ ತಿರುಚಿ ಕೊಂಡಿದ್ದು, ಕೈಗಳೂ ಅಲ್ಲಲ್ಲಿ ಸೊಟ್ಟಗಿದ್ದವು. ಮುಖ ಚೌಕ ಆಕಾರದ್ದು, ಒಟ್ಟಿನಲ್ಲಿ ಅವಳು ಮಹಾಭಾರತದ ಅಷ್ಟಾವಕ್ರನನ್ನು ನೆನಪಿಸುವಂತಿದ್ದಳು.
ಅವಳ ಈ ಪರಿಯ ವಕ್ರತೆಗೆ ಕಾರಣವೇನು ಎಂದು ನಾವು ಕೇಳಿದರೆ, ಅವಳಿಗೆ ಚಿಕ್ಕಂದಿನಲ್ಲಿ ಭೂತ ಮೆಟ್ಟಿಕೊಂಡಿತ್ತೆಂದೂ, ಈಗಲೂ ಅಮಾವಾಸ್ಯೆ ಹುಣ್ಣಿಮೆಗೊಮ್ಮೆ ಮೈ ಮೇಲೆ ಅವಾಹಿನಿಸುವುದೆಂದು ಅವಳನ್ನು ಹಿಂಸಿಸುವುದೆಂದು ಹಿರಿಯರು ಹೇಳಿ ನಮ್ಮನ್ನೆಲ್ಲ ತತಬ್ಬಿಬ್ಬುಗೊಳಿಸುವರು. ಆಕೆಯೂ ಅಮಾವಾಸ್ಯೆ ಮರುದಿನ ತುಂಬಾ ಸೋತವಳಂತೆ, ಪೀಡಿತಳಂತೆ ಕಂಡು ಬರುತ್ತಿದ್ದಳು.
ಹಳ್ಳಿಗಳಲೆಲ್ಲ ಜನರ ಜೀವನ ಶೈಲಿ ಒಂದೇ ಬಗೆ ಅಲ್ಲವೆ? ಅದೊಂದು ಸಮೈಕ್ಯತೆಯ ಜೀವನ. ಬಡತನವೂ ಅದರ ಒಂದು ಸಾಮಾನ್ಯ ಲಕ್ಷಣವೇ ಸರಿ, ಹೀಗಾಗಿ ಅವಳ ಬಡತನ ನಮಗೆ ವಿಶಿಷ್ಟ ಅನ್ನಿಸುತ್ತಿರಲಿಲ್ಲ. ಈಗ ನಮಗೆ ಅವಳು ತೀರಾ ಕಡುಬಡವಳಾಗಿದ್ದಳು ಎನಿಸುತ್ತದೆ, ಆದರೆ ಹೃದಯ ಶ್ರೀಮಂತವಾಗಿತ್ತು. ಅವಳು ಊರ ಹೆಣ್ಣುಮಕ್ಕಳನ್ನು ತುಂಬಾ ಪ್ರೀತಿಯಿಂದ ನೋಡುವಳು, ಚಿಕ್ಕ ಮಕ್ಕಳಿಗೆ ಕಥೆ ಹೇಳುವಳು, ಹೆಣ್ಣು ಹುಡುಗಿಯರು ಬೆಳೆದಂತೆ ದೊಡ್ಡವಳಾದಳೆಂದು ಕೂಡಿಸಿ ಶೋಬಾನೆ ಹಾಡುವಳು,ಕುಟುಂಬ ಕಲಹಕ್ಕೆ ಪರಿಹಾರ ಸೂಚಿಸುವಳು, ಮಕ್ಕಳಿಗೆ, ವೃದ್ಧರಿಗೆ, ರೋಗ ರುಜಿನಗಳು ಕಾಡುವಾಗ ಅದಕ್ಕೆ ಪರಿಹಾರ ಹುಡುಕುವ ತುಗುದೀಪದ ತಂತ್ರ ಬಳಸುವಳು, ಗಂಡಸರಿಗೆ ಏನಾದರೊಂದು ಹೇಳಿ ರೇಗಿಸುವಳು,ಹಿರಿಯರೊಡನೆ ಮೃದುವಾಗಿ ಮಾತನಾಡುವವಳು,ಯಾರೇ ತೀರಿಕೊಂಡರೂ ಮೊದಲು ಹಾಜರಾಗಿ ಗೋಳಾಡಿ ಅಳುವಳು, ರಾಗಬದ್ಧವಾಗಿ ಶೋಕವನ್ನು ವ್ಯಕ್ತಪಡಿಸುವಳು.
ಈಕೆ ಕಾರಂತರ ಮೂಕಜ್ಜಿಯನ್ನೇ ಹೋಲುತ್ತಾಳಾದರೂ ಇವಳು ಮುಸ್ಲಿಂಳು. ಮುಸ್ಲಿಂಳು ಎಂದು ನಮಗೆ ತಿಳಿಯಲು ಬಹಳ ಕಾಲ ಹಿಡಿಯಿತು ಏಕೆಂದರೆ ಹಳ್ಳಿಗಳಲ್ಲಿ ಮತೀಯ ವ್ಯತ್ಯಾಸಗಳು ಎದ್ದು ಕಾಣುವುದಿಲ್ಲ. ಭಾಷೆ ಕನ್ನಡ ಸುಲಲಿತವಾಗಿ ಆಡುವಳು, ಊಟ ಉಡುಗೆ ತೊಡುಗೆ ಊಹೂಂ ಏನು ವ್ಯತ್ಯಾಸ ಇಲ್ಲ. ಮೊಹರಂ ರಂಜಾನ್ ಇದ್ದಾಗ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಳು. ಆ ಹಬ್ಬಗಳಲ್ಲಿ ಬೆಲ್ಲ ಮಿಶ್ರಿತ ಗೋಧಿ ಹಿಟ್ಟು ಒಂದು ರಂಗೋಲಿಯ ತೆರನಾದ ಹಲಿಗೆ (ಚಿತ್ತಾರದೊಂದಿಗೆ ಉಬ್ಬು ತಗ್ಗಿನಿಂದ ಕೂಕೂಡಿದ್ದ) ಅದರ ಮೇಲೆ ಲಟ್ಟಿಸಿ ಸುಟ್ಟಿದ ಚೋಂಗ್ಯಾ ಎಂಬ ಹೊಸ ರುಚಿ ಮಾಡಿ ತಿನ್ನುತ್ತಿದ್ದಳು. ಕೆಲವು ಬಾರಿ ನಮಗೂ ತಿನ್ನಿಸಿದ್ದಿದೆ. ನಮ್ಮ ಅಮ್ಮನಿಗೂ ಇವಳಿಗೂ ತುಂಬಾ ಸ್ನೇಹ ಅಮ್ಮ ಉದಾರಿ ಎರಡು ದಿನಕ್ಕೊಮ್ಮೆಯಾದರೂ ಮಾಡಿದ ಅಡುಗೆಯನ್ನು ಅವಳಿಗೆ ಕೊಡುತ್ತಿದ್ದಳು. ಮತ್ತು ಅವಳ ಮಗನು ನಮ್ಮಲ್ಲಿ ಜೀತಕ್ಕಿದ್ದ ಎನಿಸುತ್ತದೆ. “ಮೊಹ್ಮದ್” ಅಣ್ಣ ಎಂದರೆ ನಮಗೆ ಎಲ್ಲಿಲ್ಲದ ಸ್ನೇಹ, ಪ್ರೀತಿ ಅವನ ಹೆಗಲ ಮೇಲೆ ಕುಳಿತು ಊರೂ ಸುತ್ತಿದ್ದು, ಜಾತ್ರೆ ಸಂತೆ ತಿರುಗಿದ್ದೂ ಇದೆ. ಈಗ ಅವನು ಮಕ್ಕಳ ಜೊತೆ ಹೈದ್ರಾಬಾದ್ ನಲ್ಲಿ ಇರುವನೆಂದು ಮೊನ್ನೆ ಜಾತ್ರೆಗೆ ಬಂದಾಗ ಹೇಳಿದ.
ಈ ಎಲ್ಲ ನೆನಪುಗಳು ದಟ್ಟೈಸಿದಾಗ ಕಳೆದುಕೊಂಡ ಆ ಪ್ರೀತಿಗಾಗಿ ಕಣ್ಣು ಒದ್ದೆಯಾಗುತ್ತದೆ, ಗಂಟಲು ಬಿಗಿದು ಬರುತ್ತದೆ. ಈಗೆಲ್ಲಾ ಅಷ್ಟು ಪ್ರೀತಿ ವಾತ್ಸಲ್ಯ ಸಿಗಲಾರದ್ದು. ಮೊಹ್ಮದ್ ನನ್ನು ಕುರಿತು ಆ ನಂತರ ಬರೆಯುತ್ತೇನೆ.
ಹಾಂ ಅವಳ ತೂಗುದೀಪದ ತಂತ್ರ ದಿಂದ ಮಕ್ಕಳ ಜ್ವರ, ವಾಂತಿ ಭೇದಿ,ರಚ್ಚೆ, ಹಟ, ಮುಂತಾದವುಗಳಿಗೆ ಕಾರಣ ಹುಡುಕಿ ಈ ದಾರಿಗೆ ಹಿಟ್ಟಿನ ಮುಟ್ಟಿಗೆ, ಆ ದಾರಿಗೆ ಚಿತ್ರಾನ್ನ, ಹನುಮನಿಗೆ ತೆಂಗು,ಮನೆದೇವರ ಹೆಸರಿನಲ್ಲಿ ತುಪ್ಪದ ದೀಪ, ಹೀಗೆ ಹಲವಾರು ಪರಿಹಾರ ಹೇಳುವಳು. ಊರ ಹೆಂಗಸ್ರು ಅವಳ ಈ ಪರಿಹಾರವನ್ನು ಶ್ರದ್ಧೆಯಿಂದ ನೆರವೇರಿಸುವರು. ಎರಡು ಮೂರು ದಿನಗಳಲ್ಲಿ ಮಕ್ಕಳು ಎಂದಿನಂತಾಗುವರು. ಇದಕ್ಕೂ ಮೀರಿದರೆ, ಕೆಲ ಮನೆ ಮದ್ದು ಸೂಚಿಸುವಳು. ಮನೆ ಮದ್ದು ಗಳಲ್ಲಿ ನನ್ನ ನೆನಪಿನಲ್ಲಿ ಉಳಿದಿರುವುದು ವಾಂತಿ ಆಗುತ್ತಿದ್ದರೆ ನವಿಲು ಗರಿಯನ್ನು ಸುಟ್ಟು ಅದರ ಬೂದಿಯನ್ನು ಜೇನಿನಲ್ಲಿ ಸೇರಿಸಿ ಮಗುವಿಗೆ ತಿನ್ನಿಸುವುದೂ ಒಂದು. ಹೀಗೆ ತನ್ನ ನೋವನ್ನು ನುಂಗಿ ಎಲ್ಲರನ್ನು ನಗಿಸುವ ಉಪಚರಿಸುವ ಅವರ ಸುಖ ದುಃಖಗಳನ್ನು ಆಲಿಸುವ, ಅವರ ಅನೇಕ ಪ್ರಶ್ನೆಗಳಿಗೆ ಆನ್ಸರ ಮಾಡುವ “ಆನ್ಸರ ಮಾ” ಈಗ ಬರಿ ನೆನಪು.