ಪ್ರಿಯತಮೆಯಂತಹ ಹೆಂಡತಿಗೆ,
ಎಲ್ಲಿದ್ದೀರಾ? ಎಲ್ಲೋ ಇರ್ತಿರಾ ಬಿಡಿ. ಚೆನ್ನಾಗಿದ್ದೀರಾ? ಅಯ್ಯೋ! ಇದೆಂತಹ ಪೆದ್ದು ಪ್ರಶ್ನೆ, ಚೆನ್ನಾಗಿರ ಬೇಕು ಅಂತಾನೆ ಅಲ್ವಾ ಇಷ್ಟೆಲ್ಲಾ ಕಥೆ ಮಾಡಿರೋದು. ತಿಂಡಿ ಆಯ್ತಾ ಅಥವಾ ಊಟಾನೆ ಮಾಡಿದಿರಾ? ನನ್ಗೆ ಅಂತು ಇಲ್ಲಿ ಏನು ಮಾಡಬೇಕು ಅಂತಾನೆ ತೋಚ್ತಾ ಇಲ್ಲ. ತಿಂಡಿನಾದರೂ ಮಾಡಿಕೊಳ್ಳೋಣ ಅಂದುಕೊಂಡು ಅಡುಗೆ ಮನೆಗೆ ಬಂದ್ರೆ ಉಪ್ಪು ಸಿಕ್ಕರೆ, ಜೀರಿಗೆ ಸಿಗೋಲ್ಲ, ಹರಿಶಿಣಪುಡಿ ಸಿಕ್ಕರೆ,ಮಸಾಲೆ ಡಬ್ಬ ಸಿಗೋಲ್ಲ. ಎಲ್ಲರೂ ಇದ್ದಾಗ ಮನೆ ಎಷ್ಟೊಂದು ಗಡಿಬಿಡಿಯಿಂದ ಕೂಡಿರುತ್ತಿತ್ತು, ಆದರೆ ಈಗ ಮನೆ ಎಲ್ಲಾ ಖಾಲಿ ಖಾಲಿ, ಮನಸೆಲ್ಲಾ ಖೋಲಿ ಖೋಲಿ ಅನ್ನಿಸುತ್ತಾ ಇದೆ. ಇಲ್ಲಿ ನನ್ಗೆ ಸಮಯಾನೆ ಕಳೆಯೋಕೆ ಆಗ್ತಾ ಇಲ್ಲ. ಯಾಕೋ ಎಲ್ಲರೂ ತುಂಬಾನೆ ನೆನಪಾಗ್ತಾ ಇದ್ದೀರಾ!
ಒಡವೆಗಳನ್ನು, ತುಂಬ ಕಷ್ಟಪಟ್ಟು ಕೂಡಿಸಿಟ್ಟ ಸಣ್ಣದೊಂದು ಮೊತ್ತದ ಹಣವನ್ನು ಊಟದ ಡಬ್ಬಿಯಲಿಟ್ಟು ಅದನ್ನು ಇನ್ನೊಂದು ರಟ್ಟಿನ ಡಬ್ಬದಲ್ಲಿಟ್ಟು,ಅದನ್ನು ಕಪಾಟಿನಲ್ಲಿಟ್ಟು ಅದಕ್ಕೊಂದು ಬೀಗ ಹಾಕಿ ಕಾಪಾಡಿಕೊಳ್ಳುವ ಹಾಗೆ,ನೆನಪುಗಳನ್ನು ಕಾಪಿಟ್ಟುಕೊಳ್ಳುವಂತಿದ್ದರೆ ಎಷ್ಟೊಂದು ಸೊಗಸಿರುತ್ತಿತ್ತು ಅಲ್ವಾ? ನೀನು ಓದಲಿ ಎಂದು ಈ ಪತ್ರ ಬರೆಯುತ್ತಿಲ್ಲ. ಯಾವುದೇ ಒಂದು ಕೆಲಸಕ್ಕೆ ಕಾರಣ ಎನ್ನುವುದೊಂದು ಇರಬೇಕು ಅಲ್ವಾ? ಆ ಕೆಲಸವನ್ನು ಈ ಪತ್ರ ಮಾಡಲಿ ಎಂಬ ಆಶಯ ಅಷ್ಟೆ.
ಬೇಡವೆಂದರೂ,ಇಂದೆಕೋ ನೆನಪುಗಳು ತೀಡಿ ಬರತಲಿವೆ.ಅವುಗಳಿಗೆ ಕೋಟೆ ಕಟ್ಟಲು ಆದೀತೆ?ಏನೇನೋ ಕಂಡು ಹಿಡಿದ ಮನುಷ್ಯ ಈ ವಿಷಯದಲ್ಲಿ,ಕೆಲಸಕ್ಕೆ ಬರದವನು ಆಗಿದ್ದಾನೆ.ನನ್ನೊಂದಿಗೆ ಸಾವು ಕಾಣಬೇಕು ಅಷ್ಟೆ,ನನ್ನೊಳಗಿನ ನೆನಪುಗಳು.ನೆನಪುಗಳೆ ಹೀಗೆ ಬೇಕೆಂದಾಗ ಬರೋಲ್ಲ,ಬೇಡವೆಂದಾಗ ಹೋಗಲ್ಲ.
ಪ್ರೀತಿ ಮಾಡಿದವರೆಲ್ಲ ಮದುವೆಯಾಗುತ್ತಾರಾ?ನನ್ಗೆ ಗೊತ್ತಿಲ್ಲ,ಆಮೇಲೆ ಮದುವೆಯಾದವರೆಲ್ಲ ಪ್ರೀತಿ ಮಾಡುತ್ತಾರಾ,ಹೌದೆಂದರೆ ಹೌದು,ಇಲ್ಲವೆಂದರೆ ಇಲ್ಲ.ಹೌದು ಎನ್ನುವುದಾದರೆ,ಪ್ರಪಂಚದಲ್ಲಿ ಇಷ್ಟೊಂದು ಅತೃಪ್ತ ಆತ್ಮಗಳು ಇರುತ್ತಿರಲಿಲ್ಲವೆನೋ?ಇಲ್ಲ ಎನ್ನುವುದಾದರೆ,ಇಷ್ಟೊಂದು ಸುಖಿ ಕುಟುಂಬಗಳು ಇರುವುದಾದರೂ ಹೇಗೆ.ನಾನಂತೂ ನಿನ್ನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿ ಮಾಡಿದ್ದೆ,ಈಗಲೂ ಮಾಡುತ್ತಿರುವೆ,ಮಾಡುತ್ತಲೇ ಇರುತ್ತೇನೆ.ಈ ಕಾರಣಕ್ಕೆ ನಿನ್ನನ್ನು ನಾನು ಪ್ರಿಯತಮೆ ಎಂದು ಕರೆದಿರುವುದು.ಪ್ರಿಯತಮೆಯ ಪಾತ್ರ ಮನೆಗೆ ಬರುವ ನೆಂಟರ ತರಹದ ಸಂಬಂಧ,ಯಾವಾಗ ಬೇಕಾದರೂ ಬರಬಹುದು,ಇಷ್ಟವಿರುವಷ್ಟು ದಿನ ಇರಬಹುದು,ಸಾಕಾದರೆ ಹೋಗಬಹುದು.ಆದರೆ,ಹೆಂಡತಿಯ ಪಾತ್ರ ಶಾಶ್ವತವಾದದ್ದು.ಬೇಡವಿದ್ದರೂ ಬರಬೇಕು,ಸಾಕಾದರೂ ಇರಬೇಕು,ಇಷ್ಟ ಇದೆಯೋ ಇಲ್ಲವೋ ಬದುಕು ಸಾಗಿಸಬೇಕು ಅಷ್ಟೇ.ನಾನಂತೂ ನಿನ್ನನ್ನು ಇಷ್ಟೊಂದು ಪ್ರೀತಿಸಿದ್ದಕ್ಕೆ,ನನಗೆ ಸಿಕ್ಕಿದ್ದಾದರೂ ಏನು?ನಿನ್ನಿಂದ!.
ಅಪ್ಪ ಹರಿಹರದ ಕಿರ್ಲೋಸ್ಕರ್ ಫ್ಯಾಕ್ಟರಿಯ ಉದ್ಯೋಗಿಯಾಗಿದ್ರು,ಅಮ್ಮ ಚೆಂದದ ಗೃಹಿಣಿ.ನಾವು ಮೂರು ಜನ ಮಕ್ಕಳನ್ನು ಜತನದಿಂದ ಸಾಕುವುದೆ ಅವಳ ಶಾಶ್ವತ ಉದ್ಯೋಗವಾಗಿತ್ತು.ನಾನು ಕುಟುಂಬದ ದೊಡ್ಡ ಮಗ,ಎರಡನೆಯವನು ತಮ್ಮ,ಕೊನೆಯವಳು ತಂಗಿ.ಸುಖಿ ಕುಟುಂಬದ ಮೇಲೆ ಯಾರ ನೆರಳು ಬಿತ್ತೋ?ಏನೋ ಗೊತ್ತಿಲ್ಲ, ನಾನು ಹತ್ತನೇ ತರಗತಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಎದಿರು ನೋಡುತ್ತಿದ್ದ ಸಮಯ,ಅಪ್ಪ ಫ್ಯಾಕ್ಟರಿಯಲ್ಲಿ ಏನೋ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ,ಯಾವುದೋ ಧ್ಯಾನದಲ್ಲಿ ಕೈಗೆ ಗಾಯ ಮಾಡಿಕೊಂಡರು.ಅವರಿಗೆ ಸುಮಾರು ವರ್ಷಗಳಿಂದ ಇದ್ದ ಸಕ್ಕರೆ ಖಾಯಿಲೆಯ ಪರಿಣಾಮದಿಂದ ಗಾಯ ಬಹು ದಿನವಾದರೂ ವಾಸಿಯಾಗಲೆ ಇಲ್ಲ.ಗಾಯ ವ್ರಣವಾಯಿತು,ಡಾಕ್ಟರ್ ಕೈಗೆ ಗ್ಯಾಂಗರಿನ್ ಆಗಿದೆ ಕೈ ಕತ್ತರಿಸಿ ತೆಗೆಯಲೆ ಬೇಕು ಅಂದರು.ಅದು ಆಯಿತು,ಅಪ್ಪ ಹಾಸಿಗೆಯಿಂದ ಮೇಲೆ ಎದ್ದೇಳಲೆ ಇಲ್ಲ.ಇದರ ನಡುವೆ ನಾನು ಉತ್ತಮ ಶ್ರೇಣಿಯೊಂದಿಗೆ ಹತ್ತನೇ ತರಗತಿ ಪಾಸಾಗಿದ್ದರಿಂದ,ಪಿಯುಸಿಗೆ ದಾಖಲಾಗಿದ್ದೆ.ಅಪ್ಪನ ದುಡಿಮೆಯ ಹಣ ಕರಗಲಾರಂಭಿಸಿತು.ಕೂತು ಉಂಡರೆ,ಕುಡಿಕೆ ಹೊನ್ನು ಸಾಲದು.ಉಳಿಸಿಟ್ಟಿದ್ದ ಹಣವೂ ಖಾಲಿಯಾದ ಮೇಲೆ,ಅಪ್ಪ ವಿ.ಆರ್.ಎಸ್ ತಗೊಂಡ್ರು.ಪಿ.ಎಫ್,ಗ್ರಾಚ್ಯುಟಿ ಅಂತಂದು ಮತ್ತೊಂದಿಷ್ಟು ಹಣ ಬಂತು,ಆದರೆ ಕತ್ತರಿಸಿದ ಕೈಯನ್ನು ಒಳಗೊಳಗೆ ಮೇಯುತ್ತಿತ್ತು ಕ್ಯಾನ್ಸರ್.ಇರೊ ಬರೊ ಹಣವೆಲ್ಲ ಖಾಲಿಯಾಗಿ,ಸ್ವಂತದ್ದು ಅಂತ ಇದ್ದ ದಾವಣಗೆರೆಯ ವಿದ್ಯಾನಗರದ ಮನೆ ಮಾರಿದರೂ,ಅಪ್ಪನ ವೇದನೆಯನ್ನು ಕಡಿಮೆ ಮಾಡಲು ನಮ್ಮಿಂದ ಸಾಧ್ಯ ಆಗಲಲೆ ಇಲ್ಲ.ನಾನು ಎರಡನೇ ಪಿಯುಸಿಯ ಕೊನೆಯ ದಿನಗಳಲ್ಲಿ ಇದ್ದಾಗ ಅಪ್ಪ ಕೊನೆಯುಸಿರೆಳೆದು ಬಿಟ್ಟರು.
ದುಡಿಮೆಯ ಆಧಾರ ಸ್ತಂಭ ಅಪ್ಪ ಹೋಗಿಯಾಯಿತು,ವಿಧವೆ ಅಮ್ಮ,ಸಣ್ಣ ವಯಸ್ಸಿನ ತಮ್ಮ ತಂಗಿ.ಹೊಟ್ಟೆ ಕೇಳ ಬೇಕಲ್ಲ,ನಾನು ಓದನ್ನು ಅಲ್ಲಿಗೆ ನಿಲ್ಲಿಸಿದೆ,ಸಂಸಾರದ ನೊಗ ನನ್ನ ಹೆಗಲಿಗೆ ಬಂತು ಬಿತ್ತು.ಓದನ್ನು ಮುಂದುವರೆಸಿ ಕೆಲಸ ತಗೊಂಡು,ಸಂಸಾರ ಸಾಗಿಸುವಷ್ಟು ಸಮಯವಿರಲಿಲ್ಲ.ಅಕ್ಷರಶಃ ಬೀದಿಗೆ ಬಂದಿತ್ತು ಬದುಕು,ಬದುಕಿನ ಪಯಣ ಸ್ವಂತ ಮನೆಯಿಂದ ಶ್ರೀರಾಮ ನಗರದ ಬಾಡಿಗೆ ಮನೆಗೆ ಬಂದು ನಿಂತಿತ್ತು.ತುರ್ತಾಗಿ ದುಡಿಮೆ ಮಾಡಲೇಬೇಕಿತ್ತು.ನಾನು ನಿರ್ಧಾರ ಮಾಡಿದೆ,ಏನಾದರೂ ಮಾಡಿ ಈ ಜಂಜಾಟದ ಬದುಕನ್ನು ದಡ ಸೇರಿಸಿಯೆ ತೀರಬೇಕು ಎಂದು.ಕಟ್ಟಡ ಕಟ್ಟುವವರಿಗೆ ಹೆಲ್ಪರ್ ಆಗಿ ಸೇರಿಕೊಂಡೆ.ಇಟ್ಟಿಗೆ,ಮಣ್ಣು,ಸಿಮೆಂಟ್,ಸಾರ್ವೆ ಕಟ್ಟಿಗೆಗಳನ್ನು ಸಾಗಿಸುವುದೇ ನನ್ನ ಪ್ರಪಂಚವಾಯಿತು.ಬರೀ ಇನ್ನೂರು ರೂಪಾಯಿ ಕೂಲಿ,ಅಪ್ಪನ ಪೆನ್ಸೆನ್ನಿನ ಐದು ಸಾವಿರ ಬರೀ ಮನೆ ಬಾಡಿಗೆಗೆ,ತಮ್ಮ ತಂಗಿಯರ ಶಾಲೆಯ ಫೀಜಿಗೆ,ಅಮ್ಮನ ಬಿ.ಪಿ. ಖಾಯಿಲೆಯ ಮಾತ್ರೆಗೆ,ಚಿಕಿತ್ಸೆಗೆ ಸರಿಯಾಗುತ್ತಿತ್ತು.ನನ್ನ ಕೂಲಿಯ ಹಣ ಹೊಟ್ಟೆಗೆ ಬಟ್ಟೆಗೆ ಸರಿಯಾಗುತ್ತಿತ್ತು.ಅಷ್ಟಿಲ್ಲದೆ ಹೇಳುತ್ತಾರೆಯೆ “ಹೊಲದಲ್ಲಿ ದುಡಿದ ದುಡಿಮೆ ನೂರು ಜನರ ಊಟಕ್ಕೆ,ಸಿಟಿಯಲ್ಲಿ ದುಡಿದ ದುಡಿಮೆ ಮನೆಮಂದಿಯ ಊಟಕ್ಕೆ” ಅಂತಂದು.
ನಾನು ಕೆಲಸವನ್ನು ಬಹು ಆಸ್ಥೆಯಿಂದ ಕಲಿಯುತ್ತ ಹೋದೆ.ಮೂರು ನಾಲ್ಕು ವರ್ಷಗಳಲ್ಲೆ ಕೆಲಸ ಕೈ ಹಿಡಿಯಿತು.ಹೆಲ್ಪರ್ ಇಂದ ಕಟ್ಟಡ ಕಟ್ಟಲು ಕಲಿತೆ.ನನ್ನ ಕೂಲಿಯು ಐದು ನೂರಕ್ಕೆ ಏರಿಕೆಯಾಯಿತು.ತಮ್ಮ ತಂಗಿಯರ ವಿದ್ಯಾಭ್ಯಾಸ ಚೆನ್ನಾಗಿಯೆ ನಡೆಯುತಲಿತ್ತು.ಮತ್ತೊಂದೆರೆಡು ವರ್ಷಗಳಲ್ಲಿ ನಾನೇ ಸ್ವತಃ ಮೇಸ್ತ್ರಿಯಾದೆ,ನನ್ನ ಕೈಕೆಳಗೆ ಮೂವತ್ತಕ್ಕು ಹೆಚ್ಚು ಜನ ಕೆಲಸ ಮಾಡಲು ಪ್ರಾರಂಭಿಸಿದರು.ನನ್ನ ನಿಯತ್ತಿನ ಕೆಲಸ ನನ್ನ ಕೈಬಿಡಲಿಲ್ಲ.ಒಂದು ಬಿಲ್ಡಿಂಗ್ ಪೂರ್ಣಗೊಂಡರೆ ಕಡಿಮೆ ಎಂದರೂ ಎರಡು ಲಕ್ಷದಷ್ಟು ಹಣ ಉಳಿಯಲು ಪ್ರಾರಂಭಿಸಿತು.ಇದೇ ಉಮೇದಿನಲ್ಲಿಯೇ ಇಂಡಸ್ಟ್ರಿಯಲ್ ಏರಿಯದಲ್ಲಿ ಒಂದು ಸಣ್ಣದಾದ ಮನೆಯನ್ನು ಕೊಂಡುಕೊಂಡೆ.ತಮ್ಮ ಪೋಲಿಸ್ ಇಲಾಖೆಯಲ್ಲಿ ಪಿ ಸಿ ಆದ, ಮೈಸೂರಿನಲ್ಲಿ.ತಂಗಿಗೆ ಒಂದು ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಿದ್ದು ಆಯಿತು.ಅಲ್ಲೋಲ ಕಲ್ಲೋಲ ಸಮುದ್ರದಲ್ಲಿ ಸಿಲುಕಿದ ನೌಕೆಯಾಗಿದ್ದ ನಮ್ಮ ಸಂಸಾರ ನಿಧಾನಕ್ಕೆ ಆನಂದ ಸಾಗರದಲ್ಲಿ ತೇಲಲು ಪ್ರಾರಂಭಿಸಿತು.
ಆಮೇಲೆ ನಾನು ನಿನ್ನನ್ನು ನೋಡಲು,ಹದಡಿಗೆ ಬಂದೆ.ನಾನೇನು ಸಿನೆಮಾ ಹೀರೊ ಆಗಿರಲಿಲ್ಲ.ಆರಡಿ ಎತ್ತರ,ಎಣ್ಣೆಗೆಂಪು ಬಣ್ಣ,ಕೋಲು ಮುಖ,ನೀಳ ಮೂಗು,ಹಣೆಗೆ ಬಂದು ಬೀಳುತ್ತಿದ್ದ ಕೂದಲು.ಆದರೆ ಸ್ಫುರದ್ರೂಪಿ ಅನ್ನಿಸಬಹುದಾದ ರೂಪು ಇತ್ತು ನನಗೆ.ಕರಿ ಫ್ಯಾಂಟು,ಮೇಲೊಂದು ವೈಟ್ ಚಕ್ಸ್ ಶರ್ಟ್ ಹಾಕಿಕೊಂಡು ಬಂದಿದ್ದೆ.ನಿಮ್ಮದು ಮಧ್ಯಮ ವರ್ಗದ ಕುಟುಂಬವಾಗಿದ್ದು,ಆರು ಜನ ಹೆಣ್ಣು ಮಕ್ಕಳಲ್ಲಿ ನೀನೆ ಕೊನೆಯವಳು.ನಿಮ್ದು ಐದೆಕೆರೆ ನೀರಾವರಿ ಜಮೀನು ಇತ್ತು.ನೀನು ಗೌರವರ್ಣ,ಐದು ಮೂಕ್ಕಾಲು ಅಡಿ ಎತ್ತರ,ದುಂಡು ಮುಖ,ಮಟ್ಟಸವಾದ ಎದೆ,ಕಿರಿದಾದ ಸೊಂಟ,ಉದ್ದ ಜಡೆ,ಗಿಳಿ ಹಸಿರು ಬಣ್ಣದ ಸೀರೆ ಉಟ್ಟಿದ್ದೆ ಅವತ್ತು.ನಿನ್ನ ನೋಡಿದ ತಕ್ಷಣ,ನೀನು ನನ್ನನ್ನು ಒಪ್ಪಿಕೊಳ್ಳೊಲ್ಲ ಅಂದುಕೊಂಡಿದ್ದೆ,ಅಂತಹ ಅಂದ ನಿನ್ನದು.ಜೊತೆಗೆ ನೀನು ಬಿ.ಎ.ಓದಿದ್ದು,ಟೈಲರಿಂಗ್ ಕೂಡ ಕಲಿತ್ತಿದ್ದೆ.ಆದರೂ ನೀನು ಒಪ್ಪಿಗೆ ಕೊಟ್ಟೆ.ನಮ್ಮ ಮದುವೆ ನಿಮ್ಮ ಊರಲ್ಲಿ ತುಂಬಾ ಅದ್ಧೂರಿಯಾಗಿಯೆ ಆಯಿತು.ವಾವ್ಹ್,ಎಷ್ಟೊಂದು ಅಬ್ಬರ,ಎಷ್ಟೊಂದು ಜನ,ಮದುವೆಯಾದ ದಿನ ಎಂತಹ ಅಮೋಘವಾದ ಮೆರವಣಿಗೆ,ಭರ್ಜರಿ ಊಟ.ಒಂದಾ ಎರಡಾ ಸವಿ ನೆನಪುಗಳು.
ನೀನು ನಮ್ಮ ಮನೆಗೆ ಬಂದೆ.ನಮ್ಮಿಬ್ಬರಿಗೂ ಅರ್ಥ ಮಾಡಿಕೊಳ್ಳಲು ಒಂದಿಷ್ಟು ಅನುಕೂಲವಾಗಿಲಿ ಅಂದುಕೊಂಡು,ಅಮ್ಮ ತಮ್ಮನೊಂದಿಗೆ ಮೈಸೂರಿಗೆ ಹೊರಟು ಹೋದಳು.ಅದುವರೆಗೂ ನಮ್ಮ ಮನೆಗೆ ಒಂದು ಹೆಸರು ಎಂದು ಇರಲಿಲ್ಲ.ಆದರೆ ನೀನು,ನನ್ನ ಹೆಸರಾದ ಶ್ರೀನಿವಾಸ ಎಂಬುದಕ್ಕೆ ವಿಶೇಷವಾದ ಅರ್ಥ ಕೊಟ್ಟೆ.ಇಬ್ಬರ ಹೆಸರುಗಳ ಮೊದಲೆರೆಡು ಅಕ್ಷರಗಳನ್ನು ಸೇರಿಸಿ,ಶ್ರೀನಿವಾಸ(ಶ್ರೀನಿ)+ವಾಸಂತಿ(ವಾಸ)=ಶ್ರೀನಿವಾಸ ನಿಲಯ ಎಂದು ಹೆಸರಿಟ್ಟೆ.ಅಂದಿನಿಂದ ನಾನು,ನೀನು ಒಂದೆ ಹೆಸರು ಎರಡು ದೇಹ.
ಆ ದಿನ ನನಗೆ ತುಂಬಾ ಚೆನ್ನಾಗಿ ನೆನಪಿದೆ,ನಮ್ಮ ಮದುವೆಯಾಗಿ ಅಂದಿಗೆ ಒಂದು ವರ್ಷದ ಸಂಭ್ರಮವಾಗುತ್ತಿತ್ತು.ಅಂದು ನಾನು ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೆ ಇದ್ದೆ.ನಾವಿಬ್ಬರೂ ಅಂದು ತುಂಬಾ ಲೇಟಾಗಿ ಎದ್ದಿದ್ದೆವು,ಅದಕ್ಕೆ ಕಾರಣ ರಾತ್ರಿಯೆಲ್ಲ,ಇಬ್ಬರೂ ಪರಸ್ಪರ ಕಾಡಿಕೊಂಡಿದ್ದೆವು.ಇಬ್ಬರೂ ಜೊತೆಗೆ ಸ್ನಾನ ಮಾಡಿ,ಸಿಹಿ ಊಟ ತಿಂದು,ಮಧ್ಯಾಹ್ನ ನಿಟುವಳ್ಳಿಯ ದುಗ್ಗಮ್ಮನ ಗುಡಿಗೆ ಹೋಗಿ ದರ್ಶನ ಮಾಡಿಕೊಂಡು ಬಂದಿದ್ದೆವು.ಸಂಜೆ,ನಮ್ಮದೇ ಅಂಬಾರಿಯಾದ ಶೈನ್ ಗಾಡಿಯಲ್ಲಿ,ನಾನು ನೀನು ಸಾಮ್ರಾಟ್ ಹೋಟೆಲ್ಲಿಗೆ ಹೋಗಿ ದಾವಣಗೆರೆ ಬೆಣ್ಣೆದೋಸೆ ತಿಂದು,ನಿನಗೆ ನಿನ್ನಿಷ್ಟದ ದುಂಡು ಮಲ್ಲಿಗೆ ಕೊಡಿಸಿ,ಮುಡಿಸಿ,ಅಶೋಕ ಥಿಯೆಟರ್ರಿನಲ್ಲಿ ‘ಡಕೋಟ ಎಕ್ಸಪ್ರಸ್’ ಫಿಲ್ಮ್ ನೋಡಿದ್ದು,ನೀನು ಹೊಟ್ಟೆ ಹಿಡಿದು ನಕ್ಕಿದ್ದು,ನಕ್ಕಿದ್ದೆ.ತಡ ರಾತ್ರಿ ಮನೆಗೆ ಬಂದ ಸ್ವಲ್ಪ ಹೊತ್ತಿಗೆ ಹೊಟ್ಟ ನೋವು ಎಂದು ಅತ್ತಾಗ,ಅಷ್ಟೊತ್ತಿನಲ್ಲಿಯೆ ಇಎಸ್ಸೈ ಆಸ್ಪತ್ರೆಗೆ ಹೋಗಿದ್ದು,ಡಾಕ್ಟರ್ ಟೆಸ್ಟ್ ಮಾಡಿ,ನೀನು ಬಸುರಿ ಎಂದಿದ್ದು,ಇಂದಿಗೂ ಆ ರಾತ್ರಿ,ಆ ಆಸ್ಪತ್ರೆಯ ಜಾಗ ನನ್ಗೆ ಸ್ಮಾರಕಗಳು.
ಅದಾಗಿ ಒಂಭತ್ತು ತಿಂಗಳಿಗೆ,ಮುದ್ದಾದ ಹೆಣ್ಣು ಮಗು ಧೃವಿ ನಮ್ಮ ಮಡಿಲು ತುಂಬಿದ್ದು,ಈಗಲೂ ಕಣ್ಣಲ್ಲಿ ಹಚ್ಚ ಹಸಿರಾಗಿದೆ ನೆನಪು.ಅದಾಗಿ ಸರಿಯಾಗಿ ಮೂರು ವರ್ಷಕ್ಕೆ ದರ್ಶನ್ ಸಹ ನಮ್ಮ ಮನೆಗೆ ಎರಡನೆಯ ಮಗುವಾಗಿ ಬಂದಿದ್ದ.ಅಲ್ಲಿಂದ ನಮ್ಮ ಬಾಳಿನಲ್ಲಿ ಎಂಟು ವರ್ಷಗಳು ಅದು ಹೇಗೆ ಕಳೆದವೋ ,ಆ ದೇವರೆ ಬಲ್ಲ.ಅಷ್ಟೊಂದು ವೇಗವಾಗಿ ಸಾಗಿ ಹೋದವು ಆ ದಿನಗಳು.ಒಳ್ಳೆ ರೈಲುಗಾಡಿ ದಡಬಡಾಯಿಸಿ ಓಡಿ ಹೋದಂತೆ,ಕೈಗೆ ಸಿಗಲಾರದೆ ಓಡಿ ಬಿಟ್ಟವು.
ದರ್ಶನ್ನಿಗೆ ಸುಮಾರು ಮೂರು ವರ್ಷ ಆದ ಮೇಲೆ,ಅವನ್ನನ್ನು ಹತ್ತಿರದ ಕಾನ್ವೆಂಟ್ಟಿಗೆ ಸೇರಿಸಿದ್ವಿ.ಆಮೇಲೆ ಒಂದು ವಾರ,ಹದಿನೈದು ದಿನಕ್ಕೆ ನೀನು ಹೊಸ ವರಸೆ ತೆಗೆದು ಬಿಟ್ಟೆ.”ನನ್ಗೆ ಮನೆಯಲ್ಲಿ ತುಂಬ ಬೇಜರಾಗ್ತಾ ಇದೆ,ನಾನೂ ಗಾರ್ಮೆಂಟ್ಸಿಗೆ ಹೋಗ್ತಿನಿ.ನಮ್ಮ ಮನೆಯ ಅಕ್ಕಪಕ್ಕದವರೆಲ್ಲ ಹೋಗ್ತ ಬರ್ತಾ ಇದ್ದಾರೆ,ನಾನು ಹೋಗ್ತಿನಿ,ಮನೆ ಖರ್ಚಿಗೂ ಒಂದಿಷ್ಟು ಸಹಾಯ ಆಗುತ್ತೆ,ಹೇಗಿದ್ದರೂ ಮಕ್ಕಳು ಶಾಲೆಯಿಂದ ವಾಪಾಸ್ಸು ಬರುವ ವೇಳೆಗೆಲ್ಲ ನಾನೂ ಕೂಡ ವಾಪಾಸ್ಸು ಬರ್ತಿನಿ” ಎಂದು ನನ್ನನ್ನು ಪುಸಲಾಯಿಸಿ,ಗಾರ್ಮೆಂಟ್ಸಿಗೆ ಸೇರಿಕೊಂಡೆ.
ಅಲ್ಲಿಂದ ಒಂದು ಆರು ತಿಂಗಳು ನೀನು ಚೆನ್ನಾಗಿಯೆ ಇದ್ದೆ,ಅದಾದ ಮೇಲೆ,”ಎಲ್ಲರತ್ತಿರಾನು ಸ್ಮಾರ್ಟ್ ಫೋನ್ ಇವೆ,ರಜಾ ಕೇಳಲು,ನನ್ನ ಫ್ರೆಂಡ್ಸುಗಳ ಜೊತೆ ಮಾತನಾಡಲು ಬೇಕು” ಎಂದು ಗೋಗರೆದು,ಒಂದು ಫೋನ್ ತೆಗೆಸಿಕೊಂಡೆ.ಮತ್ತೆ ಒಂದು ಆರು ತಿಂಗಳ ನಂತರ ನೀನು ಪೂರ್ಣ ಬದಲಾದೆ,ಆದರೆ ನನ್ಗೆ ಮಾತ್ರ ನೀನು ಬದಲಾಗಿದ್ದು ಗೊತ್ತಾಗದ ರೀತಿಯಲ್ಲಿ ನಾಟಕ ಮಾಡ್ತಾ ಬಂದೆ.ಅದ್ಕೆ ಹೇಳಿರೋದು “ಜೀವನದಲ್ಲಿ ಎಲ್ಲದಕ್ಕೂ ತಯಾರಾಗಿಯೇ ಇರಿ.ಹವಾಮಾನ ಮತ್ತು ಜನರು ಯಾವಾಗ ಬೇಕಾದರೂ ಬದಲಾಗಬಹುದು” ಎಂದು,ಸುಮ್ ಸಮ್ನೆ ಅಲ್ಲ.
ಅಲ್ಲಿಂದ ಗೊತ್ತಿರೋರು ನನ್ಗೆ ಸಿಕ್ಕಾಗಲೆಲ್ಲಾ,”ಹೇ ನೋಡು ಸೀನು,ನಿನ್ನ ಹೆಂಡತಿ,ಆ ಗಾರ್ಮೆಂಟ್ಸಿನ ಮ್ಯಾನೇಜರ್ ಜೊತೆ ಎಲ್ಲಿ ಅಂದರಲ್ಲಿ ಸುತ್ತುತಾ ಇರ್ತಾಳೆ,ಒಂಚೂರು ಗಮನಿಸು”,ಹೀಗೆ ಎಷ್ಟೊಂದು ಜನ ಹೇಳಿದರೂ ನಾನು ನಂಬಿರಲಿಲ್ಲ.ಆದರೆ,ಅಂದು ಮಧ್ಯಾಹ್ನ ನಾನು ಮನೆಯಲ್ಲಿಟ್ಟಿದ್ದ ದುಡ್ಡು ತರಬೇಕು ಅಂದು ಕೊಂಡು ಟ್ಯಾಂಕ್ ಪಾರ್ಕಿನ ಪಕ್ಕದ ರಸ್ತೆಯಿಂದ ಹಾದು ಹೋಗಬೇಕಾದರೆ,ಬೆಂಚಿನ ಮೇಲೆ ಯಾರದೋ ಜೊತೆ ನಿನ್ನನ್ನು ನೋಡಿದ ಹಾಗೆ ಆಯಿತು.ಒಂದು ಸೆಕೆಂಡು ನನ್ನನ್ನು ನಾನೇ ನಂಬಲು ಸಾಧ್ಯವಾಗಲಿಲ್ಲ.ಕಣ್ಣು ಉಜ್ಜಿಕೊಂಡು ನೋಡಿದ್ರೆ,ಅದು ನೀನೆ!.ಇರಲ್ಲಿ ಯಾವುದಾದರೂ ಕೆಲಸದ ಮೇಲೆ ಎಲ್ಲರೂ ಬಂದಿರಬೇಕೆಂದು ಕೊಂಡು ಅಕ್ಕಪಕ್ಕದ ಬೆಂಚುಗಳನ್ನು ನೋಡಿದ್ರೆ ಅಲ್ಲಿ ನಿನ್ನ ಫ್ರೆಂಡ್ಸುಗಳು ಯಾರೂ ಇರಲಿಲ್ಲ.
“ಪ್ರತ್ಯಕ್ಷವಾಗಿ ಕಂಡರೂ,ಪ್ರಾಮಾಣಿಸಿ ನೋಡು”ಇರಲಿ ಸಂಜೆ ಕೇಳೋಣ ಅಂದುಕೊಂಡೆ.ಸಂಜೆ ಬಂದಾಗ ನಿನ್ನನ್ನು ಕೇಳಿದರೆ “ಇಲ್ಲಪ್ಪ,ನಾನು ಎಲ್ಲಿಗೂ ಹೋಗಿಯೆ ಇಲ್ಲ,ಬೆಳಗ್ಗೆಯಿಂದ ಸಂಜೆಯವರೆಗೂ ಗಾರ್ಮೆಂಟ್ಸ್ ಫ್ಯಾಕ್ಟರಿ ಬಿಟ್ಟು ಹೊರಗೆ ಹೋಗಿಯೇ ಇಲ್ಲ” ಎಂದು ಬಿಟ್ಟೆ.ಆಮೇಲೆ ಕೂಲಂಕುಷವಾಗಿ,ನಿನ್ನ ಫ್ಯಾಕ್ಟರಿ ಬಳಿ ವಿಚಾರಿಸಿದಾಗ,ನೀನು ನಿಮ್ಮ ಮ್ಯಾನೇಜರ್ ಪ್ರೇಮ ಪ್ರಸಂಗ ಸುಮಾರು ಆರು ತಿಂಗಳಷ್ಟು ಹಳೆಯದು ಎಂದು ತಿಳಿದು ಬಂತು.ನೀನು ಡಿಗ್ರಿ ಮಿಗಿಸಿದ್ದು,ಟೈಲರಿಂಗ್ ತುಂಬ ಚೆನ್ನಾಗಿ ಮಾಡ್ತಿಯಾ ಅನ್ನೋ ಕಾರಣ ಇಟ್ಟುಕೊಂಡೆ ನಿನಗೆ ಹತ್ತಿರವಾಗಿದ್ದ.
ಇದೆಲ್ಲವನ್ನೂ ನಿನಗೆ ತುಂಬಾ ಸಲ ಕೇಳಿದಾಗಲೂ ನೀನು ಅದೇ ಹಸಿಹಸಿ ಸುಳ್ಳು ಹೇಳುತ್ತಲೆ,ನನ್ನನ್ನು ನಂಬಿಸುತ್ತಲೆ,ನಿಮ್ಮ ಪ್ರೇಮ ಪ್ರಸಂಗವನ್ನು ತುಂಬ ಚೆನ್ನಾಗಿ ಮುಂದುವರೆಸುತ್ತಲೆ ಬಂದಿರಿ.”ಇರಲಿ,ಇದೊಂದು ತಿಂಗಳು ಮುಗಿಯುವವರೆಗೂ ಮಾತ್ರ,ನೀನು ಕೆಲಸಕ್ಕೆ ಹೋಗು,ಮುಂದಿನ ತಿಂಗಳಿಂದ ಕೆಲಸಕ್ಕೆ ಹೋಗುವುದು ಬೇಡ”ಎಂದು ಯಾವಾಗ ನಾನು ಧಮ್ಕಿ ಹಾಕಿದೇನೋ,ನೀನು “ಆಯ್ತು”ಎಂದು ಒಪ್ಪಿಕೊಂಡಂತೆ ಮಾಡಿ,ನಿನ್ನೆ ನಾನು ಕೆಲಸದಿಂದ ಬರುವ ವೇಳೆಗೆ ನಿನ್ನ ಪ್ರಿಯಕರನ ಸಂಗಡ,ನನ್ನ ಮಕ್ಕಳನ್ನೂ ಕರೆದುಕೊಂಡು ಪರಾರಿಯಾಗಿರುವುದು ಎಷ್ಟು ಸರಿ ಹೇಳು?!
ಪಾಪ,ನೀನಾದರೂ ಏನು ಮಾಡ್ತಿಯಾ ಹೇಳು?ಸಿಮೆಂಟು,ಬೆವರಿನ ವಾಸನೆ ಬರುವ,ಯಾವಾಗಲೂ ಕೆಲಸದಲ್ಲಿ ಬ್ಯುಸಿ ಇರುವ ನನ್ನಂಥವನಿಂದ ನಿನ್ಗೆ ಪ್ರೀತಿ ಪ್ರೇಮ ಸರಿಯಾಗಿ ಸಿಗಲಿಲ್ಲವೇನೊ?ವೈಟ್ ಕಾಲರ್ ಜಾಬಿನ ಗಂಡ ಬೇಕಿತ್ತೆನೋ ನಿನ್ಗೆ?ಹೋಟೆಲ್ಲು,ಪಾರ್ಕು ಸುತ್ತಿಸುವ,ಯಾವಾಗಲೂ ಮೊಬೈಲ್ ಚಾಟಿಂಗ್ನಲ್ಲಿರುವ ಗಂಡ ಬೇಕಿತ್ತೆನೋ?
ನಿನ್ಗೆ ನಾನು ಬೇಕಿರಲಿಲ್ಲ,ನಿಜ,ಒಪ್ಪಿಕೊಳ್ಳುವೆ.ಆದರೆ,ನನ್ನ ಮಕ್ಕಳಿಗೆ ನನ್ನ,ನನ್ಗೆ ನನ್ನ ಮಕ್ಕಳ ಪ್ರೀತಿ ಸಿಗದ ಹಾಗೆ ಮಾಡಿದ್ದು ಯಾವ ಸೀಮೆಯ ನ್ಯಾಯ?ನಾನು ನಿನಗೆ ಏನು ಅನ್ಯಾಯ ಮಾಡಿದ್ದೆ?ನಿನಗೋಸ್ಕರ ನಾನು ಪ್ರತಿದಿನ ಬೆವರು ಸುರಿಸಿ ದುಡಿದು,ನನ್ನ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದೆ,ನಿನಗೋಸ್ಕರ ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೆ.ಆದರೆ ನೀನು ನನ್ನ ಜೀವನವನ್ನೇ ಹಾಳು ಮಾಡಿದೆ.ನೀನು ನನ್ನ ಜೀವನದಲ್ಲಿ ಈ ರೀತಿಯ ಆಟ ಆಡುತ್ತೀಯಾ ಎಂದು ನಾನು ಅಂದುಕೊಂಡಿರಲಿಲ್ಲ.
ಶ್ರೀನಿವಾಸ ನಿಲಯ ಎಂದು ಹೆಸರಿಟ್ಟಿದ್ದೆ, ಮನೆಗೆ.ಆದರೆ ಇಂದು ನನಗೆ,ನಮ್ಮ ಮನೆಗೆ ಸರಿಯಾಗಿ ಉಂಡೆ ನಾಮ ಇಟ್ಟು ಹೋದೆ.ಇಷ್ಟು ದಿನ ಮಕ್ಕಳಿಂದ,ನಿನ್ನಿಂದ ತುಂಬಿದ್ದ ನನ್ನ ಜೀವನದ ದಾರಿ ಎಷ್ಟೊಂದು ಸಂತಸದಾಯಕವಾಗಿತ್ತು,ನೆಮ್ಮದಿಯಿಂದ ಕೂಡಿತ್ತು.ಆದರೆ ನೀನಿಲ್ಲದ,ಮಕ್ಕಳಲ್ಲಿದ ನನ್ನ ಜೀವನ ಯಾರೂ ಇರದ ಖಾಲಿ ರಸ್ತೆಯಾಗಿದೆ,ದಾರಿ ಬಟಾಬಯಲಾಗಿದೆ,ಬಯಲು ದಾರಿಯಾಗಿದೆ.ಬಯಲು ದಾರಿಯಲಿ,ಒಂಟಿ ಪಯಣ ನನ್ನದು.
ಇರಲಿ,ಸುಖ ಅರಸಿ ಹೋದ ನಿನ್ಗೆ ಸುಖ ಸಿಗಲಿ.ಮಕ್ಕಳ ಜೀವನ ಹಸನಾಗಲಿ.ಮಕ್ಕಳು ಜೋಪಾನ.
ವಿದಾಯಗಳೊಂದಿಗೆ.
ಇತಿ ನಿನ್ನವನಾಗಿದ್ದವನು.
ಸೀನು.
***************
ಇದಾಗಿ,ಸುಮಾರು ಒಂದು ಗಂಟೆ ಕಳೆದಿರಬಹುದಷ್ಟೆ, ದಾವಣಗೆರೆಯ ರೈಲ್ವೆ ಪೋಲಿಸಿನವರಿಗೆ ಒಂದು ಕರೆ ಬಂತು. “ಸಾರ್,ಯಾರೋ ಒಬ್ಬನು ಅಳುತ್ತಾ, ರೈಲ್ವೆ ಸ್ಟೇಷನ್ನಿನ ಮೇಲ್ಸೇತುವೆಗೆ ಬಂದು ರೈಲು ಬರುತ್ತಿರುವ ಸಮಯವನ್ನು ನೋಡಿ,ಕಾದು ಹಾರಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ”.
ಇತ್ತ ಶ್ರೀನಿವಾಸ ನಿಲಯದ ಟೇಬಲ್ಲಿನ ಮೇಲೆ ಸೀನು ಬರೆದಿಟ್ಟಿದ್ದ ಪತ್ರ, ಗಾಳಿಗೆ ಪಟಪಟನೆ ಹಾರಿ ನೆಲದ ಮೇಲೆ ಬಿದ್ದು,ಜೀವ ಕಳೆದುಕೊಂಡಿತು.
ಜ್ಯೋತಿ ಕುಮಾರ್.ಎಂ ಪರಿಚಯ
ಜ್ಯೋತಿ ಕುಮಾರ್.ಎಂ (ಜೆ.ಕೆ.),ಇವರು ಓದಿದ್ದು,ಎಮ್,ಎಸ್ಸಿ.ಎಮ್,ಇಡಿ.ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟ್ರು.ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು.ಸದ್ಯ ಸಂತೆಬೆನ್ನೂರಿನಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇವರು ಹವ್ಯಾಸಿ ಬರಹಗಾರರಾಗಿದ್ದು,ಪ್ರಸ್ತುತ ಇವರ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಹಾಯ್ ಬೆಂಗಳೂರು,ಮಂಗಳ,ಜೀವನಾಡಿ,ನಿಮ್ಮೆಲ್ಲರ ಮಾನಸ ಪತ್ರಿಕೆ,ಬುಕ್ ಬ್ರಹ್ಮ,ಕೆಂಡ ಸಂಪಿಗೆ,ಸಂಗಾತಿ,ಪಂಜು ಮ್ಯಾಗಝೀನ್,ಸಂಪದ,ಪ್ರತಿ ಲಿಪಿ,ಮಾಮ್ಸ್ ಪ್ರೆಸ್ಸೋ ಇವುಗಳಲ್ಲಿ ಪ್ರಕಟವಾಗಿವೆ.