ಮೋಲಿಯೇರ್ ಫ್ರಾನ್ಸಿನ ಸುಪ್ರಸಿದ್ಧ ನಾಟಕಕಾರ. ಮೋಲಿಯೇರ್ ಎಂಬುದು ಅವನ ಪ್ರಸಿದ್ಧ ಸಂಕ್ಷಿಪ್ತ ನಾಮ. ಆತನ ನಿಜವಾದ ಹೆಸರು ಜೀನ್ ಬ್ಯಾಪ್ಟಿಸ್ಟ್ ಫೋಕಿಲಾನ್ ಮೋಲಿಯೇರ್. 1622 ರಲ್ಲಿ ಮೋಲಿಯೇರ್ ಪ್ಯಾರಿಸಿನಲ್ಲಿ ಜನಿಸಿದ. ಅವನು ಚಿಕ್ಕ ವಯಸ್ಸಿನವನಿದ್ದಾಗ ಅವನ ಅಜ್ಜ ಅವನನ್ನು ಪ್ಯಾರಿಸಿನ ನಾಟಕ ಮಂದಿರಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಮೋಲಿಯೇರ್ 15 ವರ್ಷದವನಿದ್ದಾಗ ಕ್ರೈಸ್ತರ ಜೆಸ್ಸೂಟ್ ಪಂಗಡದ ಕಾಲೇಜೊಂದನ್ನು ಸೇರಿದ. ಲ್ಯಾಟಿನ್ ನಾಟಕಗಳ ಅಧ್ಯಯನ ಮತ್ತು ಅಭಿನಯಗಳಲ್ಲಿ ಆಸಕ್ತಿ ತೋರಿದ. ಇವೆಲ್ಲವೂ ಮೋಲಿಯೇರನ ನಾಟಕ ಕಲಾಸಕ್ತಿ ಬೆಳೆಯಲು ಸಹಾಯಕವಾದವು; ನಾಟಕ ಸಂಸ್ಥೆಯೊಂದನ್ನು ಕಟ್ಟಬೇಕೆಂಬ ಆಸೆಯನ್ನು ಅವನಲ್ಲಿ ಕೆರಳಿಸಿದವು.
ತನ್ನ ತಾಯಿಯ ಕಡೆಯಿಂದ ಹಣ ಪಡೆದು ಮೋಲಿಯೇರ್ ನಾಟಕ ಸಂಸ್ಥೆಯೊಂದನ್ನು ಸ್ಥಾಪಿಸಿದ. ಆ ಸಂಸ್ಥೆ ಕೆಲವು ಟ್ರಾಜಿಡಿಗಳನ್ನು ಪ್ರದರ್ಶಿಸಲು ಪ್ರಾರಂಭಿಸಿತು. ಆ ಮೊದಲೇ ಬಹಳ ವ್ಯವಸ್ಥಿತವಾಗಿ ಪ್ರಬಲವಾಗಿ ಬೆಳೆದಿದ್ದ ಕೆಲವು ನಾಟಕ ಸಂಸ್ಥೆಗಳ ತೀವ್ರ ಸ್ಪರ್ಧೆಯಿಂದ ಮೋಲಿಯೇರನ ನಾಟಕ ಪ್ರದರ್ಶನಗಳು ಲಾಭದಾಯಕವಾಗಲಿಲ್ಲ. ತುಂಬಾ ನಷ್ಟವೂ ಆಯಿತು. ಮಾಡಿದ ಸಾಲವನ್ನು ತೀರಿಸಲಾಗದೆ ಅವನು ಒಂದೆರಡು ಸಲ ಸೆರೆಮನೆವಾಸವನ್ನು ಅನುಭವಿಸಬೇಕಾಯಿತು. ಆದರೂ ಮೋಲಿಯೇರ್ ನಾಟಕ ಪ್ರದರ್ಶನದಲ್ಲಿ ತನ್ನ ಆಸಕ್ತಿಯನ್ನು ಕಳೆದುಕೊಳ್ಳಲಿಲ್ಲ, ದಿಟ್ಟತನದಿಂದ ಮುಂದುವರಿದ. ಅವನು ಫ್ರಾನ್ಸಿನ ಚಕ್ರವರ್ತಿ 14ನೇ ಲೂಯಿಯ ಸಹೋದರ ಫಿಲಿಪ್ ಮತ್ತು ರಾಜಕುಟುಂಬ ದವರ ಮುಂದೆ ಅಭಿನಯಿಸಿದ ಪ್ರಹಸನವೊಂದು ಅವರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ನಂತರ ಫ್ರಾನ್ಸಿನ ರಾಜ ಕುಟುಂಬದವರಿಗೆ ಮೀಸಲಾದ ನಾಟಕ ಶಾಲೆಯಲ್ಲಿ ಪ್ರದರ್ಶನ ನಡೆಸಲು ಅವನಿಗೆ ಅವಕಾಶ ಸಿಕ್ಕಿತು. ಈ ರಾಜ ಪ್ರೋತ್ಸಾಹದಿಂದ ಮೋಲಿಯೇರನ ನಾಟಕ ಮಂಡಳಿ ಚೇತರಿಸಿಕೊಂಡಿತು. ಮೋಲಿಯೇರ್ ತಾನೆ ನಾಟಕಗಳನ್ನು ಬರೆದು ಅವನ್ನು ಪ್ರದರ್ಶಿಸಲಾರಂಭಿಸಿದ. ಖ್ಯಾತ ಆಂಗ್ಲ ನಾಟಕಕಾರ ಶೇಕ್ಸ್ ಪಿಯರನಂತೆ ಮೋಲಿಯೇರನನು ನಾಟಕ ಕಂಪನಿಯ ವ್ಯವಸ್ಥಾಪಕನಾದ; ಖ್ಯಾತ ನಟನಾದ; ಕಾಲ ದೇಶಗಳ ಮಿತಿಯನ್ನು ಮೀರಿದ ಪ್ರತಿಭಾವಂತ ನಾಟಕಕಾರನಾದ.
ಕಾಮಿಡಿ ನಾಟಕಗಳನ್ನು ಲಘುಪ್ರಹಸನಗಳ ಮಟ್ಟದಿಂದ ಒಂದು ಸೃಷ್ಟ್ಯಾತ್ಮಕ ಕಲೆಯ ಮಟ್ಟಕ್ಕೆ ಏರಿಸಿದ ಕೀರ್ತಿ ಮೋಲಿಯೇರ್ ಗೆ ಸಲ್ಲುತ್ತದೆ. “ತಾರ್ತೂಫ್” ಮೋಲಿಯೇರನ ನಾಟಕಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ವಂಚನೆ. ಪಾದ್ರಿಗಳ ಕಪಟತನವನ್ನು ಕುರಿತ ಮೂರು ಅಂಕಗಳ ನಾಟಕ. ಇದು ಪ್ರಕಟವಾದಾಗ ಫ್ರಾನ್ಸಿನ ರಾಜಕೀಯ ಧಾರ್ಮಿಕ ವಲಯಗಳಲ್ಲಿ ವಿವಾದದ ಬಿರುಗಾಳಿ ಮೊರೆಯಿತು. ಸರ್ಕಾರ ಈ ನಾಟಕದ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಆಜ್ಞೆ ಮಾಡಿತು. ಫ್ರಾನ್ಸಿನ ಧಾರ್ಮಿಕ ಪ್ರಮುಖರು ಆ ನಾಟಕದ ಮೇಲೆ ಬಹಿಷ್ಕಾರ ಹಾಕಿದರು. ಆದರೆ ಸುಮಾರು 1670ರಲ್ಲಿ ಆ ನಾಟಕ ಸಾರ್ವಜನಿಕವಾಗಿ ಪ್ರದರ್ಶಿತವಾದಾಗ, ಅದು ತುಂಬಾ ಜನಪ್ರಿಯವಾಯಿತು. ಫ್ರೆಂಚ್ ನಾಟಕ ಪ್ರಕಾರದ ಶ್ರೇಷ್ಠ ಕೃತಿಯೆಂದು ಹೊಗಳಲ್ಪಟ್ಟಿತು.
ಮೋಲಿಯೇರ್ ತನ್ನ ಪ್ರತಿಯೊಂದು ನಾಟಕದಲ್ಲೂ ಮನುಷ್ಯನ ದೌರ್ಬಲ್ಯ, ಅಸಂಬದ್ಧ ನಡವಳಿಕೆ, ಶುಷ್ಕ ಸೊಗಸುಗಾರಿಕೆಗಳನ್ನು ಹರಿತ ಮಾತುಗಳಿಂದ ಗೇಲಿ ಮಾಡುತ್ತಾನೆ. ಜಿಪುಣರು, ಮೂರ್ಖರು, ಆಷಾಡಭೂತಿಗಳು, ದಗಾಕೋರರು, ಮೋಸಗಾರರು, ಹರಟೆಮಲ್ಲರು ತಾವು ಪ್ರತಿಷ್ಠಾವಂತರೆಂದು ತೋರಿಸಿಕೊಳ್ಳ ಬಯಸುವ ಅಲ್ಪರು ಯಾರು ಇವನ ವಿಡಂಬನೆಯ ತಿವಿತದಿಂದ ಪಾರಾಗಿಲ್ಲ. ಅವನು ತನ್ನ ಸುತ್ತಮುತ್ತಲ ಸಮಾಜವನ್ನು ಸೂಕ್ಷ್ಮವಾಗಿ ನೋಡುತ್ತಿದ್ದ. ಮಾನವ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮೋಲಿಯೇರ್ ಬಲು ನಿಪುಣ. ಆದ್ದರಿಂದಲೇ ಅವನ ಕೃತಿಗಳು, ಅವನ ಅಭಿನಯವು ಜೀವ ಕಳೆಯಿಂದ ಕೂಡಿರುತ್ತಿದ್ದವು. ಅವನು ಪ್ರತಿಭಾವಂತ ಹಾಸ್ಯ ನಟನಾಗಿದ್ದ.
ಮದುವೆಯಾಗಿ ಮೂರು ಮಕ್ಕಳನ್ನು ಪಡೆದ ಮೇಲೆ 1672 ಫೆಬ್ರವರಿ 17ರಂದು ಮೋಲಿಯೇರನ ಹೆಂಡತಿ, ಮೃತಳಾದಳು. ಇದರಿಂದ ಅವನಿಗೆ ಅಪಾರ ದುಃಖವಾಯಿತು. ಇದರಿಂದ ಚೇತರಿಸಿಕೊಳ್ಳಲು ಸ್ವಲ್ಪ ಕಾಲಯಿತು. ಅನಂತರ ಅವನು ಮತ್ತೆ ನಾಟಕ ರಚನೆ, ಅಭಿನಯ, ನಾಟಕ ಪ್ರದರ್ಶನಗಳಲ್ಲಿ ತೊಡಗಿದ. ಕ್ರಮೇಣ ಅವನ ಆರೋಗ್ಯ ಕೆಟ್ಟಿತು. ವಿಶ್ರಾಂತಿ ತೆಗೆದುಕೊಳ್ಳುವಂತೆ ಅವನ ಗೆಳೆಯರು ತುಂಬಾ ಒತ್ತಾಯ ಮಾಡಿದರು. ಅವನು ಅವರ ಸೂಚನೆಯನ್ನು ಕಡೆಗಣಿಸಿ ನಾಟಕದಲ್ಲಿ ಅಭಿನಯಿಸುವುದನ್ನು ಮುಂದುವರಿಸಿದ. ಅವನ ನಾಟಕ ಮಂಡಳಿಯ 50 ಜನರ ಜೀವನ ಅವನೊಬ್ಬನ ಅಭಿನಯವನ್ನು ಅವಲಂಬಿಸಿತ್ತು. 1673ನೆಯ ಫೆಬ್ರವರಿ 17ನೇ ತಾರೀಕು ನಾಟಕ ಪ್ರದರ್ಶನದಲ್ಲಿ ಭಾಗವಹಿಸಿ ವಿಪರೀತ ಆಯಾಸಗೊಂಡು ಮನೆಗೆ ಹಿಂತಿರುಗಿದ. ಒಂದು ಚೂರು ಬ್ರೆಡ್ಡು, ಹಾಲು, ಗಿಣ್ಣು ತೆಗೆದುಕೊಂಡ. ಆಹಾರದ ದಕ್ಕಲಿಲ್ಲ ವಾಂತಿಯಾಯಿತು. ಅದೇ ರಾತ್ರಿ ಕೊನೆಯುಸಿರೆಳೆದರು.
ಅವನ ಮರಣಶಯ್ಯೆಯ ಬಳಿ ಯಾವ ಪಾದ್ರಿಯೂ ಸುಳಿಯಲಿಲ್ಲ. ಅವನ ಶವಸಂಸ್ಕಾರ ಮಾಡಿಸಲು ಮುಂದೆ ಬರಲಿಲ್ಲ. ಕೊನೆಗೆ ಆತನ ಗೆಳೆಯರು ರಾಜನ ಅನುಮತಿ ಪಡೆದು ಅವನ ದೇಹವನ್ನು ಸ್ಮಶಾನದಲ್ಲಿ ಮಣ್ಣು ಮಾಡಿದರು. ಯಾವ ಧಾರ್ಮಿಕ ಉತ್ತರ ಕ್ರಿಯೆ ಇಲ್ಲದೆ ಫ್ರಾನ್ಸಿನ ಮಹಾ ಕ್ರಾಂತಿಯ ಕಾಲದಲ್ಲಿ ಅವನ ದೇಹದ್ದೆಂದು ಭಾವಿಸಲಾದ ಅವಶೇಷಗಳನ್ನು ಅಲ್ಲಿಂದ ಬೇರೊಂದು ಸ್ಮಶಾನಕ್ಕೆ ಸಾಗಿಸಲಾಯಿತು ಎನ್ನುತ್ತಾರೆ. ದಕ್ಷಿಣ ಪ್ರಾನ್ಸಿನಲ್ಲಿರುವ ಪೆಜಿನಾಸ್ ಎಂಬಲ್ಲಿ ಮೋಲಿಯೇರನ ಜ್ಞಾಪಕಾರ್ಥವಾಗಿ ಅವನ ಒಂದು ಪ್ರತಿಮೆ ಸ್ಥಾಪಿಸಿದ್ದಾರೆ. ಅವನು ತನ್ನ ನಾಟಕಗಳನ್ನು ಅಲ್ಲೇ ವಿಶೇಷವಾಗಿ ಪ್ರದರ್ಶಿಸುತ್ತಿದ್ದ. ಅಲ್ಲಿನ ಒಂದು ಕ್ಷೌರದ ಅಂಗಡಿಯಲ್ಲಿ ಒಂದು ಹಳೆಯ ಆರಾಮ ಕುರ್ಚಿಯನ್ನು ರಕ್ಷಿಸಿ ಇಟ್ಟಿದ್ದಾರೆ. ಮೋಲಿಯೇರ್ ಆಗ ಕುರ್ಚಿಯಲ್ಲಿ ಕುಳಿತು ಅಲ್ಲಿಗೆ ಬರುತ್ತಿದ್ದ ಗಿರಾಕಿಗಳ ಸಂಭಾಷಣೆಯನ್ನು ಆಸಕ್ತಿಯಿಂದ ಕೇಳುತ್ತಿದ್ದನಂತೆ.