ಧನ್ ಧನ್ ಧನ್ ಎಂದು ಶಬ್ಧ ಬಂದ ದಿಕ್ಕಿಗೆ ಥಟ್ ಎಂದು ತಿರುಗಿ ಹಿಂದಕ್ಕೆ ಬಾಗದಿದ್ದರೆ ಕ್ಷಣದಲ್ಲಿ ಹೆಣವಾಗುತ್ತಿದ್ದ ಧರ್ಮ.
ಕ್ಷಣಮಾತ್ರವೂ ಯೋಚಿಸದೇ “ಬದ್ಮಾಶ್” ಎಂದು ಬೈಯುತ್ತಾ ತಾನೂ ಎದುರಾಳಿಯ ಮೇಲೆ ಗುಂಡು ಹಾರಿಸಿ ನೆಲಕ್ಕುರುಳಿಸಿದ.
ಮೀಸೆಯ ಮೇಲೆ ಕೈ ಇಟ್ಟು ತಿರುವುತ್ತಾ ” ಈ ಭಾರತ ದೇಶದ ಧರ್ಮನ ಮೇಲೆ ಶೂಟ್ ಮಾಡೋದು ಅಂದ್ರೇನು….ಈ ಜನ್ಮದಲ್ಲಿ ಆಗದ ಕೆಲಸಾನೋ….ಹಾಗೇ ಧರ್ಮನ ಕಣ್ಣಿಗೆ ಬಿದ್ದ ಮೇಲೆ ಸಾಯಲ್ಲಾ ಅಂದ್ರೇನು….ಗುರಿ ಇಟ್ಟ ಮೇಲೆ ಧರ್ಮ ಯಾವತ್ತೂ ಉಳಿಸಲ್ಲ”… ಎನ್ನುತ್ತಾ ಹತ್ತಿರ ಬಂದು ಉಗ್ರನನ್ನು ಕಾಲಲ್ಲಿ ತಿರುಗಿಸಿ ಜಾಡಿಸಿ ಒದೆಯುತ್ತಾನೆ. ಇವನು ಒದ್ದ ವೇಗಕ್ಕೆ ಉರುಳಿಕೊಂಡು ಯಾವ ಮೂಲೆಸೇರಿದನೋ……?
ನಡುಗುವ ಹಿಮರಾಶಿಯಲ್ಲೂ ಅವನ ರಕ್ತ ಕುದಿಯುತ್ತಿತ್ತು. ಸ್ವಲ್ಪವೂ ವಿಚಲಿತವಾಗದ ದೇಹ ಮನಸ್ಸು. ಎರಡೂ ಖಡಕ್ ಆಗಿದ್ದವು.
“ಸದಾ ಒಂದಿಲ್ಲೊಂದು ಕ್ಯಾತೆ ತೆಗೆದು, ಕಾಲು ಕೆರೆದುಕೊಂಡು ಬರುವ ಶತೃದೇಶದವರಿಗೆ ನಮ್ಮ ದೇಶ ಸದರವಾಗಿದೆ ಅಂತ ಅನಿಸುತ್ತದೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ನಾವು ಸುಮ್ಮನೆ ಶಾಂತಿಯಿಂದ ಇದ್ದೇವೆ ಎಂದರೆ ಸಹಬಾಳ್ವೆಯ ಜೀವನ ನಿಮ್ಮದೂ ಆಗಲಿ ಅಂತ ಅವಕಾಶ ಕೊಡುತ್ತೇವೆ. ನಮ್ಮ ದೇಶವನ್ನು ನೋಡಿ ಕಲಿಯಲಿ ಎಂದು ಕಾಯುತ್ತೇವೆ. ಆದರೆ ನೀವು ಪದೇಪದೇ ಯುದ್ಧಕ್ಕೆ ಆಹ್ವಾನ ನೀಡಿ ನಮ್ಮ ರಕ್ತವನ್ನು ಕುದಿಯುವಂತೆ ಮಾಡುವಿರಿ” ಎಂದು ಗೊಣಗುತ್ತಾ ಬಂದೂಕನ್ನು ಹೆಗಲ ಮೇಲೇರಿಸಿಕೊಂಡು ಹೊರಟ.
“ಅಮ್ಮಾ ಅಮ್ಮಾ”… ಎಂದು ನರಳುವ ಸದ್ದಿಗೆ ಕಿವಿಯಾಲಿಸಿ ನಡೆದ ಧರ್ಮ. ಶಾರೂಖ್ ಕಾಲಿಗೆ ಗುಂಡು ತಾಕಿ ಕುಳಿತಲ್ಲಿಂದ ಅಲುಗಾಡದೆ ನರಳುತ್ತಿದ್ದ. ನಡೆಯಲಾರದೆ ನರಳುತ್ತಿದ್ದವನನ್ನು ಹೂವಿನಂತೆ ಹೆಗಲಮೇಲೇರಿಸಿಕೊಂಡು ದಢದಢನೆ ಟೆಂಟ್ ಕಡೆ ಹೆಜ್ಜೆಹಾಕಿದ.
ಆಪರೆಷನ್ ಆಲೌಟ್ ಗೆ ಸಾಕಷ್ಟು ಉಗ್ರರು ಬಲಿಯಾಗಿದ್ದರು. “ನಮ್ಮ ಭಾರತದ ಶಕ್ತಿ ಜನಸಂಖ್ಯೆ. ಇಂತಹ ದೊಡ್ಡ ರಾಷ್ಟ್ರದ ಮೇಲೆ ಅದೆಷ್ಟು ಗುಂಡಿಗೆ ಗಟ್ಟಿ ಮಾಡಿಕೊಂಡು ಯುದ್ಧಕ್ಕೆ ಬರುವರೋ ತಿಳಿಯದು.
ಇರುವ ಜಾಗದಲ್ಲಿ ನೆಮ್ಮದಿಯ ಜೀವನ ಮಾಡಲು ಬರದವರು. ಹಣದ ಆಮಿಷಕೆ ಬಲಿಯಾಗಿ ಸಾಮಾನ್ಯ ಮನುಷ್ಯನೂ ಉಗ್ರನಾಗಿ ಬದಲಾಗಿ ಜೀವ ಕಳೆದುಕೊಂಡು ಸಾಯುವರು. ಇಂತಹ ಬಡ ಜನತೆಯನ್ನು ಉಗ್ರರ ತರಬೇತಿ ಕೊಟ್ಟು, ಕೆಟ್ಟ ಛಲವನ್ನು ತುಂಬಿ ಮತ್ತೊಂದು ದೇಶದ ಮೇಲೆ ಛೂ ಬಿಡುವ ನಾಯಕರ ಹೇಡಿತನಕ್ಕೆ ಏನನಬೇಕು? . ಯಾಕಿಂಥ ಬದುಕು. ಸದಾ ದುರಾಸೆಗೆ, ಜಿದ್ದಿಗೆ ಬೆನ್ನು ಹತ್ತಿ ರಕ್ತಪಿಪಾಸುಗಳಾಗುವರು” ಎಂದು ಗೊಣಗುತ್ತಾ ಟೆಂಟ್ ಸೇರಿ ಶಾರೂಖ್ ನನ್ನು ಮಲಗಿಸಿ ವೈದ್ಯರನ್ನು ಕರೆತಂದ.
ಅವನ ಸ್ಥಿತಿ ನೋಡಿ ಕಣ್ಣಲ್ಲಿ ನೀರು ಬಂತಾದರೂ ಅಳುವಂತಿಲ್ಲ. ಯೋಧರು ಭಾವನೆಗಳ ಬಲೆಯಲ್ಲಿ ಸಿಲುಕುವಂತಿಲ್ಲ. ಮಲಗುವ ಸಮಯ ಬಂದಾಗಲೂ ಸದಾ ದೇಶದ ಒಳಿತನ್ನೇ ಯೋಚಿಸುವ.
ಮೆಲ್ಲನೆ ಕಣ್ಣಂಚಿನಲ್ಲಿ ಬಂದ ಹನಿಯನ್ನು ಹಾಗೆ ಬೆರಳಿನಿಂದ ಹಾರಿಸಿದ. ತನ್ನ ಮುಂದಿನ ಕಾರ್ಯಕ್ಕೆ ತನ್ನನ್ನು ತೊಡಗಿಸಿಕೊಂಡ.
ನಿರ್ಜನವಾದ ಪ್ರದೇಶದಲ್ಲಿ, ಏರಿಳಿತಗಳ, ಕೊರೆಯುವ ಹಿಮದ ರಾಶಿಯ ನಡುವೆ ಬದುಕು ಸಾಗುತ್ತಿತ್ತು. ದೇಶ ಸೇವೆಯ ಪವಿತ್ರತೆಯ ಕಾಯಕದಲ್ಲಿ ಅದಾವುದೂ ಲೆಕ್ಕವಿರಲಿಲ್ಲ ನಮ್ಮ ಯೋಧರಿಗೆ. ನಮ್ಮ ದೇಶದ ಜನ ಸುರಕ್ಷಿತವಾಗಿರಬೇಕೆಂದಷ್ಟೇ ಯೋಚಿಸುತ್ತಿದ್ದರು.
ಗಸ್ತು ಹೊಡೆಯುತ್ತಿದ್ದವನ ದೃಷ್ಟಿ ಅದೇಕೋ ಒಂದು ಕಡೆ ನಿಂತು ಬಿಟ್ಟಿತು. ರುಮಾಲು ಸುತ್ತಿ, ಕೈಯಲ್ಲೊಂದು ಕಟ್ಟಿಗೆ ಹಿಡಿದು, ಹರಿಯದ ಚರ್ಮದ ಜೋಡುಮೆಟ್ಟಿ, ಹಳೆಯ ಕೋಟು,ಬೆಚ್ಚನೆಯ ಕರಿ ಕಂಬಳಿ ಹೊದ್ದು “ಹೊಯ್ ಹೊಯ್ ” ಎಂದು ಕುರಿ,ದನ ಮೇಯಿಸುವ ಜನರ ಕಡೆಗಿವನ ದೃಷ್ಟಿ ಹಾಯ್ದು, ಹಾಗೇ ಸಣ್ಣ ಸಣ್ಣ ಕಾಫಿ ಟೀ ಕ್ಯಾಂಟೀನ್ ಕಡೆಯ ಜನರವರೆಗೂ ದೃಷ್ಟಿ ಹಾಯ್ದು…..ಒಮ್ಮೇಲೇ ಏನೋ ಹೊಳೆದಂತವನಾಗಿ ಯಥಾಸ್ಥಾನಕ್ಕೆ ಹೋದ.
ಎಂದಿನಂತೆ ಬೈನಾಕ್ಯುಲರ್ ನಲ್ಲಿ ದೂರಕ್ಕೆ ಕಣ್ಣು ಹಾಯಿಸಿದರೆ ಪದೇ ಪದೇ ಕುರಿ ಕಾಯುವ ದಾರಿಹೋಕರ ಮೇಲೆಯೇ ಬೀಳುತ್ತಿತ್ತು. ಅದೇಕೋ ಅಂದು ಧರ್ಮನ ಚಿತ್ತ ಅವರತ್ತ ನಾಟಿಬಿಟ್ಟಿತು.
ಒಮ್ಮೊಮ್ಮೆ ಎಷ್ಟು ಕಷ್ಟಪಡುವರು ಈ ಇಳಿ ವಯಸ್ಸಿನಲ್ಲಿ ಎಂದು ಪೇಚಾಡಿದರೆ, ಒಮ್ಮೊಮ್ಮೆ ಅವರ ಕಿಸೆಯಲ್ಲಿ ಇರುತ್ತಿದ್ದ ಸೇದುವ ಚುಟ್ಟಾ, ಬಂಗಿ ಅವನನ್ನು ವಿಚಲಿತನಾಗಿಸುತ್ತಿತ್ತು. ಏಕೆಂದರೆ ತುಂಬಾ ದುಬಾರಿಯಾದ ಚುಟ್ಟಾ, ಬಂಗಿ ಇವರ ಬಳಿ ಇರುತ್ತಿತ್ತು.
ಪೋಲೀಸರು, ಯೋಧರು ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಹಾಗಾಗಿ ಧರ್ಮನೂ ಕೂಡಾ ಅನುಮಾನಿಸಿಯೇ ನೋಡುತ್ತಿದ್ದ.
ಎಷ್ಟೋ ಬಾರಿ ಉಗ್ರರು ನುಸುಳುವ ಸುಳಿವುಗಳನ್ನು ಇವರೇ ಈ ಯೋಧರಿಗೆ ಕೊಟ್ಟಿದ್ದರೂ ಸಹಾ ಧರ್ಮ ಯಾರನ್ನೂ ನಂಬುತ್ತಿರಲಿಲ್ಲ. ಎಲ್ಲರನ್ನೂ ನಂಬುವಂತೆ ನಟಿಸಿ ಅವರ ಮೇಲೂ ಒಂದು ಕಣ್ಣು ಇಟ್ಟಿದ್ದ.
ಹೀಗೊಮ್ಮೆ ಕಮಾಂಡರ್ ಬಳಿ ಒಂದ ಧರ್ಮ ಒಂದು ಬೇಡಿಕೆಯನ್ನು ಪೂರೈಸಲು ಮನವಿ ಮಾಡಿದ. ಅದು ಯಾರಿಗೂ ತಿಳಿಯದಂತೆ ರಹಸ್ಯ ಕಾಪಾಡಲು ತಿಳಿಸಿದ. ತಕ್ಷಣವೇ ಸಂಬಂಧಿಸಿದ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಯಿತು.
ಅಂದು ದೇಶ ಸಂಭ್ರಮ ಪಡುವ ಹಬ್ಬ. ಸ್ವಾತಂತ್ರ ದಿನಾಚರಣೆಯ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುವ ಯೋಜನೆ ಮಾಡಲಾಗಿತ್ತು. ಸುತ್ತಲಿನ ಜನಕ್ಕೆ ಏನಾದರೂ ಉಪಯುಕ್ತ ವಸ್ತುವನ್ನು ಉಡುಗೊರೆಯಾಗಿ ಕೊಡುವ ಯೋಜನೆ ಈಗಾಗಲೇ ನಡೆದಿದ್ದರಿಂದ ಸುತ್ತ ಮುತ್ತಲಿನ ಜನರೆಲ್ಲ ಸ್ವಾತಂತ್ರ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.
ತ್ಯಾಗ ಬಲಿದಾನದ ಸಂಕೇತವಾದ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆ ಬಹಳವೇ ಚೆನ್ನಾಗಿ ನಡೆದಿತ್ತು. ಧಮನಿ ಧಮನಿಯಲ್ಲೂ ಜೈ ಭಾರತ್ ,ವಂದೇ ಮಾತರಂ ಮಂತ್ರಘೋಷಗಳೊಂದಿಗೆ ಅಂದಿನ ಸ್ವಾತಂತ್ರ್ಯ ದಿನಾಚರಣೆಯು ಬಹಳವೇ ವಿಜೃಂಭಣೆಯಿಂದ ನಡೆಯಿತು. ಗಸ್ತು ಹೊಡೆಯುವವರು ಇದ್ದಲ್ಲಿಯೇ ಧ್ವಜಾರೋಹಣ ಮಾಡಿ ಸೆಲ್ಯೂಟ್ ಹೊಡೆದರು.
ಎಲ್ಲರಿಗೂ ಸಿಹಿ ಹಂಚಲಾಯಿತು. ಇದೇ ವೇಳೆ ತುಂಬಾ ಕಡು ಬಡವರಿಗೆಂದು ತಂದಿದ್ದ ಬೆಚ್ಚನೆಯ ಶಾಲುಗಳನ್ನು ಈ ಬಾರಿ ವಿತರಿಸಲಾಯಿತು. ಅದರಲ್ಲೂ ದನ,ಕುರಿ ಮೇಯಿಸುವವರಿಗೆ ಬಹಳವೇ ಉಪಯುಕ್ತವೆಂದು ವಿಶೇಷವಾಗಿ ತಯಾರಿಸಲಾದ ಶಾಲುಗಳನ್ನು ಹಂಚಿ ಖುಷಿಪಟ್ಟರು.
” ಸದಾ ಈದಿನದ ನೆನಪಾಗಿ ನಿಮ್ಮೊಡನೆ ಇದು ಇರಲಿ ” ಎಂದು ಧರ್ಮ ಅವರ ಮೈಮೇಲೆ ಕೂಡಾ ಹೊದಿಸಿದ. ಇವನ ಕಣ್ಣುಗಳು ಮತ್ತು ತುಟಿಯಂಚಿನ ನಗುವು ಬೇರೆಯೇ ಹಂತಕ್ಕೆ ನಕ್ಕವು.
ಸಮಯ ಹೀಗೆ ಕಳೆಯುತ್ತಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಮತ್ತೆ ಧನ್ ಧನ್ ಧನ್ ಶಬ್ಧಗಡಿಯಂಚಲಿ ಕೇಳಿಬಂತು.
ಉಗ್ರರು ಮತ್ತೆ ಗಡಿಯನ್ನು ದಾಟುವ ಮುಂಚೆಯೇ ಧರ್ಮನ ತಂಡ ಎಲ್ಲಾ ಉಗ್ರರನ್ನು ಮಕಾಡೆ ಮಲಗಿಸಿತ್ತು.
ಕಿಶೋರ್ ಧರ್ಮನ ಕಡೆ ತಿರುಗಿ ಕಿರುನಕ್ಕ…” ನಿನಗೆ ಹೇಗೆ ತಿಳಿಯಿತು ಇವರು ನುಗ್ಗುವ ಸಂಚು”?
“ದನ ಕುರಿ ಕಾಯುವವರ ಮೈಮೇಲಿನ ಶಾಲಿನಿಂದ. ಆ ಶಾಲಿಗೆ ಅಳವಡಿಸಿರುವ ಮೈಕ್ರೋ ಚಿಪ್ ಗಳು ಯಾರು ಯಾರಿಗೆ ಸಂದೇಶ ನೀಡುವರು ಎಂಬ ಸಂದೇಶವನ್ನು ಪಾಸ್ ಮಾಡುವ ವಿಧಾನ ಆ ಬಟ್ಟೆಗೆ ಅಳವಡಿಸಲಾಗಿದೆ. ಅದು ಯಾರಿಗೂ ತಿಳಿಯುವುದಿಲ್ಲ. ನನ್ನ ಅನುಮಾನ ನಿಜವಾಯಿತು. ಉಗ್ರರಿಗೆ ದಾರಿ ಮಾಡಿದವರು ಈ ದನ ಕುರಿ ಮೇಯಿಸುವವರು. ಅವರು ಕೊಡುವ ಎಂಜಲ ಹಣಕ್ಕೆ, ಗಾಂಜಾ, ಚುಟ್ಟಾ ಆಸೆಗೆ ಒಳಗಾದವರು. ನಾವೀಗ ಅವರನ್ನು ಶಿಕ್ಷಿಸಿದರೆ ಮತ್ತಷ್ಟು ಉಗ್ರರ ಸಂಚು ತಿಳಿಯುವುದಿಲ್ಲ. ಹಾಗಾಗಿ ಅವರನ್ನೇನೂ ಮಾಡದೆ ಬಿಡುತಿರುವುದು”….. ಎಂದು ಮೀಸೆ ತಿರುವಿದ ಧರ್ಮನನ್ನು ನೋಡಿ ಕಿಶೋರ್ ಒಂದು ಸೆಲ್ಯೂಟ್ ಹೊಡೆದ.
” ನಿನ್ನ ಬುದ್ಧಿವಂತಿಕೆ ಹೀಗೆ ಮುಂದುವರೆಯಲಿ. ನಿನ್ನಂಥ ಮಗ ಎಲ್ಲರಿಗೂ ಬೇಕು. ಏಕೆಂದರೆ ಯುಕ್ತಿಯಿಂದ ಗೆಲ್ಲುವುದೂ ಒಂದು ಯುಧ್ಧವೇ. ದೇಶದ ರಕ್ಷಣೆಗೆ ನಮ್ಮ ಒಂದು ಸೇವೆ ಅವಿರತವಾಗಿ ನಡೆಯುತಿರಲಿ” ಎಂದು ಸೆಲ್ಯೂಟ್ ಹೊಡೆದ.
ಮುಳುಗುತ್ತಿದ್ದ ಸೂರ್ಯ ಧರ್ಮನಂತಹ ಯೋಧರನ್ನು ಬೆಳಕಾಗಿ ಬಿಟ್ಟು ನಿರ್ಗಮಿಸಿದ.