ಕನ್ನಡ ರಂಗಭೂಮಿಯನ್ನು ಬೆಳಗಿದ “ಗುಬ್ಬಿ ವೀರಣ್ಣ” – ಉದಂತ ಶಿವಕುಮಾರ್

ನಾಟಕರತ್ನ, ವಿನೋದ ರತ್ನಾಕರ, ವರ್ಷಟೈಲ್ ಕಾಮಿಡಿಯನ್, ಕರ್ನಾಟಕ ನಾಟಕ ಕಂಠೀರವ, ಕರ್ನಾಟಕಾಂಧ್ರ ನಾಟಕ ಸಾರ್ವಭೌಮ, ಮುಂತಾದವು ಗುಬ್ಬಿ ವೀರಣ್ಣನವರಿಗೆ ದೊರೆತಿದ್ದ ಬಿರುದುಗಳು; ರಾಜರು, ಜನತೆ ಅವರಿಗೆ ತೋರಿದ ಗೌರವದ ಸಂಕೇತಗಳು. ಆರು ವರ್ಷದ ಬಾಲಕನಾಗಿದ್ದಾಗಲೇ ನಾಟಕರಂಗವನ್ನು ಪ್ರವೇಶಿಸಿದ ವೀರಣ್ಣ ನಾಟಕದ ಕಂಪನಿಯಲ್ಲಿ ಸೇವಕರಾಗಿ, ಅಡುಗೆಯವರಾಗಿ, ಬಣ್ಣ ಹಾಕುವವರಾಗಿ, ನಟರಾಗಿ, ಪ್ರಚಾರಕರಾಗಿ, ಟಿಕೇಟು ಕೊಡುವವರಾಗಿ, ಖಜಾಂಚಿಯಾಗಿ, ವ್ಯವಸ್ಥಾಪಕರಾಗಿ, ಪಾಲುದಾರರಾಗಿ, ಕೊನೆಗೆ ಮಾಲೀಕರಾಗಿ ಮುಕ್ಕಾಲು ಶತಮಾನ ಕಾಲ ಕನ್ನಡ ನಾಟಕ ರಂಗದಲ್ಲಿ ಬೆಳೆದು ಬಾಳಿದವರು; ಕನ್ನಡ ರಂಗಭೂಮಿಯನ್ನು ಬೆಳಗಿದರು.

ವೀರಣ್ಣನವರು ಹುಟ್ಟಿದ್ದು 1891 ಜನವರಿ 24 ರಲ್ಲಿ. ತಂದೆ ತುಮಕೂರು ಜಿಲ್ಲೆಯ ಗುಬ್ಬಿಯ ಹಂಪಣ್ಣನವರು. ವೀರಣ್ಣನವರ ವಿದ್ಯಾಭ್ಯಾಸ ಆರಂಭವಾದದ್ದು ರಂಗಭೂಮಿಯಲ್ಲೇ, ಚಂದಣ್ಣ ಮತ್ತು ಅಬ್ದುಲ್ ಅಜೀಜ್ ಸಾಹೇಬರು ಸ್ಥಾಪಿಸಿದ್ದ ಗುಬ್ಬಿ ಕಂಪನಿಯನ್ನು ಅವರು 1896ರಲ್ಲಿ ಸೇರಿದರು. ಸಿರಿಯಾಳಕುಮಾರ, ರೋಹಿತಾಶ್ವ ಮುಂತಾದ ಬಾಲ ಪಾತ್ರಗಳನ್ನು ಅಭಿನಯಿಸಿದರು. ಎಲ್ಲರ ಮೆಚ್ಚುಗೆ ಗಳಿಸಿದ ಕಾರಣ ಇವರಿಗೆ ತಿಂಗಳಿಗೆ ಐದು ರೂಪಾಯಿ ಸಂಬಳವೂ ಸಿಕ್ಕಿತು. ಸ್ವಲ್ಪ ಕಾಲಾ ನಂತರ ಸ್ತ್ರೀ ಪಾತ್ರಗಳನ್ನು, ವಿದೂಷಕನ ಪಾತ್ರವನ್ನು ಅಭಿನಯಿಸಿದರು. ನಾಟಕ ಕಂಪನಿಯಲ್ಲಿದ್ದಾಗ ವೀರಣ್ಣನವರು ಹಾಡುಗಾರಿಕೆಯನ್ನು ಪಿಟೀಲು, ತಬಲ ಹಾರ್ಮೋನಿಯಂ ವಾದ್ಯಗಳನ್ನು ಅಭ್ಯಾಸ ಮಾಡಿದರು.

ಒಮ್ಮೆ “ಸದಾರಮೆ” ನಾಟಕ ಪ್ರದರ್ಶನ ಏರ್ಪಾಡಾಗಿತ್ತು, ನಾಟಕ ಆರಂಭಿಸುವ ವೇಳೆಯಾದರು ಆದಿಮೂರ್ತಿಯ ಮತ್ತು ಕಳ್ಳನ ಪಾತ್ರ ವಹಿಸಬೇಕಾಗಿದ್ದ ನಟ ಬರಲೇ ಇಲ್ಲ. ಕೊನೆಗೆ ವೀರಣ್ಣನವರೇ ಈ ಪಾತ್ರಗಳನ್ನು ವಹಿಸಬೇಕಾಗಿ ಬಂತು. ಅಂದು ಆ ಪಾತ್ರಗಳನ್ನು ಯಶಸ್ವಿಯಾಗಿ ಅಭಿನಯಿಸಿದರು. ಅಂದಿನಿಂದ ‘ನಕಲಿ ವೀರಣ್ಣ’ ಎಂದು ಹೆಸರು ಪಡೆದರು. ಚಂದಣ್ಣನವರು ಕಾಲಾಧೀನರಾದ ಮೇಲೆ 1917ರಲ್ಲಿ ಗುಬ್ಬಿ ನಾಟಕ ಮಂಡಲಿಯ ಒಡೆತನ ವೀರಣ್ಣ ಮತ್ತು ನಾಗರಾಜಪ್ಪ ಎಂಬವರ ಪಾಲಿಗೆ ಬಂತು. ಆದರೆ ಈ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲಿಲ್ಲ. ವೀರಣ್ಣನವರು ಈ ಕಂಪನಿಯಿಂದ ದೂರ ಸರಿದರು. ಇತರ ನಟರೂ ಇವರನ್ನು ಹಿಂಬಾಲಿಸಿದರು. ವೀರಣ್ಣನವರ ನೇತೃತ್ವದಲ್ಲಿ ಹೊಸ ಕಂಪನಿ ಹುಟ್ಟಿಕೊಂಡಿತು.

ಆಗಿನ ನಾಟಕಗಳಲ್ಲಿ ಹಾಡುಗಾರಿಕೆಗೆ ಮುಖ್ಯ ಸ್ಥಾನವಿತ್ತು. ಆದರೆ ವೀರಣ್ಣನವರು ತಾವು ಆಡಲು ಸಿದ್ದ ಮಾಡಿದ ನಾಟಕಗಳಲ್ಲಿ ಗದ್ಯಕ್ಕೆ ಪ್ರಾಧಾನ್ಯ ನೀಡಿದರು. ಹಾಡುಗಾರಿಕೆ ಎಷ್ಟು ಬೇಕೋ ಅಷ್ಟೇ ಇರುತ್ತಿತ್ತು. ಹಳೆಯ ನಾಟಕಗಳಿಗೆ ಬದಲಾಗಿ ಇವರು ಹೊಸ ನಾಟಕಗಳನ್ನು ಬರೆಸಿದರು. ಹಿಂದಿನಿಂದ ಖ್ಯಾತಿ ಪಡೆದಿದ್ದ ಸದಾರಮೆ ಮುಂತಾದ ನಾಟಕಗಳ ಜೊತೆಗೆ ಹೊಸವನ್ನೂ ರಂಗಭೂಮಿಯ ಮೇಲೆ ತಂದರು. ತಮ್ಮ ಅತ್ಯುತ್ತಮ ಹಾಸ್ಯ ಪಾತ್ರ ಅಭಿನಯದಿಂದ ಜನರ ವಿಶೇಷ ಮನ್ನಣೆಗೆ ಪಾತ್ರರಾದರು. ಪ್ರತಿಯೊಂದು ನಾಟಕವು ಜಯಭೇರಿ ಹೊಡೆಯುತ್ತಿದ್ದರೂ, ಅಷ್ಟರಿಂದಲೇ ವೀರಣ್ಣನವರು ತೃಪ್ತರಾಗಲಿಲ್ಲ. ಬಾಲ ನಟ ನಟಿಯರನ್ನೇ ಒಳಗೊಂಡಿದ್ದ ಒಂದು ಕಂಪನಿಯನ್ನು ಸ್ಥಾಪಿಸಿದರು. ಈ ಬಾಲ ಕಲಾ ವರ್ದಿನಿ ನಾಟಕ ಸಂಘ “ಕೃಷ್ಣಲೀಲಾ”, “ಕಂಸವಧೆ”, “ರುಕ್ಮಿಣಿ ಸ್ವಯಂವರ” ಮೊದಲಾದ ನಾಟಕಗಳನ್ನು ಅಭಿನಯಿಸಿ ಕೀರ್ತಿ ಪಡೆಯಿತು.

ಗುಬ್ಬಿ ವೀರಣ್ಣನವರು ತಮ್ಮ ಕಂಪನಿ ಊರಿಂದೂರಿಗೆ ಹೋಗಲು ಕೆಲವೊಮ್ಮೆ ವಿಶೇಷ ರೈಲುಗಾಡಿಯನ್ನು ವ್ಯವಸ್ಥೆ ಮಾಡುತ್ತಿದ್ದರು. ಕಲೆಯ ಪೋಷಣೆಯೇ ಗುರಿಯಾಗಿದ್ದ ಗುಬ್ಬಿ ವೀರಣ್ಣನವರು ತಮ್ಮ ಪ್ರತಿಸ್ಪರ್ಧಿ ನಾಟಕ ಸಂಸ್ಥೆಗಳಿಗೂ ನೆರವು ನೀಡಿದ್ದುಂಟು. ಸೋಲಿನ ಮೇಲೆ ಸೋಲು ಅನುಭವಿಸಿದ ಕಂಪನಿಯವರು ಕೊನೆಗೆ ಗುಬ್ಬಿ ಕಂಪನಿಯ “ಸದಾರಮೆ”, “ಗುಲೇಬಕಾವಲಿ” ಗಳಂಥ ನಾಟಕಗಳನ್ನು ಆಡುತ್ತಿದ್ದರು. ಅವುಗಳಲ್ಲಿ ಅಭಿನಯಿಸಲು ವೀರಣ್ಣನವರನ್ನೇ ಕೇಳಿಕೊಳ್ಳುತ್ತಿದ್ದರು. ಗುಬ್ಬಿ ವೀರಣ್ಣನವರು ಅಭಿನಯಿಸಲಿದ್ದಾರೆ ಎಂದರೆ ಪ್ರವೇಶಧನ ಹೆಚ್ಚಿಸಿದಾಗಲೂ ಟಿಕೆಟುಗಳು ಬಿರುಸಾಗಿ ಖರ್ಚಾಗುತ್ತಿದ್ದವು. ಹೀಗೆ ಆರ್ಥಿಕ ಕಷ್ಟಕ್ಕೊಳಗಾಗಿದ್ದ ನಾಟಕ ಕಂಪನಿಗಳ ಸ್ಥಿತಿ ಸುಧಾರಿಸುತ್ತಿತ್ತು. ವೀರಣ್ಣನವರು ಉತ್ತಮ ನಟರು ಮಾತ್ರವಲ್ಲ ಉದಾರಿಗಳೂ ಕೂಡ. ಅವರಿಂದ ಧನ ಸಹಾಯ ಪಡೆದ ಸಂಸ್ಥೆಗಳು ವ್ಯಕ್ತಿಗಳು ಅಸಂಖ್ಯ.

ಗುಬ್ಬಿ ಕಂಪನಿಯ ಸುವರ್ಣ ಮಹೋತ್ಸವದ ವರ್ಷ 1934. ಇದಕ್ಕಾಗಿ ಹೊಸ ನಾಟಕವನ್ನು ಪ್ರಯೋಗಿಸುವ ನಿರ್ಧಾರವನ್ನು ವೀರಣ್ಣ ಮಾಡಿದರು. ಬಿ ಪುಟ್ಟಸ್ವಾಮಿ ಯವರಿಂದ “ಕುರುಕ್ಷೇತ್ರ” ನಾಟಕವನ್ನು ಬರೆಸಿ, ಅಭ್ಯಾಸ ಮಾಡಿಸಿದರು. ಈ ನಾಟಕಕ್ಕಾಗಿಯೇ ಹೊಸ ರಂಗ ಸಜ್ಜಿಕೆ ವೇಷಭೂಷಣಗಳನ್ನು ಸಿದ್ಧಗೊಳಿಸಿದರು. ವಿಶೇಷ ರಂಗ ಸಜ್ಜಿಕೆಯ ಜೊತೆಗೆ ಮೈಸೂರು ಮಹಾರಾಜರು ನೀಡಿದ ಆನೆ, ಜಿಂಕೆ, ನವಿಲು, ಪಾರಿವಾಳಗಳೂ ರಂಗಭೂಮಿಯ ಮೇಲೆ ಬಂದುವು. ಈ ನಾಟಕ ಪ್ರಯೋಗ ಕನ್ನಡ ನಾಡಿನಲ್ಲೆಲ್ಲ ವಿಖ್ಯಾತವಾಯಿತು. ಅನಂತರ ವೀರಣ್ಣನವರು ಕುರುಕ್ಷೇತ್ರ ನಾಟಕವನ್ನು ತೆಲುಗು ಭಾಷೆಗೆ ಅನುವಾದ ಮಾಡಿಸಿ, ಅದನ್ನು ಅಭ್ಯಾಸ ಮಾಡಿಸಿ, ಆಂಧ್ರಪ್ರದೇಶದ ಅನೇಕ ಸ್ಥಳಗಳಲ್ಲಿ ಪ್ರದರ್ಶಿಸಿದರು. ಅಪೂರ್ವ ಯಶಸ್ಸು ಪಡೆದರು. ಈ ನಾಟಕವನ್ನು ನೋಡಿ ಸಂತೋಷಗೊಂಡ ತೆಲುಗು ಜನತೆ ವಿಜಯವಾಡದಲ್ಲಿ ವೀರಣ್ಣನವರನ್ನು ಗೌರವಿಸಿತು. “ಕರ್ನಾಟಕಾಂಧ್ರ ನಾಟಕ ಸಾರ್ವಭೌಮ” ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿತು.

ಗುಲೇಬಕಾವಲಿ, ಸಂಪೂರ್ಣ ಕೃಷ್ಣಲೀಲೆ, ಅಕ್ಕಮಹಾದೇವಿ, ಚಲ್ತಿ ದುನಿಯಾ, ಸುಭದ್ರಾ, ಮುಂತಾದವು ಇವರ ಇತರ ಜನಪ್ರಿಯ ನಾಟಕಗಳು. ಕುರುಕ್ಷೇತ್ರ, ದಶಾವತಾರ ನಾಟಕಗಳನ್ನು ಸಾವಿರಕ್ಕಿಂತಲೂ ಹೆಚ್ಚು ಬಾರಿ ಅಭಿನಯಿಸಿದರು. ಕನ್ನಡ ನಾಟಕ ರಂಗದ ಆಧಾರ ಸ್ತಂಭವಾದ ವೀರಣ್ಣನವರು ನಮ್ಮ ರಾಜ್ಯದ ಚಲನಚಿತ್ರ ಉದ್ಯಮದಲ್ಲೂ ಮೊದಲಿಗರು. “ಹರಿಮಾಯ” ಮತ್ತು “ಹಿಸ್ ಲವ್ ಅಫೇರ್” ಎಂಬ ಮೂಕಚಿತ್ರಗಳನ್ನು ಇವರು ನಿರ್ಮಿಸಿದರು. ಸ್ವತಃ ಪಾತ್ರ ವಹಿಸಿದರು. ಸಂಸ್ಥೆಗೆ ಹೆಸರು ತಂದ ನಾಟಕ “ಸದಾರಮೆ” ಚಲನಚಿತ್ರವಾಯಿತು. ಸುಭದ್ರಾ, ಜೀವನನಾಟಕ, ಹೇಮರೆಡ್ಡಿ ಮಲ್ಲಮ್ಮ, ಗುಣಸಾಗರಿ, ಬೇಡರ ಕಣ್ಣಪ್ಪ ಇವು ವೀರಣ್ಣನವರ ನೇತೃತ್ವದಲ್ಲಿ ರೂಪುಗೊಂಡ ಕನ್ನಡ ಚಲನಚಿತ್ರಗಳು. ಚಲನಚಿತ್ರ ರಂಗದ ರಾಜಕುಮಾರ್, ನರಸಿಂಹರಾಜು, ಬಾಲಕೃಷ್ಣ ಮುಂತಾದವರು ವೀರಣ್ಣನವರ ಗರಡಿಯಲ್ಲಿ ಪಳಗಿದವರು. ಕೆ ಹಿರಣ್ಣಯ್ಯ, ನಾಗೇಶ ರಾವ್, ಸುಬ್ಬಯ್ಯ ನಾಯ್ಡು, ಬಾಲಕೃಷ್ಣ ಜಿ.ವಿ. ಅಯ್ಯರ್, ಸುಂದರಮ್ಮ, ಮಳವಳ್ಳಿ ಸುಂದರಮ್ಮ, ಜಯಮ್ಮ ಮುಂತಾದ ಪ್ರಖ್ಯಾತ ನಟ ನಟಿಯರು ಒಂದಲ್ಲ ಒಂದು ಕಾಲದಲ್ಲಿ ವೀರಣ್ಣನವರ ಸಂಸ್ಥೆಯಲ್ಲಿ ಅಭಿನಯಿಸುತ್ತಿದ್ದರು.

ವೈವಿಧ್ಯಮಯ ಬದುಕನ್ನು ಬಾಳಿದ ಗುಬ್ಬಿ ವೀರಣ್ಣನವರ ಆತ್ಮವೃತ್ತ “ಕಲೆಯೇ ಕಾಯಕ” ಒಂದು ಉತ್ತಮ ಕೃತಿ. ನಾಟಕ ಕಲಾರಾಧನೆಗೆ ಜೀವವನ್ನು ಸವೆಸಿದ ವೀರಣ್ಣನವರಿಗೆ ಮೈಸೂರು ವಿಶ್ವವಿದ್ಯಾನಿಲಯ 1970ರಲ್ಲಿ ಗೌರವ ಡಾಕ್ಟರೇಟ್ ಕೊಟ್ಟು ಸತ್ಕರಿಸಿತು. ಕೇಂದ್ರ ಸರ್ಕಾರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕೊಟ್ಟು ಗೌರವಿಸಿತು. ಭಾರತ ಸರ್ಕಾರದ “ಪದ್ಮಶ್ರೀ” ಪ್ರಶಸ್ತಿಯೂ ಬಂತು. ವೀರಣ್ಣನವರು ಮೈಸೂರು ರಾಜ್ಯದ ವಿಧಾನಪರಿಷತ್ತು, ಸಂಗೀತ ನಾಟಕ ಅಕಾಡೆಮಿಗಳ ಸದಸ್ಯರೂ ಆಗಿದ್ದರು. ವಯಸ್ಸು 80ರ ಗಡಿಯನ್ನು ದಾಟಿದರೂ ದೃಢಕಾಯರಾಗಿದ್ದ ವೀರಣ್ಣನವರು 1972 ಅಕ್ಟೋಬರ್ ತಿಂಗಳಲ್ಲಿ ಹೃದಯ ಬೇನೆಯಿಂದ ಆಸ್ಪತ್ರೆ ಸೇರಿದರು. ಅಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ. ಡಿವಿ ಗುಂಡಪ್ಪನವರು ತುಸು ಗುಣಮುಖರಾಗಿದ್ದ ವೀರಣ್ಣನವರನ್ನು ನೋಡಲು ಹೋದಾಗ “ನಮಸ್ಕಾರ ಗುಂಡಪ್ಪನವರೇ ನನ್ನ ಟಿಕೆಟ್ ಬಂತು ಕೆಲಸ ಮುಗಿಯಿತು ನೀವು ಇನ್ನೂ ನಾಲ್ಕಾರು ದಿನ ಚೆನ್ನಾಗಿದ್ದು ಒಳ್ಳೆ ಕೆಲಸಗಳನ್ನು ಮುಂದುವರಿಸುತ್ತಾ ಇರಿ” ಎಂದರು. ಹಾಗೆ ಹೇಳಿದ ದಿನವೇ 18ನೇ ತಾರೀಖು ಸಂಜೆ 6 ಗಂಟೆಗೆ ಗುಬ್ಬಿ ವೀರಣ್ಣನವರ ಜೀವನ ನಾಟಕದ ಕೊನೆಯ ಪರದೆ ಇಳಿಯಿತು.

ಚಂದಾದಾರರಾಗಿ
ವಿಭಾಗ
3 ಪ್ರತಿಕ್ರಿಯೆಗಳು
Inline Feedbacks
View all comments
linktf88
6 January 2026 04:33

Alright folks, linktf88 caught my eye. The site’s easy to navigate. Planning to spend more time exploring. Have a look linktf88.

phwin8
31 December 2025 22:00

Hey there! Been playing around on phwin8 for a bit now. Seems legit and the games are fun. Could always use more bonuses, but can’t complain too much! Wanna give it a shot? Here’s the link: phwin8.

y4444game.net
21 December 2025 05:32

Y4444game.net has some fun little games, great for wasting time during a quick break. Nothing too serious, just simple, addictive stuff. Don’t expect anything groundbreaking, but it’s good for a laugh. y4444game

0
    0
    Your Cart
    Your cart is emptyReturn to Shop