ನನ್ನ ಮನೆಯ ಸೂರಿನಡಿ
ಬೆಚ್ಚನೆಯ ಸಂದಿನಲಿ
ಹುಲ್ಲಕಡ್ಡಿಯ ತಂದು
ಗೂಡು ಕಟ್ಟುವ ಗುಬ್ಬಚ್ಚಿ .
ಅಂಗಳದ ಕಾಳುಗಳ
ಹೆಕ್ಕಿ ತಿನ್ನುತ ಬಳಿಗೆ
ಬಂದೊಡನೇ ರೆಕ್ಕೆ ಬಿಚ್ಚಿ
ಗಗನಕ್ಕೆ ಹಾರುವ ಗುಬ್ಬಚ್ಚಿ.
ಪುಟ್ಟ ದೇಹದ ಮೇಲಿನ
ಕಂದು ಬಣ್ಣದ ಚಿತ್ತಾರದ
ಚಿಲಿಪಿಲಿ ಕಲರವದಿ ನಸುಕಲಿ
ಕಣ್ಣ ತೆರೆಸುವ ಗುಬ್ಬಚ್ಚಿ.
ಬೇಟೆಯಾಡಲು ಕಾಯ್ದು
ಕುಳಿತಿದೆ ಗಿಡುಗ ಬಾನಿನಲಿ
ಅಟ್ಟದ ಮೇಲಿನ ಬೆಕ್ಕಿನ
ಕೈಗೂ ಸಿಗಬೇಡ ಗುಬ್ಬಚ್ಚಿ.
ಸ್ವಚ್ಛತೆ ಇಲ್ಲದ ನಗರದ
ಭವ್ಯ ಕಟ್ಟಡವು ಬೇಕಿಲ್ಲ
ಪುಟ್ಟ ಗುಡಿಸಲು ಸಾಕು
ಗುಂಪಿನಲಿ ನಲಿವೆ ಗುಬ್ಬಚ್ಚಿ.
ಬಾಲ್ಯದ ನೆನಪುಗಳ
ಸಾಲಿನಲಿ ನೀನಿರುವೆ
ಕಾಣಲೂ ಸಿಗದಂತೆ ಇಂದು
ಹೋದೆ ಎಲ್ಲಿಗೆ ಮತ್ತೆ ಗುಬ್ಬಚ್ಚಿ?