ಗಂಡು ಹೆಣ್ಣುಗಳೇ
ನಿಮ್ಮ ತರಹ ನಾನೂ ಬರೆಯುತ್ತೇನೆ
ಶತಶತಮಾನಗಳಿಂದ
ನನ್ನೊಳಡಗಿದ ಕವಿತೆಗಳು
ಹಾಳೆಯಲ್ಲಿ ಹರಿಯಲೇ ಇಲ್ಲ
ನಿಮ್ಮಗಳ ಸ್ವರಮೇಳದಲ್ಲಿ
ನನ್ನ ಹಾಡಿಗೆ ಅವಕಾಶವೆ ದೊರೆಯಲಿಲ್ಲ
ನಿಮ್ಮ ಭಾಷೆಯ ಹಾವಳಿಯಲ್ಲಿ
ನನ್ನ ಬಾಷೆ ಮೊಳೆಯಲಿಲ್ಲ
ನಿಮ್ಮತನಗಳನ್ನೇ ನನ್ನತನವಾಗಿಸಿಕೊಂಡು
ನಟಿಸಿ ಸತ್ತು ಬದುಕಿಹೊದನಾನೂ
ಇಂದಾದರೂ ನನ್ನತನದ ಕುರಿತು ಬರೆಯುತ್ತೇನೆ
ನನ್ನ ಅಸ್ಥಿತ್ವ ಒಪ್ಪದ
ನಿಮ್ಮ ಅಸ್ತವ್ಯಸ್ತತೆ ಕುರಿತು ಬಂಡಾಯ ಹಾಡುತ್ತಾ
ನನ್ನ ಎದೆಯೊಳಗಿನ ಸಾವಿರ ಸಾವಿರ ಆಸೆ ದುಃಖ ಕನಸು
ನೋವು ಖುಷಿಗಳ ಕೇಳಿಸುತ್ತೇನೆ ನಿಮ್ಮ ಕಿವಿ ಹಿಂಡಿ
ಎದೆಗವುಚಿಕೊಂಡು
ಇಲ್ಲಿಯವರೆಗಿನ
ನಿಮ್ಮ ಲಿಂಗ ಅಂಗಗಳ ಕುರಿತ ವ್ಯಾಖ್ಯಾನ ಅಖ್ಯಾನಗಳ
ನಿಕಷಕೊಡ್ಡಿ
ಹೊಸ ಲೋಕ ಮೀಮಾಂಸೆ ಕಟ್ಟುತ್ತೇನೆ
ನಿಮ್ಮ ಪ್ರೇಮದ ಕೂಡ ನನ್ನ ಪ್ರೇಮದ ಕುರಿತ
ನಿಮ್ಮ ಕಾಮದ ಕೂಡ ನನ್ನ
ಕಾಮದ ಕುರಿತು
ಬರೆಯುತ್ತೇನೆ
ನಿಮ್ಮ ಭಾಷೆಯಲ್ಲಿ
ನನ್ನ ಭಾಷೆ ರಚಿಸಲಿಕ್ಕೆ
ಭೂತದಲ್ಲಿ ಕಾಣೆಯಾದ ನಾನು
ಭವಿಷ್ಯ ಕಟ್ಟಲಿಕ್ಕೆ