ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಇರುವ ‘ ಹೈ ಪ್ರೊಫೈಲ್ ‘ ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣನವರ ಆಶ್ರಮದಲ್ಲಿ ಒಂದು ಸಂಜೆ ದೊಡ್ಡ ಜನಜಂಗುಳಿ. ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಆಶ್ರಮದಲ್ಲಿ ಸ್ವಾಮೀಜಿಗಳ ಆಶೀರ್ವಚನ ಪಡೆಯಲು ಭಕ್ತರಿಂದ ಅಂತರಂಗಿಕ ಸಭೆ ಆಯೋಜಿಸಲಾಗಿತ್ತು. ಮುಂದೆ ಮುಂದೆ ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣ ಮತ್ತು ಅವರ ಅಂತರಂಗಿಕ ಪಟಾಲಂ. ಅವರನ್ನು ಶಿಷ್ಯರು ಸಾಲು ಸಾಲಾಗಿ ಹಿಂಬಾಲಿಸಿದರು.
ತಾವು ಆಗಾಗ್ಗೆ ಪ್ರವಚನ ಮಾಡುವ ಎತ್ತರದ ವೇದಿಕೆಯ ಕುರ್ಚಿಯಲ್ಲಿ ಆಸೀನರಾದ ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣನವರು ಒಮ್ಮೆ ಸೇರಿದ ಶಿಷ್ಯರತ್ತ ಕೈ ಬೀಸಿ ಮಾತು ಆರಂಭಿಸಿದರು.
“ಸಾಧಾರಣವಾಗಿ ವರ್ಷಕ್ಕೆ ಮೂರು ಕಾಲಗಳು ( ಋತುಗಳು). ಅವು ಯಾವುಗಳು ಎಂದರೆ ಸೆಕೆಗಾಲ (ಬೇಸಿಗೆ) – ತೋಯಿಸಿಕೊಳ್ಳುವ ಕಾಲ (ಮಳೆಗಾಲ) – ಮತ್ತು ದೇಹವು ನಡುಗುವ ಕಾಲ ( ಚಳಿಗಾಲ) ಆದರೆ ಪ್ರತಿ ಐದು ವರ್ಷಕ್ಕೆ ಒಮ್ಮೆ ( ಅಥವಾ ಅದಕ್ಕೂ ಮುನ್ನ…) ನಾಲ್ಕನೇ ಕಾಲ ಬೇಡವೆಂದರೂ ಬರುತ್ತದೆ. ಅದೇ – ಚುನಾವಣೆ ಕಾಲ ” ಎಂದು ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣ ಒಮ್ಮೆ ಲಘುವಾಗಿ ಕೆಮ್ಮಿದರು.
” ಹೌದು ಸ್ವಾಮಿ…ಬೇಸಿಗೆ, ಮಳೆ ಹಾಗೂ ಶೀತ ಕಾಲ ಒಂದರ ಬಳಿಕ ಒಂದು ಅಲ್ಲ ಒಟ್ಟಾಗಿ ದಾಳಿ ಮಾಡಿದರೆ ಎಂತಹ ಹಿಂಸೆ ಆಗುತ್ತದೋ ಅದಕ್ಕಿಂತ ದುಪ್ಪಟ್ಟು ಈ ಚುನಾವಣೆ ಕಾಲದಿಂದ ಉಂಟಾಗುತ್ತದೆ ಈ ಮಾನವ ಜನಾಂಗಕ್ಕೆ ( ಮತದಾರರಿಗೆ!.. ). ತಮಗೆ ಈ ವಿಷಯ ಗೊತ್ತು ತಾನೇ!… ಇದಕ್ಕೆ ಪರಿಹಾರ ದಯಾಮಯಿಗಳಾದ ತಾವೇ ಹೇಳಬೇಕು …” ಎಂದು ಸ್ವಾಮೀಜಿಯ ಎದುರು ಆಸೀನನಾದ ಗಾಂಧಿವಾದಿ ಭಕ್ತನೊಬ್ಬ ವಿನಂತಿ ಮಾಡಿದ.
” ಅದಕ್ಕೇ ಅಲ್ಲಾ ನಾವಿರೋದು…ಜನಗಳ ಉದ್ಧಾರ ನೀವು ಮಾಡಿದರೆ ನಿಮ್ಮ ಉದ್ಧಾರ ಮಾಡುವುದು ನಮ್ಮಂತಹ ಸ್ವಾಮಿಗಳ ಆದ್ಯ ಕರ್ತವ್ಯ ತಾನೇ…” ಎಂದರು ಶಾಂತ ಸ್ವರದಲ್ಲಿ ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣ.
ಅವರ ಎದುರು ಕೂತು ಭಕ್ತರೇನು ಸಾಮಾನ್ಯರೇ…ಅತಿರಥ ಮಹಾರಥರು… ಚುನಾವಣೆಯ ಯುದ್ಧಭೂಮಿಯಲ್ಲಿ ವಿರೋಚಿತ ಹೋರಾಟ ಮಾಡಿದವರು…ಕೆಲವರು ಅಧಿಕಾರದಲ್ಲಿದ್ದರೆ ಮತ್ತೆ ಹಲವಾರು ಈಗ ಮಾಜಿಗಳು. ಒಟ್ಟಿನಲ್ಲಿ ಅಲ್ಲಿ ನೆರೆದ ಭಕ್ತ ಗಣಗಳ ಎಲ್ಲರ ಉದ್ದೇಶ ಒಂದೇ…ಬರುವ ಚುನಾವಣೆಯಲ್ಲಿ ಹೇಗಾದರೂ ಮಾಡಿ ಸೀಟು ( ಗ್ಯಾರಂಟಿ ) ಪಕ್ಕಾ ಮಾಡಿಕೊಳ್ಳಬೇಕು ಎನ್ನುವ ಏಕಮೇವ ಗುರಿ ಎಲ್ಲರದು. ಇವರಿಗೆಲ್ಲ ದೈವ ಸಂಭೂತಿಗಳು ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣನವರು. ಅವರು ಮನಸು ಮಾಡಿದರೆ ಮರೆಯಾದ ( ಕಳೆದುಕೊಂಡ…) ಪದವಿ ಮತ್ತೆ ದಕ್ಕುವಂತೆ…ಸಿಕ್ಕ ಪದವಿ ಕಣ್ಣಿಂದ ಮರೆಯಾಗದೆ ( ಕಳೆದುಕೊಳ್ಳದೆ..) ಸ್ಥಿರವಾಗಿ ಫೆವಿಕಾಲ್ ನಂತೆ ಗಟ್ಟಿಯಾಗಿ ತಮ್ಮೊಂದಿಗೆ ಅಂಟಿಕೊಳ್ಳುವಂತೆ ಮಾಡಬಲ್ಲರು. ಹೀಗೆಂದು ನಂಬುವ ಭಕ್ತರೇ ಜಾಸ್ತಿ ಅಲ್ಲಿ ನೆರೆದವರಲ್ಲಿ.
ಎಲ್ಲ ಶಿಷ್ಠಗಣರತ್ತ ಒಮ್ಮೆ ಸಿಂಹಾವಲೋಕನ ಮಾಡಿ ತಮ್ಮ ಸುಕೋಮಲ ಬಿಳಿ ಗಡ್ಡವನ್ನು ಮೃದುವಾಗಿ ಮೇಲೆ ಕೆಳಗೆ ಆಡಿಸುತ್ತ ತಮ್ಮ ಪ್ರಸಂಗವನ್ನು ಮುಂದುವರೆಸಿದರು ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣ.
” ನನ್ನ ಪ್ರೀತಿಯ ಭಕ್ತರೇ…ಪ್ರಜೆಗಳ ಸೇವಾ ಭಾಗ್ಯ ಎಲ್ಲರಿಗೂ ಸಿಗುವದಿಲ್ಲ…ಯಾರಿಗಾದರೂ ಒಂದು ಅಧಿಕಾರದ ಪದವಿ ದಕ್ಕಿದೆ ಅಂದರೆ ಅವರು ಪೂರ್ವ ಜನ್ಮದಲ್ಲಿ ಮಾಡಿದ ಪ್ರತಿಫಲ ಅದು ಎನ್ನುವುದನ್ನು ಮರೆಯಬೇಡಿ…” ಎಂದು ಹೇಳಿ ಅರೆಕ್ಷಣ ತಮ್ಮ ಮಾತುಗಳನ್ನು ನಿಲ್ಲಿಸಿದರು ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣ.
ಅದೇನು ಸ್ವಾಮಿ ಹಾಗೆ ಹೇಳುತ್ತೀರಿ…ಏಷ್ಟೋ ತರಹದ ಆಶ್ವಾಸನೆಗಳು… ಘೋಷಣೆ ಮಾಡಿದರೂ ಓಟು ಗಳಿಸುವ ನಂಬಿಕೆ ಈ ಕಲಿಗಾಲದಲ್ಲಿ ಇಲ್ಲ ಎಂದ ಶಿಷ್ಯನೊಬ್ಬ. ನೂರೆಂಟು ಯೋಜನೆಗಳು, ಭರವಸೆಗಳು ಕೊಟ್ಟು ಸರ್ಕಾರದ ಖಜಾನೆ ಖಾಲಿ ಮಾಡಿದರೂ ಗೆಲ್ಲುತ್ತೇವೆ ಎನ್ನುವ ನಂಬಿಕೆ ಈಗ ಇಲ್ಲ ಸ್ವಾಮೀಜಿ ಎಂದು ಮತ್ತೊಬ್ಬ ಶಿಷ್ಯ ಅವಲತ್ತುಕೊಂಡ.
ಹೇಳಿದ್ದೇ ಹೇಳಿದ್ದನ್ನು ಕೇಳಿಸಿಕೊಳ್ಳುವ ಕಾಲ ಹೋಯಿತು ಸ್ವಾಮೀಜಿ… ಮತದಾರರು ಆಶ್ವಾಸನೆಗಳನ್ನು ಭರವಸೆಗಳನ್ನು ನಂಬುವ ಸ್ಥಿತಿಯಲ್ಲಿಲ್ಲ. ಹಣ ( ನೆಟ್ ಕ್ಯಾಶ್/ಫೋನ್ ಪೇ/ಗೂಗಲ್ ಪೇ ಮಾರ್ಗದಿಂದ ಪಾವತಿಸಿದರೆ…) ಕೊಟ್ಟು ಬಲವಂತವಾಗಿ ಟ್ರಾಕ್ಟರ್ – ವ್ಯಾನ್ – ಲಾರಿ ಹತ್ತಿಸದಿದ್ದರೆ ಚುನಾವಣೆ ಪ್ರಚಾರದ ಸಭೆಗಳಿಗೆ ಯಾರೊಬ್ಬರೂ ಸುಳಿಯುವುದಿಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ ಹಿಂದಿನ ಸಾಲಿನಲ್ಲಿ ಕುಳಿತ ಭಕ್ತನೊಬ್ಬ. ಹೇಳಬೇಕೆಂದರೆ ಈಗ ಓಟಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಯಾರೋ ಶಿಷ್ಯ ಹೇಳಿದರೆ ಅದಕ್ಕೆ ಉತ್ತರವಾಗಿ ಇನ್ನೊಬ್ಬ ಶಿಷ್ಯ ಈಗ ಒಂದೊಂದು ಓಟಿನ ‘ ಬೆಲೆ ‘ ಯದ್ವಾ ತದ್ವಾ ಹೆಚ್ಚಾಗಿ ಸಾವಿರಗಟ್ಟಲೆ ಸುರಿಯಬೇಕಾಗಿದೆ ಎಂದು ಅಸಹನೆಯಿಂದ ಅರಚಿದ ಭಕ್ತನೊಬ್ಬ. ಎಲ್ಲ ಪಕ್ಷಗಳಿಂದ ‘ ಹೆಚ್ಚೆಚ್ಚು ಡಿಮ್ಯಾಂಡ್ ‘ ಮಾಡಿ ತಮ್ಮ ಅಮೂಲ್ಯ ಮತಕ್ಕಾಗಿ ಹಣವನ್ನು ಜಬರದಸ್ತಿನಿಂದ ವಸೂಲಿ ಮಾಡುತ್ತಿದ್ದಾರೆ ನಮ್ಮ ( ಗೌರವಾನ್ವಿತ…) ಮತದಾರರು ಎಂದು ಸ್ವಾಮೀಜಿಯ ಬಳಿ ತನ್ನ ಸಂಕಟವನ್ನು ಹೊರ ಹಾಕಿದ ಮತ್ತೊಬ್ಬ ಭಕ್ತ. ಯಾವ ವ್ಯಾಪಾರಕ್ಕಾದರೂ ಬಂಡವಾಳ ಮೊದಲು ಹಾಕಬೇಕು…ನಂತರ ಅದನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು…ಇದು ಎಲ್ಲರಿಗೂ ಕೊನೆಗೆ ( ಈಗಿನ… ) ಮಕ್ಕಳಿಗೆ ಸಹ ಗೊತ್ತಿರುವ ನಗ್ನ ಸತ್ಯ ಎಂದು ಮತ್ತೊಬ್ಬ ಶಿಷ್ಟ ತನ್ನ ಮನದಾಳದ ನೋವನ್ನು ತೋಡಿಕೊಂಡ.
ಇದ್ದಕ್ಕಿದ್ದಂತೆ ಸಭೆಯಲ್ಲಿ ಭಾರಿ ಗೌಜು – ಗದ್ದಲ ಶುರುವಾಯಿತು. ಯಾರು ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಸಹ ಸರಿಯಾಗಿ ಕೇಳುತ್ತಿಲ್ಲ. ಇದನ್ನು ನೋಡಿದ ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣನವರು ” ಹುಷ್… ಹುಷ್…” ಎಂದು ಕೀರಲು ಧ್ವನಿಯಲ್ಲಿ ನುಡಿದರು.
ಅಷ್ಟರಲ್ಲಿ ನೆರೆದ ಶಿಷ್ಯರೊಬ್ಬರು ” ನಮ್ಮ ಭಗವಾನ್ ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣ ಏನೋ ಹೇಳಬೇಕೆಂದಿದ್ದಾರೆ… ದಯವಿಟ್ಟು ಶಾಂತತೆ ಕಾಪಾಡಿ…” ಎಂದು ಗಟ್ಟಿ ಧ್ವನಿಯಲ್ಲಿ ಕೂಗಿದರು.
ಈಗ ಅಲ್ಲಿ ಪಿನ್ ಡ್ರಾಪ್ ಸೈಲೆನ್ಸ್…
ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣನವರು ಒಮ್ಮೆ ಮೃದುವಾಗಿ ಕೆಮ್ಮಿ ಮಾತು ಮುಂದುವರೆಸಿದರು. ” ನನ್ನ ಪ್ರೀತಿಪಾತ್ರ ಶಿಷ್ಯರೇ ಹಾಗೂ ಭವಿಷ್ಯದ ನಾಯಕರೇ… ಎಲ್ಲರೂ ನಿಶ್ಶಬ್ದವಾಗಿ ಕೇಳಿ… ಆಶ್ವಾಸನೆಗಳು, ಭರವಸೆಗಳು, ಹಣ – ಹೆಂಡ ಹಂಚಿ ಮತ ಪಡೆಯುವುದರಿಂದ ಏನೂ ಪ್ರಯೋಜನ ಇಲ್ಲ. ಈಗ ನಿಮಗೆ ನಿಜವಾದ ಸೃಷ್ಟಿಯ ರಹಸ್ಯ ಹೇಳುತ್ತೇನೆ ಕೇಳಿ…ನಮ್ಮದು ಕರ್ಮ ಭೂಮಿ. ಇಲ್ಲಿ ಪೂರ್ವ ಜನ್ಮದ ಪುಣ್ಯ ಫಲ ಮಾತ್ರ ಕೆಲಸ ಮಾಡುತ್ತದೆ. ಕರೆಕ್ಟ್ ಆಗಿ ಹೇಳಬೇಕೆಂದರೆ ಅಸಲು ಚುನಾವಣೆ ಪ್ರಕ್ರಿಯಿಯೇ ಒಂದು ದೊಡ್ಡ ಪ್ರಹಸನ. ಇದಕ್ಕಾಗಿ ಚುನಾವಣೆ ಆಯೋಗ..ಸಾವಿರಾರು ಉದ್ಯೋಗಿಗಳು…ಪೋಲಿಂಗ್ ಬೂತುಗಳು ಏಜೆಂಟರು…ಈ ವಿ ಎಂ ಗಳು…ಕೌಂಟಿಂಗ್… ರಿಗ್ಗಿಂಗ್… ರೀ ಕೌಂಟಿಂಗ್ … ಪ್ರೀ ಪೋಲ್ ಸರ್ವೆಗಳು… ಎಕ್ಸಿಟ್ ಪೋಲ್ ಸ್ಪೆಷಲ್ ರಿಪೋರ್ಟ್ಗಳು… ಟಿ ವಿಯಲ್ಲಿ ಹಗಲಿರುಳೂ ನಡೆಯುವ ಚರ್ಚೆಗಳು…ಅವುಗಳಲ್ಲಿ ಭಾಗವಹಿಸಿ ತಮ್ಮ ಪಕ್ಷದ ಬಗ್ಗೆ ತೌಡು ಕುಟ್ಟುವ ನಾಯಕರು…ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇದು ಮುಗಿಯದ ಕಥೆ. ಇದಕ್ಕೆಲ್ಲ ಸುಮ್ಮನೆ ಸರಕಾರದ ಹಣ ದಂಡ! ನೀವು ನನ್ನ ಸಲಹೆ ಕೇಳುವಿರಿ ಎಂದಾದರೆ…” ಎಂದು ಅರೆಕ್ಷಣ ಮಾತು ನಿಲ್ಲಿಸಿ ಶಿಷ್ಯಗಣರತ್ತ ಒಮ್ಮೆ ದೃಷ್ಟಿ ಹಾಯಿಸಿದರು ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣ.
” ಒಂದು ರೂಪಾಯಿ ಸಹ ಖರ್ಚು ಮಾಡದೇ ನಾವು ಚುನಾವಣೆಯಲ್ಲಿ ಗೆದ್ದು ಬರುವ ಮಾರ್ಗೋಪಾಯಗಳನ್ನು ಸ್ವಾಮೀಜಿಯವರು ಹೇಳುತ್ತಿದ್ದಾರೆ…ಎಲ್ಲರೂ ನಿಶ್ಶಬ್ದವಾಗಿ ಕೇಳಿ…” ಎಂದು ಆಶ್ರಮದ ಸೀನಿಯರ್ ಶಿಷ್ಯ ಜೋರಾಗಿ ಕೂಗಿ ಹೇಳಿದ.
ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣನವರು ತಮ್ಮ ಕೀರಲು ಧ್ವನಿಯಲ್ಲಿ ಮತ್ತೆ ಮಾತು ಮುಂದುವರೆಸಿದರು ” ಈ ಮುಂಚೆ ನಾನು ಕರ್ಮ ಸಿದ್ಧಾಂತ ಮತ್ತು ಪೂರ್ವ ಜನ್ಮದ ಪುಣ್ಯದ ಬಗ್ಗೆ ಹೇಳಿದ್ದೆ…ಅವುಗಳ ಪ್ರಭಾವದಿಂದ ನಮ್ಮಲ್ಲಿ ಹಸ್ತರೇಖೆಗಳು… ಹಣೆ ಬರಹಗಳು…ಗೃಹ ಗತಿಗಳು…ಕುಜ ದೋಷಗಳು…ಇತ್ಯಾದಿ ಎಲ್ಲ ಉಂಟಾಗುತ್ತವೆ. ಚುನಾವಣೆಗಾಗಿ ಇನ್ನು ಕೋಟಿ ಕೋಟಿ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಯಾವ ಪದವಿ ಆದರೂ ನಮ್ಮ ಜಾತಕ – ಗ್ರಹಗತಿಗಳ ಮೇಲೆಯೇ ನಮಗೆ ಪ್ರಾಪ್ತಿ ಆಗುತ್ತದೆ.
ನಮ್ಮದು ಪುಣ್ಯ ಭೂಮಿ…ಅಲ್ಲದೇ ಪುರಾತನ ದೇಶ…ಇಲ್ಲಿ ಸಾವಿರಾರು ಹೆಸರಾಂತ ಜ್ಯೋತಿಷಿಗಳು ಇದ್ದಾರೆ. ಅವರು ಮನಸು ಮಾಡಿದರೆ ಚುನಾವಣೆ ಪ್ರಕ್ರಿಯೆ ಬೇಕಾಗಿಯೇ ಇಲ್ಲ…ಅವರಿಗೆ ಐದು ಸಾವಿರ ಹತ್ತು ಸಾವಿರ ಸಂಭಾವನೆ ಕೊಟ್ಟರೆ ಸಾಕು…ಜಾತಕ ಮತ್ತು ಗೃಹ ಬಲವಿದ್ದವರು ಈ ಪುಣ್ಯಭೂಮಿಯಿಂದ ಆಟೋಮ್ಯಾಟಿಕ್ ಆಗಿ ಆಯ್ಕೆಯಾಗುತ್ತಾರೆ. ” ಎಂದು ತಮ್ಮ ಬಿಳಿ ಗಡ್ಡವನ್ನು ಮತ್ತೊಮ್ಮೆ ಮೃದುವಾಗಿ ನೀವಿಕೊಳ್ಳುತ್ತ ಮಾತು ನಿಲ್ಲಿಸಿ ಶಿಷ್ಯರತ್ತ ನೋಡಿದರು ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣ.
ಸ್ವಾಮೀಜಿಯವರ ಅಂತರಂಗಿಕ ಶಿಷ್ಯನೊಬ್ಬ ಅವರ ಮುಂದೆ ಮತ್ತೆ ಮೈಕ್ ಹಿಡಿದ ಆಶೀರ್ವಚನ ಮುಂದುವರೆಸಿ ಎನ್ನುವಂತೆ.
” ಬಹುಶಃ ನಿಮ್ಮ ಸೆಲ್ ಫೋನ್ ನಲ್ಲಿರುವ ‘ ಯು ಟ್ಯೂಬ್ ‘ ನಿಮಗೆ ಸರಿಯಾದ ಮಾರ್ಗದರ್ಶಕ ಮಾಡುತ್ತದೆ. ಅದರಲ್ಲಿರುವ ಖ್ಯಾತ ಜ್ಯೋತಿಷಿಗಳು ನಿಮ್ಮ ಗ್ರಹಗತಿ ಈಗ ಸದ್ಯ ಯಾವ ಸ್ಥಾನದಲ್ಲಿದೆ ಮತ್ತು ಉಚ್ಚಾಯ ಸ್ಥಿತಿಗೆ ಯಾವಾಗ ಟ್ರಾನ್ಸ್ಫರ್ ಆಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ. ಅದಕ್ಕಾಗಿ ನೀವೆಲ್ಲ ನಾಮಿನೇಷನ್ ನೊಂದಿಗೆ ನಿಮ್ಮ ಜಾತಕ ಅಥವಾ ಜನ್ಮ ಕುಂಡಲಿಯನ್ನು ಲಗತ್ತಿಸಬೇಕು ಅಷ್ಟೇ… ಅದು ಗೊತ್ತಿಲ್ಲದವರು ನಿಮ್ಮ ಹುಟ್ಟಿದ ದಿನ… ಅದೂ ಕೂಡ ನೆನಪಿಲ್ಲದವರು ನಿಮಗೆ ಇಷ್ಟವಾದ ಹೂವು ಅಥವಾ ಹಣ್ಣಿನ ಹೆಸರನ್ನು ತಿಳಿಸಿದರೆ ( ಚುನಾವಣೆ ಸ್ಪೆಷಲ್…) ಜ್ಯೋತಿಷಿಗಳು ನಿಮ್ಮ ಜಾತಕವನ್ನು ಕೂಡಿಸಿ – ಕಳೆದು – ಗುಣಿಸಿ – ಭಾಗಿಸಿ ಸರಿಯಾಗಿ ಹದಿನೈದು ದಿನದೊಳಗೆ ನಿಮ್ಮ ಚುನಾವಣೆ ರಿಸಲ್ಟ್ ರೆಡಿ ಮಾಡುತ್ತಾರೆ. ಮುಖ್ಯಮಂತ್ರಿ…ಉಪ ಮುಖ್ಯಮಂತ್ರಿ ಮತ್ತು ಸಚಿವರ ಪಟ್ಟಿಯನ್ನು ಅವರವರ ಜಾತಕ – ಜನ್ಮ ಕುಂಡಲಿಯ ಮೇಲೆಯೇ ಆಯ್ಕೆ ಮಾಡಲಾಗುವುದು. ಇದೇ ಪದ್ಧತಿಯನ್ನು ತಮಗೆ ಬೇಕಾದ ಹಾಗೆ ಕ್ರಿಶ್ಚಿಯನ್ – ಮುಸ್ಲಿಂ ಬಂಧುಗಳು ಅವರ ಧರ್ಮ ಗುರುಗಳ ಮುಖಾಂತರ ಅವರಿಗೆ ಸೂಕ್ತವಾದ ಪದ್ಧತಿಯಲ್ಲಿ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು …”ಎಂದು ಕಡೆಯ ಬಾರಿ ಬಿಳಿ ಗಡ್ಡವನ್ನು ಮೃದುವಾಗಿ ಮೇಲೆ ಕೆಳಗೆ ಆಡಿಸುತ್ತಾ ಮಾತು ಮುಗಿಸಿ ಕೊನೆಗೊಮ್ಮೆ ಸಭೆಗೆ ವಂದಿಸಿ ಗಂಭೀರವಾಗಿ ಹೊರ ನಡೆದರು ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣ.
ಪೂಜ್ಯ ಸ್ವಾಮೀಜಿ ಶ್ರೀ ಶ್ರೀ ಗುಂಡಣ್ಣನವರಿಂದ ಇಂತಹ ಅನಿರೀಕ್ಷಿತ ಆಶೀರ್ವಚನ ಎಂದೂ ಊಹಿಸದ ಭಕ್ತರು ಇನ್ನೂ ಕೋಮಾದಿಂದ ಹೊರ ಬಂದಿಲ್ಲ ಎನ್ನುವದು ಮಾತ್ರ ಈಗಿನ ‘ ಬ್ರೇಕಿಂಗ್ ನ್ಯೂಸ್ ‘ !