ಎರಿಹೊಲದಾಗ ಬಿತ್ತಿದಾರ
ಮುಂಗಾರುಜೋಳ ಎಲ್ಲಡೆ
ಹಚ್ಚಹಸಿರಿನಲ್ಲಿ ಕಂಗೊಳಿಸಿ
ನಿಂತೈತೆ ಮುತ್ತಿನ ತೆನೆಗಳು
ತೆನೆಬಾಗಿದ ಸಾಲುಗಳಲಿ
ಅಡ್ಡಾಡಿ ಬರಲು ಹಿತವು
ಉಪ್ಪುಪ್ಪು ಮೆತ್ತುವುದು ಮೈಗೆ
ಮರೆಯದ ಸಿಹಿನೆನಪು ಅನುದಿನವು
ದೊಡ್ಡ ಕಣದಾಗ ರಾಶಿ
ಮಾಡಿರಲು
ಬಂಡಿತುಂಬೆಲ್ಲ ಜೋಳದ
ಚೀಲಗಳು
ಹೊಸಜೋಳ ಕೊಟ್ಬಂದು
ಕೈ ತುಂಬಾ ಹಣ ತಂದು
ಹಳೆ ಜೋಳಕೆ ಮನಸೋತು
ರೊಟ್ಟಿ ಮಾಡ್ಯಾಳ ನಮ್ಮವ್ವ
ಬಿಸಿರೊಟ್ಟಿ ತಟ್ಟಿ ತಟ್ಟಿ ದಿನವು
ಬಿಸಿತುಪ್ಪ, ಕೆನೆಮೊಸರು
ತಿನ್ನುವ ಕಾಲವು
ರೊಟ್ಟಿ ತಿಂದಷ್ಟು ಗಟ್ಟಿ
ಈದೇಹ ಎನ್ನುತ್ತಾ
ಬುಟ್ಟಿ ತುಂಬಾ ರೊಟ್ಟಿ ಮಾಡಿ
ಬುತ್ತಿ ಕಟ್ಟುತ್ತಾ
ಹೊಲದಲ್ಲಿ ಕೂತು
ಊಟ ಮಾಡುತ
ಮನಸಿನ ದುಗುಡವೆಲ್ಲ
ದೂರದೂಡುತ