ಪ್ರೀತಿ ಕನ್ನಡತಿ ಅವರು ಬರೆದ ಕವಿತೆ ‘ನಗುವಿನ ಒಡತಿ’

ವಯಸ್ಸು ಮಾಗಿ ತನುವು ಬಾಗಿ
ಕೂದಲೆಲ್ಲ ಬಿಳಿ ಮೋಡದಂತೆ
ಹೊಳೆಯುತ್ತಿದೆ ಮಿರಿ ಮಿರಿಯಾಗಿ
ದೇಹವೆಲ್ಲ ಗುಬ್ಬಚ್ಚಿ ಗೂಡಂತಾಗಿ
ಕೋಲೊಂದೇ ಆಸರೆಯಾಗಿ
ನಿಂತಿದೆ ನನ್ನಯ
ಬಾಳಿನ ಜೊತೆಯಾಗಿ
ಆದರೂ ಮೊಗದಲ್ಲಿ
ಆತ್ಮವಿಶ್ವಾಸದ ನಗುವು
ಪ್ರಜ್ವಲಿಸುತ್ತಿದೆ ಇಂದಿಗೂ

ಬಡಿದಾಡಿದೆ ಹೊಡೆದಾಡಿದೆ
ಗಂಧದ ಕೊರಡಂತೆ ನನ್ನ
ಜೀವ ಜೀವನವನ್ನೇ ತೇದೆ
ನನ್ನವರ ಸೌಖ್ಯಕ್ಕಾಗಿ
ನನ್ನವರ ಖುಷಿಗಾಗಿ
ನನ್ನ ಇಷ್ಟಕಷ್ಟಗಳೇ ಅಳಿದು
ಅವರ ಕನಸುಗಳೇ ನನ್ನ
ಬಾಳಿನ ದ್ಯೇಯವಾಗಿ
ದುಡಿದೆ ದುಡಿದೆ
ದುಡಿಯುತ್ತಲೇ ಹೋದೆ

ವಯಸ್ಸು ಓಡುತ್ತಿತ್ತು
ಶರವೇಗದಲ್ಲಿ
ಮೈಯಲ್ಲಿ ಚೈತನ್ಯವಿತ್ತು
ಅರಿವಾಗಲೇ ಇಲ್ಲ
ನನಗಾಗಿ ನಾನು ಬಾಳಬೇಕೆಂದು,

ನನ್ನವರಿಗಾಗಿಯೇ ದುಡಿದೆ
ಅವರಿಗಾಗಿಯೇ ಬದುಕಿದೆ
ಆದರೆ ಇಂದು ಏಕಾಂಗಿಯಾಗಿ
ನಿಂತಿರುವೆ ಬಾಳಿನ
ಮುಸ್ಸಂಜೆಯಲಿ
ದುಡಿಯಲು ಶಕ್ತಿಯಿಲ್ಲ
ಬೇಡಲು ಮನಸ್ಸಿಲ್ಲ
ನನ್ನವರಿಗೆ ನಾನು
ಬೇಕಾಗಿಲ್ಲ

ಆಗಲಿ ನಾನು ಯಾರಿಗೂ
ಹೊರೆಯಾಗಿ ಬದುಕಲಾರೆ
ಇನ್ನಾದರೂ ನನಗಾಗಿ
ನಾನು ಬಾಳುವೆ
ದುಡಿದು ತಿಂದ ಸ್ವಾಭಿಮಾನಿ
ಕೈಗಳು ಬೇಡಿ ತಿನ್ನಲು ಒಪ್ಪುತ್ತಿಲ್ಲ

ವಯಸ್ಸಾದರೇನು???
ಬದುಕುವ ಛಲವಿದೆ
ಬೀದಿಯಲ್ಲಿ ಹಣ್ಣು ಮಾರಿ
ತನ್ನ ತುತ್ತಿನ ಚೀಲ ತುಂಬಿಸಲು
ಬಿಸಿಲು ಮಳೆಗೆ ಅಂಜದೆ
ಮೊಗದಲ್ಲಿ ಭರವಸೆಯ
ಮುಗುಳುನಗೆಗಂತೂ ಭರವಿಲ್ಲ
ಬದುಕಿನ ಬಂಡಿ
ಹೊಡಿಸುವೆನು
ಜೀವನದ ಕೊನೆಯ
ಉಸಿರುವಿರುವರೆಗೂ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop